ಶೋಷಣೆ ಮಾಡುವುದೆಂದರೆ ಶೋಷಣೆಗೆ ಒಳಗಾಗುವುದು : ‘ಜಿಡ್ಡು’ ಚಿಂತನೆ

ನಿಮಗೆ ಏನೋ ಸಾಧಿಸಬೇಕೆಂಬ ಅಥವಾ ನಾನೂ ಏನೂ ಅಲ್ಲ ಎಂಬ ಭಯದಿಂದ ಪಾರಾಗಬೇಕೆಂಬ ಬಯಕೆಯಿರುವುದರಿಂದ ನೀವು ಒಂದು ಸಂಘಟನೆಯನ್ನು ಸೇರುವ, ಒಂದು ಸಿದ್ಧಾಂತಕ್ಕೆ ಬದ್ಧರಾಗುವ, ಒಂದು ಧರ್ಮವನ್ನು ನಂಬುವ ಹುಕಿಗೆ ಶರಣಾಗುತ್ತೀರಿ. ~ ಜಿಡ್ಡು ಕೃಷ್ಣಮೂರ್ತಿಕನ್ನಡಕ್ಕೆ: ಚಿದಂಬರ ನರೇಂದ್ರ

ನಾವು ಒಂದಲ್ಲ ಒಂದು ರೀತಿಯ ಅಧಿಕಾರವನ್ನು ಹೊಂದುವ ಬಯಕೆಯುಳ್ಳವರು, ಶ್ರೇಣಿಕೃತ ಸಿದ್ಧಾಂತ ಈಗಾಗಲೇ ವ್ಯವಸ್ಥಿತವಾಗಿ ನೆಲೆಯೂರಿರುವಂಥದು, ದೀಕ್ಷಾರ್ಥಿ ಮತ್ತು ದೀಕ್ಷೆ ಕೊಡುವವ, ಗುರು ಮತ್ತು ಶಿಷ್ಯ, ಗುರುವಿನಲ್ಲಿ ಕೂಡ ಅವರ ಆಧ್ಯಾತ್ಮಿಕ ಬೆಳವಣಿಗೆಯನ್ನು ಸೋಚಿಸುವ ಅನೇಕ ಶ್ರೇಣಿಗಳು.

ನಾವು ಬಹುತೇಕರು ಇನ್ನೊಬ್ಬರನ್ನು ನಮ್ಮ ಅಧೀನದಲ್ಲಿ ಇಟ್ಟುಕೊಳ್ಳುವ ಮತ್ತು ನಾವು ಇನ್ನೊಬ್ಬರಿಗೆ ಶರಣಾಗುವ ಮನೋಭಾವನೆಯನ್ನು ಹೊಂದಿದವರು ಮತ್ತು ಶ್ರೇಣೀಕೃತ ವ್ಯವಸ್ಥೆ ನಮ್ಮ ಈ ಬಯಕೆನ್ನು ವ್ಯಕ್ತವಾಗಿ ಅಥವಾ ಅವ್ಯಕ್ತವಾಗಿ ಪೋಷಿಸುತ್ತದೆ. ಶೋಷಣೆ ಮಾಡುವುದೆಂದರೆ ಶೋಷಣೆಗೆ ಒಳಗಾಗುವುದು. ನಮ್ಮ ಮಾನಸಿಕ ಅವಶ್ಯಕತೆಗಳಿಗಾಗಿ ಇನ್ನೊಬ್ಬರನ್ನು ಉಪಯೋಗ ಮಾಡಿಕೊಳ್ಳುವ ಪ್ರಕ್ರಿಯೆಯಲ್ಲಿ ಅವಲಂಬನೆ ಹುಟ್ಟಿಕೊಳ್ಳುತ್ತದೆ ಹಾಗು ನೀವು ಅವರ ಮೇಲೆ ಅವಲಂಬಿತರಾಗಿರುವಾಗ ಅವರನ್ನು ಹಿಡಿದಿಟ್ಟುಕೊಳ್ಳಲು, ಅವರ ಮೇಲೆ ಸ್ವಾಧೀನತೆಯನ್ನು ಸಾಧಿಸಲು ಪ್ರಯತ್ನ ಶುರು ಮಾಡುತ್ತೀರಿ; ಆಗ ನೀವು ಯಾವುದರ ಮೇಲೆ ಹಕ್ಕು ಸಾಧಿಸಲು ಪ್ರಯತ್ನಿಸುತ್ತಿದ್ದೀರೋ ಅದು ನಿಮ್ಮನ್ನು ತನ್ನ ಸ್ವಾಧೀನಕ್ಕೆ ತೆಗೆದುಕೊಳ್ಳಲು ಆರಂಭಿಸುತ್ತದೆ.

ಅವಲಂಬನೆಯಿಲ್ಲದೆ, ಅದು ಎಷ್ಟೇ ಸ್ಥೂಲ ಅಥವಾ ಸೂಕ್ಷ್ಮವಾಗಿದ್ದರೂ, ವ್ಯಕ್ತಿಗಳನ್ನ ವಿಷಯಗಳನ್ನ ಮತ್ತು ವಿಚಾರಗಳನ್ನ ನಿಮ್ಮ ಸ್ವಾಧೀನಕ್ಕೆ ಒಳಪಡಿಸಿಕೊಳ್ಳದೇ, ನೀವು ಖಾಲೀತನ ಮತ್ತು ನಿರ್ಲಕ್ಷವನ್ನು ಅನುಭವಿಸುತ್ತೀರಿ. ನಿಮಗೆ ಏನೋ ಸಾಧಿಸಬೇಕೆಂಬ ಅಥವಾ ನಾನೂ ಏನೂ ಅಲ್ಲ ಎಂಬ ಭಯದಿಂದ ಪಾರಾಗಬೇಕೆಂಬ ಬಯಕೆಯಿರುವುದರಿಂದ ನೀವು ಒಂದು ಸಂಘಟನೆಯನ್ನು ಸೇರುವ, ಒಂದು ಸಿದ್ಧಾಂತಕ್ಕೆ ಬದ್ಧರಾಗುವ, ಒಂದು ಧರ್ಮವನ್ನು ನಂಬುವ ಹುಕಿಗೆ ಶರಣಾಗುತ್ತೀರಿ. ಮತ್ತು ಆಗಲೇ ಶೋಷಣೆಗೆ ಒಳಗಾಗುವ ಸಾಧ್ಯತೆಗೆ ತೆರೆದುಕೊಳ್ಳುತ್ತೀರಿ ಹಾಗು ಇಂಥದೊಂದು ಅವಕಾಶ ನಿಮಗೆ ಸಾಧ್ಯವಾದಾಗ ಇನ್ನೊಬ್ಬರನ್ನು ಶೋಷಿಸಲು ಶುರು ಮಾಡುತ್ತೀರಿ.

Leave a Reply