ಝೆನ್ ಉದ್ದೇಶವೇನು? : ಓಶೋ ವ್ಯಾಖ್ಯಾನ

ಝೆನ್ ಇಡೀ ಉದ್ದೇಶವೇ ಸಾಮಾನ್ಯವನ್ನು ಅಸಾಮಾನ್ಯವಾಗಿಸುವುದು, ಅಸಾಮಾನ್ಯವನ್ನು ಸಾಮಾನ್ಯವಾಗಿಸುವುದು.~ ಓಶೋಕನ್ನಡಕ್ಕೆ: ಚಿದಂಬರ ನರೇಂದ್ರ

ಕೆಲವೊಮ್ಮೆ ನೀವು ಕೆಲ ಸಮಯದ ಮಟ್ಟಿಗಾದರೂ ಪೂರ್ಣತ್ವವನ್ನ, ಒಂದಾಗುವಿಕೆಯನ್ನ ಅನುಭವಿಸುತ್ತೀರಿ. ಸಮುದ್ರವನ್ನು ನೋಡುತ್ತ ನಿಂತಾಗ, ಅದರ ಅಗಾಧತೆಯನ್ನ, ಅದರ ಹುಚ್ಚು ಉನ್ಮಾದವನ್ನ ಕಂಡಾಗ ನಿಮ್ಮ ದ್ವಂದ್ವ, ನಿಮ್ಮಲ್ಲಿನ ಒಡಕು, ನಿಮ್ಮ ಸ್ಕೀಜೋಫ್ರೇನಿಯಾ ಎಲ್ಲ ಮರೆತುಹೋಗಿ ನೀವು ಹಾಯಾದ ಪ್ರಶಾಂತತೆಯನ್ನ ಅನುಭವಿಸುತ್ತೀರಿ.

ನೀವು ಹಿಮಾಲಯದಲ್ಲಿ ಓಡಾಡುವಾಗ, ಪರ್ವತ ಶಿಖರಗಳ ಮೇಲಿನ ತಾಜಾ ಹಿಮ ಕಂಡಾಗ, ನಿಮ್ಮ ಸುತ್ತಲೂ ನಿಶಾಂತ ಸಮಾಧಾನ ಆವರಿಸಿಕೊಳ್ಳುತ್ತದೆ ಮತ್ತು ನಿಮ್ಮ ಈ ಅನುಭವ ಸುಳ್ಳಲ್ಲ, ಕೃತ್ರಿಮ ಅಲ್ಲ ಏಕೆಂದರೆ ನಿಮ್ಮ ಸುತ್ತ ಬೇರೆ ಯಾರೂ ಇಲ್ಲ. ಹಾಗೆಯೇ ಸಂಗೀತ ಕೇಳುವಾಗ ನೀವು ಈ ತಾದಾತ್ಮ್ಯತೆಯನ್ನ ಒಂದಾಗುವಿಕೆಯನ್ನ ಅನುಭವಿಸುತ್ತೀರಿ.

ಯಾವ ಸ್ಥಿತಿಯಲ್ಲೇ ಆಗಲಿ, ಯಾವಾಗ ನೀವು ಈ ಪೂರ್ಣತ್ವವನ್ನ, ಈ ಏಕತ್ವವನ್ನ ಅನುಭವಿಸುತ್ತೀರೋ, ಒಂದು ಖುಶಿ, ಒಂದು ಸಮಾಧಾನ, ಒಂದು ಉತ್ಕಟತೆ ನಿಮ್ಮನ್ನು ಆವರಿಸಿಕೊಳ್ಳುತ್ತದೆ, ನಿಮಗೆ ತೃಪ್ತಿಯಾಗುತ್ತದೆ ನೀವು ಸಾರ್ಥಕತೆಯನ್ನ ಅನುಭವಿಸುತ್ತೀರಿ.

ಆದರೆ ನೀವು ಇಂಥ ಅಪರೂಪದ ಗಳಿಗೆಗಳಿಗಾಗಿ ಕಾಯಬೇಕಿಲ್ಲ, ಇಂಥ ಕ್ಷಣಗಳು ನಿಮ್ಮ ಸಹಜ ಬದುಕಾಗಬಹುದು. ಈ ಅಸಾಮಾನ್ಯ ಅನುಭವಗಳು ನಿಮ್ಮ ಸಾಮಾನ್ಯ ಬದುಕಿನ ಸಹಜ ಕ್ಷಣಗಳಾಗಿಬಿಡಬಹುದು. ಝೆನ್ ಇಡೀ ಉದ್ದೇಶವೇ ಇಂತಹದು ಸಾಮಾನ್ಯವನ್ನು ಅಸಾಮಾನ್ಯವಾಗಿಸುವುದು, ಅಸಾಮಾನ್ಯವನ್ನು ಸಾಮಾನ್ಯವಾಗಿಸುವುದು.

ನೀವು ಒಂದು ಅಸಾಮಾನ್ಯ ಬದುಕನ್ನ ಸಾಮಾನ್ಯ ರೀತಿಯಲ್ಲಿ ಬದುಕಬಹುದು : ಕಟ್ಟಿಗೆ ಕತ್ತರಿಸುವುದು, ನೀರು ತುಂಬುವುದು, ಅಕ್ಕಿ ಆರಿಸುವುದು, ಬಾವಿಯಿಂದ ನೀರು ಸೇದುವುದು, ನೆಲ ಒರೆಸುವುದು, ಅಡುಗೆ ಮಾಡುವುದು, ಬಟ್ಟೆ ಒಗೆಯುವುದು ಹೀಗೆ ಯಾವುದೇ ಕೆಲಸ ಇರಲಿ ಅದು ನಿಮ್ಮ ಏಕತಾನತೆಯನ್ನ ಹೊಡೆದುಹಾಕಿ ನಿಮಗೆ ತೃಪ್ತಿಯನ್ನ, ಖುಶಿಯನ್ನ, ಸಾರ್ಥಕತೆಯನ್ನ ತಂದುಕೊಡುವುದಾದರೆ, ನಿಮ್ಮಲ್ಲಿ ಏಕತ್ವವನ್ನ, ಒಂದಾಗುವಿಕೆಯ ಅನುಭವವನ್ನ ಸಾಧ್ಯಮಾಡಬಹುದಾದರೆ ಅದು ಝೆನ್.

ಒಮ್ಮೆ ಹೀಗಾಯಿತು…..

ಝೆನ್ ಮಾಸ್ಟರ್ ಜೋಶು ನ ಆಶ್ರಮಕ್ಕೆ ಒಬ್ಬ ಅತಿಥಿ ಮೊದಲ ಬಾರಿ ಆಗಮಿಸಿದ್ದ. ಆಶ್ರಮದ ಉದ್ಯಾನವನದಲ್ಲಿ ಪ್ರಖರ ತೇಜಸ್ಸಿನಿಂದ ಕಂಗೊಳಿಸುತ್ತಿದ್ದ ಒಬ್ಬ ವೃದ್ಧ ಸನ್ಯಾಸಿ ಧ್ಯಾನ ಮಾಡುತ್ತ ಕುಳಿತಿರುವುದನ್ನ ಆ ಅತಿಥಿ ಗಮನಿಸಿದ. ಆ ವೃದ್ಧನ ಬಗ್ಗೆ ಅತಿಥಿಗೆ ಕುತೂಹಲ ಬೆಳೆಯಿತು.

ಉದ್ಯಾನವನದ ಬಾಗಿಲಲ್ಲೇ ತನ್ನ ಪಾಡಿಗೆ ತಾನು ತೋಟದ ಕೆಲಸ ಮಾಡುತ್ತ ಕುಳಿತಿದ್ದ ಕೆಲಸಗಾರನನ್ನು ಅತಿಥಿ ಪ್ರಶ್ನೆ ಮಾಡಿದ.

“ ಯಾರು ಆ ತೇಜಸ್ವಿ ಸನ್ಯಾಸಿ? ಅವನೇನಾ ಝೆನ್ ಮಾಸ್ಟರ್ ಜೋಶೋ?

“ ಅಲ್ಲ ಅಲ್ಲ ನಾನು ಜೋಶು, ಅವ ನನ್ನ ನೆಚ್ಚಿನ ಶಿಷ್ಯ”

ಕೆಲಸಗಾರ ಮುದುಕ ಉತ್ತರಿಸಿದ.

Leave a Reply