ಮೈಮೇಲೆ ಅರಿವಿಲ್ಲದಂತೆ ಕೂರುವುದೇ ಸಮಾಧಿಯಲ್ಲ ಎಂದು ರಮಣ ಮಹರ್ಷಿಗಳು ಈ ಚುಟುಕು ಸಂವಾದದಲ್ಲಿ ಸರಳವಾಗಿ ವಿವರಿಸುತ್ತಾರೆ…
ಐರೋಪ್ಯ ಸಂದರ್ಶಕ: ಎಷ್ಟೇ ಧ್ಯಾನ ಮತ್ತು ತಪಸ್ಸನ್ನು ಮಾಡಿದರೂ ಸಹ ಸಮಾಧಿಯನ್ನು ಪಡೆಯದಿದ್ದರೆ ಮೋಕ್ಷವಿಲ್ಲ ಎಂದು ಮಾಂಡೂಕ್ಯ ಉಪನಿಷತ್ತಿನ ಕಾರಿಕೆಯಲ್ಲಿ ತಿಳಿಸಿದ್ದಾರೆ. ಇದು ಸತ್ಯವೇ? ಸಮಾಧಿಯು ಸಿದ್ಧಿಸದಿದ್ದರೆ ಮೋಕ್ಷವಿಲ್ಲವೇ?
ರಮಣ ಮಹರ್ಷಿಗಳು: ಸರಿಯಾಗಿ ಅರ್ಥಮಾಡಿಕೊಂಡರೆ ಎಲ್ಲವೂ ಒಂದೇ. ಅದನ್ನು ಸಮಾಧಿಯೆನ್ಸಿ, ತಪಸ್ಸೆನ್ನಿ, ಹೇಗಾದರೂ ಅದನ್ನು ಕರೆಯಿರಿ. ನಿರಂತರವಾಗಿ ಹರಿಯುವ ತೈಲಧಾರೆಯಂತೆ ಯಾವಾಗಲೂ ಸ್ಥಿರವಾಗಿರುವ ಸ್ಥಿತಿ ಯಾವುದೋ ಅದೇ ಧ್ಯಾನ, ಅದೇ ತಪಸ್ಸು, ಅದೇ ಸಮಾಧಿಯೂ ಸಹ. ತಾನು ತಾನಾಗಿ ನೆಲೆಸುವುದೇ ಸಮಾಧಿ.
ಐರೋಪ್ಯ ಸಂದರ್ಶಕ: ಮಾಂಡೂಕ್ಯದಲ್ಲಿ ಸಮಾಧಿಯನ್ನು ಅವಶ್ಯವಾಗಿ ಪಡೆಯಬೇಕು ಎಂದಿದ್ದಾರಲ್ಲಾ?
ರಮಣ ಮಹರ್ಷಿಗಳು: ಅಲ್ಲ ಎಂದು ಯಾರು ಹೇಳುತ್ತಾರೆ? ಮಾಂಡೂಕ್ಯದಲ್ಲೇ ಅಲ್ಲ ಎಲ್ಲ ಕಡೆಯಲ್ಲಿಯೂ ಹಾಗೆಯೇ ಹೇಳಿದ್ದಾರೆ. ತಾನು ಯಾರು ಎಂಬುದನ್ನು ಅರಿಯುವುದೇ ಅಲ್ಲವೆ ಸಮಾಧಿಯಿಂದ ಉಂಟಾಗುವ ಉಪಯೋಗ? ಸ್ವಲ್ಪ ಹೊತ್ತು ದೇಹದಮೇಲಿನ ಪರಿವೆಯಿಲ್ಲದೆ ಜಡನಂತೆ ಕುಳಿತ ಮಾತ್ರಕ್ಕೆ ಏನು ಪ್ರಯೋಜನ? ಕೈಯಲ್ಲೊಂದು ಕುರು ಎದ್ದಿದೆ ಅನ್ನಿ. ಅದನ್ನು ತೆಗೆದುಹಾಕಲು ಶಸ್ತ್ರ ಚಿಕಿತ್ಸ ಮಾಡುವ ಸಲುವಾಗಿ ಕ್ಲೋರೋಫಾರಂ ಕೊಡುತ್ತಾರೆ. ಆಗ ನಿಮಗೆ ಏನೊಂದೂ ಗೊತ್ತಾಗುವುದಿಲ್ಲ. ಅಷ್ಟು ಮಾತ್ರಕ್ಕೇ ಅದನ್ನು ಸಮಾಧಿ ಎನ್ನಲಾಗುತ್ತದೆಯೇನು? ಇದೂ ಹಾಗೇ. ಸಮಾಧಿ ಎಂಬುದರ ಅರ್ಥವೇನೆಂದು ಮೊದಲು ತಿಳಿಯಬೇಕು. ನಾನು ಯಾರು ಎಂಬುದನ್ನು ಅರಿಯದೆ ಸಮಾಧಿ ಸ್ಥಿತಿಯ ವಿಷಯವನ್ನು ಅರಿಯುವುದು ಹೇಗೆ? ಮೊದಲು ಅದನ್ನು ಅರಿತುಕೊಂಡರೆ ಸಮಾಧಿಸ್ಥಿತಿ ಎಂಬುದು ತಾನಾಗಿಯೇ ಉಂಟಾಗುತ್ತದೆ.