ಧ್ಯಾನ – ಸಾಧನೆಯ 6 ಹಂತಗಳು

ಧ್ಯಾನ ಸಾಧನೆ ಮತ್ತು ಅದರ ಆನಂದ ದಿನಗಳು ಅಥವಾ ತಿಂಗಳಲ್ಲಿ ದೊರೆಯುವಂಥದಲ್ಲ. ಅದಕ್ಕೆ ವರ್ಷಗಳ ನಿರಂತರ ಅಭ್ಯಾಸ ಬೇಕು. ಇದನ್ನು ಸಾಧಿಸಲು 6 ಹಂತಗಳನ್ನು ವಿವರಿಸುತ್ತಾರೆ ಸ್ವಾಮಿ ವಿರಜಾನಂದರು । ಆಕರ: ಪರಮಾರ್ಥ ಪ್ರಸಂಗ, ರಾಮಕೃಷ್ಣಾಶ್ರಮ ಪ್ರಕಟಣೆ

1. ಧ್ಯಾನ ಪ್ರಾರಂಭಿಸುವಾಗ ಮೊದಲು ಸ್ವಲ್ಪ ಹೊತ್ತು ಸ್ಥಿರವಾಗಿ ಕುಳಿತು ಮನಸ್ಸನ್ನು ಜಾಗ್ರತೆಯಿಂದ ನೋಡು. ಅದು ಇಷ್ಟಬಂದ ರೀತಿ ಅಲೆದಾಡಲು ಬಿಡು. ನೀನು ಕೇವಲ ಸಾಕ್ಷಿ ಎಂದು ಆಲೋಚಿಸು. ಮನಸ್ಸು ಹೇಗೆ ತೇಲಿ, ಮುಳುಗಿ, ಧಾವಿಸಿ ಜಿಗಿದಾಡುವುದೆಂದು ಲಕ್ಷ್ಯದಲ್ಲಿಡು. “ನಾನು ಈ ದೇಹವಲ್ಲ, ಇಂದ್ರಿಯಗಳೂ ಅಲ್ಲ, ಮನಸ್ಸೂ ಅಲ್ಲ. ನಾನು ಮನಸ್ಸಿನಿಂದ ಸಂಪೂರ್ಣ ಬೇರೆ. ಮನಸ್ಸೂ ಕೂಡ ಪಂಚಭೂತಾತ್ಮಕ, ಅದು ಕೇವಲ ಭೌತಿಕ ವಸ್ತುವಿನ ಸೂಕ್ಷ್ಮ ರೂಪಮಾತ್ರವಾಗಿದೆ. ನಾನು ಆತ್ಮ, ಯಜಮಾನ; ಮನಸ್ಸು ಕೇವಲ ನನ್ನ ಸೇವಕ” ಎಂದು ಭಾವಿಸು. ಯಾವಾಗ ನಿಷ್ಛ್ರಯೋಜಕವಾದ ಯೋಚನೆಗಳು ನಿನ್ನ ಮನಸ್ಸಿನಲ್ಲಿ ಏಳುತ್ತವೆಯೋ ಆ ತಕ್ಷಣವೇ ಅವುಗಳನ್ನು ಒತ್ತಾಯದಿಂದ ನಿಗ್ರಹಿಸಲು ಪ್ರಯತ್ನಿಸು.

2. ಪ್ರತಿಯೊಬ್ಬರೂ ಸಾಧಾರಣವಾಗಿ ತಾವು ವಿಶ್ರಾಂತಿಯಲ್ಲಿರುವಾಗ ಎಡಮೂಗಿನಿಂದಲೂ, ಕೆಲಸ ಮಾಡುತ್ತಿರುವಾಗ ಬಲಮೂಗಿನಿಂದಲೂ, ಧ್ಯಾನದ ವೇಳೆಯಲ್ಲಿ ಎರಡು ಕಡೆಯಿಂದಲೂ ಉಸಿರಾಡುತ್ತಾರೆ. ಧ್ಯಾನಕ್ಕೆ ಬಹಳ ಅನುಕೂಲವಾದ ಕಾಲವೆಂದರೆ, ದೇಹ ಮತ್ತು ಮನಸ್ಸುಶಾಂತ ಸ್ಥಿತಿಯಲ್ಲಿದ್ದು ನಮ್ಮ ಮೂಗಿನ ಎರಡು ಹೊಳ್ಳೆಗಳಿಂದಲೂ ಒಂದೇ ರೀತಿ ಉಸಿರಾಡುತ್ತಿರುವ ಸಮಯ.  

3. ಮನಸ್ಸು ಯಾವಾಗ ಸಂಪೂರ್ಣ ಶಾಂತವಾಗಿರುವುದೋ ಆಗ ನಮ್ಮ ಶ್ವಾಸ ಸ್ಥಿರವಾಗುವುದು ; ಕುಂಭಕವೂ (ಶ್ವಾಸಧಾರಣ ಶಕ್ತಿ) ಉಂಟಾಗುವುದು. ನಮ್ಮ ಉಸಿರಾಡುವಿಕೆ ಯಾವಾಗ ಸ್ಥಿರವಾಗುವುದೋ ಆಗ ಮನಸ್ಸು ಏಕಾಗ್ರತೆಯನ್ನು ಪಡೆಯುವುದು. ಭಕ್ತಿ ಪ್ರೇಮದಿಂದ ಕೂಡ ಈ ಕುಂಭಕವನ್ನು ಸ್ವಾಭಾವಿಕವಾಗಿ ಪಡೆಯಬಹುದು. ನಾವು ಕೇವಲ ದೇವರ ಸ್ಮರಣೆ, ಮನನ ಜಪವನ್ನು ಹೃತ್ಪೂರ್ವಕ ಮಾಡಿದರೆ ಯಾವ ಯೋಗಸಾಧನೆ ಮಾಡದಿದ್ದರೂ ಪ್ರಾಣಾಯಾಮ (ಶ್ವಾಸಧಾರಣ ಶಕ್ತಿ) ತಾನೇ ತಾನಾಗಿ ನಮಗೆ ದೊರೆಯುವುದು.

4. ಮಾನಸಿಕ ಏಕಾಗ್ರತೆಯನ್ನು ಪಡೆಯಬೇಕಾದರೆ ಅಭ್ಯಾಸ ಮತ್ತು ವೈರಾಗ್ಯದಷ್ಟು ಸುಲಭ ಸರಾಗದ ಮಾರ್ಗ ಮತ್ತೊಂದಿಲ್ಲ. ಆದ್ದರಿಂದ ಅವನ್ನು ರೂಢಿ ಮಾಡಿಕೋ.

5. ನೀನು ಜಪ ಮತ್ತು ಧ್ಯಾನಕ್ಕೆ ಮೀಸಲಾಗಿಡುವ ಕಾಲ ಎಷ್ಟೇ ಅಲ್ಪವಾಗಿರಲಿ, ಕೇವಲ ಹತ್ತು ಅಥವಾ ಹದಿನೈದು ನಿಮಿಷಗಳಾದರೂ ಚಿಂತೆ ಇಲ್ಲ, ಅದನ್ನು ಹೃತ್ಪೂರ್ವಕ ಮಾಡು. ದೇವರೇ ನಿನ್ನ ಹೃದಯದಲ್ಲಿ ವಾಸಿಸುತ್ತಿರುವನು. ಅವನೇ ನಿನ್ನ ಅಂತರಂಗದ ಮಾರ್ಗದರ್ಶಕ. ಅವನು ನಿನ್ನ ಹೃದಯವನ್ನು ನೋಡುತ್ತಾನೆ. ಅವನಿಗೆ ನೀನು ಎಷ್ಟು ಹೊತ್ತು ಆತನನ್ನು ಕುರಿತು ಧ್ಯಾನ ಮಾಡುತ್ತೀಯೆ ಅಥವಾ ಎಷ್ಟು ಬಾರಿ ಜಪ ಮಾಡಿದೆ ಎಂಬುದು ಮುಖ್ಯವಲ್ಲ. ಅವನಿಗಾಗಿ ನೀನು ಎಷ್ಟು ಕಾತುರನಾಗಿರುವೆ ಎಂಬುದು ಮಾತ್ರ ಮುಖ್ಯ.

6. ಪ್ರಾರಂಭದಲ್ಲಿ ಜಪ ಮತ್ತು ಧ್ಯಾನ ನೀರಸವಾಗಿರುವಂತೆ ತೋರುವುದು. ಆದರೂ ನೀನು ಔಷಧಿ ಸೇವನೆಯಂತೆ ಎಷ್ಟು ಕಷ್ಟವಾದರೂ ನಿನ್ನ ಸಾಧನೆಯನ್ನು ಮುಂದುವರಿಸಲೇಬೇಕು. ಇದರ ಪರಿಣಾಮ ನಿನಗೆ ನಾಲ್ಕು ದಿನ ಅಥವಾ ತಿಂಗಳಲ್ಲಿ ತೋರುವುದಿಲ್ಲ. ಮೂರು – ನಾಲ್ಕು ವರ್ಷಗಳು ಬಿಡದೆ ನೀನು ಸಾಧನೆ ಮಾಡುತ್ತಾ ಹೋದರೆ ನಿನಗೆ ಇದರಲ್ಲಿ ಆನಂದ ಹುಟ್ಟುವುದು.

Leave a Reply