ಈಗ ಒಂದು ವೃತ್ತವನ್ನೆ ನೋಡಿ. ಅದರ ತ್ರಿಜ್ಯ ದೊಡ್ಡದಾದಷ್ಟೂ ಪರಿಧಿ ವಿಸ್ತಾರವಾಗುತ್ತದೆ, ಮತ್ತು ಕೇಂದ್ರದಿಂದ ದೂರವಾಗುತ್ತಾ ಹೋಗುತ್ತದೆ. ಅಧ್ಯಾತ್ಮಜೀವಿಗಳೂ ಹಾಗೇ. ಅವರ ಪ್ರೇಮದ ತ್ರಿಜ್ಯ ಬೆಳೆಯುತ್ತ ಹೋದಂತೆ ಅವರ ಸಂಸಾರ ವಿಸ್ತಾರವಾಗುತ್ತ ಹೋಗುತ್ತದೆ ಮತ್ತು ಅವರು ಸ್ವಯಂಕೇಂದ್ರದಿಂದ, ಅಂದರೆ ಸ್ವಾರ್ಥದಿಂದ ದೂರವಾಗುತ್ತ ಹೋಗುತ್ತಾರೆ… । ಚೇತನಾ
ವೇದಗಳ ಪ್ರಕಾರ ಪರಮ ಅಸ್ತಿತ್ವ ಅಥವಾ ಸದ್ ವಸ್ತು “ನಾನೊಬ್ಬನೇ ಇದ್ದನೇ, ಹಲವಾಗುತ್ತೇನೆ” (ಏಕೋಹಮ್ ಬಹುಸ್ಯಾಮ್ । ಛಾಂದೋಗ್ಯ ಉಪನಿಷತ್ 6.2.3 ) ಅಂತ ನಿರ್ಧರಿಸಿ ತನ್ನನ್ನು ವಿಸ್ತರಿಸಿಕೊಂಡು ಬ್ರಹ್ಮಾಂಡ ಸೃಷ್ಟಿಸಿದ್ದು ಯಾಕೆ?
ಸೆಮೆಟಿಕ್ ಮತಗಳ ನಂಬಿಕೆಯ ಪ್ರಕಾರ ದೇವರು ಗಂಡಸನ್ನು ನಿರ್ಮಿಸಿ ಜೊತೆಗೇ ಹೆಂಗಸನ್ನೂ ನಿರ್ಮಿಸಿದ್ದು ಯಾಕೆ?
ಹತ್ತು ಹಲವು ಜನಪದ ಕಥೆಗಳ ಪ್ರಕಾರ ಮೊಟ್ಟೆಯೊಡೆದು ಮೇಲ್ಭಾಗ ಆಕಾಶ, ಕೆಳ ಭಾಗ ಭೂಮಿಯಾಗಿ ಎಲ್ಲಾ ಜೀವಿಗಳೂ ಒಂದು ಗಂಡು ಮತ್ತೊಂದು ಹೆಣ್ಣೆಂದು ಜೊತೆಯಾಗಿ ಹುಟ್ಟಿದ್ದು ಯಾಕೆ?
ಯಾಕೆಂದರೆ, ಯಾವುದೇ ಜೀವ / ಅಸ್ತಿತ್ವ ತನ್ನನ್ನು ಅರಿಯಬೇಕೆಂದರೆ ಮತ್ತೊಬ್ಬರು ಬೇಕೇಬೇಕು. ಮತ್ತು ಆ ಮತ್ತೊಬ್ಬರು ತನ್ನನ್ನು ತಾನಾಗೇ ತೋರುವ ಕನ್ನಡಿಯಂತಿರಬೇಕು ಅನ್ನುವ ಕಾರಣಕ್ಕೆ. ನಮ್ಮ ಸಹಜೀವಿಗಳೆಲ್ಲರೂ ಗಾಜಿನ ಚೂರುಗಳಂತೆ. ಯಾವ ಗಾಜಿನ ಚೂರಿಗೆ ಪ್ರೇಮದ ಲೇಪ ಇರುವುದೋ ಅದು ನಮ್ಮ ಕನ್ನಡಿಯಾಗುತ್ತದೆ. ನಮಗೆ ನಮ್ಮನ್ನು ತೋರಿಸಿಕೊಡುತ್ತದೆ. ನಾವೂ ಮತ್ತೊಬ್ಬರಿಗೆ ಹಾಗೇನೇ.
ನಾವು ಅಧ್ಯಾತ್ಮದ ಮಾತಾಡುತ್ತೇವೆ. ಹಲವಾರು ಸಾಧಕರು ಸಂಸಾರ ಬಿಟ್ಟು ತಪಶ್ಚರಣೆ ಮಾಡಿದ್ದಕ್ಕೋ ಏನೋ ನಮ್ಮ ತಲೆಯಲ್ಲಿ ‘ಎಲ್ಲವನ್ನೂ ತೊರೆಯುವುದೆ ಅಧ್ಯಾತ್ಮ’ ಅನ್ನುವ ಆಲೋಚನೆ ಬೆಳೆದುಬಿಟ್ಟಿದೆ. ಆದರೆ, ಆ ಪ್ರತಿಯೊಬ್ಬ ಸಾಧಕರ ಬೋಧನೆಗಳನ್ನು ಸರಿಯಾಗಿ ಕೇಳಿಸಿಕೊಳ್ಳಿ. ಅವರು ತಮ್ಮ ಮಾತುಗಳಲ್ಲಿ ‘ಸಂಸಾರವೇ ಅಧ್ಯಾತ್ಮ ಜೀವನದ ಸರ್ವೋತ್ಕೃಷ್ಟ ದಾರಿ’ ಅಂದಿದ್ದು ತಿಳಿಯುತ್ತದೆ.
ಹಾಗಾದರೆ ಅವರೇಕೆ ಸಂಸಾರ ಬಿಟ್ಟರು? ಇದಕ್ಕೆ ಎರಡು ಕಾರಣಗಳು.
ಮೊದಲನೆಯದಾಗಿ, ಅವರನ್ನು ಅವರಿಗೆ ತೋರುತ್ತಿದ್ದ ಕನ್ನಡಿಗಳು ಅವರ ಬಿಂಬವನ್ನು ಬಂಧಿಸಲು ಶುರುವಿಟ್ಟವು. ಅವರ ಬಿಡುಗಡೆಯ ತುಡಿತವನ್ನು ಲೆಕ್ಕಿಸದೆ ಕಟ್ಟಿಹಾಕತೊಡಗಿದವು. ಹಕ್ಕಿಯ ರೆಕ್ಕೆ ಕಟ್ಟಿಟ್ಟರೆ ಹಾರಲು ಸಾಧ್ಯವೇ? ಸಂಸಾರ ತೊರೆದರು.
ಎರಡನೆಯದಾಗಿ, ನಮ್ಮ ಸಮಾಜ, ನಮ್ಮ ಜನರು ಸಂಸಾರಿಗಳನ್ನು ಸದಾ ಅನುಮಾನದಿಂದಲೇ ನೋಡುತ್ತದೆ. ಯಾರಾದರೊಬ್ಬ ಸಾಧಕ ನಮ್ಮೆದುರು ನಿಂತು “ಮೂಢನಂಬಿಕೆ ಕೈಬಿಡಿ” ಅಂದರೆ, “ನಾವು ಕೈಬಿಡೋದ್ರಿಂದ ಇವನಿಗೇನೋ ಲಾಭವಿರಬೇಕು” ಅಂತ ಯೋಚಿಸುತ್ತದೆ! ಆದ್ದರಿಂದ, ಲೋಕಹಿತಕ್ಕಾಗೂ ಕೆಲವರು ಸಂಸಾರ ತೊರೆದು ಸನ್ಯಾಸದಲ್ಲಿ ಅಧ್ಯಾತ್ಮ ಸಾಧನೆ ಮಾಡಿದ್ದಿದೆ. ಇಲ್ಲವಾದರೆ, ಮನೆಯಲ್ಲೇ ಇದ್ದುಗೊಂಡು ಮನಸಲ್ಲೇ ನಿರಂತರ ಜಪಧ್ಯಾನ ಅಥವಾ ಚಿಂತನೆ ನಡೆಸೋದು ಅವರಿಗೇನೂ ಕಷ್ಟವಾಗಿರಲಿಲ್ಲ. ಸಾಧಕರು ಮನೆ ಬಿಡುವುದೇ, ಸಂಸಾರ ತೊರೆಯುವುದೇ ಜನ ಹಿತಕ್ಕಾಗಿ. ಯಾಕಂದರೆ ಅವರ ಪಾಲಿಗೆ ರಕ್ತದಿಂದ, ಸಂಕೇತಗಳಿಂದ ಬೆಸೆದ ಸಂಬಂಧಗಳಷ್ಟೇ ಸಂಬಂಧವಲ್ಲ, ಇಡಿಯ ಜಗತ್ತೇ ಅವರ ಸಂಸಾರ. ಅವರು ತಮ್ಮ ಮನೆಯೊಳಗಿನ ಗಾಜುಗಳಿಗಷ್ಟೇ ಪ್ರೇಮದ ಪಾದರಸ ಹಚ್ಚಿರೋದಿಲ್ಲ, ಇಡೀ ಜಗತ್ತಿನ ಎಲ್ಲಾ ಗಾಜುಗಳಿಗೂ ಹಚ್ಚಿರುತ್ತಾರೆ. ಆದ್ದರಿಂದ ಅವರು ಜಗತ್`ಪ್ರೇಮಿಗಳು. ಆದ್ದರಿಂದಲೇ ಅವರ ಕಾಳಜಿ ಮನೆಯ ಚೌಕಟ್ಟಿನೊಳಗೆ ಹಿಡಿಸಲಾಗದ್ದು. ಆ ಕಾರಣಕ್ಕೇ ಅವರು ಮನೆ ಬಿಡುವುದು.
ಈಗ ಒಂದು ವೃತ್ತವನ್ನೆ ನೋಡಿ. ಅದರ ತ್ರಿಜ್ಯ ದೊಡ್ಡದಾದಷ್ಟೂ ಪರಿಧಿ ವಿಸ್ತಾರವಾಗುತ್ತದೆ, ಮತ್ತು ಕೇಂದ್ರದಿಂದ ದೂರವಾಗುತ್ತಾ ಹೋಗುತ್ತದೆ. ಅಧ್ಯಾತ್ಮಜೀವಿಗಳೂ ಹಾಗೇ. ಅವರ ಪ್ರೇಮದ ತ್ರಿಜ್ಯ ಬೆಳೆಯುತ್ತ ಹೋದಂತೆ ಅವರ ಸಂಸಾರ ವಿಸ್ತಾರವಾಗುತ್ತ ಹೋಗುತ್ತದೆ ಮತ್ತು ಅವರು ಸ್ವಯಂಕೇಂದ್ರದಿಂದ, ಅಂದರೆ ಸ್ವಾರ್ಥದಿಂದ ದೂರವಾಗುತ್ತ ಹೋಗುತ್ತಾರೆ.
ಪ್ರೇಮವಿಲ್ಲದೆ ನಾವು ಆಧ್ಯಾತ್ಮಿಕ ಜೀವನ ನಡೆಸಲು ಸಾಧ್ಯವೇ ಇಲ್ಲವೆ? ಖಂಡಿತಾ ಸಾಧ್ಯವಿಲ್ಲ. ಅದರಲ್ಲೂ ನಮ್ಮನ್ನು ನಾವು ಪ್ರೇಮಿಸಿಕೊಳ್ಳದ ಹೊರತು ಅಧ್ಯಾತ್ಮ ಸಾಧ್ಯವೇ ಇಲ್ಲದ ಮಾತು. ನಮ್ಮ ಮೇಲೆ ನಮಗೆ ಪ್ರೀತಿ ಇದ್ದರೆ ಮಾತ್ರ ನಾವು ಬಿಡುಗಡೆಗೆ, ಸ್ವಾತಂತ್ರ್ಯಕ್ಕೆ ಹಾತೊರೆಯೋದು. ನಮ್ಮನ್ನು ನಾವು ಪ್ರೇಮಿಸಿಕೊಂಡರೆ ಮಾತ್ರ ಕಾಮಲೋಭಮೋಹಾದಿ ಆರುವೈರಿಗಳ ಸಂಚಿಗೆ ಒಳಗಾಗದಂತೆ ನಮ್ಮನ್ನು ಕಾಪಾಡಿಕೊಳ್ಳೋದು. ಅದೇ ನಮ್ಮ ಮೇಲೆ ನಮಗೆ ಪ್ರೇಮವಿಲ್ಲದೆ ಹೋದರೆ? ನಮ್ಮ ದೇಹವನ್ನು ನಾವು ಸ್ವಾರ್ಥಕ್ಕೆ ಕೊಟ್ಟುಕೊಳ್ಳುತ್ತೇವೆ. ಮನಸ್ಸಲ್ಲಿ ದುರಾಸೆ ತುಂಬಿಕೊಂಡು ಅದು ಸದಾ ಚಡಪಡಿಸುವಂತೆ ಮಾಡಿ ಹಿಂಸಿಸುತ್ತೇವೆ. ಕಾಮುಕರಾಗಿ ನಮ್ಮ ಚಾರಿತ್ರ್ಯಕ್ಕೆ ಮಸಿ ಬಳೆದುಕೊಳ್ಳುತ್ತೇವೆ. ಕಳ್ಳರಾಗಿ ದೇಹ ಮನಸ್ಸು ಮಾನ ಮರ್ಯಾದೆ ಎಲ್ಲವನ್ನೂ ಬಲಿಕೊಡುತ್ತೇವೆ. ಸುಳ್ಳರಾಗಿ ಜನರ ಗೌರವ ಕಳೆದುಕೊಳ್ಳುತ್ತೇವೆ. ಸಂಕುಚಿತ ಮನಸ್ಥಿತಿ ಬೆಳೆಸಿಕೊಂಡು ಬಾವಿಕಪ್ಪೆಗಳಾಗಿ ಜಗತ್ತಿನ ಮುಂದೆ ನಗೆಪಾಟಲಿಗೆ ಈಡಾಗುತ್ತೇವೆ! ಇಂಥಾ ನಾವು ಅಧ್ಯಾತ್ಮ ಜೀವನ ನಡೆಸಲು ಸಾಧ್ಯವೇ? ಎಂದಿಗೂ ಇಲ್ಲ!
ಸದ್ ವಸ್ತು (ಪರಮ ಅಸ್ತಿತ್ವ/ಪರಬ್ರಹ್ಮ/ನಿರಾಕಾರ ಭಗವಂತ) ತನ್ನನ್ನು ತಾನು ವಿಸ್ತರಿಸಿಕೊಂಡು ಅಸಂಖ್ಯಾತ ಜೀವದ ತುಣುಕುಗಳಾಯಿತಂತೆ. ಈ ತುಣುಕುಗಳು ಕನ್ನಡಿಯ ತುಣುಕುಗಳಂತೆ. ಅದರಲ್ಲಿ ಸದ್ ವಸ್ತು ತನ್ನನ್ನು ತಾನು ನೋಡಿಕೊಳ್ಳುವುದಂತೆ. ಆದ್ದರಿಂದ ನಾವೆಲ್ಲರೂ ಪರಮ ಅಸ್ತಿತ್ವದ ತುಣುಕುಗಳೇ ಅಂತೆ.
ಆದರೆ, ನಾವಿದನ್ನು ಮರೆತುಬಿಟ್ಟಿದ್ದೇವೆ. ಅರಿಷಡ್ವರ್ಗಗಳ ತಿಕ್ಕಾಟಕ್ಕೆ ಸಿಕ್ಕು ಪ್ರೇಮದ ಪಾದರಸ ಲೇಪ ಅಳಿಸಿಕೊಂಡಿದ್ದೇವೆ. ಯಾವಾಗ ಈ ಪ್ರೇಮದ ಪಾದರಸವನ್ನು ಲೇಪಿಸಿಕೊಳ್ಳುತ್ತೇವೋ, ಆಗ ನಮ್ಮಲ್ಲಿ ಆ ಪರಮ ಅಸ್ತಿತ್ವ ಸ್ಪಷ್ಟವಾಗಿ ಗೋಚರಿಸುತ್ತದೆ. ಹೀಗೆ ನಮ್ಮಲ್ಲಿ ನಾವು ಭಗವಂತನನ್ನು ಕಂಡುಕೊಂಡರೆ ಮಾತ್ರ ಮತ್ತೊಬ್ಬರಲ್ಲೂ ಭಗವಂತನನ್ನು ಕಾಣಲು ಸಾಧ್ಯವಾಗೋದು. ಹೀಗೆ ಎಲ್ಲರಲ್ಲೂ ಪರಮ ಅಸ್ತಿತ್ವ/ಭಗವಂತನನ್ನು ಕಂಡ ಕ್ಷಣ ನಮಗೆ ಜ್ಞಾನೋದಯವಾಗುತ್ತದೆ, ಮತ್ತು ಆ ಜ್ಞಾನೋದಯ ನಮ್ಮನ್ನು ಉತ್ತಮ ಬದುಕಿನೆಡೆಗೆ ನಡೆಸುತ್ತದೆ. ಈ ಯಾನ ಮುಂದುವರೆದು ಮುಕ್ತಿಮಾರ್ಗದಲ್ಲಿ ಕೊನೆಯಾಗುತ್ತದೆ. ಕೆಲವರಿಗೆ ಜನನ ಮರಣ ಚಕ್ರದಿಂದ ಬಿಡುಗಡೆಯೂ ಸಿಕ್ಕು ವಿಮುಕ್ತರೇ ಆಗಿಬಿಡುತ್ತಾರೆ.
ಆದ್ದರಿಂದ, ಪ್ರೇಮಿಸಿ! ಇದುವೇ ಅಧ್ಯಾತ್ಮದ ದಾರಿ ನಡೆಯಲು ಮೊದಲ ಹೆಜ್ಜೆಯಾಗಿದೆ.