ಸರ್ವಧರ್ಮಸ್ವರೂಪಿ ಶ್ರೀ ರಾಮಕೃಷ್ಣ ಪರಮಹಂಸ

ಈ ಆಧುನಿಕ ಯುಗಕ್ಕೆ ಬೇಕಾದ ಸಮನ್ವಯ ಧರ್ಮವನ್ನು ರಾಮಕೃಷ್ಣ ಪರಮಹಂಸರು ಸ್ಥಾಪಿಸಿದರು. ಅದು ಏಕಕಾಲಕ್ಕೆ ಎಲ್ಲ ಧರ್ಮಗಳನ್ನೂ ಒಳಗೊಂಡ ಮತ್ತು ಎಲ್ಲದರಿಂದಲೂ ಹೊರತಾದ ವಿಶ್ವ ಧರ್ಮ. ಆದ್ದರಿಂದಲೇ ಸ್ವಾಮಿ ವಿವೇಕಾನಂದರು ಪರಮಹಂಸರನ್ನು ‘ಸ್ಥಾಪಕಾಯ ಚ ಧರ್ಮಸ್ಯ’ ಎಂದು ಸ್ತುತಿಸಿರುವುದು.


ಶ್ರೀರಾಮಕೃಷ್ಣರು ಸನಾತನ ಹಿಂದೂಧರ್ಮದ ಪೂರ್ಣ ಪ್ರತಿನಿಧಿ. ಯಾವುದನ್ನೂ ಅವರು ಅಲ್ಲಗಳೆಯಲಿಲ್ಲ. ಕಾಳಿಯ ಆರಾಧಕರಾಗಿದ್ದ ಪರಮಹಂಸರು ಅದ್ವೈತ ವೇದಾಂತ ಸಿದ್ಧಾಂತವನ್ನು ಬೋಧಿಸಿದರಲ್ಲದೆ, ಎಲ್ಲ ಧರ್ಮಗಳೂ ಒಂದೇ ಗುರಿಯತ್ತ ನಮ್ಮನ್ನು ಒಯ್ಯುತ್ತವೆ ಎಂದು ನಂಬಿದ್ದರು. ಎಲ್ಲ ಧರ್ಮಗಳ ಹಿಂದೆ ಇರುವುದೊಂದೇ ಸತ್ಯ ಎಂಬುದನ್ನು ಸ್ವತಃ ಸಾಧನೆಯಿಂದ ಕಂಡುಕೊಂಡಿದ್ದರು. ಮತ್ತು ಅದನ್ನೇ ಬೋಧಿಸಿದರು.
ಜನಸಾಮಾನ್ಯರು ನಂಬುವ ಎಲ್ಲ ದೇವರುಗಳೂ ಒಬ್ಬ ಸರ್ವಾಂತರ್ಯಾಮಿಯಾದ ದೇವನನ್ನು ನೋಡುವ ವಿವಿಧ ಬಗೆಗಳಷ್ಟೆ ಎಂಬುದು ರಾಮಕೃಷ್ಣ ಪರಮಹಂಸರ ಕಾಣ್ಕೆಯಾಗಿತ್ತು. “ಏಕಮ್ ಸದ್ವಿಪ್ರಾಃ ಬಹುಧಾ ವದಂತಿ” ಎಂಬ ಋಗ್ವೇದ ವಾಕ್ಯವನ್ನು ಸಾಕ್ಷಾತ್ಕರಿಸಿಕೊಂಡು, ಅದನ್ನೇ ಸರಳ ಮಾತುಗಳಲ್ಲಿ “ಜತೋ ಮತ್ ತತೋ ಪಥ್” (ಎಷ್ಟು ಮತಗಳೋ ಅಷ್ಟು ಪಥಗಳು) ಎಂದು ಸಾರಿದರು.
ಎಲ್ಲ ಅಸ್ತಿತ್ವದ ಏಕತೆ, ಮಾನವರಲ್ಲಿಯೂ ಇರುವ ದೈವತ್ವ, ದೇವರ ಏಕತೆ ಮತ್ತು ಎಲ್ಲ ಧರ್ಮಗಳ ಸಾಮರಸ್ಯ – ಇವು ರಾಮಕೃಷ್ಣ ಪರಮಹಂಸರು ಬೋಧಿಸಿದ ನಾಲ್ಕು ಮುಖ್ಯ ತತ್ವಗಳು.
ಶ್ರೀರಾಮಕೃಷ್ಣರ ಪ್ರಮುಖ ಶಿಷ್ಯರಲ್ಲಿ ಒಬ್ಬರಾದ ಸ್ವಾಮಿ ವಿವೇಕಾನಂದರು ಅವರನ್ನು “ ಜೀವನ ವೇದ ವೇದಾಂತಗಳಿಗೆ ಬರೆದಿರುವ ಸಚೇತನ ಭಾಷ್ಯ” ಎಂದು ಕರೆದಿದ್ದಾರೆ.
ಪರಮಹಂಸರ ಆಧ್ಯಾತ್ಮಿಕ ಜೀವನ ದ್ವೈತ ಅದ್ವೈತ ವಿಶಿಷ್ಟಾದ್ವೈತಗಳ ತ್ರಿವೇಣಿ ಸಂಗಮವಾಗಿತ್ತು. ಅವರು ಭಗವಂತನನ್ನು ಹಲವಾರು ಭಾವಗಳಲ್ಲಿ ಕಂಡು ಪ್ರೀತಿಸಿದರು. ಜ್ಞಾನ, ಭಕ್ತಿ, ಯೋಗಗಳು ಅವರಲ್ಲಿ ಮೇಳೈಸಿದ್ದವು. ಸ್ವತಃ ಅವರ ಬದುಕೇ ಒಂದು ದೊಡ್ಡ ವಿಶ್ವಧರ್ಮ ಸಮ್ಮೇಳನವಾಗಿತ್ತು.
ಈ ಆಧುನಿಕ ಯುಗಕ್ಕೆ ಬೇಕಾದ ಸಮನ್ವಯ ಧರ್ಮವನ್ನು ರಾಮಕೃಷ್ಣ ಪರಮಹಂಸರು ಸ್ಥಾಪಿಸಿದರು. ಅದು ಏಕಕಾಲಕ್ಕೆ ಎಲ್ಲ ಧರ್ಮಗಳನ್ನೂ ಒಳಗೊಂಡ ಮತ್ತು ಎಲ್ಲದರಿಂದಲೂ ಹೊರತಾದ ವಿಶ್ವ ಧರ್ಮ. ಆದ್ದರಿಂದಲೇ ಸ್ವಾಮಿ ವಿವೇಕಾನಂದರು ಪರಮಹಂಸರನ್ನು ‘ಸ್ಥಾಪಕಾಯ ಚ ಧರ್ಮಸ್ಯ’ ಎಂದು ಸ್ತುತಿಸಿರುವುದು. ಆ ಶ್ಲೋಕ ಹೀಗಿದೆ:
ಓಂ ಸ್ಥಾಪಕಾಯ ಚ ಧರ್ಮಸ್ಯ ಸರ್ವಧರ್ಮ ಸ್ವರೂಪಿಣೇ
ಅವತಾರ ವರಿಷ್ಠಾಯ ರಾಮಕೃಷ್ಣಾಯ ತೇ ನಮಃ
“ಎಲ್ಲ ಧರ್ಮಗಳ ಸಾಕ್ಷಾತ್ ಸ್ವರೂಪರಾದ, (ಆ ಮೂಲಕ) ಸಮನ್ವಯ ಧರ್ಮವನ್ನು ಸ್ಥಾಪಿಸಿದ, ಅವತಾರಗಳಲ್ಲೇ ಶ್ರೇಷ್ಠರಾದ ರಾಮಕೃಷ್ಣರಿಗೆ ವಂದಿಸುತ್ತೇನೆ”
ಹಲವು ಜಾತಿಮತಧರ್ಮಗಳ ಮಹೋಧದಿಯಾಗಿರುವ ಭರತ ಖಂಡಕ್ಕೆ ಇಂದು ಅತ್ಯಗತ್ಯವಾಗಿ ಬೇಕಿರುವುದು ಈ ಸಮನ್ವಯ ಧರ್ಮ. ರಾಮಕೃಷ್ಣ ಪರಮಹಂಸರ ಜನ್ಮದಿನವಾದ ಇಂದು ಈ ಸಮನ್ವಯ ಧರ್ಮವನ್ನು ಅನುಸರಿಸುವ ಸಂಕಲ್ಪ ತೊಡೋಣ.

Leave a Reply