ದಿವ್ಯವನ್ನು ತಲುಪುವುದು… । ಓಶೋ ವ್ಯಾಖ್ಯಾನ

ದಿವ್ಯವನ್ನು ತಲುಪಲು ಕೆಲವರು ಕಷ್ಟಪಟ್ಟು ದಿನರಾತ್ರಿ ಬಹಳ ಸಾಧನೆ ಮಾಡುತ್ತಾರೆ. ಕೆಲವರು ಮಧ್ಯಾಹ್ನದ, ಸಂಜೆಯ ಕೆಲಸಗಾರರಂತೆ ತಮಗೆ ದೊರೆತ ಅವಕಾಶದಲ್ಲಿ ಮಾತ್ರ ಸಾಧನೆ ಮಾಡುತ್ತಾರೆ. ಹಾಗಂತ ಅವರಿಗೆ ದೊರೆಯುವ ಡಿವೈನ್ ಕಡಿಮೆ ಪ್ರಮಾಣದ್ದಾಗಿರುವುದು ಸಾಧ್ಯವೆ? ~ ಓಶೋ | ಕನ್ನಡಕ್ಕೆ: ಚಿದಂಬರ ನರೇಂದ್ರ

ಒಮ್ಮೆ ಹೀಗಾಯಿತು.

ಒಬ್ಬ ಶ್ರೀಮಂತನಿಗೆ ತನ್ನ ಗಾರ್ಡನ್ ಲ್ಲಿ ಕೆಲಸ ಮಾಡಲು ಕೆಲವು ಕೆಲಸಗಾರರು ಬೇಕಾದರು. ಶ್ರೀಮಂತ ತನ್ನ ಒಬ್ಬ ಮನುಷ್ಯನನ್ನು ಮಾರುಕಟ್ಟೆಗೆ ಕೆಲಸಗಾರರನ್ನು ಹುಡುಕಿ ಕರೆದುಕೊಂಡು ಬರಲು ಕಳುಹಿಸಿದ.

ಆ ಮನುಷ್ಯ ಮಾರುಕಟ್ಟೆಯಲ್ಲಿ ತನಗೆ ಸಿಕ್ಕ ಎಲ್ಲ ಕೆಲಸಗಾರರನ್ನು ಕರೆದುಕೊಂಡು ಬಂದ. ಕೆಲಸಗಾರರು ಗಾರ್ಡನ್ ಲ್ಲಿ ಕೆಲಸ ಶುರು ಮಾಡಿದರು.

ಗಾರ್ಡನ್ ಕೆಲಸಕ್ಕೆ ಕೆಲಸಗಾರರು ಬೇಕಾಗಿರುವ ಸುದ್ದಿ ಇನ್ನಷ್ಟು ಜನರನ್ನು ತಲುಪಿ, ಮಧ್ಯಾಹ್ನದ ಹೊತ್ತಿಗೆ ಇನ್ನಷ್ಟು ಜನ ಕೆಲಸಗಾರರು ಅಲ್ಲಿಗೆ ಬಂದು ಕೆಲಸ ಶುರು ಮಾಡಿದರು.

ಸಂಜೆಯ ಹೊತ್ತಿಗೆ ಇನ್ನೂ ಕೆಲವರು ಗಾರ್ಡನ್ ಕೆಲಸಕ್ಕೆ ಬಂದರು. ಶ್ರೀಮಂತ ಅವರಿಗೂ ಕೆಲಸ ಮಾಡಲು ಅವಕಾಶ ಮಾಡಿಕೊಟ್ಟ. ಅವರು ಕೆಲಸ ಶುರು ಮಾಡಿದ ಕೆಲ ನಿಮಿಷಗಳಲ್ಲೇ ಸೂರ್ಯ ಮುಳುಗಿದ ಮತ್ತು ಅವತ್ತಿನ ಕೆಲಸ ನಿಲ್ಲಿಸುವಂತೆ ಶ್ರೀಮಂತ ಎಲ್ಲರನ್ನೂ ಕೇಳಿಕೊಂಡ.

ಶ್ರೀಮಂತ ಎಲ್ಲ ಕೆಲಸಗಾರರಿಗೂ ಸಮಾನವಾಗಿ ಅವತ್ತಿನ ಸಂಬಳ ಕೊಟ್ಟ. ಶ್ರೀಮಂತನ ಈ ವರ್ತನೆಯಿಂದ ಬೆಳಿಗ್ಗೆ ಗಾರ್ಡನ್ ಕೆಲಸಕ್ಕೆ ಬಂದ ಕೆಲಸಗಾರರಿಗೆ ಬೇಸರವಾಯ್ತು. ಅವರು ಶ್ರೀಮಂತನ ಬಳಿ ತಮ್ಮ ತಕರಾರು ಹೇಳಿಕೊಂಡರು.

“ ಇದು ಎಂಥ ಅನ್ಯಾಯ ? ಎಂಟು ಗಂಟೆ ಕೆಲಸ ಮಾಡಿದವರಿಗೂ ಎರಡು ಗಂಟೆ ಕೆಲಸ ಮಾಡಿದವರಿಗೂ ಕೆಲವೇ ಕೆಲವು ನಿಮಿಷ ಕೆಲಸ ಮಾಡಿದವರಿಗೂ ಒಂದೇ ಸಂಬಳವಾ ? ಇಂಥ ಅನ್ಯಾಯವನ್ನು ನಾವು ಎಲ್ಲೂ ನೋಡಿಲ್ಲ. “

ಕೆಲಸಗಾರರ ಮಾತಿನಿಂದ ಅಪ್ರತಿಭನಾದ ಶ್ರೀಮಂತ ನಗುತ್ತ ಅವರನ್ನ ವಿಚಾರಿಸಿಕೊಂಡ,

“ ನೀವು ಬೇರೆಯವರ ಬಗ್ಗೆ ವಿಚಾರ ಮಾಡಬೇಡಿ. ನಿಮ್ಮ ಶ್ರಮಕ್ಕೆ ನಾನು ಕೊಟ್ಟ ಹಣ ಸರಿಯೋ ಅಲ್ಲವೋ ಅಷ್ಟು ಮಾತ್ರ ಹೇಳಿ. “

“ ನಮ್ಮ ಇವತ್ತಿನ ಕೆಲಸಕ್ಕೆ ನೀನು ಕೊಟ್ಟ ಹಣ ಸ್ವಲ್ಪ ಹೆಚ್ಚೇ ಹೌದು ಆದರೆ ಬೇರೆಯವರು ನಮ್ಮಷ್ಟು ಕೂಡ ಕೆಲಸ ಮಾಡಿಲ್ಲ, ನಮಗೂ ಅವರಿಗೂ ಸಮಾನವಾಗಿ ಹಣ ಕೊಟ್ಟಿರುವುದು ಅನ್ಯಾಯ. “

ಕೆಲಸಗಾರರು ಪಟ್ಟು ಸಡಿಲಿಸಲಿಲ್ಲ.

“ ನನ್ನ ಹತ್ತಿರ ಸಾಕಷ್ಟು ಹಣ ಇದೆ ಆದ್ದರಿಂದ ನಾನು ಅವರಿಗೆ ನಿಮ್ಮಷ್ಟೇ ಹಣ ಕೊಟ್ಟೆ, ಈ ಬಗ್ಗೆ ನೀವು ಚಿಂತೆ ಮಾಡಬಾರದು. ನಿಮ್ಮ ಕೆಲಸಕ್ಕೆ ತಕ್ಕ ಹಣ ಕೊಟ್ಟ ಬಗ್ಗೆ ಮಾತ್ರ ಸಮಾಧಾನದಿಂದಿರಿ. ನಾನು ಅವರ ಕೆಲಸ ನೋಡಿ ಅವರಿಗೆ ಹಣ ಕೊಡುತ್ತಿಲ್ಲ. ನನ್ನ ಹತ್ತಿರ ಕೊಡಲು ಸಾಕಷ್ಟು ಇರುವುದರಿಂದ ಅವರಿಗೂ ನಿಮ್ಮಷ್ಟೇ ಹಣ ಕೊಟ್ಟಿದ್ದೇನೆ. ಹಾಗಾಗಿ ಅವರ ಜೊತೆ ನಿಮ್ಮನ್ನು ಹೋಲಿಸಿಕೊಳ್ಳಬೇಡಿ. “

ದಿವ್ಯವನ್ನು ತಲುಪಲು ಕೆಲವರು ಕಷ್ಟಪಟ್ಟು ದಿನರಾತ್ರಿ ಬಹಳ ಸಾಧನೆ ಮಾಡುತ್ತಾರೆ. ಕೆಲವರು ಮಧ್ಯಾಹ್ನದ, ಸಂಜೆಯ ಕೆಲಸಗಾರರಂತೆ ತಮಗೆ ದೊರೆತ ಅವಕಾಶದಲ್ಲಿ ಮಾತ್ರ ಸಾಧನೆ ಮಾಡುತ್ತಾರೆ. ಹಾಗಂತ ಅವರಿಗೆ ದೊರೆಯುವ ಡಿವೈನ್ ಕಡಿಮೆ ಪ್ರಮಾಣದ್ದಾಗಿರುವುದು ಸಾಧ್ಯವೆ? ದಿವ್ಯ ಅಪರಿಮಿತ ಮತ್ತು ಅದರಲ್ಲಿ ಹೆಚ್ಚು ಕಡಿಮೆಯ ಲೆಕ್ಕಾಚಾರವಿಲ್ಲ. ಲೆಕ್ಕ ಚುಕ್ತಾ ಆಗುವಾಗ ಎಲ್ಲರಿಗೂ ಸಿಗುವುದು ಒಂದೇ ದಿವ್ಯ, ಹಾಗಾಗಿ ಅಧ್ಯಾತ್ಮದಲ್ಲಿ ಹೆಚ್ಚು ಕಡಿಮೆಯ ವಿಚಾರವೇ ಇಲ್ಲ.

Leave a Reply