ಪ್ರೀತಿಯಲ್ಲಿ ಗೌರವ, ಜವಾಬ್ದಾರಿ … : Art of love #13

ಪ್ರೀತಿಯ ಮೂರನೇ ಮತ್ತು ಬಹುಮುಖ್ಯ ಅಂಶವಾಗಿ “ಗೌರವ” ವೊಂದು ಇರದೇ ಹೋಗಿದ್ದರೆ, ಜವಾಬ್ದಾರಿ ಬಹು ಸುಲಭವಾಗಿ, ಪ್ರಾಬಲ್ಯ ಸಾಧಿಸುವುದು ಮತ್ತು ಒಡೆತನ ಸಾಧಿಸುವುದು ಎನ್ನುವ ಕೆಟ್ಟ ಅರ್ಥಗಳನ್ನು ಪಡೆದುಕೊಳ್ಳುತ್ತಿತ್ತು. ಗೌರವ ಎಂದರೆ ಭಯ ಮತ್ತು ಭಕ್ತಿಯಲ್ಲ, ಗೌರವ ಎಂದರೆ ಒಬ್ಬ ಮನುಷ್ಯನನ್ನು ಅವನು ಇರುವ ಹಾಗೆ ನೋಡುವುದು, ಗಮನಿಸುವುದು, ಅವನ ಅನನ್ಯ ವೈಯಕ್ತಿಕತೆಯ (individuality) ಬಗ್ಗೆ ಅರಿವು ಹೊಂದಿರುವುದು… । ಮೂಲ: ಆರ್ಟ್ ಆಫ್ ಲವ್, ಎರಿಕ್ ಫ್ರೋಮ್; ಕನ್ನಡಕ್ಕೆ: ಚಿದಂಬರ ನರೇಂದ್ರ

ಹಿಂದಿನ ಭಾಗ ಇಲ್ಲಿ ನೋಡಿ: https://aralimara.com/2022/04/09/love-25/

ಗಮನ ನೀಡುವುದು ಮತ್ತು ಕಾಳಜಿ ವಹಿಸುವುದು ಪ್ರೀತಿಯ ಇನ್ನೊಂದು ಅಂಶವನ್ನು ಸೂಚಿಸುತ್ತವೆ ; ಅದು ಜವಾಬ್ದಾರಿ. ಇವತ್ತು ಜವಾಬ್ದಾರಿ ಎಂದರೆ ಬಹುತೇಕ ಕರ್ತವ್ಯ ಎನ್ನುವ ಅರ್ಥವಿದೆ, ಒಬ್ಬನ ಮೇಲೆ ಹೊರಗಿನಿಂದ ಹೊರೆಸಲಾಗಿರುವುದು. ಆದರೆ ಜವಾಬ್ದಾರಿಯ ತನ್ನ ನಿಜ ಅರ್ಥದಲ್ಲಿ ಸಂಪೂರ್ಣವಾಗಿ ಸ್ವಪ್ರೇರಿತವಾಗಿರುವುದು. ಜವಾಬ್ದಾರಿ ಎನ್ನುವುದು , ಇನ್ನೊಬ್ಬ ಮನುಷ್ಯ ಜೀವಿ ವ್ಯಕ್ತಪಡಿಸಿದ ಅಥವಾ ವ್ಯಕ್ತಪಡಿಸದೇ ಹೋದ ತನ್ನ ಅಗತ್ಯಗಳಿಗೆ ನನ್ನ ಪ್ರತಿಕ್ರಿಯೆ. ಜವಾಬ್ದಾರನಾಗಿರುವುದು ಎಂದರೆ ಪ್ರತಿಕ್ರಯಿಸಲು ಸಿದ್ಧನಾಗಿರುವುದು. ನಿನೆವ್ಹ್ ನ ವಾಸಿಗಳ ವಿಷಯದಲ್ಲಿ ಜೋನಾಹ್ ಗೆ ಜವಾಬ್ದಾರಿಯ ಭಾವ ಇರಲಿಲ್ಲ. ಅವನೂ ಕೇಯ್ನ್ ನಂತೆ ಕೇಳಬಲ್ಲವನಾಗಿದ್ದ, “ ನಾನು ನನ್ನ ಸಹೋದರನನ್ನು ಕಾಯುವವನಾ? “. ಆದರೆ ಪ್ರೀತಿಸುವ ಮನುಷ್ಯ ಪ್ರತಿಕ್ರಯಿಸುತ್ತಾನೆ, “ ನನ್ನ ಸಹೋದರನ ಬದುಕು ಕೇವಲ ಅವನ ಹೊಣೆಗಾರಿಕೆಯಲ್ಲ, ನನ್ನದೂ ಕೂಡ. “ ಅವನು ತನ್ನ ಬಗ್ಗೆ ಜವಾಬ್ದಾರಿಯನ್ನ ಹೊಂದುವುದರ ಜೊತೆಯೇ ತನ್ನ ಸಹಜೀವಿಗಳ ಬಗ್ಗೆ ಕೂಡ ಜವಾಬ್ದಾರಿಯ ಭಾವನೆಯನ್ನು ಹೊಂದಿರುತ್ತಾನೆ. ಈ ಜವಾಬ್ದಾರಿ, ತಾಯಿ ಮತ್ತು ಅವಳ ಮಗುವಿನ ಸಂದರ್ಭದಲ್ಲಿ , ಮುಖ್ಯವಾಗಿ ಆಕೆ ತನ್ನ ಮಗುವಿನ ದೈಹಿಕ ಅವಶ್ಯಕತೆಗಳನ್ನು ಸಮರ್ಥವಾಗಿ ಲಭ್ಯ ಮಾಡುವುದಾದರೆ, ಇಬ್ಬರು ವಯಸ್ಕರರ ನಡುವಿನ ಪ್ರೀತಿಯ ವಿಷಯದಲ್ಲಿ ಇನ್ನೊಬ್ಬರ ಮಾನಸಿಕ ಅಗತ್ಯಗಳನ್ನು ಪೂರೈಸುವುದಾಗಿದೆ.

ಪ್ರೀತಿಯ ಮೂರನೇ ಮತ್ತು ಬಹುಮುಖ್ಯ ಅಂಶವಾಗಿ “ಗೌರವ” ವೊಂದು ಇರದೇ ಹೋಗಿದ್ದರೆ, ಜವಾಬ್ದಾರಿ ಬಹು ಸುಲಭವಾಗಿ, ಪ್ರಾಬಲ್ಯ ಸಾಧಿಸುವುದು ಮತ್ತು ಒಡೆತನ ಸಾಧಿಸುವುದು ಎನ್ನುವ ಕೆಟ್ಟ ಅರ್ಥಗಳನ್ನು ಪಡೆದುಕೊಳ್ಳುತ್ತಿತ್ತು. ಗೌರವ ಎಂದರೆ ಭಯ ಮತ್ತು ಭಕ್ತಿಯಲ್ಲ, ಗೌರವ (Respect) ಎಂದರೆ ಆ ಪದದ ಮೂಲ ಹೇಳುವಂತೆ (respicere = to look at = ನೋಡುವುದು ) ಒಬ್ಬ ಮನುಷ್ಯನನ್ನು ಅವನು ಇರುವ ಹಾಗೆ ನೋಡುವುದು, ಗಮನಿಸುವುದು, ಅವನ ಅನನ್ಯ ವೈಯಕ್ತಿಕತೆಯ (individuality) ಬಗ್ಗೆ ಅರಿವು ಹೊಂದಿರುವುದು. ಗೌರವ ಎಂದರೆ ಇನ್ನೊಬ್ಬ ಮನುಷ್ಯನೂ ಬೆಳೆಯಬೇಕು ಮತ್ತು ಅವನು ತಾನು ಇರುವ ಹಾಗೆಯೇ ಬಿಚ್ಚಿಕೊಂಡು ಅರಳಬೇಕು ಎನ್ನುವ ಕಾಳಜಿ. ಆದ್ದರಿಂದ ಗೌರವವೆಂದರೆ ಶೋಷಣೆಯ ಅನುಪಸ್ಥಿತಿ. ನನಗೆ, ಪ್ರೀತಿಸಲ್ಪಡುತ್ತಿರುವ ಮನುಷ್ಯ ಕೇವಲ ತನ್ನ ಸಲುವಾಗಿ, ತನಗೆ ಬೇಕಾದ ರೀತಿಯಲ್ಲಿ ವಿಕಾಸ ಹೊಂದಬೇಕೇ ಹೊರತು ನನ್ನ ಸಲಹುವುದಕ್ಕಾಗಿ ಅಲ್ಲ. ನಾನು ಇನ್ನೊಬ್ಬ ಮನುಷ್ಯನನ್ನು ಪ್ರೀತಿಸುತ್ತಿದ್ದೇನೆಂದರೆ, ನಾನು ಅವನ ಅಥವಾ ಅವಳ ಜೊತೆ ಒಂದಾಗಿರುವ ಭಾವವನ್ನು ಅನುಭವಿಸುತ್ತೇನೆ, ಆದರೆ ನನ್ನ ಈ ಭಾವದಲ್ಲಿ ಅವನು ಅವನಾಗಿದ್ದಾನೆಯೇ ಹೊರತು ನಾನು ನನ್ನ ಬಳಕೆಗೆ ಬಯಸುವ ಅವನಾಗಿಲ್ಲ. ಹಾಗಾಗಿ ಗೌರವ ಸಾಧ್ಯವಾಗುವುದು ನಾನು ಸ್ವಾತಂತ್ರ್ಯವನ್ನು ಸಾಧಿಸಿದಾಗ ಮಾತ್ರ; ನಾನು ಊರುಗೋಲಿನ ಸಹಾಯವಿಲ್ಲದೆ ನಿಲ್ಲಬಲ್ಲೆನಾದರೆ , ನಡೆದಾಡಬಲ್ಲೆನಾದರೆ ಮಾತ್ರ , ಇನ್ನೊಬ್ಬರ ಮೇಲೆ ಪ್ರಾಬಲ್ಯ ಸಾಧಿಸದೇ, ಅವರನ್ನು ಶೋಷಣೆ ಮಾಡದೇ ಹೋದರೆ ಮಾತ್ರ. ಗೌರವ ಸಾಧ್ಯವಾಗುವುದು ಸ್ವಾತಂತ್ರ್ಯದ ಆಧಾರದ ಮೇಲೆ ಮಾತ್ರ : ಹಳೆಯ ಫ್ರೆಂಚ್ ಹಾಡೊಂದು ಹೀಗಿದೆ ; “ ಪ್ರೀತಿ, ಸ್ವಾತಂತ್ರ್ಯದ ಮಗು, ಬಲಾತ್ಕಾರದ ಸಂಬಂಧಿಯಲ್ಲ “

ಒಬ್ಬ ಮನುಷ್ಯನನ್ನು ಗೌರವಿಸುವವದು, ಅವನನ್ನು ಅರಿಯದೇ ಅರ್ಥಮಾಡಿಕೊಳ್ಳದೇ ಸಾಧ್ಯವಿಲ್ಲ ; ತಿಳುವಳಿಕೆ ಕೈ ಹಿಡಿದು ನಡೆಸದಿದ್ದರೆ, ಕಾಳಜಿ ಮತ್ತು ಜವಾಬ್ದಾರಿಗಳು ಕಣ್ಣಿಲ್ಲದ ಕುರುಡರು. ತಿಳುವಳಿಕೆ ಒಂದು ಖಾಲೀ ಪದ ಅಕಸ್ಮಾತ್ ಅದು ಆಸಕ್ತಿಯಿಂದ (concern) ಪ್ರೇರಿತವಾಗಿರದಿದ್ದರೆ. ತಿಳುವಳಿಕೆಗೆ ಹಲವಾರು ಸ್ತರಗಳು ; ಪ್ರೀತಿಗೆ ಸಂಬಂಧಿಸಿದ ಅರಿವು ತಿಳುವಳಿಕೆ ಹೊರವಲಯದಲ್ಲಿ ಇರುವಂಥದ್ದಲ್ಲ, ಅದು ಎಲ್ಲ ಪದರಗಳಲ್ಲಿಯೂ ವ್ಯಾಪಿಸಿಕೊಂಡಿರುವಂಥದು. ನಾನು, ನನ್ನ ಕುರಿತಾದ ಆಸಕ್ತಿಯನ್ನು ಮೀರಿ, ಇನ್ನೊಬ್ಬರನ್ನು ಅವರ ಬೇಕು ಬೇಡಗಳ ನೆಲೆಯಲ್ಲಿ ನೋಡಿದಾಗ ಮಾತ್ರ ಗೌರವ ಸಾಧ್ಯವಾಗುವುದು. ಉದಾಹರಣೆಗೆ, ನನಗೆ ಒಬ್ಬ ಮನುಷ್ಯ ಅವನು ಬಹಿರಂಗವಾಗಿ ತೋರಿಸಿಕೊಳ್ಳದಿದ್ದರೂ ಸಿಟ್ಟಿನಲ್ಲಿರುವುದು ಗೊತ್ತಿರಬಹುದು ; ಆದರೆ ನಾನು ಅವನನ್ನು ಇನ್ನೂ ಆಳವಾಗಿ ಬಲ್ಲೆನಾದ್ದರಿಂದ, ಅವನು ಆತಂಕದಲ್ಲಿರುವುದು, ದುಗುಡದಲ್ಲಿರುವುದು ಕೂಡ ನನಗೆ ಗೊತ್ತು, ಅವನು ಒಂಟಿತನ ಅನುಭವಿಸುತ್ತಿರುವುದು, ಪಶ್ಚಾತಾಪ ಪಡುತ್ತಿರುವ ಬಗ್ಗೆಯೂ ನನಗೆ ತಿಳುವಳಿಕೆ ಇದೆ. ಆಮೇಲೆ ನನಗೆ, ಅವನ ಸಿಟ್ಟು ಅವನನ್ನು ಕಾಡುತ್ತಿರುವ ಇನ್ನೂ ಆಳವಾದ ವಿಷಯವೊಂದರ ಪ್ರಕಟಿತ ರೂಪ ಎನ್ನುವುದೂ, ಮತ್ತು ಅವನು ಸಿಟ್ಟಿನ ಮನುಷ್ಯನಿಗಿಂತ ಹೆಚ್ಚಾಗಿ ನೋವು ಪಡುತ್ತಿರುವ ಮನುಷ್ಯ ಅನುಭವಿಸುವ ಹಾಗೆ ಆತಂಕ ಮತ್ತು ಮುಜುಗರವನ್ನು ಅನುಭವಿಸುತ್ತಿರುವುದು ಗೊತ್ತು.

ತಿಳುವಳಿಕೆಗೂ ಪ್ರೀತಿಯ ಸಮಸ್ಯೆಗೂ, ಇನ್ನೊಂದು ಬಹುಮುಖ್ಯವಾದ ಮತ್ತು ಇನ್ನೂ ಹೆಚ್ಚು ಮೂಲಭೂತವಾದ ಸಂಬಂಧವಿದೆ. ತನ್ನ ಪ್ರತ್ಯೇಕತೆಯ ಭಾವವನ್ನು ಮೀರಲು ಇನ್ನೊಬ್ಬರ ಜೊತೆ ಒಂದಾಗ ಬಯಸುವ ಮನುಷ್ಯನ ಮೂಲಭೂತ ಅಗತ್ಯದ ಜೊತೆ, ಅವನ ಇನ್ನೊಂದು ನಿರ್ದಿಷ್ಟ ಮನುಷ್ಯ ಸಹಜ ಬಯಕೆ ಕೂಡಿಕೊಂಡಿದೆ, ಅದು ‘ಮನುಷ್ಯನ ರಹಸ್ಯ’ ವನ್ನ ಅರಿಯುವುದು. ಬದುಕನ್ನ ಕೇವಲ ಅದರ ಜೈವಿಕ ರೂಪದಲ್ಲಿ ಗ್ರಹಿಸಿದಾಗಲೂ ಅದು ಒಂದು ರಹಸ್ಯ ಮತ್ತು ಪವಾಡದಂತೆ ತೋರುತ್ತದೆ, ಮತ್ತು ಮನುಷ್ಯ ತನ್ನ ಮಾನವಿಯ ನೆಲೆಯಲ್ಲಿ ಸ್ವತಃ ತನಗೇ ಮತ್ತು ತನ್ನ ಸಹಜೀವಿಗೆ ಕೂಡ ಗ್ರಹಿಸಲು ಸಾಧ್ಯವಾಗದಂಥ ರಹಸ್ಯವಾಗಿ ಉಳಿದುಕೊಂಡಿದ್ದಾನೆ. ನಮ್ಮ ಬಗ್ಗೆ ನಮಗೆ ಎಷ್ಟೇ ಗೊತ್ತು ಎಂದುಕೊಂಡರೂ, ನಮ್ಮನ್ನು ತಿಳಿದುಕೊಳ್ಳುವ ನಮ್ಮ ಎಲ್ಲ ಪ್ರಯತ್ನಗಳ ಹೊರತಾಗಿಯೂ, ನಮ್ಮ ಬಗ್ಗೆ ನಮಗೆ ಏನೂ ಗೊತ್ತಿಲ್ಲ. ನಮ್ಮ ಸಹಜೀವಿಯ ಬಗ್ಗೆಯೂ ನಾವು ಎಷ್ಟೇ ಗೊತ್ತು ಎಂದುಕೊಂಡರೂ, ಅವರ ಬಗ್ಗೆ ಕೂಡ ನಮಗೆ ಏನೂ ಗೊತ್ತಿಲ್ಲ. ಇದಕ್ಕೆ ಮುಖ್ಯ ಕಾರಣ, ನಾವು ಮತ್ತು ನಮ್ಮ ಸಹ ಜೀವಿಗಳು ಕೇವಲ ವಸ್ತುವಾಗಿರದೇ ಮನುಷ್ಯರಾಗಿರುವುದು. ನಾವು, ನಮ್ಮ ಅಥವಾ ಇನ್ನೊಬ್ಬರ ಇರುವಿಕೆಯ ಆಳಕ್ಕೆ ಇಳಿದಂತೆಲ್ಲ , ನಮ್ಮನ್ನು ಅಥವಾ ಅವರನ್ನು ಅರಿತುಕೊಳ್ಳುವ ಗುರಿ ನಮ್ಮಿಂದ ದೂರವಾಗುತ್ತ ಹೋಗುವುದು. ಆದರೂ ಮನುಷ್ಯನ ಆತ್ಮದ ರಹಸ್ಯವನ್ನು ಭೇದಿಸುತ್ತ ಅವನ ಕೇಂದ್ರವನ್ನು, ಯಾವುದನ್ನ ನಾವು ನಿಜ “ಅವನು” ಎಂದು ತಿಳಿದುಕೊಂಡಿದ್ದೇವೆಯೋ ಅದನ್ನು ತಿಳಿದುಕೊಳ್ಳುವ ಬಯಕೆಯಿಂದ ಹೊರತಾಗಲು ಮಾತ್ರ ನಾವು ಅಸಹಾಯಕರು.


1 Comment

Leave a Reply