ನಮ್ಮನ್ನ, ನಮ್ಮ ಸಹಜೀವಿಗಳನ್ನ ಅರಿತುಕೊಳ್ಳುವ ನಮ್ಮ ಬಯಕೆ ಎಷ್ಟೇ ತೀವ್ರವಾಗಿದ್ದರೂ, ಅದು ಸಾಧಾರಣ ವಿಷಯ ಜ್ಞಾನದಲ್ಲಿ, ನಮ್ಮ ಆಲೋಚನೆಗಳು ಸಾಧ್ಯಮಾಡುವ ತಿಳುವಳಿಕೆಯಲ್ಲಿ ಪೂರ್ಣಗೊಳ್ಳುವುದಿಲ್ಲ. ನಮ್ಮ ಕುರಿತಾದ ನಮ್ಮ ತಿಳುವಳಿಕೆ ಸಾವಿರ ಪಟ್ಟು ಹೆಚ್ಚಾದರೂ, ನಮಗೆ ಆ ಆಳವನ್ನ ಮುಟ್ಟುವುದು ಸಾಧ್ಯವಾಗುವುದಿಲ್ಲ. ನಾವು ನಮಗೆ ಒಗಟಾಗೇ ಉಳಿಯುವೆವು, ನಮ್ಮ ಸಹಜೀವಿಗಳೂ ಕೂಡ. ಪೂರ್ಣ ತಿಳುವಳಿಕೆಯ ದಾರಿ ಪ್ರೀತಿಯ ಕ್ರಿಯೆಯಲ್ಲಿಯೇ ಇದೆ । ಮೂಲ: ಆರ್ಟ್ ಆಫ್ ಲವ್, ಎರಿಕ್ ಫ್ರೋಮ್; ಕನ್ನಡಕ್ಕೆ: ಚಿದಂಬರ ನರೇಂದ್ರ
ಹಿಂದಿನ ಭಾಗ ಇಲ್ಲಿ ನೋಡಿ: https://aralimara.com/2022/04/16/love-27/ (ಮುಂದುವರಿದಿದೆ…)
ಈ ರಹಸ್ಯವನ್ನು ಗೊತ್ತುಮಾಡಿಕೊಳ್ಳಲು ಒಂದು ದಾರಿ ಇದೆ, ಆದರೆ ಅದು ಹತಾಶೆಯ ದಾರಿ : ಇದು ಇನ್ನೊಬ್ಬರ ಮೇಲೆ ಸಂಪೂರ್ಣ ಅಧಿಕಾರ ಸಾಧಿಸುವ ದಾರಿ ; ಈ ಅಧಿಕಾರ ನಾವು ಬಯಸಿದಂತೆ ಅವನನ್ನು ಆಡಿಸುತ್ತದೆ, ನಾವು ಬಯಸಿದಂತೆ ಅವನು ಯೋಚನೆ ಮಾಡುವಂತೆ ಮಾಡುತ್ತದೆ, ಅವನ ಭಾವನೆಗಳು ಕೂಡ ನಾವು ಬಯಸಿದ ರೀತಿಯಲ್ಲಿ ; ಇದು ಅವನನ್ನು ಒಂದು ಜಡ ವಸ್ತುವಾಗಿ ಮಾರ್ಪಡಿಸುತ್ತವೆ , ನಮ್ಮ ವಸ್ತುವಾಗಿ, ನಮ್ಮ ಒಡೆತನದ ವಸ್ತುವಾಗಿ. ರಹಸ್ಯ ತಿಳಿದುಕೊಳ್ಳಬಯಸುವ ನಮ್ಮ ಪ್ರಯತ್ನದ ಆತ್ಯಂತಿಕ ಹಂತ ಕೊನೆಯಾಗುವುದೇ sadism ನ ಅತಿರೇಕದಲ್ಲಿ, ಮನುಷ್ಯ ಜೀವಿಯನ್ನು ಸಂಕಟಕ್ಕೀಡುಮಾಡುವ ಬಯಕೆ ಮತ್ತು ಸಾಮರ್ಥ್ಯದಲ್ಲಿ; ಅವನನ್ನು ಹಿಂಸಿಸುವಲ್ಲಿ, ಈ ಹಿಂಸೆಯ ನೋವಿನಲ್ಲಿ ಅವನು ತನ್ನ ರಹಸ್ಯಗಳನ್ನು ಹೊರ ಹಾಕುವಂತೆ ಮಾಡುವಲ್ಲಿ. ಮನುಷ್ಯನ ರಹಸ್ಯವನ್ನ ಅರಿಯಲು ಚಡಪಡಿಸುವ ನಮ್ಮ ಈ ತುಡಿತದಲ್ಲಿ ಕ್ರೌರ್ಯ ಮತ್ತು ವಿನಾಶದ ಆಳ ಮತ್ತು ತೀವ್ರತೆಯನ್ನು ಮುಟ್ಟಲು ಬೇಕಾಗುವ ಎಲ್ಲ ಅವಶ್ಯಕ ಪ್ರೇರಣೆಗಳಿವೆ. ಈ ಪರಿಕಲ್ಪನೆಯನ್ನ ಐಸಾಕ್ ಬ್ಯಾಬಲ್ ಸ್ಪಷ್ಟವಾಗಿ, ಸಂಕ್ಷಿಪ್ತವಾಗಿ ವಿವರಿಸಿದ್ದಾನೆ. ರಷ್ಯಾದ ಆಂತರಿಕ ಯುದ್ಧದಲ್ಲಿ ಭಾಗವಹಿಸಿದ್ದ, ತನ್ನ ಮಾಸ್ಟರ್ ನನ್ನು ಆಗ ತಾನೇ ತುಳಿದು ಕೊಂದು ಹಾಕಿದ್ದ ತನ್ನ ಸಹ ಅಧಿಕಾರಿಯ ಮಾತುಗಳನ್ನ ಐಸಾಕ್ ಕೋಟ್ ಮಾಡುತ್ತಾನೆ :
“ ಗುಂಡು ಹಾರಿಸಿ ಕೇವಲ ಒಬ್ಬನನ್ನು ನಿವಾರಿಸಿಕೊಳ್ಳಬಹುದು …… ಆದರೆ ಗುಂಡು ಹಾರಿಸುವುದರಿಂದ ಅವನ ಚೇತನವನ್ನು, ಅದು ಅವನೊಳಗೆ ಎಲ್ಲಿದೆಯೋ, ಯಾವ ರೂಪದಲ್ಲಿದೆಯೋ , ಅದನ್ನು ತಲುಪಲಾಗುವುದಿಲ್ಲ. ಆದರೆ ಇದರಿಂದ ನಾನೂ ಹೊರತಲ್ಲ, ನಾನು ಒಂದಕ್ಕಿಂತ ಹೆಚ್ಚು ಬಾರಿ, ಗಂಟೆಗಿಂತಲೂ ಹೆಚ್ಚು ಕಾಲ ಶತ್ರುವನ್ನ ತುಳಿದಿದ್ದೇನೆ. ಬದುಕೆಂದರೆ ನಿಜವಾಗಿ ಏನು ಎನ್ನುವುದು ನನಗೆ ಗೊತ್ತಗಬೇಕು, ನಮ್ಮ ಕೆಳಗಿರುವವರ ಬದುಕುಗಳು ಎಂಥವೆಂಬುದು ಗೊತ್ತಾಗಬೇಕು. “ (6)
ರಹಸ್ಯ ಅರಿಯುವ ವಿಷಯದ ಕುರಿತಾಗಿ, ಮಕ್ಕಳಲ್ಲಿ ನಾವು ಮೇಲೆ ವಿವರಿಸಿದ ಮನೋಭಾವವನ್ನು ಸ್ಪಷ್ಟವಾಗಿ ಗುರುತಿಸಬಹುದು. ಮಗು, ಒಂದು ವಸ್ತುವಿನ ಬಗ್ಗೆ ತಿಳಿದುಕೊಳ್ಳಲು, ಅದನ್ನು ಮುರಿಯುತ್ತದೆ, ಒಡೆಯುತ್ತದೆ, ಕಿತ್ತು ಹಾಕುತ್ತದೆ. ಆ ವಸ್ತು ಪ್ರಾಣಿಯಾಗಿದ್ದರೆ, ಮಗು ಅದರ ಕೈ ಕಾಲುಗಳನ್ನ ಎಳೆದು ನೋಡುತ್ತದೆ, ನಿರ್ವಾಕಾರವಾಗಿ ಚಿಟ್ಟೆಯ ರೆಕ್ಕೆಗಳನ್ನು ಕೀಳುತ್ತದೆ, ಅದರ ಚೆಲುವಿನ ರಹಸ್ಯ ಅರಿತುಕೊಳ್ಳಲು. ಈ ಕ್ರೌರ್ಯದ ಹಿಂದೆ ಇರುವ ಆಳವಾದ ಪ್ರೇರಣೆ ಬದುಕಿನ ರಹಸ್ಯಗಳನ್ನು ತಿಳಿದುಕೊಳ್ಳುವ ಕುರಿತಾದದ್ದು.
ಈ ‘ ಪರಮ ರಹಸ್ಯ ‘ ವನ್ನು ಅರಿಯುವ ಇನ್ನೊಂದು ದಾರಿಯೆಂದರೆ ಅದು ಪ್ರೀತಿ. ಇನ್ನೊಬ್ಬ ಮನುಷ್ಯನೊಳಗೆ ಕ್ರಿಯಾತ್ಮಕವಾಗಿ, ಎಲ್ಲ ಆಸಕ್ತಿ ಕುತೂಹಲಗಳೊಂದಿಗೆ ಪ್ರವೇಶ ಮಾಡುವುದೇ ಪ್ರೀತಿ. ಈ ದಾರಿಯಲ್ಲಿ, ಇನ್ನೊಬ್ಬ ಮನುಷ್ಯನೊಡನೆಯ ಒಂದಾಗುವಿಕೆಯಲ್ಲಿ, ನನ್ನ ರಹಸ್ಯದ ಕುರಿತಾದ ಹುಡುಕಾಟ ತನ್ನ ಗುರಿಯನ್ನ ಕಂಡುಕೊಂಡು ಪೂರ್ಣಗೊಳ್ಳುತ್ತದೆ. ಈ ಒಂದಾಗುವಿಕೆಯಲ್ಲಿ, ನಾನು ನಿನ್ನ ಬಗ್ಗೆ ತಿಳಿದುಕೊಳ್ಳುತ್ತೇನೆ, ನನ್ನ ಬಗ್ಗೆ ತಿಳಿದುಕೊಳ್ಳುತ್ತೇನೆ, ಎಲ್ಲರ ಬಗ್ಗೆ ಕೂಡ ನನಗೆ ತಿಳುವಳಿಕೆ ಸಾಧ್ಯವಾಗುತ್ತದೆ, ಆದರೆ ಈ ತಿಳುವಳಿಕೆ ಹೊರ ಮಾಹಿತಿಯ ರೂಪದ್ದಲ್ಲ. ಈ ಒಂದಾಗುವಿಕೆಯ ಅನುಭವದಲ್ಲಿ, ನಮ್ಮೊಳಗೆ ಜೀವಂತಿಕೆಯಿಂದ ಇರುವ ತಿಳುವಳಿಕೆ ಮಾತ್ರ ನಮ್ಮದಾಗುತ್ತದೆಯೇ ಹೊರತು ನಮ್ಮ ಬುದ್ಧಿ ಮನಸ್ಸುಗಳು ಸಾಧ್ಯಮಾಡುವುದಲ್ಲ. Sadism, ರಹಸ್ಯಗಳನ್ನು ತಿಳಿದುಕೊಳ್ಳುವ ನಮ್ಮ ಬಯಕೆಯಿಂದ ಪ್ರೇರಿತವಾಗಿದೆಯಾದರೂ ನಾನು ಈ ದಾರಿಯಲ್ಲಿ ಮೊದಲಿನಷ್ಟೇ ಅಜ್ಞಾನಿಯಾಗಿ ಉಳಿಯುತ್ತೇನೆ. ನಾನು ಇನ್ನೊಬ್ಬರನ್ನು ಜಗ್ಗಿ, ಎಳೆದು ಹುಡುಕುವ ಪ್ರಯತ್ನ ಮಾಡಿದ್ದೇನೆ ಆದರೆ ಇದರಿಂದ ಅವರಿಗೆ ಹಿಂಸೆಯಾಗಿದೆಯೇ ಹೊರತು ಬೇರೇನೂ ಸಾಧ್ಯವಾಗಿಲ್ಲ. ಪ್ರೀತಿಯೊಂದೇ ತಿಳುವಳಿಕೆಯ ದಾರಿ. ಪ್ರೀತಿ, ಒಂದಾಗುವಿಕೆಯ ಕ್ರಿಯೆಯಲ್ಲಿ ನನ್ನ ಹುಡುಕಾಟದ ಎಲ್ಲ ಪ್ರಶ್ನೆಗಳಿಗೂ ಉತ್ತರ ನೀಡಿದೆ. ಪ್ರೀತಿಯಲ್ಲಿ, ನನ್ನನ್ನು ನಾನು ಕೊಡುವ ಕ್ರಿಯೆಯಲ್ಲಿ, ಒಂದಾಗುವಿಕೆಯ ಮೂಲಕ ಇನ್ನೊಬ್ಬರನ್ನು ಪ್ರವೇಶಿಸುವ ಕ್ರಿಯೆಯಲ್ಲಿ, ನನ್ನನ್ನು ನಾನು ಕಂಡುಕೊಳ್ಳುವೆ, ನಮ್ಮಿಬ್ಬರ ಬಗ್ಗೆಯೂ ತಿಳುವಳಿಕೆ ಹೊಂದುವೆ ಮತ್ತು ಮನುಷ್ಯನನ್ನು ಅರಿತುಕೊಳ್ಳುವೆ.
ನಮ್ಮನ್ನ, ನಮ್ಮ ಸಹ ಜೀವಿಗಳನ್ನ ಅರಿತುಕೊಳ್ಳಬಯಸುವ ನಮ್ಮ ತುಡಿತ, “ ನಿನ್ನನ್ನು ಅರಿತುಕೋ” ಎನ್ನುವ ಡೆಲ್ಫಿ ಸೂಕ್ತಿಯಲ್ಲಿ ಅಭಿವ್ಯಕ್ತಗೊಂಡಿದೆ . ಇದು ಎಲ್ಲ ಮನೋವಿಜ್ಞಾನದ ಮೂಲ ಸ್ರೋತ. ನಮ್ಮನ್ನ, ನಮ್ಮ ಸಹಜೀವಿಗಳನ್ನ ಅರಿತುಕೊಳ್ಳುವ ನಮ್ಮ ಬಯಕೆ ಎಷ್ಟೇ ತೀವ್ರವಾಗಿದ್ದರೂ, ಅದು ಸಾಧಾರಣ ವಿಷಯ ಜ್ಞಾನದಲ್ಲಿ, ನಮ್ಮ ಆಲೋಚನೆಗಳು ಸಾಧ್ಯಮಾಡುವ ತಿಳುವಳಿಕೆಯಲ್ಲಿ ಪೂರ್ಣಗೊಳ್ಳುವುದಿಲ್ಲ. ನಮ್ಮ ಕುರಿತಾದ ನಮ್ಮ ತಿಳುವಳಿಕೆ ಸಾವಿರ ಪಟ್ಟು ಹೆಚ್ಚಾದರೂ, ನಮಗೆ ಆ ಆಳವನ್ನ ಮುಟ್ಟುವುದು ಸಾಧ್ಯವಾಗುವುದಿಲ್ಲ. ನಾವು ನಮಗೆ ಒಗಟಾಗೇ ಉಳಿಯುವೆವು, ನಮ್ಮ ಸಹಜೀವಿಗಳೂ ಕೂಡ. ಪೂರ್ಣ ತಿಳುವಳಿಕೆಯ ದಾರಿ ಪ್ರೀತಿಯ ಕ್ರಿಯೆಯಲ್ಲಿಯೇ ಇದೆ : ಈ ಕ್ರಿಯೆ ಆಲೋಚನೆಗಳನ್ನು, ಶಬ್ದಗಳನ್ನು ಮೀರುವಂಥದು. ಪ್ರೀತಿ ಎಂದರೆ ಒಂದಾಗುವಿಕೆಯ ಅನುಭವದಲ್ಲಿ ಧೈರ್ಯದಿಂದ ಧುಮುಕುವುದು. ಆದರೂ ಆಲೋಚನೆಗಳಿಂದ ಕಂಡುಕೊಂಡ ಜ್ಞಾನ, ಮನೋವೈಜ್ಞಾನಿಕ ತಿಳುವಳಿಕೆ, ಪ್ರೀತಿಯ ಮೂಲಕ ಪೂರ್ಣ ತಿಳುವಳಿಕೆಯನ್ನ ಗೊತ್ತುಮಾಡಿಕೊಳ್ಳುವ ನಮ್ಮ ಪ್ರಯತ್ನಕ್ಕೆ ಪೂರ್ವ ಸಿದ್ಧತೆಯಾಗಿ ಸಹಾಯ ಮಾಡುತ್ತವೆ. ಅವನ ನಿಜವನ್ನು ಎದುರುಗೊಳ್ಳಬೇಕಾದರೆ, ನಾನು ನನ್ನನ್ನ , ನನ್ನ ಸಹ ಜೀವಿಯನ್ನ, ವಸ್ತುನಿಷ್ಠವಾಗಿ ತಿಳಿದುಕೊಳ್ಳಬೇಕು, ಅಥವಾ ನಮ್ಮ ಭ್ರಮೆಗಳಿಂದ, ಅವರ ಕುರಿತಾದ ನಮ್ಮ ಅತಾರ್ಕಿಕ ವಿರೂಪ ಚಿತ್ರದಿಂದ ನಮ್ಮನ್ನು ನಾವು ದೂರ ಮಾಡಿಕೊಳ್ಳಬೇಕು. ಕೇವಲ ಮನುಷ್ಯನನ್ನು ವಸ್ತು ನಿಷ್ಠವಾಗಿ ತಿಳಿದುಕೊಂಡಾಗ ಮಾತ್ರ, ಪ್ರೀತಿಯಲ್ಲಿ ಅವನ ನಿಜವಾದ ಮೂಲ ತಿರುಳನ್ನ ಅರಿಯುವುದು ಸಾಧ್ಯವಾಗುತ್ತದೆ.
ಮನುಷ್ಯನನ್ನು ಅರಿತುಕೊಳ್ಳುವ ಸಮಸ್ಯೆ, ದೇವರನ್ನು ತಿಳಿದುಕೊಳ್ಳುವ ಕುರಿತಾದ ನಮ್ಮ ಧಾರ್ಮಿಕ ಸಮಸ್ಯೆಗೆ ಸಮಾನಾಂತರವಾದದ್ದು. ಸಾಂಪ್ರದಾಯಿಕ ಪಾಶ್ಚಿಮಾತ್ಯ ಧರ್ಮಶಾಸ್ತ್ರದಲ್ಲಿ ದೇವರನ್ನು ಆಲೋಚನೆಗಳ ಮೂಲಕ ಅರಿಯುವ, ವ್ಯಾಖ್ಯಾನ ಮಾಡುವ ಪ್ರಯತ್ನ ಮಾಡಲಾಗಿದೆ. ಆಲೋಚನೆಗಳ ಮೂಲಕ ದೇವರ ಬಗ್ಗೆ ತಿಳಿದುಕೊಳ್ಳಬಹುದು ಎಂದು ಅಂದುಕೊಳ್ಳಲಾಗಿದೆ. ಏಕದೈವಾರಾಧನೆಯ ಪರಿಣಾಮವಾಗಿ ಹೊರಹೊಮ್ಮಿದ ಅನುಭಾವದಲ್ಲಿ ( ಇದನ್ನ ನಾನು ಮುಂದೆ ಸಿದ್ಧ ಮಾಡಿ ತೋರಿಸುವ ಪ್ರಯತ್ನ ಮಾಡಲಿದ್ದೇನೆ) ದೇವರನ್ನು ಆಲೋಚನೆಯ ಮೂಲಕ ಅರಿಯುವ ಪ್ರಯತ್ನವನ್ನ ಕೈಬಿಟ್ಚು, ಅದರ ಬದಲಾಗಿ ದೇವರೊಡನೆ ಒಂದಾಗುವಿಕೆಯ ಅನುಭವಕ್ಕೆ ಮನ್ನಣೆ ನೀಡಲಾಗಿದೆ, ಆದರೆ ಇಂಥ ಪ್ರಕ್ರಿಯೆಯಲ್ಲಿ ದೇವರನ್ನು ತಿಳಿದುಕೊಳ್ಳುವ ಅವಕಾಶವೂ ಇಲ್ಲ ಮತ್ತು ಇಂಥದೊಂದು ಅವಕಾಶದ ಬೇಡಿಕೆಯೂ ಇಲ್ಲ.
1 Comment