“ನಿಜಜ್ಞಾನಿಗಳು ಇರುವರೇ…!?” : ಸಿದ್ಧಾರ್ಥ #2

ಸಿದ್ಧಾರ್ಥ ಎಲ್ಲರ ಪಾಲಿಗೆ ಆನಂದದ ಝರಿಯಾಗಿದ್ದ. ಅವನು ಅವರೆಲ್ಲರನ್ನೂ ಸಂತೋಷಪಡಿಸುತ್ತಿದ್ದ. ಆದರೆ, ಸಿದ್ಧಾರ್ಥನಿಗೆ ತನ್ನನ್ನು ತಾನು ಸಂತೋಷವಾಗಿಟ್ಟುಕೊಳ್ಳಲಿಕ್ಕೇ  ಸಾಧ್ಯವಾಗುತ್ತಿರಲಿಲ್ಲ.… ಮುಂದೆ… । ಮೂಲ: ಹರ್ಮನ್ ಹೆಸ್ಸ್; ಕನ್ನಡಕ್ಕೆ: ಚೇತನಾ ತೀರ್ಥಹಳ್ಳಿ

ಹಿಂದಿನ ಭಾಗ ಇಲ್ಲಿದೆ : https://aralimara.com/2022/04/18/sid/

ಸಿದ್ಧಾರ್ಥ ತನ್ನೊಳಗಿನ ಅಸಂತೋಷಕ್ಕೆ ನೀರುಣಿಸುತ್ತಲೆ ನಡೆದ. ತನ್ನ ಅಪ್ಪ ಅಮ್ಮನ ಪ್ರೇಮವಾಗಲೀ, ಗೆಳೆಯ ಗೋವಿಂದನ ಸ್ನೇಹವಾಗಲೀ ತನಗೆ ಶಾಶ್ವತ ಸುಖ ಅಥವಾ ಸಂತೋಷ ನೀಡಲಾರದು, ತನ್ನನ್ನು ಬೆಳೆಸಲಾರದು ಅನ್ನುವ ಯೋಚನೆ  ಅವನಲ್ಲಿ ಬಲವಾಗುತ್ತಲೇ ಹೋಯ್ತು. ತನ್ನ ಸೂಕ್ಷ್ಮಮತಿ ತಂದೆ, ತನ್ನ ಇತರ ಗುರುಗಳು ಮತ್ತು ಪಂಡಿತ ಬ್ರಾಹ್ಮಣರು ಅದಾಗಲೇ ತಮ್ಮಲ್ಲಿದ್ದ ಅತ್ಯುನ್ನತ ಅರಿವನ್ನು ತನಗೆ ಮೊಗೆ ಮೊಗೆದು ಕೊಟ್ಟಿದ್ದಾರೆ, ಇನ್ನು ಕೊಡುವಂಥದ್ದು ಅವರ ಬಳಿ ಏನೂ ಉಳಿದಿಲ್ಲ ಎಂದು ಅವನಿಗೆ ಅನಿಸತೊಡಗಿತ್ತು. ಅಷ್ಟಾದರೂ ಅವನ ಪಾತ್ರೆ ತುಂಬಿರಲಿಲ್ಲ, ಅವನ ಚೈತನ್ಯಕ್ಕೆ ತೃಪ್ತಿಯಿಲ್ಲ, ಅವನ ಆತ್ಮ ಶಾಂತವಾಗಿಲ್ಲ, ಹೃದಯಕ್ಕೆ ಸಂತೋಷವಿಲ್ಲ.

ಸಂಧ್ಯಾದಿ ಸ್ನಾನಗಳನ್ನೇನೋ ತಪ್ಪದೆ ನಡೆಸಿದ್ದ, ಆದರೆ ಅದು ಬರೀ ನೀರಷ್ಟೆ. ಅದು ಅವನ ಪಾಪಗಳನ್ನು ತೊಳೆಯಲಿಲ್ಲ. ಆತ್ಮದ ಬಾಯಾರಿಕೆ ತಣಿಸಲಿಲ್ಲ. ಅದು ಅವನ ಎದೆಹೊಕ್ಕು ಕುಳಿತಿದ್ದ ಭಯವನ್ನೂ ಓಡಿಸಲಿಲ್ಲ. ಹೋಮ ಹವನ, ದೇವತಾರಾಧನೆ ಎಲ್ಲವೂ ಸರಿಯೇ, ಆದರೆ ಅವಷ್ಟೇ ಸಾಕೇ? ಹೋಮಾದಿಗಳು ಅದೃಷ್ಟವನ್ನು ಕೊಟ್ಟಾವೆಯೆ? ಇನ್ನು ದೇವತೆಗಳ ಕಥೆಯೇನು? ಈ ಜಗತ್ತು ನಿಜಕ್ಕೂ ಪ್ರಜಾಪತಿಯೇ ಸೃಷ್ಟಿಸಿದ್ದೇ? ಮೂಲತಃ ಇದ್ದುದು ತತ್ – ಅದು, ಏಕ, ಏಕೈಕ ಆತ್ಮವಷ್ಟೇ ಅಲ್ಲವೆ?  ದೇವತೆಗಳೂ ನಮ್ಮ ನಿಮ್ಮ ಹಾಗೇ ಸೃಷ್ಟಿಯಾದವರೇ ತಾನೆ? ಅವರೂ ಕಾಲಕ್ಕೆ ಪಕ್ಕಾಗಿ ನಶಿಸುವರೇ ಅಲ್ಲವೆ? ಹಾಗಾದರೆ ದೇವತೆಗಳಿಗೆ ಹವಿಸ್ಸು ನೀಡುವುದು ಸರಿಯೇ, ಸಾರ್ಥಕವೇ, ನಿಜಕ್ಕೂ ಅದೊಂದು ಅತ್ಯುನ್ನತ ಉದ್ಯೋಗವೇ? ಅಲ್ಲದಿದ್ದರೆ ಮತ್ಯಾರಿಗೆ ಹವಿಸ್ಸು ಕೊಡಬೇಕು? ಸರ್ವಭೂತನಾದ ಆ ಏಕೈಕ ಆತ್ಮನನ್ನು ಬಿಟ್ಟು ಮತ್ಯಾರನ್ನು ಪೂಜಿಸಬೇಕು ಹಾಗಾದರೆ! ಇನ್ನು ಈ ಆತ್ಮವನ್ನು ಹುಡುಕೋದು ಎಲ್ಲಿ, ಅದು ಎಲ್ಲಿರುತ್ತದೆ, ಅದರ ಅನಂತ ಹೃದಯ ಅದೆಲ್ಲಿ ಮಿಡಿಯುತ್ತಿದೆ? ಅದನ್ನು ನಮ್ಮೊಳಗೇ ಅಲ್ಲದೆ ಹುಡುಕೋದಾದರೂ ಮತ್ತೆಲ್ಲಿ!?

ಅದು ನಮ್ಮ ಅಂತರಂಗದಲ್ಲಿ, ನಮ್ಮಿಂದ ಬೇರ್ಪಡಿಸಲಾಗದಂತೆ ಹುದುಗಿದೆಯಲ್ಲವೆ? ಆದರೆ ಎಲ್ಲಿ… ಎಲ್ಲಿದೆ ಈ ಅಂತರಾಳದ ಆತ್ಯಂತಿಕ ಆತ್ಮ? ಅದು ಮೂಳೆ ಮಾಂಸವಲ್ಲ, ಅದು ಆಲೋಚನೆಯಲ್ಲ, ಅರಿವೂ ಅಲ್ಲ – ಹಾಗಂತಲೇ ಅಲ್ಲವೇ ಪಂಡಿತರು ಹೇಳಿದ್ದು?

ಹಾಗಾದರೆ ಎಲ್ಲಿ… ಎಲ್ಲಿ ಅದನ್ನ ಹುಡುಕೋದು? ಅದರ ನೆಲೆಯನ್ನು – ಅಂದರೆ ನನ್ನನ್ನು, ನನ್ನ ಅಂತರಾಳವನ್ನು, ನನ್ನ  ಆತ್ಮವನ್ನು ತಲುಪಲು ಬೇರೆ ದಾರಿಯಾದರೂ ಇದೆಯೇ? ದುರದೃಷ್ಟ! ಅಂಥಾ ಮತ್ತೊಂದು ದಾರಿ ತೋರುವವರೇ ಇಲ್ಲ ಯಾರೂ. ಯಾರಿಗೂ ಅದು ಗೊತ್ತೂ ಇರಲಿಲ್ಲ. ಅಪ್ಪನಿಗೂ, ಗುರುಗಳಿಗೂ, ಪಂಡಿತರಿಗೂ, ಆಹುತಿಯ ಪವಿತ್ರ ಮಂತ್ರಗಳಿಗೂ!

ಅವರಿಗೆ ಬೇರೆಲ್ಲವೂ ತಿಳಿದಿತ್ತು, ಆ ಬ್ರಾಹ್ಮಣರಿಗೆ ಮತ್ತವರ ಪವಿತ್ರ ಪುಸ್ತಕಗಳಿಗೆ… ಅವರಿಗೆ ಎಲ್ಲವೂ ತಿಳಿದಿತ್ತು. ಅವರು ಎಲ್ಲದರ ಕಾಳಜಿ ವಹಿಸಿದ್ದರು. ಅದರಲ್ಲೂ ಜಗತ್ತಿನ ಸೃಷ್ಟಿ, ಮಾತಿನ ಹುಟ್ಟು, ಆಹಾರ ವಿಚಾರ, ಉಸಿರಾಟದ ಒಳಹೊರಗು, ಇಂದ್ರಿಯಗಳ ಜೋಡಣೆ, ದೇವತೆಗಳ ಕೆಲಸಕಾರ್ಯ, ಅವರಿಗೆ ಲೆಕ್ಕವಿಲ್ಲದಷ್ಟು ಸಂಗತಿಗಳ ಅರಿವಿತ್ತು. ಆದರೆ ಏನು ಗೊತ್ತಿರಬೇಕೋ ಅದೇ ಗೊತ್ತಿಲ್ಲದೆ ಇವೆಲ್ಲ ಅರಿವನ್ನು ಕಟ್ಟಿಕೊಂಡು ಪ್ರಯೋಜನವಾದರೂ ಇತ್ತೆ? ಇದೆಯೆ!?

ಪವಿತ್ರ ಗ್ರಂಥಗಳಲ್ಲಿ, ಅದರಲ್ಲೂ ಸಾಮವೇದದ ಉಪನಿಷತ್ತುಗಳ ಅದ್ಭುತವಾದ ಶ್ಲೋಕಗಳಲ್ಲಿ, ಅಂತರಂಗದಲ್ಲಿ ನೆಲೆಸಿರುವ ಆತ್ಯಂತಿಕ ಆತ್ಮದ ಬಗ್ಗೆ, ಅದನ್ನು ಹೊಂದುವ ಬಗ್ಗೆ ವಿವರಗಳೇನೋ ಇದ್ದವು. “ನಿನ್ನ ಆತ್ಮವೇ ಸಮಸ್ತ ಸೃಷ್ಟಿ” ಎಂದೆಲ್ಲ ಅದರಲ್ಲಿ ಹೇಳಲಾಗಿತ್ತು. ಮನುಷ್ಯ ಸುಪ್ತಾವಸ್ಥೆಯಲ್ಲಿ, ಗಾಢ ಸುಷುಪ್ತಿಯಲ್ಲಿ ತನ್ನ ಅಂತರಂಗದಲ್ಲಿರುವ ಆತ್ಮವನ್ನು ಕಂಡುಕೊಂಡು ಅದರಲ್ಲಿ ನೆಲೆಸುತ್ತಾನೆ ಎಂದೂ ಅದರಲ್ಲಿ ಹೇಳಲಾಗಿತ್ತು. ಈ ಶ್ಲೋಕಗಳು ಅಮೂಲ್ಯ ಜ್ಞಾನ ಭಂಡಾರಗಳೇ ಆಗಿದ್ದವು. ಜೇನ್ನೊಣಗಳು ಹೂಗಳನ್ನಾಯ್ದು ಆಯ್ದು ಮಕರಂದ ಹೀರಿ ಕಲೆಹಾಕಿದ ಜೇನುತುಪ್ಪದಂತೆ ಈ ಗ್ರಂಥದಲ್ಲಿ ವಿದ್ವಜ್ಜನರ, ಸಾಧಕರ ಜ್ಞಾನದ ಹೊಳಹುಗಳನ್ನು ಮಂತ್ರರೂಪದಲ್ಲಿ ನೀಡಲಾಗಿತ್ತು. ಈ ಜ್ಞಾನಭಂಡಾರವನ್ನು ತಲತಲಾಂತರದಿಂದ ಪಂಡಿತ ಬ್ರಾಹ್ಮಣರು ಒಬ್ಬರಿಂದೊಬ್ಬರಿಗೆ ದಾಟಿಸುತ್ತಾ ನಿರಂತರವಾಗಿ ಅದನ್ನು ಕಾಯ್ದುಕೊಂಡು ಬಂದಿದ್ದರು. ಈ ಗ್ರಂಥಗಳಲ್ಲಿ ಅಡಗಿದ ಜ್ಞಾನದ ಶ್ರೇಷ್ಠತೆಯನ್ನು ಅಲ್ಲಗಳೆಯುವ ಹಾಗೇ ಇರಲಿಲ್ಲ.

ಆದರೆ… ಆದರೆ, ಈ ಜ್ಞಾನವನ್ನು ಬರೀ ಕಂಠಪಾಠವಷ್ಟೇ ಅಲ್ಲ, ಹೃದ್ಗತ ಮಾಡಿಕೊಂಡು ಅರಿವನ್ನೇ ಬದುಕುವ ಬ್ರಾಹ್ಮಣರು, ಪಂಡಿತರು ಯಾರಾದರೂ ಇರುವರೇ!? ಸುಷುಪ್ತಿಯಲ್ಲಿ ಕಂಡುಕೊಂಡ ಆತ್ಮದ ಸ್ವರೂಪ ತಿಳಿಸಬಲ್ಲವರು ಯಾರಾದರೂ ಇರುವರೇ? ಆತ್ಮವೇ ಸಮಸ್ತವೂ ಅನ್ನುವ ಅರಿವನ್ನು ಎಚ್ಚರದಲ್ಲಿ, ನಡೆನುಡಿಯಲ್ಲಿ, ವ್ಯವಹಾರದಲ್ಲಿ ತೋರ್ಪಡಿಸುವ ನಿಜಜ್ಞಾನಿಗಳು ಯಾರಾದರೂ ಇರುವರೇ?


{‘ಸಿದ್ಧಾರ್ಥ’, ಖ್ಯಾತ ಕಾದಂಬರಿಕಾರ ಹರ್ಮನ್ ಹೆಸ್ ರವರ ಬಹುಚರ್ಚಿತ ಕೃತಿ. ಈ ಕಾದಂಬರಿಯನ್ನು ಚೇತನಾ ತೀರ್ಥಹಳ್ಳಿ ಕನ್ನಡಕ್ಕೆ ಅನುವಾದಿಸಿದ್ದು, ಈ ಸ್ವೈರಾನುವಾದದ ಕಂತುಗಳು ಪ್ರತಿ ಸೋಮವಾರ ಮತ್ತು ಗುರುವಾರ ‘ಅರಳಿಮರ’ದಲ್ಲಿ ಪ್ರಕಟವಾಗಲಿದೆ…}

1 Comment

Leave a Reply