‘ಸಮಣ’ನಾಗುವ ತೀರ್ಮಾನ : ಸಿದ್ಧಾರ್ಥ #3

“ವೇದೋಪನಿಷತ್ತುಗಳ ಜ್ಞಾನವನ್ನು ಬರೀ ಕಂಠಪಾಠವಷ್ಟೇ ಅಲ್ಲ, ಹೃದ್ಗತ ಮಾಡಿಕೊಂಡು ಅರಿವನ್ನೇ ಬದುಕುವ ಬ್ರಾಹ್ಮಣರು, ಪಂಡಿತರು ಯಾರಾದರೂ ಇರುವರೇ!? ಸುಷುಪ್ತಿಯಲ್ಲಿ ಕಂಡುಕೊಂಡ ಆತ್ಮದ ಸ್ವರೂಪ ತಿಳಿಸಬಲ್ಲವರು ಯಾರಾದರೂ ಇರುವರೇ? ಆತ್ಮವೇ ಸಮಸ್ತವೂ ಅನ್ನುವ ಅರಿವನ್ನು ಎಚ್ಚರದಲ್ಲಿ, ನಡೆನುಡಿಯಲ್ಲಿ, ವ್ಯವಹಾರದಲ್ಲಿ ತೋರ್ಪಡಿಸುವ ನಿಜಜ್ಞಾನಿಗಳು ಯಾರಾದರೂ ಇರುವರೇ?” ಅನ್ನುವ ಯೋಚನೆ ಸಿದ್ಧಾರ್ಥನನ್ನು ಕಾಡತೊಡಗಿತು. ಮುಂದೆ… । ಮೂಲ: ಹರ್ಮನ್ ಹೆಸ್ಸ್; ಕನ್ನಡಕ್ಕೆ: ಚೇತನಾ ತೀರ್ಥಹಳ್ಳಿ

ಹಿಂದಿನ ಸಂಚಿಕೆ ಇಲ್ಲಿ ನೋಡಿ: https://aralimara.com/2022/04/21/sid-2/

—————————————

ಸಿದ್ಧಾರ್ಥನಿಗೆ ಸಾಕಷ್ಟು ಜ್ಞಾನಿಗಳ, ಪಂಡಿತರ ಪರಿಚಯವಿತ್ತು, ಖುದ್ದು ಅವನ ತಂದೆಯೂ ಒಬ್ಬ ಸಾಧಕ ಬ್ರಾಹ್ಮಣರೇ ಆಗಿದ್ದರು. ಪಂಡಿತವಲಯದಲ್ಲಿ ಅವರಿಗೆ ಸಾಕಷ್ಟು ಗೌರವವೂ ಇತ್ತು. ಅವರ ಪರಿಶುದ್ಧ ಬದುಕು, ವಿವೇಕಯುತ ಮಾತುಗಳು, ಉಚ್ಚ ವಿಚಾರಗಳೆಲ್ಲವೂ ಜನಜನಿತವಾಗಿತ್ತು. ಆದರೆ, ಅವರಾದರೂ ಸಂತೋಷಮಯ ಬದುಕು ಬಾಳುತ್ತಿದ್ದರೇ? ಅಷ್ಟೆಲ್ಲ ಅರಿತವರು, ಜ್ಞಾನಿಗಳಾಗಿದ್ದರೂ ಅವರು ಶಾಂತಿಯಿಂದ, ಸಂತೃಪ್ತಿಯಿಂದ ಇದ್ದರೇ? ಅವರೂ ನಿರಂತರ ಹುಡುಕಾಟದಲ್ಲೇ ಇನ್ನೂ ವ್ಯಸ್ತರಾಗಿದ್ದಾರಲ್ಲವೆ? ಅವರು ಇನ್ನೂ ಅರಿವಿಗೆ ಬಾಯಾರಿಲ್ಲವೆ? ಅವರ ಜ್ಞಾನ ದಾಹ ತಣಿದಿದೆಯೆ? ಅವರು ಪ್ರತಿದಿನವೂ ಶಾಸ್ತ್ರಗ್ರಂಥಗಳಿಂದ, ಯಾಗಾದಿಗಳಿಂದ, ಪಂಡಿತ ಮಂಡಳಿಗಳ ಚರ್ಚೆಯಿಂದ ಒಂದಲ್ಲ ಒಂದು ಕಲಿಕೆಯಲ್ಲಿ ತೊಡಗಿದ್ದಾರಲ್ಲವೆ? ಅವರು ಯಾಕಾದರೂ ಇನ್ನೂ ಪ್ರತಿದಿನ ಆಚಮನ ಶುದ್ಧಿ ಮಾಡಿಕೊಳ್ಳುತ್ತಾರೆ? ಪ್ರತಿದಿನ ಪಾಪ ಕಳೆದುಕೊಳ್ಳುವ ಕ್ರಿಯಾಕರ್ಮ ನಡೆಸುತ್ತಾರೆ? ಅವರೊಳಗೇ ಇರುವ ಅನಾದಿ ಅನಂತ ಆತ್ಮ ಅವರಲ್ಲಿ ಸಂತಸದ ಝರಿ ಯಾಕೆ ಹರಿಸುತ್ತಿಲ್ಲ? ಈ ಸನಾತನ ಆತ್ಮವನ್ನು ತಮ್ಮೊಳಗೇ ಹುಡುಕಿಕೊಂಡು, ಅರಿತು, ಆನಂದ ಪಡೆಯುವ ಪ್ರಕ್ರಿಯೆ ಅವರಲ್ಲಿ ಯಾಕೆ ನಡೆಯುತ್ತಿಲ್ಲ! ಅದೊಂದರ ಹೊರತಾಗಿ ಅವರಲ್ಲಿ ಮಿಕ್ಕೆಲ್ಲದರ ಹುಡುಕಾಟವೂ ನಡೆಯುತ್ತಿತ್ತು. ಸುತ್ತಿಬಳಸಿ, ಹಾದಿತಪ್ಪಿ ಈ ಹುಡುಕಾಟದಲ್ಲಿ ಅವರು ಕಳೆದೇಹೋಗುತ್ತಿದ್ದರು.

ಈ ಎಲ್ಲ ಸಂಗತಿಗಳೂ ಸಿದ್ಧಾರ್ಥನನ್ನು ಗೊಂದಲಕ್ಕೆ ದೂಡುತ್ತಿದ್ದವು. ಈ ಸೋಜಿಗವನ್ನು ಅರಿಯುವುದೇ ಅವನ ಹುಡುಕಾಟವಾಯ್ತು. ಈ ಹುಡುಕಾಟ ಅವನನ್ನು ಯಾತನೆಗೆ ದೂಡಿತು.

ಆಗಾಗ ಅವನು ಛಾಂದೋಗ್ಯ ಉಪನಿಷತ್ತಿನ ಕೆಲವು ಸಾಲುಗಳನ್ನು ತನಗೆ ತಾನೆ ಹೇಳಿಕೊಳ್ಳುತ್ತಿದ್ದ. “ಸತ್ಯವೇ ಪರಬ್ರಹ್ಮ. ಯಾರು ಸತ್ಯವನ್ನು ಅರಿಯುತ್ತಾರೋ ಅವರು ಪ್ರತಿಕ್ಷಣವೂ ಮೋಕ್ಷದ್ವಾರವನ್ನು ಪ್ರವೇಶಿಸುವರು”. ಸಿದ್ಧಾರ್ಥನಿಗೆ ತಾನು ಈ ಮೋಕ್ಷದ್ವಾರವನ್ನು ಸಮೀಪಿಸಿದಂತೆ ಅನಿಸುತ್ತಿದ್ದರೂ ಯಾವತ್ತೂ ಅದನ್ನು ತಲುಪಲಾಗಿರಲಿಲ್ಲ. ಅವನು ಬಲ್ಲಂತೆ ಅವನ ಸುತ್ತಲಿದ್ದ ಯಾವ ಜ್ಞಾನಿಗಳೂ, ಸಾಧಕರೂ, ಪಂಡಿತರೂ ಮೋಕ್ಷದ್ವಾರವನ್ನು ಹೊಕ್ಕು ಬಂದವರಾಗಿರಲಿಲ್ಲ. ಅವರಲ್ಲಿ ಯಾರೊಬ್ಬರೂ ಮೋಕ್ಷದ ರುಚಿ ಕಂಡು ಆತ್ಯಂತಿಕ ಅರಿವಿನ ಬಾಯಾರಿಕೆ ತಣಿಸಿಕೊಂಡಿರಲಿಲ್ಲ. ಹಾಗಾದರೆ ಗ್ರಂಥಗಳ ಅಧ್ಯಯನದ ಲಾಭವಾದರೂ ಏನು ಅನ್ನೋದು ಸಿದ್ಧಾರ್ಥನೆದುರು ಪ್ರಶ್ನೆಯಾಗಿ ನಿಂತಿತ್ತು.

“ಗೋವಿಂದ”, ಸಿದ್ಧಾರ್ಥ ಗೋವಿಂದನನ್ನು ಮೆಲ್ಲನೆ ಕೂಗಿದ. “ಗೋವಿಂದ, ಅರಳಿಮರದ ಕೆಳಗೆ ಸ್ವಲ್ಪ ಹೊತ್ತು ಕೂತು ಧ್ಯಾನ ಮಾಡೋಣ ಬಾ”

ಗೆಳೆಯರಿಬ್ಬರೂ ಅರಳಿಮರದ ಬಳಿ ಬಂದರು. ಸಿದ್ಧಾರ್ಥ ಮರದ ಕೆಳಗೇ ಕುಳಿತರೆ, ಗೆಳೆಯ ಇಪ್ಪತ್ತು ಅಂಗುಲ ದೂರದಲ್ಲಿ ಕುಳಿತ. ಸಿದ್ಧಾರ್ಥ ಓಂಕಾರ ಉಚ್ಚರಿಸಿ ಮಂತ್ರ ಹೇಳಲು ಶುರು ಮಾಡಿದ.

ಪ್ರಣವೋ ಧನುಃ ಶರೋ ಹ್ಯಾತ್ಮಾ ಬ್ರಹ್ಮಾ ತಲ್ಲಕ್ಷ್ಯಮುಚ್ಯತೇ। ಅಪ್ರಮತ್ತೇನ ವೇದ್ಧವ್ಯಮ್ ಶರವತ್ತನ್ಮಯೋ ಭವೇತ್

(ಓಂಕಾರವೇ ಧನಸ್ಸು, ಆತ್ಮವೇ ಬಾಣ. ಬ್ರಹ್ಮವೇ ಗುರಿಯಾಗಿರಲು; ಏಕಾಗ್ರಚಿತ್ತರಾಗಿ ನಮ್ಮನ್ನು ನಾವು ಓಂಕಾರದ ಮೂಲಕ ಮೀಟಿಕೊಂಡರೆ ನೇರವಾಗಿ ಬ್ರಹ್ಮವನ್ನು ತಲುಪುವೆವು)

ಎಂದಿನಂತೆ ನಿರ್ದಿಷ್ಟ ಅವಧಿಯ ಧ್ಯಾನ ಮುಗಿಸಿದ ಗೋವಿಂದ ಎದ್ದು ನಿಂತ. ಅದಾಗಲೇ ಸಂಜೆಯಾಗುತ್ತಿತ್ತು. ಸಂಧ್ಯಾವಂದನೆಯ ಸಮಯ ಸಮೀಪಿಸುತ್ತಿತ್ತು. ಅವನು ಗೆಳೆಯನನ್ನು ಕೂಗಿ ಕರೆದ. ಸಿದ್ಧಾರ್ಥ ಓಗೊಳ್ಳಲಿಲ್ಲ. ಅವನು ಧ್ಯಾನದಲ್ಲಿ ಲೀನವಾಗಿ ಹೋಗಿದ್ದ. ಅವನ ಕಣ್ಣುಗಳು ದೂರದ ಶೂನ್ಯದಲ್ಲಿ ನೆಟ್ಟಿದ್ದವು. ಅವನ ನಾಲಗೆ ಹಲ್ಲುಗಳ ನಡುವೆ ಮೃದುವಾಗಿ ಸಿಲುಕಿಕೊಂಡಿತ್ತು. ಅವನು ಉಸಿರಾಡುತ್ತಿದ್ದಾನೋ ಇಲ್ಲವೋ ಅನ್ನುವಷ್ಟು ನಿಶ್ಚಲನಾಗಿದ್ದ. ಮೌನದಲ್ಲೇ ಓಂಕಾರ ಉಚ್ಚರಿಸುತ್ತಾ ಧ್ಯಾನಮಗ್ನನಾಗಿ ಕುಳಿತ ಸಿದ್ಧಾರ್ಥ ಓಂಕಾರದ ಬಿಲ್ಲಿಗೆ ತನ್ನ ಆತ್ಮದ ಬಾಣ ಹೂಡಿ ಬ್ರಹ್ಮದ ಬೆನ್ನಟ್ಟಿದ್ದ.

ಹಿಂದೊಮ್ಮೆ ಮೂವರು ಸಮಣರು ಸಿದ್ಧಾರ್ಥನ ಊರು ಬಳಸಿ ತೀರ್ಥಯಾತ್ರೆಗೆ ಹೊರಟಿದ್ದರು. ಬತ್ತಿದ ದೇಹ, ವಯಸ್ಸೇ ಗೊತ್ತಾಗದ ಚರ್ಮ, ತರಚುಗಾಯದ ರಕ್ತ ಒಸರಿ ಮಣ್ಣು ಮೆತ್ತಿದ್ದ ತೋಳುಗಳು, ಸೂರ್ಯನ ಶಾಖ ಕುಡಿಯುತ್ತಿರುವ –  ಹೆಚ್ಚೂಕಡಿಮೆ ಬೆತ್ತಲು ಮೈ, ಎತ್ತರದ ನಿಲುವು; ಮನುಷ್ಯ ಲೋಕಕ್ಕೆ ಅಪರಿಚಿತರು ಬಂದಂತೆ, ಏಕಾಕಿತನವನ್ನೆ ಹೊದ್ದು ನಡೆವಂತೆ ಅವರು ತೋರುತ್ತಿದ್ದರು. ಅವರು ನಡೆಯುವಾಗೆಲ್ಲ ಅವರನ್ನು ಮುತ್ತಿಕ್ಕಿದ ಬಿಸಿಗಾಳಿ ಅವರ ಗಾಢ ಅಭೀಪ್ಸೆ, ತೀವ್ರ ವೈರಾಗ್ಯ, ನಿಸ್ವಾರ್ಥತೆಯ ಘಮಲಿನಿಂದ ತುಂಬಿಕೊಳ್ಳುತ್ತಿತ್ತು.

ಆ ದಿನ ಸಂಜೆ ಸಿದ್ಧಾರ್ಥ ಗಂಟೆಗಟ್ಟಲೆ ಧ್ಯಾನ ಮಾಡಿ ಎದ್ದವನೇ ಗೋವಿಂದನಿಗೆ, “ನಾಳೆ ಬೆಳಗ್ಗೆ ಸಿದ್ಧಾರ್ಥ ಸಮಣರ ಬಳಿ  ಹೋಗ್ತಾನೆ. ಅವನೂ ಸಮಣ ಆಗ್ತಾನೆ” ಅಂದುಬಿಟ್ಟ.

ಗೆಳೆಯನ ಮಾತು ಕೇಳಿದವನೇ ಗೋವಿಂದ ನಿರ್ವಿಣ್ಣನಾಗಿಹೋದ. ನಿರ್ಧಾರ ಸೂಸುವಂತೆ ದೃಢವಾಗಿದ್ದ ಗೆಳೆಯನ ಮುಖವನ್ನೇ ನೋಡಿದ. ಬಿಲ್ಲಿನಿಂದ ಹೊರಟ ಬಾಣದಂತೆ ಅವನ ಮಾತು ಹೊರಟಿತ್ತು. ಗೋವಿಂದನಿಗೆ ಅರ್ಥವಾಗಿಹೋಯ್ತು. ಇದು… ಇದು ಆರಂಭವಷ್ಟೇ. ಇಲ್ಲಿಂದ ಸಿದ್ಧಾರ್ಥನ ಪ್ರಯಾಣ ಶುರುವಾಗಲಿದೆ. ಇಲ್ಲಿಂದ ಅವನ ಬದುಕು ತೆರೆದುಕೊಳ್ಳಲಿದೆ, ಜೊತೆಗೆ ನನ್ನದೂ ಕೂಡಾ! ಅರ್ಥವಾಗದ ಆತಂಕದಲ್ಲಿ ಗೋವಿಂದ ಒಣಗಿದ ಸಿಪ್ಪೆಯಂತೆ ಅದರುತ್ತಾ ಕೇಳಿದ, “ಸಿದ್ಧಾರ್ಥ, ನಿನ್ನಪ್ಪ ನಿನ್ನನ್ನ ಹೋಗಲು ಬಿಡ್ತಾರಾ!?”

ಸಿದ್ಧಾರ್ಥ ಈಗತಾನೆ ಪೂರ್ತಿ ಎಚ್ಚರಗೊಂಡವನಂತೆ ಗೋವಿಂದನನ್ನೆ ದಿಟ್ಟಿಸಿದ. ಗೆಳೆಯನ ಮುಖದಲ್ಲಿ ದುಗುಡ ಮತ್ತು ಭಯ ಎದ್ದು ಕಾಣುತ್ತಿದ್ದವು.

“ಗೋವಿಂದ, ಸುಮ್ಮನೆ ಮಾತು ಬೇಡ. ನಾಳೆ ಬೆಳಗಿಂದಲೇ ನನ್ನ ಸಮಣ ಜೀವನ ಶುರುವಾಗುತ್ತೆ. ಅದರ ಬಗ್ಗೆ ಇನ್ನೇನೂ ಕೇಳಬೇಡ”.

ಸಿದ್ಧಾರ್ಥ ಆಶ್ರಮದ ಬಾಗಿಲು ತಳ್ಳಿ ಒಳಗೆ ಬಂದ. ಅವನ ಅಪ್ಪ ನಾರಿನ ಚಾಪೆ ಮೇಲೆ ಕುಳಿತು ಏನೋ ಯೋಚಿಸುತ್ತಿದ್ದ. ಅವನು ಅಪ್ಪನ ಮುಂದೆ ಸ್ವಲ್ಪ ದೂರದಲ್ಲಿ ಅವನು ತಲೆ ಎತ್ತುವುದನ್ನೆ ಕಾಯುತ್ತ ನಿಂತ. ಯಾರೋ ಬಂದಿರುವ ಆಭಾಸವಾಗಿ ಅಪ್ಪ ತಲೆ ತಗ್ಗಿಸಿಕೊಂಡೇ ಕೇಳಿದ, “ಸಿದ್ಧಾರ್ಥ? ಅದೇನು ಹೇಳಲು ಬಂದಿದೀಯೋ ಹೇಳು!”

“ಅಪ್ಪಾ ನಿಮ್ಮ ಅನುಮತಿಗಾಗಿ ಬಂದಿದೀನಿ. ನನಗೆ ನಿಮ್ಮ ಮನೆ ಬಿಟ್ಟು ಸಮಣನಾಗಿ ಸಮಣರ ಜೊತೆ ಹೋಗಬೇಕು ಅನಿಸಿಬಿಟ್ಟಿದೆ. ನಾನು ನಾಳೆಯೇ ಹೋಗಬೇಕು. ನೀವು ದಯವಿಟ್ಟು ಬೇಡ ಅನ್ನಕೂಡದು”

(ಅಪ್ಪನ ಉತ್ತರ ಏನಿತ್ತು? ಗುರುವಾರದ ಸಂಚಿಕೆಯಲ್ಲಿ…)


{‘ಸಿದ್ಧಾರ್ಥ’, ಖ್ಯಾತ ಕಾದಂಬರಿಕಾರ ಹರ್ಮನ್ ಹೆಸ್ ರವರ ಬಹುಚರ್ಚಿತ ಕೃತಿ. ಈ ಕಾದಂಬರಿಯನ್ನು ಚೇತನಾ ತೀರ್ಥಹಳ್ಳಿ ಕನ್ನಡಕ್ಕೆ ಅನುವಾದಿಸಿದ್ದು, ಈ ಸ್ವೈರಾನುವಾದದ ಕಂತುಗಳು ಪ್ರತಿ ಸೋಮವಾರ ಮತ್ತು ಗುರುವಾರ ‘ಅರಳಿಮರ’ದಲ್ಲಿ ಪ್ರಕಟವಾಗಲಿದೆ…}

1 Comment

Leave a Reply