“ತಾಯಿಯ ಬೇಷರತ್ ಪ್ರೀತಿಗೆ ಒಂದು ಋಣಾತ್ಮಕ ರೂಪವೂ ಇದೆ. ಇಂಥದೊಂದು ಪ್ರೀತಿಯನ್ನು ಗಳಿಸಲು ಪ್ರಯತ್ನ ಮಾಡಬೇಕಿಲ್ಲ, ಅರ್ಹತೆ ಸಾಧಿಸಬೇಕಿಲ್ಲ, ಮತ್ತು ಇಂಥ ಪ್ರೀತಿಯನ್ನು ಹುಟ್ಟು ಹಾಕುವುದು, ಹತೋಟಿಗೆ ತೆಗೆದುಕೊಳ್ಳುವುದು ಸಾಧ್ಯವಿಲ್ಲ. ಇಂಥದೊಂದು ಪ್ರೀತಿ ಮಗುವಿಗೆ ಲಭ್ಯವಾಗಿದೆಯೆಂದರೆ ಅದು ಮಗುವಿನ ಅದೃಷ್ಟವಷ್ಟೇ ; ಇಂಥ ಪ್ರೀತಿಯ ಅನುಪಸ್ಥಿತಿ ಎಂದರೆ ಮಗು ಬದುಕಿನ ಎಲ್ಲ ಚೆಲುವನ್ನೂ ಕಳೆದುಕೊಂಡಂತೆ, ಮತ್ತು ಯಾರು ಏನು ಮಾಡಿದರೂ ಇದನ್ನು ಪುನರ್ ಸೃಷ್ಟಿ ಮಾಡುವುದು ಸಾಧ್ಯವಿಲ್ಲ” ಅನ್ನುತ್ತಾನೆ ಎರಿಕ್ ಫ್ರಾಮ್ । ಕನ್ನಡಕ್ಕೆ: ಚಿದಂಬರ ನರೇಂದ್ರ
ಹಿಂದಿನ ಭಾಗ ಇಲ್ಲಿ ಓದಿ: https://aralimara.com/2022/04/30/love-31/
ಆಗ ತಾನೇ ಹುಟ್ಟಿರುವ ಮಗು, ಹುಟ್ಟುವ ಸಮಯದಲ್ಲಿ ಸಾವಿನ ಭಯದಿಂದ ತತ್ತರಿಸಿ ಹೋಗಬೇಕಿತ್ತು ಒಂದು ವೇಳೆ ಉದಾರ ನಿಯತಿ , ತಾಯಿಯಿಂದ, ತಾಯಿಯ ಕರುಳು ಬಳ್ಳಿಯಿಂದ ಬೇರ್ಪಡುವ ಆತಂಕದ ಅರಿವಿನಿಂದ ಮಗುವನ್ನು ತಪ್ಪಿಸದೇ ಹೋಗಿದ್ದರೆ. ಹುಟ್ಟಿದ ಮೇಲೆ ಕೂಡ ಮಗು, ಹುಟ್ಟುವ ಮುಂಚೆ ಇದ್ದುದಕ್ಕಿಂತ ವಿಭಿನ್ನ ಏನಲ್ಲ ; ಅದಕ್ಕೆ ವಸ್ತುಗಳನ್ನ ಗುರುತಿಸುವುದು ಸಾಧ್ಯವಿಲ್ಲ, ಅದಕ್ಕೆ ಇನ್ನೂ ತನ್ನ ಬಗ್ಗೆ, ತನ್ನ ಸುತ್ತಲಿನ ಜಗತ್ತಿನ ಬಗ್ಗೆ ಅಂಥ ವಿಶೇಷ ಅರಿವು ಏನಿಲ್ಲ. ಮಗು ಕೇವಲ ತಾನು ಪಡೆಯುತ್ತಿರುವ ಆಹಾರ ಮತ್ತು ಬೆಚ್ಚಗಿನ ಭಾವಕ್ಕೆ ಧನಾತ್ಮಕವಾಗಿ ಸ್ಪಂದಿಸುತ್ತದೆ, ಅದು ಇನ್ನೂ ಈ ಆಹಾರ ಮತ್ತು ಬೆಚ್ಚಗಿನ ಭಾವವನ್ನೂ ಮತ್ತು ಅವುಗಳ ಮೂಲವಾದ ತಾಯಿಯನ್ನೂ ಬೇರೆ ಮಾಡಿ ನೋಡುವುದಿಲ್ಲ. ತಾಯಿಯೆಂದರೆ ಬೆಚ್ಚಗಿನ ಭಾವ, ತಾಯಿಯೆಂದರೆ ಆಹಾರ, ತಾಯಿಯೇ ತೃಪ್ತಿ ಮತ್ತು ರಕ್ಷಣೆಯ ಉತ್ಕರ್ಷದ ಸ್ಥಿತಿ ಎನ್ನುವುದೆಲ್ಲ ಫ್ರಾಯ್ಡ್ ನ ಮಾತಿನಲ್ಲಿ ಹೇಳುವುದಾದರೆ ಸ್ವಮೋಹ (narcissism). ಆದರೆ ಹೊರಗಿನ ವಾಸ್ತವ ಬೇರೆ, ಇಲ್ಲಿ ಮನುಷ್ಯರು ಮತ್ತು ವಸ್ತುಗಳು ಅರ್ಥ ಪಡೆದುಕೊಳ್ಳುವುದು, ಅವುಗಳು ದೇಹದ ಒಳಗಿನ ಸ್ಥಿತಿಯನ್ನು ತೃಪ್ತಿಪಡಿಸುವ ಅಥವಾ ಕೆರಳಿಸುವ ನೆಲೆಯಲ್ಲಿ ಮಾತ್ರ. ಒಳಗಿರುವುದು ಮಾತ್ರ ನಿಜ; ಹೊರಗಿರುವುದು ನಿಜವಾಗುವುದು ಕೇವಲ ನನ್ನ ಅವಶ್ಯಕತೆಗಳ ನೆಲೆಯಲ್ಲಿಯೇ ಹೊರತು ಅದರ ಕ್ವಾಲಿಟಿ ಅಥವಾ ಅವಶ್ಯಕತೆಗಾಗಿ ಅಲ್ಲ.
ಮಗು ಬೆಳೆದು ದೆೊಡ್ಡದಾಗುತ್ತಿದ್ದಂತೆಯೇ ವಸ್ತುಗಳನ್ನ, ಸಂಗತಿಗಳನ್ನ ಅವು ಇದ್ದ ಹಾಗೆ ಕಾಣುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳುತ್ತದೆ ; ಆಗ ಅದು ಆಹಾರ ಸಿಕ್ಕ ತೃಪ್ತಿಯನ್ನು ಮೊಲೆ ತೊಟ್ಟಿನಿಂದ, ಮೊಲೆಗಳನ್ನ ತಾಯಿಯಿಂದ ಬೇರ್ಪಡಿಸಿ ನೋಡಬಲ್ಲದು. ಕೊನೆಗೆ ಮಗು ತನ್ನ ಹಸಿವು-ಬಾಯಾರಿಕೆಯನ್ನ, ತಾಯಿಯ ಹಾಲಿನಿಂದ ಸಿಗುವ ತೃಪ್ತಿಯನ್ನ, ತಾಯಿಯ ಮೊಲೆಗಳನ್ನ, ತಾಯಿಯನ್ನ, ಬೇರೆ ಬೇರೆ ಸಂಗತಿಗಳಾಗಿ ಅನುಭವಿಸಬಲ್ಲದು. ಮುಂದೆ ಮಗು ಎಷ್ಟೋ ಬೇರೆ ಸಂಗತಿಗಳನ್ನ ಅವು ಸ್ವಂತ ಅಸ್ತಿತ್ವ ಹೊಂದಿರುವ ಬೇರೆ ಬೇರೆ ಸಂಗತಿಗಳು ಎಂದು ಗುರುತಿಸುವುದನ್ನ ಕಲಿಯುತ್ತದೆ. ಈ ಹಂತದಲ್ಲಿ ಮಗು ತಾನು ಅನುಭವಿಸಿದ ಎಲ್ಲ ಸಂಗತಿಗಳನ್ನು ಹೆಸರಿಟ್ಟು ಗುರುತಿಸಲು ಶುರು ಮಾಡುತ್ತದೆ. ಇದೇ ಸಮಯದಲ್ಲಿ ಮಗು ಈ ಸಂಗತಿಗಳನ್ನ ನಿಭಾಯಿಸುವುದನ್ನ ಕಲಿಯುತ್ತದೆ; ಬೆಂಕಿ ಬಹಳ ಬಿಸಿ ಮತ್ತು ಅದನ್ನು ಮುಟ್ಟಿದರೆ ನೋವಾಗುತ್ತದೆ, ತಾಯಿಯ ಅಪ್ಪುಗೆ ಬೆಚ್ಚಗೆ ಮತ್ತು ಸುಖದಾಯಕ, ಕಟ್ಟಿಗೆ ಗಟ್ಟಿ ಮತ್ತು ಭಾರ , ಕಾಗದ ಹಗುರ ಮತ್ತು ಅದನ್ನ ಹರಿಯಬಹುದು ಎನ್ನುವುದನ್ನೆಲ್ಲ ಮಗು ಕಲಿಯುತ್ತದೆ. ನಂತರ ಮಗು ಜನರಿಂದ ಹೇಗೆ ಪ್ರತಿಕ್ರಿಯೆ ಪಡೆಯಬಹುದು ಎನ್ನುವುದನ್ನ ಕಲಿಯುತ್ತದೆ; ತಾನು ಊಟ ಮಾಡಿದಾಗ ತಾಯಿ ತನ್ನನ್ನು ನೋಡಿ ನಗುತ್ತ ಪ್ರೀತಿ ಮಾಡುತ್ತಾಳೆ, ತಾನು ಅತ್ತರೆ ತಾಯಿ ತನ್ನನ್ನು ಮಡಿಲಲ್ಲಿ ಎತ್ತಿಕೊಳ್ಳುತ್ತಾಳೆ, ಇತ್ಯಾದಿ…. ಈ ಎಲ್ಲ ಅನುಭವಗಳು ಒಂದಾಗಿ ಹರಳುಗಟ್ಟುವುದು ‘ ನನ್ನನ್ನು ಪ್ರೀತಿಸುತ್ತಾರೆ ‘ ಎನ್ನುವ ಮಗುವಿನ ತಿಳುವಳಿಕೆಯಲ್ಲಿ. ಜನ ನನ್ನನ್ನು ಪ್ರೀತಿಸುತ್ತಾರೆ ಏಕೆಂದರೆ ನಾನು ತಾಯಿಯ ಮಗುವಾಗಿರುವುದರಿಂದ. ಜನ ನನ್ನನ್ನು ಪ್ರೀತಿಸುತ್ತಾರೆ ಏಕೆಂದರೆ ನಾನು ಅಸಹಾಯಕ, ನನ್ನ ಪ್ರೀತಿಸುತ್ತಾರೆ ಏಕೆಂದರೆ ನಾನು ಸುಂದರ ಮತ್ತು ಮೆಚ್ಚುಗೆಗೆ ಅರ್ಹ. ತಾಯಿಗೆ ನಾನು ಬೇಕಾಗಿರುವುದರಿಂದ ನಾನು ಪ್ರೀತಿಸಲ್ಪಡುತ್ತೇನೆ. ಈ ಎಲ್ಲವನ್ನೂ ಜನರಲೈಸ್ ಮಾಡಿ ಹೇಳುವುದಾದರೆ ‘ I am loved for what I am ‘ ಅಥವಾ ಇನ್ನೂ ಸ್ಪಷ್ಟವಾಗಿ ಹೇಳಬೇಕಾದರೆ ‘ I am loved because I am ‘. ತಾಯಿಯಿಂದ ಪ್ರೀತಿಗೊಳಗಾಗುವ ಮಗುವಿನ ಅನುಭವ ನಿಷ್ಕ್ರಿಯ ಬಗೆಯದ್ದು, ಏಕೆಂದರೆ ಇಲ್ಲಿ ಮಗು ಮಾಡಬೇಕಾದದ್ದು ಏನೂ ಇಲ್ಲ, ತಾಯಿಯ ಪ್ರೀತಿ ಬೇಷರತ್ತಾದದ್ದು. ತಾಯಿಯ ಮಗುವಾಗಿದ್ದರಷ್ಟೇ ಸಾಕು. ತಾಯಿಯ ಪ್ರೀತಿ ಉತ್ಕಟ ಆನಂದದ ಸ್ಥಿತಿ, ಮಹಾ ಶಾಂತಿಯ ಸ್ಥಿತಿ, ಇದನ್ನ ಸ್ವಾಧೀನ ಮಾಡಿಕೊಳ್ಳಬೇಕಿಲ್ಲ, ಪಡೆಯಲು ಅರ್ಹತೆ ಹೊಂದಬೇಕಿಲ್ಲ. ಆದರೆ ತಾಯಿಯ ಬೇಷರತ್ ಪ್ರೀತಿಗೆ ಒಂದು ಋಣಾತ್ಮಕ ರೂಪವೂ ಇದೆ. ಇಂಥದೊಂದು ಪ್ರೀತಿಯನ್ನು ಗಳಿಸಲು ಪ್ರಯತ್ನ ಮಾಡಬೇಕಿಲ್ಲ, ಅರ್ಹತೆ ಸಾಧಿಸಬೇಕಿಲ್ಲ, ಮತ್ತು ಇಂಥ ಪ್ರೀತಿಯನ್ನು ಹುಟ್ಟು ಹಾಕುವುದು, ಹತೋಟಿಗೆ ತೆಗೆದುಕೊಳ್ಳುವುದು ಸಾಧ್ಯವಿಲ್ಲ. ಇಂಥದೊಂದು ಪ್ರೀತಿ ಮಗುವಿಗೆ ಲಭ್ಯವಾಗಿದೆಯೆಂದರೆ ಅದು ಮಗುವಿನ ಅದೃಷ್ಟವಷ್ಟೇ ; ಇಂಥ ಪ್ರೀತಿಯ ಅನುಪಸ್ಥಿತಿ ಎಂದರೆ ಮಗು ಬದುಕಿನ ಎಲ್ಲ ಚೆಲುವನ್ನೂ ಕಳೆದುಕೊಂಡಂತೆ, ಮತ್ತು ಯಾರು ಏನು ಮಾಡಿದರೂ ಇದನ್ನು ಪುನರ್ ಸೃಷ್ಟಿ ಮಾಡುವುದು ಸಾಧ್ಯವಿಲ್ಲ.
ಎಂಟೂವರೆ ವರ್ಷದಿಂದ ಹತ್ತು ವರ್ಷಕ್ಕಿಂತ ಮುಂಚಿನ ವಯಸ್ಸಿನ ಬಹುತೇಕ ಮಕ್ಕಳಿಗೆ, ಪ್ರೀತಿಸಲ್ಪಡುವುದೆಂದರೆ- ಅವರು ಇರುವ ಕಾರಣಕ್ಕಾಗಿ ಪ್ರೀತಿಸಲ್ಪಡುವುದು. ಈ ವಯಸ್ಸಿನವರೆಗೆ ಮಕ್ಕಳು ಇನ್ನೂ ಪ್ರೀತಿಸುವುದಕ್ಕೆ ಶುರು ಮಾಡಿರುವುದಿಲ್ಲ; ತನ್ನನ್ನು ಪ್ರೀತಿಸುವವರಿಗೆ ಮಗು ಕೃತಜ್ಞತೆಯಿಂದ, ಖುಶಿಯಿಂದ ಪ್ರತಿಕ್ರಯಿಸುತ್ತದೆ. ಮಗುವಿನ ಬೆಳವಣಿಗೆಯ ಈ ಹಂತದಲ್ಲಿ ಹೊಸದೊಂದು ಅಂಶವು ಮಗುವಿನ ಬದುಕನ್ನ ಪ್ರವೇಶಿಸುತ್ತದೆ : ಈ ಹೊಸ ಭಾವನೆ ತನ್ನ ಕ್ರಿಯೆಗಳ ಮೂಲಕ ಪ್ರೀತಿಯನ್ನ ಹುಟ್ಟಿಸುವುದರ ಕುರಿತಾದದ್ದು. ಮೊದಲ ಬಾರಿಗೆ ಮಗು ತನ್ನ ತಾಯಿಗೆ (ಅಥವಾ ತಂದೆಗೆ) ತನ್ನ ಕ್ರಿಯೆಯ ಮೂಲಕ ಏನನ್ನೋ ಕೊಡುವ ಪ್ರಯತ್ನ ಮಾಡುತ್ತದೆ – ಒಂದು ಹಾಡಿನ ಮೂಲಕ, ಒಂದು ಪೇಂಟಿಂಗ್ ಮೂಲಕ ಅಥವಾ ಈ ಬಗೆಯ ಇನ್ನೂ ಹಲವಾರು ಕ್ರಿಯೆಗಳ ಮೂಲಕ ಮಗು ತನ್ನ ತಾಯಿಯ (ಅಥವಾ ತಂದೆಯ) ಗಮನ ಸೆಳೆಯುವ ಪ್ರಯತ್ನ ಮಾಡುತ್ತದೆ. ಮೊದಲ ಬಾರಿಗೆ ಮಗುವಿನ ಬದುಕಿನಲ್ಲಿ ಪ್ರೀತಿಯ ಕಲ್ಪನೆ, ತಾನು ಪ್ರೀತಿಸಲ್ಪಡುವುದರ ಬದಲಿಗೆ ತಾನು ಇನ್ನೊಬ್ಬರನ್ನು ಪ್ರೀತಿಸುವುದಾಗಿದೆ, ಪ್ರೀತಿಯನ್ನ ಸೃಷ್ಟಿಸುವುದಾಗಿದೆ. ಈ ಮೊದಲಿನ ಶುರುವಾತಿನ ಹಂತದಿಂದ ಪ್ರೀತಿಯ ಪ್ರಬುದ್ಧ ಹಂತವನ್ನು ತಲುಪಲು ಹಲವಾರು ವರ್ಷಗಳು ಬೇಕಾಗುತ್ತವೆ. ಕೊನೆಗೊಮ್ಮೆ ಹದಿಹರೆಯದ ಹಂತವನ್ನು ತಲುಪುವ ಮಗು ಈಗ ತನ್ನ ಸ್ವ ಮೋಹವನ್ನು ಮೀರಿರುತ್ತದೆ ; ಮಗುವಿಗೆ ಇನ್ನೊಬ್ಬರು ಈಗ ಮೂಲಭೂತವಾಗಿ, ತನ್ನ ಆಸೆಗಳನ್ನು ಪೂರ್ಣಗೊಳಿಸುವ ಸಾಧನಗಳಾಗಿಯಷ್ಟೇ ಆಗಿ ಉಳಿದಿರುವುದಿಲ್ಲ , ಇನ್ನೊಬ್ಬರ ಬಯಕೆಗಳೂ ತನ್ನ ಬಯಕೆಗಳಷ್ಟೇ ಮುಖ್ಯವಾಗಿವೆ. ಪಡೆಯುವುದಕ್ಕಿಂತ, ಕೊಡುವುದೆಂದರೆ ಈಗ ಹೆಚ್ಚು ತೃಪ್ತಿದಾಯಕ, ಹೆಚ್ಚು ಸಂತೋಷದಾಯಕ ಅನಿಸುತ್ತಿದೆ. ಪ್ರೀತಿಸುವ ಮೂಲಕ ಹದಿಹರೆಯದ ಮಗು ಸ್ವಮೋಹ (narcissism) ಮತ್ತು ಸ್ವಕೇಂದ್ರೀಯತೆ (self-centeredness ) ತನ್ನ ಸುತ್ತ ಕಟ್ಟಿದ್ದ ಪ್ರತ್ಯೇಕತೆ ಮತ್ತು ಒಂಟಿತನದ ಬಂಧನದಿಂದ ಹೊರಬಂದಿದೆ, ಈಗ ಹೊಸದೊಂದು ಒಂದಾಗುವಿಕೆಯನ್ನ ಅನುಭವಿಸುತ್ತಿದೆ, ಇದು ಹಂಚಿಕೊಳ್ಳುವ, ಬೆರೆತು ಒಂದಾಗುವ ರೀತಿಯದ್ದು. ಎಲ್ಲಕ್ಕಿಂತ ಹೆಚ್ಚಾಗಿ ಹದಿಹರೆಯದ ಮಗು, ಪ್ರೀತಿಯಿಂದ ಪ್ರೀತಿಯನ್ನು ಹುಟ್ಟಿಸುವ ಸಾಮರ್ಥ್ಯವನ್ನು ಅನುಭವಿಸುತ್ತಿದೆ. ಪ್ರೀತಿಗಾಗಿ ಇನ್ನೊಬ್ಬರನ್ನು ಅವಲಂಬಿಸುವ ಮತ್ತು ಆ ಕಾರಣಕ್ಕಾಗಿ ಅಲ್ಪ, ಅಸಹಾಯಕ, ದುರ್ಬಲ, ಅಥವಾ “ಒಳ್ಳೆಯವ” ಎಂದೆಲ್ಲ ಗುರುತಿಸಿಕೊಳ್ಳುವ ಅಪಾಯದಿಂದ ಮುಕ್ತನಾಗಿದೆ.
ಮಗುವಿನ ಪ್ರೀತಿ, ಫಾಲೋ ಮಾಡುವುದು, “ನಾನು ಪ್ರೀತಿಸುವುದು ನಾನು ಪ್ರೀತಿಸಲ್ಪಡುವ ಕಾರಣಕ್ಕಾಗಿ” ಎನ್ನುವ ಸಿದ್ಧಾಂತವನ್ನ. ಆದರೆ ಪ್ರಬುದ್ಧ ಪ್ರೀತಿಯ ಸಿದ್ಧಾಂತ, “ ನಾನು ಪ್ರೀತಿಸುತ್ತಿರುವ ಕಾರಣಕ್ಕಾಗಿ ನಾನು ಪ್ರೀತಿಸಲ್ಪಡುತ್ತಿದ್ದೇನೆ “. ಅಪ್ರಬುದ್ಧ ಪ್ರೀತಿಯ ಪ್ರಕಾರ, “ ನನಗೆ ನೀನು ಬೇಕಾಗಿರುವುದರಿಂದ ನಾನು ನಿನ್ನ ಪ್ರೀತಿಸುತ್ತಿದ್ದೇನೆ ” ಆದರೆ ಪ್ರಬುದ್ಧ ಪ್ರೀತಿ ಯಾವತ್ತೂ ಹೇಳುವುದು, “ನಾನು ನಿನ್ನ ಪ್ರೀತಿಸುತ್ತಿರುವುದರಿಂದ, ನನಗೆ ನಿನ್ನ ಅಗತ್ಯ ಇದೆ.”