ವ್ಯಕ್ತಿ ಪ್ರಬುದ್ಧನಾಗುತ್ತಿದ್ದಂತೆಯೇ, ಅವನು ಸ್ವತಃ ತಾನು ತನ್ನ ತಂದೆಯಾಗಿರುವ, ತನ್ನ ತಾಯಿಯಾಗಿರುವ ಹಂತವನ್ನು ತಲುಪುತ್ತಾನೆ. ಈಗ ಅವನು ತಂದೆ ಮತ್ತು ತಾಯಿಯ ಎರಡೂ ಪ್ರಜ್ಞೆಗಳನ್ನು ಒಳಗೊಂಡಿದ್ದಾನೆ. ಅದು ಹೇಗೆಂದರೆ… ಮುಂದೆ ಓದಿ! ~ ಎರಿಕ್ ಫ್ರಾಮ್ । ಕನ್ನಡಕ್ಕೆ ಚಿದಂಬರ ನರೇಂದ್ರ
ಹಿಂದಿನ ಭಾಗ ಇಲ್ಲಿ ಓದಿ: https://aralimara.com/2022/05/07/love-33/
ತಾಯಿಯ ಬೇಷರತ್ ಪ್ರೀತಿಯಂತೆ, ತಂದೆಯ ಷರತ್ತುಬದ್ಧ ಪ್ರೀತಿಯಲ್ಲೂ ನಾವು ಧನಾತ್ಮಕ ಮತ್ತು ಋಣಾತ್ಮಕ ಅಂಶಗಳನ್ನು ಗುರುತಿಸಬಹುದು. ಬಹುಮುಖ್ಯ ಋಣಾತ್ಮಕ ಅಂಶವೆಂದರೆ, ತಂದೆಯ ಪ್ರೀತಿಯನ್ನು ಗಳಿಸಲು ಅರ್ಹತೆಯ ಮಾನದಂಡಗಳಿರುವುದು ಮತ್ತು ಈ ಮಾನದಂಡಗಳನ್ನು ಪಾಲಿಸುವಲ್ಲಿ ವಿಫಲರಾದ ಯಾವುದೇ ಕ್ಷಣದಲ್ಲಿ ಈ ಪ್ರೀತಿ ನಮ್ಮಿಂದ ದೂರವಾಗುವುದು. ತಂದೆಯ ಪ್ರೀತಿಯ ಸ್ವಭಾವದಲ್ಲಿಯೇ ವಿಧೆಯತೆ ಒಂದು ಮುಖ್ಯವಾದ ಮೌಲ್ಯವಾಗಿ ಮತ್ತು ಅವಿಧೇಯತೆ ಒಂದು ಪಾಪವಾಗಿ ಸೇರ್ಪಡೆಯಾಗಿದೆ ಮತ್ತು ಈ ಪಾಪಕ್ಕೆ ಶಿಕ್ಷೆಯೆಂದರೆ ತಂದೆ ತನ್ನ ಪ್ರೀತಿಯನ್ನ ಹಿಂತೆಗೆದುಕೊಳ್ಳುವುದು. ತಂದೆಯ ಪ್ರೀತಿಯ ಧನಾತ್ಮಕ ಅಂಶವೂ ಬಹು ಮುಖ್ಯವಾದದ್ದು. ತಂದೆಯ ಪ್ರೀತಿ ಷರತ್ತುಬದ್ಧವಾಗಿರುವುದರಿಂದ, ಅದನ್ನು ಪಡೆಯಲು ನಾನು ಪ್ರಯತ್ನ ಮಾಡಬಹುದಾಗಿದೆ, ತಂದೆಯ ಪ್ರೀತಿ, ತಾಯಿಯ ಪ್ರೀತಿಯ ಹಾಗೆ ನನ್ನ ಹತೋಟಿಯ ಹೊರಗೆ ಇಲ್ಲ.
ಮಗುವಿನ ಅವಶ್ಯಕತೆಗಳಿಗೆ ಹೊಂದಿಕೊಂಡಂತೆ ತಂದೆ ತಾಯಿ ಆ ಮಗುವಿನ ಬಗ್ಗೆ ದೃಷ್ಟಿಕೋನವನ್ನು ಬೆಳೆಸಿಕೊಂಡಿರುತ್ತಾರೆ. ಆಗ ತಾನೇ ಹುಟ್ಟಿದ ಮಗುವಿಗೆ, ದೈಹಿಕವಾಗಿ ಮತ್ತು ಮಾನಸಿಕವಾಗಿ ತಾಯಿಯ ಬೇಷರತ್ ಪ್ರೀತಿ ಅತ್ಯವಶ್ಯಕ. ಬಹುತೇಕ ಹುಟ್ಟಿದ ಆರು ವರ್ಷಗಳ ನಂತರ ಮಗು ತಂದೆಯ ಪ್ರೀತಿಯನ್ನು, ಅವನ ಅಧಿಕಾರವನ್ನೂ, ಮಾರ್ಗದರ್ಶನವನ್ನೂ ಬಯಸುತ್ತದೆ. ತಾಯಿಯ ಕೆಲಸ ಮಗುವಿನ ಬದುಕು ಸುರಕ್ಷಿತವಾಗಿರುವಂತೆ ನೋಡಿಕೊಳ್ಳುವುದು ಮತ್ತು ತಂದೆಯ ಕೆಲಸ ಮಗುವಿಗೆ ಕಲಿಸುವುದು ಮತ್ತು ಮಗು ಹುಟ್ಟಿರುವ ನಿರ್ಧಿಷ್ಟ ಸಮಾಜದ ಸಮಸ್ಯೆಗಳ ಜೊತೆ ಹೊಂದಿಕೊಂಡು ಹೋಗಲು ಮಾರ್ಗದರ್ಶನ ಮಾಡುವುದು. ಒಂದು ಐಡಿಯಲ್ ಸಂದರ್ಭದಲ್ಲಿ, ತಾಯಿಯ ಪ್ರೀತಿ ಮಗು ಬೆಳೆಯುವುದಕ್ಕೆ ತಡೆ ಹಾಕುವುದಿಲ್ಲ, ಮಗುವಿನ ಅಸಹಾಯಕತೆಯನ್ನು ಬಳಸಿಕೊಳ್ಳಲು ಬಯಸುವುದಿಲ್ಲ. ತಾಯಿಗೆ ಬದುಕಿನ ಕುರಿತಾಗಿ ನಂಬಿಕೆ ಇರಬೇಕು, ಆದ್ದರಿಂದ ಆಕೆ ಅತೀಆತಂಕದಿಂದ ಹೊರತಾಗಿರಬೇಕು , ಮತ್ತು ಮಗುವಿಗೆ ತನ್ನ ಯಾವುದೇ ಆತಂಕ ಅಂಟಿಕೊಳ್ಳದಂತೆ ನೋಡಿಕೊಳ್ಳಬೇಕು. ಅವಳ ಬದುಕಿನ ಭಾಗಶಃ ಬಯಕೆ ತನ್ನ ಮಗು ಸ್ವತಂತ್ರವಾಗಿ ಬದುಕುವುದನ್ನ ಕಲಿಯುತ್ತ ಕೊನೆಗೊಮ್ಮೆ ತನ್ನ ಅವಲಂಬನೆಯಿಂದ ಪೂರ್ತಿಯಾಗಿ ಮುಕ್ತವಾಗಬೇಕು ಎನ್ನುವುದಾಗಿರಬೇಕು. ತಂದೆಯ ಪ್ರೀತಿ ಮಗುವಿಗಾಗಿ ತತ್ವ ಸಿದ್ಧಾಂತಗಳನ್ನು ಮತ್ತು ನಿರೀಕ್ಷೆಗಳನ್ನು ತುಂಬಿಕೊಂಡಿರುವಂಥದ್ದಾಗಿರಬೇಕು; ಬೆದರಿಕೆ ಮತ್ತು ದಬ್ಬಾಳಿಕೆಯಿಂದ ಕೂಡಿರದೇ, ಸಮಾಧಾನ ಮತ್ತು ಸಹನೆಯಿಂದ ಕೂಡಿರುವಂಥದ್ದಾಗಿರಬೇಕು. ಬೆಳೆಯುತ್ತಿರುವ ಮಗುವಿಗೆ ತಂದೆಯ ಪ್ರೀತಿ, ತಾನು ಸಾಮರ್ಥ್ಯಶಾಲಿ ಎನ್ನುವ ಭಾವ ಮೂಡಿಸುವಂಥದ್ದಾಗಿರಬೇಕು, ಮತ್ತು ಮಗು ಕೊನೆಗೊಮ್ಮೆ ತನ್ನ ಸ್ವಂತ ಅಧೀಕಾರವನ್ನು ಸ್ಥಾಪಿಸುತ್ತ ತಂದೆಯ ಪ್ರಭಾವಲಯದಿಂದ ಹೊರಬರಲು ಸಹಾಯ ಮಾಡುವಂಥದ್ದಾಗಿರಬೇಕು.
ವ್ಯಕ್ತಿ ಪ್ರಬುದ್ಧನಾಗುತ್ತಿದ್ದಂತೆಯೇ, ಅವನು ಸ್ವತಃ ತಾನು ತನ್ನ ತಂದೆಯಾಗಿರುವ, ತನ್ನ ತಾಯಿಯಾಗಿರುವ ಹಂತವನ್ನು ತಲುಪುತ್ತಾನೆ. ಈಗ ಅವನು ತಂದೆ ಮತ್ತು ತಾಯಿಯ ಎರಡೂ ಪ್ರಜ್ಞೆಗಳನ್ನು ಒಳಗೊಂಡಿದ್ದಾನೆ. ತಾಯಿ ಪ್ರಜ್ಞೆಯ ಪ್ರಕಾರ, “ ನೀನು ಮಾಡುವ ಯಾವುದೇ ತಪ್ಪು ಕೆಲಸ, ಯಾವುದೇ ಅಪರಾಧ ನಿನ್ನನ್ನು ನನ್ನ ಪ್ರೀತಿಯಿಂದ, ನಿನ್ನ ಬದುಕು ಮತ್ತು ಸಂತೋಷಕ್ಕಾಗಿ ಮಾಡುವ ನನ್ನ ಹಾರೈಕೆಯಿಂದ ನಿನ್ನ ದೂರಮಾಡುವುದಿಲ್ಲ. “ ತಂದೆಯ ಪ್ರಜ್ಞೆಯ ಹೇಳುತ್ತದೆ : ನೀನು ತಪ್ಪು ಮಾಡಿರುವೆ, ನಿನ್ನ ತಪ್ಪಿನ ಕೆಲವು ಪರಿಣಾಮಗಳನ್ನು ಒಪ್ಪಿಕೊಳ್ಳುವ ಹೊಣೆಗಾರಿಯಿಂದ ನೀನು ನುಣುಚಿಕೊಳ್ಳುವಂತಿಲ್ಲ ಮತ್ತು ನಾನು ನಿನ್ನ ಮೆಚ್ಚಬೇಕಾದರೆ ನೀನು ನಿನ್ನ ದಾರಿಯನ್ನ ಬದಲಿಸಿಕೊಳ್ಳಬೇಕು.” ಪ್ರಬುದ್ಧ ಮನುಷ್ಯ ಹೊರಗಿನ ತಂದೆ ತಾಯಿಯರಿಂದ ಬಿಡಿಸಿಕೊಂಡು ಅವರನ್ನು ತನ್ನ ಒಳಗೆ ಕಟ್ಟಿಕೊಂಡಿದ್ದಾನೆ. ಆದರೆ ಮನುಷ್ಯನ ಈ ಸ್ಥಿತಿ ಫ್ರಾಯ್ಡ್ ನ Super Ego ಗೆ ವ್ಯತಿರಿಕ್ತವಾದದ್ದು. ಪ್ರಬುದ್ಧ ಮನುಷ್ಯ ತನ್ನೊಳಗೆ ತಂದೆ ತಾಯಿಯರನ್ನ ಕಟ್ಟಿಕೊಂಡಿದ್ದಾನೆಯೇ ಹೊರತು ಅವರನ್ನು ಯಥಾವತ್ ಆಗಿ ಒಳಗೊಂಡಿಲ್ಲ. ಅವನು ತನ್ನೊಳಗೆ ತಾಯಿಪ್ರಜ್ಞೆಯನ್ನು ಕಟ್ಟಿಕೊಂಡಿರುವುದು ತನ್ನ ಪ್ರೀತಿಸುವ ಸಾಮರ್ಥ್ಯದ ವಿಸ್ತರಣೆಗಾಗಿ, ಮತ್ತು ತಂದೆಯ ಪ್ರಜ್ಞೆಯನ್ನು ಒಳಗೊಂಡಿರುವುದು ತನ್ನ ವಿವೇಕ ಮತ್ತು ನ್ಯಾಯನಿರ್ಣಯ ಸಾಮರ್ಥ್ಯವನ್ನು ಗಟ್ಟಿಮಾಡಿಕೊಳ್ಳುವುದಕ್ಕಾಗಿ. ಹಾಗು ಮುಂದುವರೆದು ಹೇಳುವುದಾದರೆ, ಪ್ರಬುದ್ಧ ಮನುಷ್ಯ ಪ್ರೀತಿಸುವುದು, ತನ್ನ ತಾಯಿಪ್ರಜ್ಞೆ ಮತ್ತು ತಂದೆ ಪ್ರಜ್ಞೆ ಎರಡನ್ನೂ ಒಳಗೊಳ್ಳುತ್ತ, ಅವೆರಡರ ನಡುವೆ ವೈರುಧ್ಯ ಇದೆ ಎಂದು ಅನಿಸಿದರೂ. ಅವನು ಕೇವಲ ತನ್ನ ತಂದೆಪ್ರಜ್ಞೆಯನ್ನು ಉಳಿಸಿಕೊಂಡರೆ ಕಠಿಣ ಮತ್ತು ಅಮಾನವೀಯ ಮನುಷ್ಯನಾಗುತ್ತಾನೆ ಹಾಗು ಕೇವಲ ತಾಯಿಪ್ರಜ್ಞೆಯನ್ನು ಉಳಿಸಿಕೊಂಡರೆ ಅವನು ತನ್ನ ವಿವೇಕವನ್ನು ಕಳೆದುಕೊಳ್ಳುತ್ತಾನೆ ಮತ್ತು ತನ್ನ ಮತ್ತು ಇತರರ ಬೆಳವಣಿಗೆಗೆ ಅಡ್ಡಗಾಲಾಗುತ್ತಾನೆ.
ತಾಯಿ ಕೇಂದ್ರಿತ ಬಾಂಧವ್ಯದಿಂದ, ತಂದೆ ಕೇಂದ್ರಿತ ಬಾಂಧವ್ಯದ ಕಡೆಗಿನ ಇಂಥ ಬೆಳವಣಿಗೆ ಮತ್ತು ಅದರ ಅಂತಿಮ ಸಂಯೋಜನೆಯಲ್ಲಿದೆ ಮನುಷ್ಯನ ಮಾನಸಿಕ ಆರೋಗ್ಯ ಮತ್ತು ಅವನು ಪ್ರಬುದ್ಧತೆಯನ್ನು ಸಾಧಿಸುವಿಕೆಯ ಅಡಿಪಾಯ. ಮತ್ತು ಇಂಥದೊಂದು ಬೆಳವಣಿಗೆಯನ್ನು ಸಾಧಿಸುವಲ್ಲಿನ ವಿಫಲತೆಯಲ್ಲಿದೆ ಖಿನ್ನತೆ ಮತ್ತು ಇತರ ಮಾನಸಿಕ ರೋಗಗಳ (neurosis) ಮೂಲ ಕಾರಣ. ಈ ಆಲೋಚನಾ ಸರಣಿಯನ್ನು ಪೂರ್ಣವಾಗಿ ಬೆಳೆಸುವುದು ಈ ಪುಸ್ತಕದ ವ್ಯಾಪ್ತಿಯಲ್ಲಿ ಬರುವುದಿಲ್ಲವಾದರೂ, ಕೆಲವು ಸಂಕ್ಷಿಪ್ತ ವಿವರಣೆಗಳು ಈ ಹೇಳಿಕೆಯನ್ನು ಸ್ಪಷ್ಟಪಡಿಸುವಲ್ಲಿ ಸಹಾಯಕವಾಗಬಹುದು.
ಮಗುವಿನ ನ್ಯೂರಾಟಿಕ್ ವ್ಯಕ್ತಿತ್ವದ ಬೆಳವಣಿಗೆಗೆ ಒಂದು ಕಾರಣ ಮಗು; ಪ್ರೀತಿಯ ಆದರೆ ಮಗುವನ್ನು ಅತಿಯಾಗಿ ಹಚ್ಚಿಕೊಂಡಿರುವ ಅಥವಾ ದರ್ಪದ ಸ್ವಭಾವದ ತಾಯಿಯನ್ನ ಮತ್ತು ದುರ್ಬಲ ಹಾಗು ಮಗುವಿನಲ್ಲಿ ಆಸಕ್ತಿಯಿಲ್ಲದ ತಂದೆಯನ್ನು ಹೊಂದುರುವುದು. ಇಂಥ ಸಂದರ್ಭದಲ್ಲಿ ಮಗು ತನ್ನ ಮೊದಲಿನ ತಾಯಿ ಬಾಂಧವ್ಯವನ್ನೇ ಮುಂದುವರೆಸುತ್ತ ಪೂರ್ಣ ಪ್ರಮಾಣದಲ್ಲಿ ತಾಯಿಯನ್ನು ಅವಲಂಬಿಸಿರುವ ಅಸಹಾಯಕ ವ್ಯಕ್ತಿಯಾಗಿ ಬೆಳವಣಿಗೆ ಹೊಂದುತ್ತದೆ, ಮತ್ತು ಮಗುವಿನಲ್ಲಿ ಪಡೆದು ಬದುಕುವ ತುಡಿತಗಳು, ಯಾರಿಂದಲಾದರೂ ಸದಾ ನಿರೀಕ್ಷಿಸುವ, ರಕ್ಷಣೆ ಬಯಸುವ, ಆರೈಕೆಗಾಗಿ ಹಾತೊರೆವ ಲಕ್ಷಣಗಳು ಕಂಡುಬರುತ್ತವೆ, ಮತ್ತು ತಂದೆಯ ಗುಣಲಕ್ಷಣಗಳಾದ – ಶಿಸ್ತು, ಸ್ವಾತಂತ್ರ್ಯ, ತನ್ನ ಬದುಕನ್ನ ತಾನೇ ಮುನ್ನಡೆಸುವ ಧೈರ್ಯ ಮುಂತಾದವುಗಳ ಗೈರುಹಾಜರಿ ಎದ್ದು ಕಾಣುತ್ತದೆ. ಇಂಥ ವ್ಯಕ್ತಿ ಎಲ್ಲರಲ್ಲೂ ತಾಯಿಯನ್ನು ಕಾಣುವ ಪ್ರಯತ್ನ ಮಾಡುತ್ತಾನೆ, ಕೆಲವೊಮ್ಮೆ ಅವನು ಬೇರೆ ಹೆಂಗಸರಲ್ಲಿ ತಾಯಿಯನ್ನು ಹುಡುಕಿದರೆ ಇನ್ನೂ ಕೆಲವೊಮ್ಮೆ ಅಧಿಕಾರ ಮತ್ತು ಹೆಚ್ಚಿನ ಸಾಮರ್ಥ್ಯ ಹೊಂದಿರುವ ಗಂಡಸರಲ್ಲಿ ತಾಯಿಯನ್ನು ಅರಸುತ್ತಾನೆ. ಒಂದು ವೇಳೆ ತಾಯಿ ತಣ್ಣಗಿನ ಸ್ವಭಾವದವಳಾಗಿದ್ದರೆ (cold behaviour), ದರ್ಪದ ಹೆಂಗಸಾಗಿದ್ದರೆ, ಮಗುವಿನಲ್ಲಿ ನಿರಾಸಕ್ತಳಾಗಿದ್ದರೆ, ಮಗು ತನ್ನ ತಾಯಿಯಿಂದ ನಿರೀಕ್ಷಿಸುವ ರಕ್ಷಣೆಯ ಅವಶ್ಯಕತೆಯನ್ನು ತನ್ನ ತಂದೆಗೆ ಅಥವಾ ತಾನು ತಂದೆಯ ಸಮಾನ ಎಂದು ತಿಳಿದುಕೊಂಡಿರುವ ವ್ಯಕ್ತಿಗಳಿಗೆ ವರ್ಗಾಯಿಸುತ್ತದೆ, ಮತ್ತು ಇಲ್ಲಿಯೂ ಕೂಡ ಮೊದಲು ವಿವರಿಸಿದ ಇನ್ನೊಂದು ಸ್ಥಿತಿಯಂತೆಯೇ ಪರಿಣಾಮಗಳನ್ನು ನಿರೀಕ್ಷಿಸಬಹುದು, ಅಥವಾ ಮಗು ತಂದೆಯ ಮೇಲೆ ಏಕಪಕ್ಷೀಯವಾಗಿ ಅವಲಂಬಿತವಾಗಿರುವ ವ್ಯಕ್ತಿಯಾಗಿ, ಸಂಪೂರ್ಣವಾಗಿ ತನ್ನನ್ನು ನಿಯಮ, ಕಾನೂನು, ವ್ಯವಸ್ಥೆಗೆ ಒಪ್ಪಿಸಿಕೊಂಡಿರುವ , ಮತ್ತು ಇತರರಿಂದ ಬೇಷರತ್ ಪ್ರೀತಿಯನ್ನು ನೀರಿಕ್ಷಿಸುವ ಮತ್ತು ಪಡೆಯುವ ಸಾಮರ್ಥ್ಯದಲ್ಲಿ ಕೊರತೆಯನ್ನು ಅನುಭವಿಸುವ ವ್ಯಕ್ತಿಯಾಗಿ ಬೆಳವಣಿಗೆ ಹೊಂದುತ್ತಾನೆ. ಈ ಬೆಳವಣಿಗೆಯು ಇನ್ನೂ ಹೆಚ್ಚಿನ ತೀವ್ರತೆಯನ್ನು ಪಡೆದುಕೊಳ್ಳುವುದು, ತಂದೆ ಸರ್ವಾಧಿಕಾರಿ ವ್ಯಕ್ತಿತ್ವದ ಮತ್ತು ಅದೆ ಕಾಲಕ್ಕೆ ಮಗುವನ್ನು ತುಂಬ ಹಚ್ಚಿಕೊಂಡಿರುವ ಸನ್ನಿವೇಶದಲ್ಲಿ. ಈ ಎಲ್ಲ ನ್ಯೂರಾಟಿಕ್ ಬೆಳವಣಿಗೆಗಳ ಮುಖ್ಯ ಲಕ್ಷಣ, ಆ ಮಗುವಿನಲ್ಲಿ (ವ್ಯಕ್ತಿಯಲ್ಲಿ) ತಾಯಿತನ ಅಥವಾ ತಂದೆತನದ ಬೆಳವಣಿಗೆ ಸರಿಯಾಗಿ ಆಗದಿರುವುದು ಅಥವಾ, ತುಂಬ ತೀವ್ರವಾದ ನ್ಯೂರಾಟಿಕ್ ಸ್ಥಿತಿಯ ಸನ್ನಿವೇಶಗಳಲ್ಲಿ ಆಗುವಂತೆ, ಮಗುವಿಗೆ ಹೊರಗೆ ಕಾಣಿಸುವ ತಂದೆ ತಾಯಿಗಳಿಗೂ ಮತ್ತು ಅದು ಅಂತರಂಗದಲ್ಲಿ ಅಂದುಕೊಂಡಿರುವ ತಂದೆ ತಾಯಿಯ ಪಾತ್ರಗಳ ನಡುವೆ ಕಂಡುಬರುವ ಗೊಂದಲ.
ಮುಂದೆ ಬರುವ ಸಂಶೋಧನೆಗಳು, Obsessional Neurosis ನಂಥ ಕೆಲವು ರೀತಿಯ ನರರೋಗದ ಸಮಸ್ಯೆಗಳಿಗೆ ಕಾರಣ ತಂದೆಯೊಡನೆಯ ಮಗುವಿನ ಏಕಪಕ್ಷೀಯ ಬಾಂಧವ್ಯ ಎಂದೂ, ಉನ್ಮಾದ (hysteria),ಮದ್ಯಪಾನದ ಗೀಳು (alcoholism), ತನ್ನನ್ನು ತಾನು ಸ್ಥಾಪಿಸಿಕೊಳ್ಳುತ್ತ ಬದುಕಿನ ವಾಸ್ತವಗಳೊಂದಿಗೆ ಹೊಂದಿಕೊಂಡು ಹೋಗುವ ಸಾಮರ್ಥ್ಯದಲ್ಲಿನ ಕೊರತೆ , ಖಿನ್ನತೆ (depression) ಮುಂತಾದವುಗಳಿಗೆ ಕಾರಣ ಮಗುವಿನಲ್ಲಿನ ತಾಯಿ ಕೇಂದ್ರಿತ ವ್ಯಕ್ತಿತ್ವ ಎಂದೂ ಸಾಬೀತು ಮಾಡಬಹುದು.
1 Comment