ಮಾತು ಕಡಿಮೆಯಲ್ಲ, ಮೌನ ಹೆಚ್ಚಲ್ಲ… । ಅದ್ಯಾತ್ಮ ಡೈರಿ

ಹೇಗೆ ಆಡಬಾರದ ಮಾತು ಕೆಡುಕೋ, ಅಕಾಲದಲ್ಲಿ ತೋರುವ ಮೌನವೂ ಕೆಡುಕೇ. ಅಕಾಲದ ಮೌನದಿಂದ ಉಂಟಾಗುವ ಕಂದಕ ಅಥವಾ ಹಾನಿಯನ್ನು ಅನಂತರದ ನೂರು ಮಾತಿಂದಲೂ ತುಂಬಿಕೊಡಲು ಬರೋದಿಲ್ಲ, ಮಾತಿನ ಹಾನಿಯನ್ನು ಮೌನದಿಂದ ತುಂಬಿಕೊಡಲು ಹೇಗೆ ಬರೋದಿಲ್ಲವೋ ಹಾಗೇ…! ~ ಅಲಾವಿಕಾ

ಮೌನವೂ ಒಂದು ಭಾಷೆ/ ಹಾಗಂತಲೇ ಅಪಾರ್ಥಕ್ಕೂ ಒಳಗಾಗೋದು!

ಮಾತು ಮತ್ತು ಮೌನವೆರಡನ್ನೂ ತಕ್ಕಡಿಗೆ ಹಾಕಿದರೆ ಎರಡು ಒಂದೇ ಸಮ ತೂಗುವವು. ಮೌನ ಹೆಚ್ಚೇನಲ್ಲ, ಮಾತೂ. ಮೌನಕ್ಕೆ ತೂಕವಿದೆ, ಮಾತಿಗೂ!

ಮಾತು ಆಡಿದರೆ ಆಯಿತು, ಮುತ್ತು ಒಡೆದರೆ ಹೋಯಿತು ಅನ್ನುತ್ತಾರೆ. ಒಮ್ಮೆ ಆಡಿದ ಮಾತಿಂದ ಕೆಡುಕೇನಾದರೂ ಆದರೆ ಅದನ್ನ ಮತ್ತೆ ಸರಿಪಡಿಸಲು ಬರೋದಿಲ್ಲ ಅನ್ನೋದು ಅವರ ಕಾಳಜಿ.

ಇದು ಮೌನದ ವಿಷಯದಲ್ಲೂ ಸರಿಯೇ ಸರಿ. ಹೇಗೆ ಆಡಬಾರದ ಮಾತು ಕೆಡುಕೋ, ಅಕಾಲದಲ್ಲಿ ತೋರುವ ಮೌನವೂ ಕೆಡುಕೇ. ಅಕಾಲದ ಮೌನದಿಂದ ಉಂಟಾಗುವ ಕಂದಕ ಅಥವಾ ಹಾನಿಯನ್ನು ಅನಂತರದ ನೂರು ಮಾತಿಂದಲೂ ತುಂಬಿಕೊಡಲು ಬರೋದಿಲ್ಲ, ಮಾತಿನ ಹಾನಿಯನ್ನು ಮೌನದಿಂದ ತುಂಬಿಕೊಡಲು ಹೇಗೆ ಬರೋದಿಲ್ಲವೋ ಹಾಗೇ!

ಮೌನ ಭಾಷೆಯ ಗೈರಲ್ಲ. ಮೌನ ಭಾಷೆಯಲ್ಲದ ಮತ್ತೇನೋ ಅಲ್ಲ. ಮೌನವೂ ಒಂದು ಸಂವಹನ ಸಾಧನವೇ. ಅದು ತನ್ನ ಅಭಿಪ್ರಾಯವನ್ನು ಹೇಳದಿರುವ ಅಭಿವ್ಯಕ್ತಿ. ಆದ್ದರಿಂದ ಮೌನವೂ ಭಾಷೆ.

ಭಾಷೆ ಯಾವತ್ತೂ ಒಂದೇ ಅರ್ಥವನ್ನು ಹೊತ್ತುಕೊಂಡಿರೋದಿಲ್ಲ. ಯಾವುದೇ ವ್ಯಕ್ತಿ ಆಡಿದ ಮಾತು, ಆ ವ್ಯಕ್ತಿ, ದೇಶ, ಕಾಲ ಮತ್ತು ಕೇಳುಗರ ಮನಸ್ಥಿತಿಗೆ ತಕ್ಕಂತೆ ಅರ್ಥ ಪಡೆಯುತ್ತದೆ. ಹಾಗೇ ಮೌನವೂ.

ಈಗಾಗಲೇ ಸ್ಥಾಪಿಸಲಾದ ಹಾಗೆ ‘ಮೌನಮ್ ಸಮ್ಮತಿ ಲಕ್ಷಣಮ್’ ಅಂದುಬಿಡೋದು ಸುಲಭ. ಆದರೆ, ಮೌನ ಅಸಮ್ಮತಿ. ಅಸಹನೆ, ಪ್ರತಿಭಟನೆ ಅಥವಾ ಹಠದ ಲಕ್ಷಣವೂ ಆಗಿರುತ್ತದೆ, ಗಮನಿಸುವ ವ್ಯವಧಾನ ನಮಗಿದ್ದರೆ!

ಮಾತು ಬಲ್ಲವರಿಗೆ ಜಗಳವಿಲ್ಲ, ಮೌನ ಬಲ್ಲವರಿಗೂ. ಎಲ್ಲ ಸಲವೂ ಮಾತು ಜಗಳ ಹೆಚ್ಚಿಸೋದಿಲ್ಲ, ಮೌನ ತಗ್ಗಿಸೋದಿಲ್ಲ. ಕೆಲವು ಸಲ ಮೌನ ಎದುರಾಳಿಯನ್ನು ಕೆರಳಿಸಿ ಜಗಳವನ್ನು ತಾರಕಕ್ಕೆ ಒಯ್ಯುತ್ತದೆ. ಕೆಲವು ಸಲ ಮಾತಿನ ಮೂಲಕ ಮನಸ್ಸನ್ನು ತೋಡಿಕೊಂಡು ಬಿಟ್ಟರೆ ಇಬ್ಬರೊಳಗಿನ ರಾಡಿಯೂ ತಮ್ಮ ತಮ್ಮ ಮುಖಕೇ ರಾಚಿ, ನಾಚಿ, ಜಗಳ ನಿಲ್ಲಿಸುವ ಸಾಧ್ಯತೆಯೂ ಇರುತ್ತದೆ.

ಆದ್ದರಿಂದ, ಆಡಬೇಕಾದಲ್ಲಿ ಮಾತಾಡೋದು, ಇರಬೇಕಾದಲ್ಲಿ ಮೌನವಾಗಿರೋದು – ಎರಡೂ ಉತ್ತಮ.

ಮಾತು ಕಡಿಮೆಯಲ್ಲ, ಮೌನ ಹೆಚ್ಚಲ್ಲ; ಬಳಸುವ ಕಲೆ ಪಳಗುವವರೆಗೆ.

Leave a Reply