ಓಶೋ ಹೇಳಿದ ನಸ್ರುದ್ದೀನ್ ದೃಷ್ಟಾಂತ

ಓಶೋ ಹೇಳಿದ ಎರಡು ನಸ್ರುದ್ದೀನ್ ದೃಷ್ಟಾಂತ ಕತೆಗಳು । ಸಂಗ್ರಹ ಮತ್ತು ಅನುವಾದ: ಚಿದಂಬರ ನರೇಂದ್ರ

ಒಂದು ಮುಂಜಾನೆ ನಸ್ರುದ್ದೀನ್ ಕೆಮ್ಮುತ್ತ, ಸೀನುತ್ತ ಡಾಕ್ಟರ್ ಶಾಪಿಗೆ ಬಂದ. “ ನಸ್ರುದ್ದೀನ್, ನಿನ್ನ ಕೆಮ್ಮು ಮತ್ತು ಶೀತ ಬಹಳಷ್ಟು ಸುಧಾರಿಸಿದ ಹಾಗಿದೆ “ ಡಾಕ್ಟರ್, ನಸ್ರುದ್ದೀನ್ ನ ವಿಚಾರಿಸಿಕೊಂಡರು.

“ಸುಧಾರಿಸಿದೇ ಏನು? ಕಳೆದ ಮೂರು ವಾರಗಳಿಂದ ಇದನ್ನ ಪ್ರ್ಯಾಕ್ಟೀಸ್ ಮಾಡ್ತಾ ಇದ್ದೀನಿ. ಇಂಪ್ರೂವ್ ಆಗಲೇಬೇಕು. ರಾತ್ರಿಯೆಲ್ಲಾ ನಿದ್ದೆಗೆಟ್ಟು ತನ್ಮಯತೆಯಿಂದ ಪ್ರ್ಯಾಕ್ಟೀಸ್ ಮಾಡ್ತೀನಿ, ಈಗ ಕೆಮ್ಮು ತಾಳಬದ್ಧವಾಗಿದೆ, ನನ್ನ ಗಂಟಲು ಈಗ ಕೆಮ್ಮಲು ಅನುಕೂಲಕರವಾಗುವಂತೆ ಶ್ರುತಿಬದ್ಧವಾಗಿದೆ. ಇನ್ನೊಂದೆರಡು ವಾರ ಅಷ್ಟೇ ನಾನು ಕಚೇರಿ ಮಾಡಬಹುದು.” ನಸ್ರುದ್ದೀನ್ ಡಾಕ್ಟರ್ ಗೆ ಉತ್ತರಿಸಿದ.

ನೆಪಿಟ್ಟುಕೊಳ್ಳಿ, ಜನ ಒಮ್ಮೊಮ್ಮೆ ತಮ್ಮನ್ನು ತಾವು ಶೋಚನೀಯರನ್ನಾಗಿಸಿಕೊಳ್ಳುವುದರಲ್ಲಿ (miserable) ಕುಶಲಿಗಳಾಗಿಬಿಡುತ್ತಾರೆ, ಪರಿಣಿತರಾಗಿಬಿಡುತ್ತಾರೆ. ತಮ್ಮನ್ನು ತಾವು ಶೋಚನೀಯರನ್ನಾಗಿಸಿಕೊಂಡು, ಆ ಮೂಲಕ ತಮ್ಮ ಬದುಕನ್ನ ಸಂಕಟಮಯ ಮಾಡಿಕೊಂಡ ಸಾವಿರಾರು ಜನರನ್ನ ನಾನು ಬಲ್ಲೆ. ಅವರು ಸಂಕಟದ ಕಲಾವಿದರು. ಅವರು ಶೂನ್ಯದಿಂದಲೂ ಸಂಕಟವನ್ನು ಸೃಷ್ಟಿಮಾಡಬಲ್ಲ ಕಲಾಬ್ರಹ್ಮರು. ಅವರ ಕೌಶಲ್ಯ ಎಷ್ಟು ಚುರುಕಾಗಿರುತ್ತದೆಯೆಂದರೆ, ಅವರ ಪರಿಣಿತಿ ಎಷ್ಟು ತೀವ್ರವಾಗಿರುತ್ತದೆಯೆಂದರೆ, ಅವರು ಹೂವನ್ನು ಮುಟ್ಟಿಯೂ ಮುಳ್ಳಿನ ಸಂಕಟದ ಸುಖ ಅನುಭವಿಸಬಲ್ಲರು.

ಈಗ ನೀವು ಮಿಸರೇಬಲ್ ಆಗಿಬಿಟ್ಟಿರುವಿರಿ. ಈಗ ನಿಮಗೆ ಸಂಕಟದ ಭಾಷೆ ಮಾತ್ರ ಗೊತ್ತು, ನೀವು ಕೇವಲ ಸಂಕಟವನ್ನು ಮಾತ್ರ ಗುರುತಿಸಬಲ್ಲಿರಿ. ನೀವು ಸಂಕಟವನ್ನು ಅನುಭವಿಸುವ ಕಲೆಯಲ್ಲಿ ಎಷ್ಟು ಪರಿಣಿತಿ ಸಾಧಿಸಿರುವಿರಿ ಎಂದರೆ, ಈಗ ನೀವು ಎಲ್ಲದರಲ್ಲೂ ಸಂಕಟವನ್ನು ಕಾಣುತ್ತೀರಿ.

ನಸ್ರುದ್ದೀನ್ ನ ಮಗ ಉಂಡಾಡಿ ಗುಂಡ. ವಯಸ್ಸಿಗೆ ಬಂದರೂ ಯಾವ ಕೆಲಸ ಮಾಡದೇ ಓಡಾಡಿಕೊಂಡಿದ್ದ. ನಸ್ರುದ್ದೀನ್ ಗೆ ಮಗನಿಗೆ ಬುದ್ಧಿ ಹೇಳಿ ಹೇಳಿ ಸಾಕಾಗಿ ಹೋಗಿತ್ತು. ಒಂದು ದಿನ ಮಗ ನಸ್ರುದ್ದೀನ್ ನ ಹತ್ತಿರ ಬಂದು ಸಲಹೆ ಕೇಳಿದ.

“ ಅಪ್ಪ, ನನಗೆ ಫುಟ್ ಬಾಲ್ ಮತ್ತು ಪೇಂಟಿಂಗ್ ಎಂದರೆ ಬಹಳ ಇಷ್ಟ. ಈ ಎರಡರಲ್ಲಿ ಯಾವುದನ್ನ ವೃತ್ತಿಯಾಗಿ ತೆಗೆದುಕೊಳ್ಳಲಿ? “

“ ನೀನು ಕೆಲಸ ಮಾಡಲು ನಿರ್ಧರಿಸಿದ್ದು ಸಂತೋಷ, ನೀನು ಫುಟ್ ಬಾಲ್ ನ್ನೇ ಕರೀಯರ್ ಆಗಿ ತೆಗೆದುಕೋ “
ನಸ್ರುದ್ದೀನ್ ಮಗನಿಗೆ ಸಲಹೆ ನೀಡಿದ.

“ ನೀನು ನನ್ನ ಫುಟ್ ಬಾಲ್ ಆಟ ನೋಡೀದ್ದೀಯಾ? ಚೆನ್ನಾಗಿ ಆಡುತ್ತೇನೆ ಅಲ್ವಾ “
ಮಗ ಖುಶಿಯಿಂದ ಕೇಳಿದ.

“ ಇಲ್ಲ ಆದರೆ ನಾನು ನಿನ್ನ ಪೇಂಟಿಂಗ್ ನೋಡಿದ್ದೀನಿ “
ನಸ್ರುದ್ದೀನ್ ಗಂಭೀರವಾಗಿ ಉತ್ತರಿಸಿದ.

Leave a Reply