ಮಹಾ ವಾಗ್ದಾನದ ವೈಫಲ್ಯಕ್ಕೆ ಕಾರಣಗಳೇನು? : To have or To be #2

ಗ್ರೀಕ್ ತತ್ವಜ್ಞಾನಿ ಅರಿಸ್ಟಿಪ್ಪಸ್ (Aristippus) ಪ್ರಕಾರ ದೈಹಿಕ ಸುಖದ ಅತ್ಯುತ್ತಮ ಅನುಭವವೇ ಬದುಕಿನ ಉದ್ದೇಶ ಮತ್ತು ಆ ಸಂತೋಷ, ಮನುಷ್ಯ ಆನಂದಿಸಿದ ಎಲ್ಲ ಸುಖಗಳ ಒಟ್ಟು ಮೊತ್ತ. ಅವನದು, ಬಯಕೆಗಳು ಅಸ್ತಿತ್ವದಲ್ಲಿ ಇವೆಯೆಂದಾದ ಮೇಲೆ ಅವುಗಳನ್ನು ತೃಪ್ತಿಪಡಿಸಬೇಕಾದದ್ದು ಮತ್ತು ಆ ಮೂಲಕ ಬದುಕಿನ ಉದ್ದೇಶವಾದ “ಸುಖ” ವನ್ನು ಕಂಡುಕೊಳ್ಳಬೇಕಾದದ್ದು ಕರ್ತವ್ಯ ಎನ್ನುವ ವಾದ… । ಎರಿಕ್ ಫ್ರಾಂ; ಕನ್ನಡಕ್ಕೆ: ಚಿದಂಬರ ನರೇಂದ್ರ

ಹಿಂದಿನ ಭಾಗ ಇಲ್ಲಿ ಓದಿ…. https://aralimara.com/2023/02/14/fromm/

ಕೈಗಾರಿಕಾವಾದದ ಅವಶ್ಯಕ ಆರ್ಥಿಕ ದ್ವಂದ್ವಗಳ ಹೊರತಾಗಿ, ಮಹಾ ವಾಗ್ದಾನದ ವೈಫಲ್ಯಕ್ಕೆ ಕಾರಣಗಳು, ಕೈಗಾರಿಕಾ ವ್ಯವಸ್ಥೆಯ ಎರಡು ಬಹುಮುಖ್ಯ ಮನೋವೈಜ್ಞಾನಿಕ ಭೂಮಿಕೆಗಳಲ್ಲಿಯೇ ಜಾಗ ಪಡೆದುಕೊಂಡಿವೆ.

  1. ಮೊದಲನೇಯದು, ಬದುಕಿನ ಮುಖ್ಯ ಉದ್ದೇಶ ಖುಶಿ ಎಂದು ನಿರ್ಧರಿಸಿರುವುದು. ಮನುಷ್ಯರು ಅನುಭವಿಸಬಹುದಾದ ಯಾವುದೇ ಬಯಕೆ ಅಥವಾ ವ್ಯಕ್ತಿಗತ ಬೇಕು-ಬೇಡಗಳ ಸಂಪೂರ್ಣ ತೃಪ್ತಿ ಎಂದೇ ವ್ಯಾಖ್ಯಾನಿಸಲಾದ ಮನುಷ್ಯರ ಅತೀ ಹೆಚ್ಚಿನ ಸುಖ ಸಂತೋಷಗಳಿಗೆ (ತರ್ಕಾಧಾರಿತ ಸುಖ-ವಾದ, radical hedonism) ನೀಡಲಾಗಿರುವ ಪ್ರಾಮುಖ್ಯತೆ ಮತ್ತು;
  2. ಎರಡನೇಯದು, ವ್ಯವಸ್ಥೆ ತಾನು ಸುಗಮವಾಗಿ ಸೌಹಾರ್ದಯುತವಾಗಿ, ಶಾಂತಿಯುತವಾಗಿ ಕಾರ್ಯನಿರ್ವಹಿಸಲು ಅನುಕೂಲವಾಗುವಂತೆ ಮನುಷ್ಯರಲ್ಲಿ ಹುಟ್ಟು ಹಾಕುವ ಅಹಂಭಾವ (egotism), ಸ್ವಾರ್ಥ ಮತ್ತು ಅಸೂಯೆ.

ಇತಿಹಾಸದುದ್ದಕೂ ಶ್ರೀಮಂತರು ತರ್ಕಾಧಾರಿತ ಸುಖ-ವಾದವನ್ನ ಆಚರಿಸಿಕೊಂಡು ಬಂದಿರುವುದು ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿರುವ ಸಂಗತಿ. ಅನಿಯಮಿತ ಅವಕಾಶಗಳ ಸಾಧ್ಯತೆಯನ್ನು ಪಡೆದಂಥ, ರೋಮಿನ, ಇಟಲಿಯ ಹೊಸ ತಿಳುವಳಿಕೆಯ ನಗರಗಳ (Italian cities of renaissance), ಹಾಗು ಹದಿನೆಂಟು ಮತ್ತು ಹತ್ತೊಂಭತ್ತನೇಯ ಶತಮಾನದ ಫ್ರಾನ್ಸ್ ಮತ್ತು ಇಂಗ್ಲಂಡ್ ನ ಗಣ್ಯ ವರ್ಗದ ಜನ (elite), ಬದುಕಿನ ಅರ್ಥವನ್ನು ಅಪರಿಮಿತ ಸುಖದಲ್ಲಿ ಶೋಧಿಸುವ ಪ್ರಯತ್ನದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಹದಿನೇಳನೇಯ ಶತಮಾನದ ಹಿಂದಿನ ಜನರ ಬದುಕಿನ ಏಕೈಕ ಅಪವಾದವನ್ನು ಹೊರತುಪಡಿಸಿ ತರ್ಕಾಧಾರಿತ ಸುಖ-ವಾದದ ಪ್ರಕಾರದ ಅಪರಿಮಿತ ಸುಖದ ಸಿದ್ಧಾಂತ ಕೆಲವು ನಿರ್ದಿಷ್ಟ ಸಮಯದಲ್ಲಿ, ಕೆಲ ನಿರ್ದಿಷ್ಟ ಗುಂಪಿನ ಜನರ ಸಾಮಾನ್ಯ ಆಚರಣೆಯ ಸಂಗತಿಯಾಗಿದ್ದರೂ, ಅದು ಎಂದೂ ಚೈನಾ, ಇಂಡಿಯಾ, ಯುರೋಪ್ ಮತ್ತು ಪೂರ್ವ ಪ್ರಾಚ್ಯದ (near east) ಲಿವಿಂಗ್ ಮಾಸ್ಟರ್ ಗಳ ಆರೋಗ್ಯಪೂರ್ಣ ಬದುಕಿನ ಕುರಿತಾದ ವ್ಯಕ್ತ ಸಿದ್ಧಾಂತವಾಗಿರಲಿಲ್ಲ.

ಸಾಕ್ರೆಟಿಸ್ ನ ಶಿಷ್ಯ ( ಕ್ರಿಸ್ತಪೂರ್ವ ನಾಲ್ಕನೇ ಶತಮಾನದ ಮೊದಲ ಭಾಗ) ಗ್ರೀಕ್ ತತ್ವಜ್ಞಾನಿ ಅರಿಸ್ಟಿಪ್ಪಸ್ (Aristippus) ಮಾತ್ರ ಇದಕ್ಕೆ ಅಪವಾದವಾಗಿದ್ದ. ಅವನ ಪ್ರಕಾರ ದೈಹಿಕ ಸುಖದ ಅತ್ಯುತ್ತಮ ಅನುಭವವೇ ಬದುಕಿನ ಉದ್ದೇಶ ಮತ್ತು ಆ ಸಂತೋಷ, ಮನುಷ್ಯ ಆನಂದಿಸಿದ ಎಲ್ಲ ಸುಖಗಳ ಒಟ್ಟು ಮೊತ್ತ. ಅವನ ತತ್ವಜ್ಞಾನದ ಬಗ್ಗೆ ನಮಗೆ ಗೊತ್ತಿರುವ ಸೀಮಿತ ಮಾಹಿತಿಗಾಗಿ ನಾವು Diogenes Laertius ಗೆ ಋಣಿಯಾಗಿದ್ದೇವೆಯಾದರೂ, ಅವನ ಬಗೆಗಿನ ಈ ಮಾಹಿತಿ ಅವನೊಬ್ಬನೇ ಸುಖ-ವಾದದ ನಿಜವಾದ ಪ್ರತಿಪಾದಕ ( real hedonist) ಎಂದು ಗುರುತಿಸಲು ಸಹಾಯ ಮಾಡುತ್ತದೆ. ಅವನದು, ಬಯಕೆಗಳು ಅಸ್ತಿತ್ವದಲ್ಲಿ ಇವೆಯೆಂದಾದ ಮೇಲೆ ಅವುಗಳನ್ನು ತೃಪ್ತಿಪಡಿಸಬೇಕಾದದ್ದು ಮತ್ತು ಆ ಮೂಲಕ ಬದುಕಿನ ಉದ್ದೇಶವಾದ “ಸುಖ” ವನ್ನು ಕಂಡುಕೊಳ್ಳಬೇಕಾದದ್ದು ಕರ್ತವ್ಯ ಎನ್ನುವ ವಾದ.

ಅರಿಸ್ಟಿಪ್ಪಸ್ ಮಾದರಿಯ ಸುಖ-ವಾದದ ಪ್ರತಿನಿಧಿಯಾಗಿ ಎಪಿಕುರಸ್ ನ ಗುರುತಿಸುವುದು ಬಹಳ ಅಪರೂಪ. ಎಪಿಕುರಸ್ ನಿಗೆ “ಶುದ್ಧ ಸುಖ”, ಬದುಕಿನ ಪರಮ ಉದ್ದೇಶವಾದರೂ, ಅವನ ಪ್ರಕಾರ ಸುಖ ಎನ್ನುವುದು “ನೋವಿನ ಅನುಪಸ್ಥಿತಿ” (absence of pain – aponia) ಮತ್ತು “ಆತ್ಮದ ಸಮಾಧಾನ” (stillness of soul – ataraxia). ಎಪಿಕುರಸ್ ನಿಗೆ, ಬಯಕೆಗಳನ್ನು ತೃಪ್ತಿಪಡಿಸುವುದು ಸುಖ ಎನ್ನುವ ಸಿದ್ಧಾಂತದಲ್ಲಿ ನಂಬಿಕೆ ಇಲ್ಲ, ಏಕೆಂದರೆ ಇಂಥ ಸುಖವನ್ನು ಖಂಡಿತವಾಗಿ ದುಃಖ ಹಿಂಬಾಲಿಸುತ್ತದೆ ಮತ್ತು ಅದು ಮಾನವತೆಯನ್ನು ಅದರ ನಿಜ ಉದ್ದೇಶವಾದ “ ನೋವಿನ ಅನುಪಸ್ಥಿತಿಯಿಂದ” ದೂರ ಇಡುತ್ತದೆ ಎನ್ನುವ ಬಗ್ಗೆ ಖಾತ್ರಿ. (ಎಪಿಕುರಸ್ ನ ಸಿದ್ಧಾಂತವನ್ನು ಬಹಳಷ್ಟು ರೀತಿಯಲ್ಲಿ ಫ್ರಾಯ್ಡನ ಸಿದ್ಧಾಂತಕ್ಕೆ ಹೋಲಿಕೆ ಮಾಡಬಹುದು). ಎಪಿಕುರಸ್ ನ ರೀತಿಯ ನಿರ್ದಿಷ್ಟ ವ್ಯಕ್ತಿವಾದ, ಅರಿಸ್ಟಾಟಲ್ ನ ಮಾದರಿಗೆ ವಿರುದ್ಧವಾದದ್ದು ಎನ್ನಬಹುದಾದರೂ, ಎಪಿಕುರಸ್ ನ ಹೇಳಿಕೆಗಳಿಗೆ ಇರುವ ವಿರುದ್ಧ ಎನ್ನುವಂಥ ದಾಖಲೆಗಳು ನಿಖರ ಅರ್ಥೈಸುವಿಕೆಯೊಂದಕ್ಕೆ ಅವಕಾಶ ಮಾಡಿಕೊಡುತ್ತವೆ.

ಬಯಕೆಗಳ ವಾಸ್ತವಿಕ ಅಸ್ತಿತ್ವ, ನೈತಿಕ ಮಾನದಂಡಗಳಿಗೆ ಕಾರಣವಾಗಬೇಕು ಎನ್ನುವುದನ್ನ ಬೇರೆ ಯಾವ ತತ್ವಜ್ಞಾನಿಗಳೂ ಬೋಧಿಸಲಿಲ್ಲ. ಅವರಿಗೆ ಮನುಕುಲದ ಪರಿಪೂರ್ಣ ಯೋಗಕ್ಷೇಮವೊಂದೇ (vivere bene – optimal well being) ಮೂಲ ಕಾಳಜಿಯಾಗಿತ್ತು. ಅವರ ವಿಚಾರಗಳಲ್ಲಿನ ಅವಶ್ಯಕ ಸಂಗತಿಯೆಂದರೆ ಅವರು, ಅಂಥ ಅವಶ್ಯಕತೆಗಳು (ಬಯಕೆಗಳು) ಯಾವವನ್ನ ಕೇವಲ ವ್ಯಕ್ತಿಗತವಾಗಿ ಒಬ್ಬರು ಫೀಲ್ ಮಾಡಬಹುದೋ ಅಂಥವು ಮತ್ತು ವಸ್ತುನಿಷ್ಠವಾಗಿ ಇಡೀ ಮಾನವ ಜನಾಂಗದ ಅವಶ್ಯಕತೆಗಳು ಎಂದು ನಾವು ಯಾವವನ್ನ ಗುರುತಿಸುತ್ತೇವೋ ಅವುಗಳ ನಡುವಿನ ವ್ಯತ್ಯಾಸವನ್ನು ಗುರುತಿಸಿದ್ದು. ಮೊದಲು ಹೇಳಿದ ಅವಶ್ಯಕತೆಗಳ ಒಂದು ಭಾಗ ಮಾನವ ಜನಾಂಗದ ಬೆಳವಣಿಗೆಗೆ ಮಾರಕ ಮತ್ತು ಎರಡನೇಯ ರೀತಿಯ ಅವಶ್ಯಕತೆಗಳು ಮಾನವ ಸ್ವಭಾವದ ಬೇಕು ಬೇಡಗಳಿಗೆ ಪೂರಕವಾದದ್ದು.

ಅರಿಸ್ಟಿಪ್ಪಸ್ ನ ತರುವಾಯ ಹದಿನೇಳು ಮತ್ತು ಹದಿನೆಂಟನೇ ಶತಮಾನದ ತತ್ವಜ್ಞಾನಿಗಳು, ಬದುಕಿನ ಪರಮ ಉದ್ದೇಶ ಮನುಷ್ಯರ ಪ್ರತಿಯೊಂದು ಬಯಕೆಯನ್ನೂ ತೃಪ್ತಿಪಡಿಸುವುದಾಗಿರಬೇಕು ಎನ್ನುವ ಸಿದ್ಧಾಂತಕ್ಕೆ ಮೊದಲ ಬಾರಿಗೆ ದನಿಗೂಡಿಸಿದರು. ಯಾವಾಗ “ಲಾಭ” ಎನ್ನುವುದರ ಅರ್ಥ “ಆತ್ಮದ ಲಾಭ” (profit for the soul) ಎನ್ನುವುದಕ್ಕೆ ( ಮೊದಲು ಬೈಬಲ್ ನಲ್ಲಿ ಆಮೇಲೆ ಸ್ಪಿನೋಜ ನಲ್ಲಿ ಆದಂತೆ) ಸ್ಥಿರವಾಗಿ ಹೋಗಿತ್ತೋ ಆಗ ಇಂಥದೊಂದು ಪರಿಕಲ್ಪನೆಯ ಹುಟ್ಟು ಸರಳವಾಗಿ ಸಾಧ್ಯವಾಗಿತ್ತು, ಆದರೆ ಯಾವಾಗ ಮಧ್ಯಮ ವರ್ಗದ ಜನ, ಕೇವಲ ತಮ್ಮ ರಾಜಕೀಯ ಬೇಡಿಗಳನ್ನಷ್ಟೇ ಅಲ್ಲ, ತಮ್ಮ ಎಲ್ಲ ಪ್ರೀತಿ ಹಾಗು ಒಗ್ಗಟ್ಟಿನ (solidarity) ಬಂಧಗಳನ್ನೂ ಕಿತ್ತೆಸೆದು ಕೇವಲ ತಮಗಾಗಿ ಬದುಕುವುದು ಎಂದರೆ ಬದುಕನ್ನ ಕಡಿಮೆ ಬಾಳುವುದಲ್ಲ ಪೂರ್ತಿಯಾಗಿ ಬಾಳಿದಂತೆ ಎಂದು ನಂಬತೊಡಗಿದರೋ ಆಗ “ ಲಾಭ “ ದ ಅರ್ಥ “ ಭೌತಿಕ ವಸ್ತು ವಿಶೇಷಗಳ ಲಾಭ” (material, monetary profit) ಎಂದು ಬದಲಾಗಿಹೋಯಿತು. ಹಾಬ್ಸ್ ನ (Hobbes) ಪ್ರಕಾರ ಖುಶಿ ಎನ್ನುವುದು, ಒಂದು ಗಾಢ ಬಯಕೆಯಿಂದ (greed – Cupiditas ) ಇನ್ನೊಂದರತ್ತ ಮನುಷ್ಯನ ನಿರಂತರ ಪ್ರಗತಿ ; ಕೊನಪಕ್ಷ ಖುಶಿಯ ಭ್ರಮೆಗಾಗಿಯಾದರೂ ಡ್ರಗ್ಸ್ ತೆಗೆದುಕೊಳ್ಳುವಂತೆ La Mettrie ಶಿಫಾರಸ್ಸು ಮಾಡುತ್ತಾನೆ; ಡಿ ಸೇಡ್ ನಿಗೆ (de Sade), ಕ್ರೂರ ಪ್ರಚೋದನೆಗಳನ್ನು (cruel impuses) ತೃಪ್ತಿಪಡಿಸಿಕೊಳ್ಳುವುದು ನ್ಯಾಯಸಮ್ಮತ ಏಕೆಂದರೆ, ಅವು ಅಸ್ತಿತ್ವದಲ್ಲಿರುವುದು ಮತ್ತು ತೃಪ್ತಿಗಾಗಿ ಹಾತೊರೆಯುವುದು ವಾಸ್ತವ. ಈ ಎಲ್ಲ ಚಿಂತಕರೂ ಬೂರ್ಜ್ವಾ ವರ್ಗ ತನ್ನ ಕೊನೆಯ ವಿಜಯ ಸಾಧಿಸಿದ ಕಾಲಮಾನದಲ್ಲಿ ಬದುಕಿದ್ದವರು. ಯಾವವು ಸಿರಿವಂತ ಸಂಪನ್ನರಿಗೆ (aristocrat) ತಾತ್ವಿಕವಲ್ಲದ (unphilosophical) ಆಚರಣೆಗಳಾಗಿದ್ದವೋ ಅವು, ಬೂರ್ಜ್ವಾಗಳಿಗೆ ಸಿದ್ಧಾಂತಗಳಾದವು ಮತ್ತು ದಿನನಿತ್ಯದ ಆಚರಣೆಗಳಾದವು.

(ಮುಂದುವರೆಯುತ್ತದೆ…)


(ಎರಿಕ್ ಫ್ರಾಂ ಬಹುಚರ್ಚಿತ ಕೃತಿ To have or To Be ಇನ್ನು ಕನ್ನಡದಲ್ಲಿ ಪ್ರತಿ ಶನಿವಾರ ಮತ್ತು ಭಾನುವಾರ ಸರಣಿಯಾಗಿ ಅರಳಿಮರದಲ್ಲಿ ಪ್ರಕಟಗೊಳ್ಳಲಿದೆ. ಫ್ರಾಂ ಅವರ “The art of Loving” ಅನುವಾದ ಮಾಡಿದ್ದ ಚಿದಂಬರ ನರೇಂದ್ರ ಅವರು ಅರಳಿಮರ ಓದುಗರಿಗಾಗಿ ಈ ಸರಣಿಯನ್ನು ಅನುವಾದಿಸುತ್ತಿದ್ದಾರೆ. )

1 Comment

Leave a Reply