“ ಈ ಎಲ್ಲದರ ಉದ್ದೇಶ ಏನು? ” ಈ ಪ್ರಶ್ನೆ ನಿಮ್ಮೊಳಗೆ ಹುಟ್ಟಿದ ಕ್ಷಣದಲ್ಲಿಯೇ ನಿಮ್ಮ ಸುತ್ತಲಿನ ಎಲ್ಲವೂ ನಾಶವಾಗುತ್ತದೆ. ನನ್ನ ಮಾತನ್ನ ಗಮನವಿಟ್ಟು ಕೇಳಿ, “ಬದುಕಿಗೆ ಯಾವ ಉದ್ದೇಶವೂ ಇಲ್ಲ.” ಬದುಕು ತಾನೇ ಒಂದು ಉದ್ದೇಶ… । ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ಬಲವಾದ ಗಾಳಿಯಲ್ಲಿ ನರ್ತಿಸುತ್ತಿರುವ ಗುಲಾಬಿಯನ್ನು ಯಾವಾಗಲಾದರೂ ಗಮನಿಸಿದ್ದೀರಾ? ಆ ಗುಲಾಬಿಯನ್ನೂ ನೋಡಿ, ಅದು ಎಷ್ಟು ನಾಜೂಕು ಆದರೂ ಎಷ್ಟು ಶಕ್ತಿಶಾಲಿ, ಅದು ಮೃದು ಆದರೂ ಎಷ್ಟು ಬಿರುಸಿನಿಂದ ಗಾಳಿಯ ಜೊತೆ ಗುದ್ದಾಡುತ್ತಿದೆ, ಅದರ ಬದುಕು ಎಷ್ಟು ಕ್ಷಣಿಕ ಆದರೂ ಅದರಲ್ಲಿ ಎಷ್ಟು ಆತ್ಮವಿಶ್ವಾಸ. ಗುಲಾಬಿಯನ್ನೊಮ್ಮೆ ಸೂಕ್ಷ್ಮವಾಗಿ ಗಮನಿಸಿ, ಯಾವಾತ್ತಾದರೂ ನರ್ವಸ್ ಆಗಿರುವ ಗುಲಾಬಿಯನ್ನು ನೋಡಿದ್ದೀರಾ? ಎಷ್ಟು ಭರವಸೆ ಇದೆ ಗುಲಾಬಿಗೆ ಬದುಕಿನ ಕುರಿತಾಗಿ, ಅದು ಬದುಕು ಶಾಶ್ವತ ಎನ್ನುವಷ್ಟು ಆತ್ಮವಿಶ್ವಾಸದಿಂದ ಬೀಗುತ್ತಿದೆ. ತನ್ನ ಬದುಕು ಕ್ಷಣಿಕ ಎನ್ನುವ ಅರಿವು ಇರುವಾಗಲು ತಾನು ಶಾಶ್ವತ ಎಂದು ಬದುಕುತ್ತಿರುವ ಗುಲಾಬಿಯೊಳಗಿನ ಭರವಸೆಯನ್ನು ಗಮನಿಸಿ. ಗಾಳಿಯೊಡನೆ ನರ್ತಿಸುತ್ತ, ಪ್ರತಿಭಟಿಸುತ್ತ, ಪಿಸುಗುಡುತ್ತ, ಸ್ವತಃ ನಾಶವಾಗುತ್ತ, ತನ್ನ ಗಂಧದವನ್ನು ಗಾಳಿಯಲ್ಲಿ ಹರಡುತ್ತ, ಬದುಕುತ್ತಿರುವ ಗುಲಾಬಿಯನ್ನ ನೋಡಿ. ಆದರೆ ಇದೆಲ್ಲವನ್ನು ನೀವು ಗಮನಿಸುತ್ತಿರುವಾಗಲೂ ಪ್ರಶ್ನೆ ಕೇಳುತ್ತೀರಿ “ ಈ ಎಲ್ಲದರ ಉದ್ದೇಶ ಏನು?”
ನೀವು ಒಬ್ಬ ಹುಡುಗಿಯನ್ನ ಪ್ರೀತಿಸುತ್ತಿದ್ದೀರಿ, ಪ್ರಾಣಕ್ಕಿಂತ ಹೆಚ್ಚಾಗಿ ಅವಳನ್ನು ಇಷ್ಟಪಡುತ್ತೀರಿ, ಆದರೂ ನಿಮ್ಮೊಳಗೆ ಈ ಪ್ರಶ್ನೆ ಇದೆ, “ ಈ ಎಲ್ಲದರ ಉದ್ದೇಶ ಏನು? “. ನಿಮ್ಮ ಪ್ರಿಯತಮೆಯ ಕೈಯನ್ನು ಪ್ರೀತಿಯಿಂದ ಹಿಡಿದುಕೊಂಡಿದ್ದೀರಿ, ಅವಳ ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಿದ್ದೀರಿ ಆದರೂ ನಿಮ್ಮೊಳಗಿನ ಈ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ, “ ಈ ಎಲ್ಲದರ ಉದ್ದೇಶ ಏನು? ” ನಿಮ್ಮ ಪ್ರಿಯತಮೆಯ ಕೈ ಇನ್ನೂ ನಿಮ್ಮ ಕೈಯೊಳಗಿರುವಾಗಲೇ, ಇಂಥ ಪ್ರಶ್ನೆಯೊಂದು ನಿಮ್ಮೊಳಗೆ ಹುಟ್ಟಿತೆಂದರೆ, ನಿಮ್ಮ ಸುತ್ತಲಿನ ಬದುಕು ಮಾಯವಾಗುತ್ತದೆ, ನಿಮ್ಮ ಕೈ ತನ್ನ ಜೀವಂತಿಕೆಯನ್ನು ಕಳೆದುಕೊಳ್ಳುತ್ತದೆ.
“ ಈ ಎಲ್ಲದರ ಉದ್ದೇಶ ಏನು? ” ಈ ಪ್ರಶ್ನೆ ನಿಮ್ಮೊಳಗೆ ಹುಟ್ಟಿದ ಕ್ಷಣದಲ್ಲಿಯೇ ನಿಮ್ಮ ಸುತ್ತಲಿನ ಎಲ್ಲವೂ ನಾಶವಾಗುತ್ತದೆ. ನನ್ನ ಮಾತನ್ನ ಗಮನವಿಟ್ಟು ಕೇಳಿ, “ಬದುಕಿಗೆ ಯಾವ ಉದ್ದೇಶವೂ ಇಲ್ಲ.” ಬದುಕು ತಾನೇ ಒಂದು ಉದ್ದೇಶ; ಅದು ಯಾವ ಒಂದು ಉದ್ದೇಶದ ಸಾದನೆಗಾಗಿ ಇರುವ ದಾರಿಯಲ್ಲ, ಬದುಕುವುದನ್ನ ಬಿಟ್ಟರೆ ಬದುಕಿಗೆ ಬೇರೆ ಯಾವ ಉದ್ದೇಶವೂ ಇಲ್ಲ. ಆಕಾಶದಲ್ಲಿ ಹಾರಾಡುವ ಹಕ್ಕಿ, ಗಾಳಿಯೊಡನೆ ಕುಣಿದಾಡುತ್ತಿರುವ ಗುಲಾಬಿ, ಪ್ರತಿ ನಿತ್ಯ ಹುಟ್ಟುವ ಸೂರ್ಯ, ಪ್ರತಿ ರಾತ್ರಿ ಮಿನುಗುವ ನಕ್ಷತ್ರಗಳು, ಹೆಣ್ಣಿನ ಪ್ರೇಮದಲ್ಲಿ ಒಂದಾಗುವ ಗಂಡು, ಬೀದಿಯಲ್ಲಿ ಆಡುತ್ತಿರುವ ಮಗು…… ಯಾವ ಉದ್ದೇಶ ಇವಕ್ಕೆಲ್ಲ?
ಯಾವ ಉದ್ದೇಶ, ಯಾವ ಕಾರಣವೂ ಇಲ್ಲ. ಬದುಕು ತನ್ಮನ್ನು ತಾನು ಸಂಭ್ರಮಿಸುತ್ತಿದೆ, ತನ್ನನ್ನು ತಾನು ಖುಶಿಯಿಂದ ಅನುಭವಿಸುತ್ತಿದೆ. ಬದುಕಿನ ಶಕ್ತಿ ಉಕ್ಕಿ ಹರಿಯುತ್ತಿದೆ, ನರ್ತಿಸುತ್ತಿದೆ, ಯಾವ ಉದ್ದೇಶವೂ ಇಲ್ಲದೆ. ಇದು ಪ್ರದರ್ಶನ ಕಲೆ ಅಲ್ಲ, ಇದು ವ್ಯಾಪಾರ ವ್ಯವಹಾರ ಅಲ್ಲ. ಹೀಗಿರದೇ ಬದುಕಿಗೆ ಬೇರೆ ದಾರಿಯೇ ಇಲ್ಲ.
ಬದುಕು ಒಂದು ಪ್ರಣಯ, ಬದುಕು ಒಂದು ಕವಿತೆ, ಬದುಕು ಒಂದು ಸಂಗೀತ. ಇಂಥದೊಂದು ಅನನ್ಯಕ್ಕೆ , “ ಈ ಎಲ್ಲದರ ಉದ್ದೇಶ ಏನು? ” ಎನ್ನುವಂಥ ಮೂರ್ಖ ಪ್ರಶ್ನಗಳನ್ನು ಕೇಳಬೇಡಿ. ಇಂಥದೊಂದು ಪ್ರಶ್ನೆ ನಿಮ್ಮೊಳಗೆ ಹುಟ್ಟಿದ ಕ್ಷಣದಲ್ಲಿಯೇ, ನೀವು ಬದುಕಿನ ಜೊತೆಗಿನ ಬಾಂಧವ್ಯವನ್ನು ಕಳೆದುಕೊಳ್ಳುತ್ತೀರಿ. ಬದುಕನ್ನು ಫಿಲಾಸೊಫಿಕಲ್ ಪ್ರಶ್ನೆಗಳನ್ನು ಬಳಸಿ ಬೆಸೆಯುವುದು ಸಾಧ್ಯವಿಲ್ಲ. ಫಿಲಾಸೊಫಿಯ ಪ್ರಶ್ನೆಗಳನ್ನ ಪಕ್ಕಕ್ಕೆ ಎತ್ತಿಟ್ಟು ಬಿಡಿ. ಬದುಕನ್ನ ಸಂಭ್ರಮಿಸಿ.
ಒಬ್ಬ ಪ್ರಯಾಣಿಕ ಬೆಟ್ಟ ಗುಡ್ಡಗಳ ಮೂಲಕ ಹಾಯ್ದು ಹೋಗುವಾಗ, ವೃದ್ಧ ಸನ್ಯಾಸಿಯೊಬ್ಬ ಬಾದಾಮಿ ಗಿಡದ ಸಸಿ ನೆಡುತ್ತಿರುವುದನ್ನು ಗಮನಿಸಿದ. ಬಾದಾಮಿ ಸಸಿ ಬೆಳೆದು ಫಲ ನೀಡಲು ಸಾಕಷ್ಟು ವರ್ಷಗಳಾಗುತ್ತದೆ ಎನ್ನುವುದನ್ನು ಬಲ್ಲ ಪ್ರಯಾಣಿಕ, ವೃದ್ಧನನ್ನು ಪ್ರಶ್ನಿಸಿದ.
ಇಷ್ಟು ನಿಧಾನವಾಗಿ ಬೆಳೆಯುವ ಮರವನ್ನು ಯಾಕೆ ಬೆಳೆಸುತ್ತಿದ್ದೀಯಾ? ನಿನ್ನ ಆಯಸ್ಸು ಇನ್ನು ಎರಡು ಮೂರು ವರ್ಷವೂ ಇದ್ದ ಹಾಗಿಲ್ಲ.
ವೃದ್ಧ ಸನ್ಯಾಸಿ ಉತ್ತರಿಸಿದ.
ಬದುಕಲು ನನಗೆ ಎರಡು ಸಿದ್ಧಾಂತಗಳಿವೆ.
ಒಂದು, ನನ್ನ ಬದುಕು ಶಾಶ್ವತ. ಮತ್ತು ಎರಡನೇಯದು,
ಇವತ್ತು ನನ್ನ ಬದುಕಿನ ಕೊನೆಯ ದಿನ.