ಪ್ರೀತಿ ಮತ್ತು ಕಾನೂನು : ಓಶೋ ವ್ಯಾಖ್ಯಾನ

ಜನರಿಗೆ ಪ್ರೀತಿಗಿಂತ ಹೆಚ್ಚಾಗಿ ಕಾನೂನಿನ ಮೇಲೆ ನಂಬಿಕೆ. ಕಾನೂನು ಒಂದು ನಿರ್ದಿಷ್ಟ ಲೆಕ್ಕಾಚಾರ, ಇಲ್ಲಿ ಮುಂದಾಗಬಹುದಾದ್ದನ್ನ ಕ್ಯಾಲ್ಕುಲೇಟ್ ಮಾಡಬಹುದು ಹಾಗಾಗಿ ಈ ಗಣಿತ ನಂಬಬಹುದಾದದ್ದು. ಆದರೆ ಪ್ರೀತಿಯಲ್ಲಿ ಕೆಲವು ಅವಶ್ಯಕ ಮಾರ್ಗದರ್ಶಿ ಸೂತ್ರಗಳಿವೆಯೇ ಹೊರತು ನಿರ್ದಿಷ್ಟ ನಿಯಮಗಳಿಲ್ಲ… | ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ

ಪ್ರೇಮದ ನಿಯಮಗಳೇ ವಿಭಿನ್ನ.
ಪ್ರೇಮಿಗಳಿಗೆ,
ಅವರ ನಡುವಿನ ಸುಳ್ಳುಗಳು
ಬೇರೆಯವರು ಹೇಳಿದ ಸತ್ಯಕ್ಕಿಂತ ಹೆಚ್ಚು ಆಪ್ತ.
ಅವರ ನಡುವೆ
ಅಪರೂಪದ ಅಸಾಧ್ಯತೆಗಳು.
ಯಹೂದಿ,
ತನ್ನ ಪ್ರಾರ್ಥನಾ ಮಂದಿರದ ಒಳಗೆ
ಪ್ರವೇಶವನ್ನೆನೋ ಮಾಡುತ್ತಾನೆ
ಆದರೆ, ಕಾಣಿಸಿಕೊಳ್ಳುವುದು ಕಾಬಾದ
ದಿವ್ಯ ಸನ್ನಿಧಿಯಲ್ಲಿ.

ಕಹಿಯನ್ನು ಸಿಹಿಯಂತೆ ಚಪ್ಪರಿಸಲಾಗುವುದು,
ಆಯಾಸ, ಪ್ರೇಮದ ರೂಪ ಧರಿಸುವುದು.
ಗೆಳೆಯ, ವಿದಾಯ ಹೇಳಿದ ಕ್ಷಣದಲ್ಲಿಯೇ
*ಖಿದ್ರ ನ ಬುಗ್ಗೆಯಿಂದ ಸಾಂತ್ವನದ ಹರಿವು.

ಶೂನ್ಯ ಸಿದ್ಧಾಂತದಲ್ಲಿ,
ಒಂದು ನಿರಾಕರಣೆಗೆ ಸಾವಿರ ಸ್ವೀಕಾರಗಳ ಲೆಕ್ಕ,
ಅಪರಾಧದ ಜೇಬಿನಲ್ಲಿ ಕರುಣೆಯ ಕರ್ಚೀಫು.

ಈ ಹಾದಿಯನ್ನು ವರ್ಣಿಸುವುದು
ಸಾಧ್ಯದ ಮಾತಲ್ಲ.
ನನ್ನ ಮಾತು ಹೆಚ್ಚಾಯಿತೆನೋ,

ಶಮ್ಸ್ ತನ್ನನ್ನು ತಾನು ಸುರಿದುಕೊಂಡಾಗ
ನಾನು ಹೇಳುವ ಮಾತುಗಳಿಗೆಲ್ಲ
ಹೆಸರಿಲ್ಲದ ರುಚಿ.

~ ರೂಮಿ

*ಖಿದ್ರ : ಪ್ರವಾದಿ

ಕಾನೂನು ಸಮಾಜದ ಸುವ್ಯವಸ್ಥೆಗಾದರೆ, ಪ್ರೀತಿ ವೈಯಕ್ತಿಕ ಮತ್ತು ಆ ಕಾರಣವಾಗಿ ಸಮಾಜದ ಜೀವಂತಿಕೆಗೆ. ಕಾನೂನು ನೀವು ಇತರರೊಡನೆ ಹೇಗೆ ವರ್ತಿಸಬೇಕು ಎನ್ನುವುದರ ಕುರಿತಾಗಿದ್ದರೆ, ಪ್ರೀತಿ ಸ್ವತಃ ನಿಮ್ಮ ಜೊತೆ ನೀವು ಹೇಗೆ ವ್ಯವಹರಿಸಬೇಕು ಮತ್ತು ಆ ಮೂಲಕ ನೀವು ಇತರರೊಡನೆ ಹೇಗೆ ಬಾಳಬೇಕು ಎನ್ನುವ ಕುರಿತಾದದ್ದು. ಪ್ರೀತಿ ನಿಮ್ಮ ಅಂತರಂಗದ ಅರಳುವಿಕೆಯಾದರೆ, ಕಾನೂನು ಬಹಿರಂಗದ ಪರಫಾರ್ಮನ್ಸ್. ನೀವು ಸಮಾಜದಲ್ಲಿ ಜನರೊಡನೆ ಕೂಡಿ ಬದುಕುತ್ತಿರುವಿರಾದ್ದರಿಂದ ಕಾನೂನನ್ನು ಪಾಲಿಸಲೇಬೇಕು, ಆದರೆ ಇದಷ್ಟೇ ಸಾಕಾಗುವುದಿಲ್ಲ. ಇದು ಒಳ್ಳೆಯದೇನೋ ಹೌದು ಆದರೆ ಇದಷ್ಟೇ ಸಾಕಾಗುವುದಿಲ್ಲ. ಮನುಷ್ಯರು ಕೇವಲ ಕಾನೂನು ಪರಿಪಾಲಕರಾಗಿದ್ದರೆ ಅವರು ಒಳ್ಳೆಯ ನಾಗರೀಕರೇನೋ ಹೌದು ಆದರೆ ಅವರು ಜೀವಂತಿಕೆಯನ್ನು ಕಳೆದುಕೊಂಡವರು. ಕಾನೂನು ಸಮಾಜದ ಫೌಂಡೇಷನ್ ಆಗಬಹುದು ಆದರೆ ಅದು ಸ್ವತಃ ತಾನೇ ಇಡೀ ಕಟ್ಟಡವಾಗಲಾರದು. ನೀವು ಕಾನೂನಿನ ಪ್ರಕಾರ ಬದುಕಬಹುದು ಆದರೆ ನೀವು ಕಾನೂನಿನ ಕಾರಣವಾಗಿ ಬದುಕಲಾರಿರಿ, ಇಲ್ಲಿ ಉಸಿರಾಟ ಸಾಧ್ಯ ಆದರೆ ಬದುಕಲು ಮಾತ್ರ ಪ್ರೀತಿ ಬೇಕೇ ಬೇಕು.

ಮೋಸೆಸ್ ತಾನು ಏನು ಆಗಬೇಕೆಂದು ಬಯಸಿದ್ದನೋ ಆ ಪೂರ್ಣ ರೂಪ ಜೀಸಸ್. ಮೋಸೆಸ್ ಆರಂಭ ಮಾಡಿದ್ದನ್ನ ಜೀಸಸ್ ಪೂರ್ಣಗೊಳಿಸಿದ, ಆದರೆ ಯಹೂದಿಗಳು ಜೀಸಸ್ ನ ನಿರಾಕರಿಸಿದರು. ಮಾರ್ಕ್ಸ್ ನಿಗೆ ಈ ಜಗತ್ತಿನಲ್ಲಿ ಇನ್ನೂ ಬುದ್ಧ ಮತ್ತು ಜೀಸಸ್ ರ ಅವಶ್ಯಕತೆಯಿದೆ. ಆದರೆ ಇಂಥ ಮಾರ್ಕ್ಸ್ ನ ಕಮ್ಯುನಿಸ್ಟರು ನಿರಾಕರಿಸುತ್ತಾರೆ. ಅವರು ನಿಯಮಗಳ ಗುಲಾಮರು, ಕಾನೂನುಪಾಲಕರು. ಆಗ ಪ್ರೀತಿ, ಕಾನೂನಿಗೆ ವಿರುದ್ಧವಾದದ್ದು ಎಂದು ಅನಿಸಲು ಶುರುವಾಗುತ್ತದೆ. ಕಾನೂನು ಬೇಕು ಆದರೆ ಪ್ರೀತಿಯನ್ನು ಸಾಧ್ಯಮಾಡಲಿಕ್ಕೆ ಮಾತ್ರ. ಜನ ಶಾಂತಿ ಇಂದ ಬದುಕಲು ಮತ್ತು ಪ್ರೀತಿಯನ್ನು ಆಚರಿಸಲು ಕಾನೂನಿನ ಅವಶ್ಯಕತೆ ಖಂಡಿತ ಇದೆ. ಕಾನೂನು ತಾನೇ ಒಂದು ಗುರಿ ಅಲ್ಲ, ಅದು ಪ್ರೀತಿಯನ್ನು ಸಾಧಿಸಲು ಸಹಾಯ ಮಾಡುವ ದಾರಿ ಮಾತ್ರ. ಆದರೆ ಜನ ಕಾನೂನನ್ನು ಬಹಳ ಸಿರೀಯಸ್ಸಾಗಿ ತೆಗೆದುಕೊಂಡು ಕಟ್ಟುನಿಟ್ಟಾಗಿ ಅದರ ಗುಲಾಮರಾದಾಗ, ಪ್ರೀತಿ ಕಾನೂನಿಗೆ ವಿರುದ್ಧವಾದದ್ದು ಎಂದು ಅನಿಸಲು ಶುರುವಾಗುತ್ತದೆ.

ಜನರಿಗೆ ಪ್ರೀತಿಗಿಂತ ಹೆಚ್ಚಾಗಿ ಕಾನೂನಿನ ಮೇಲೆ ನಂಬಿಕೆ. ಕಾನೂನು ಒಂದು ನಿರ್ದಿಷ್ಟ ಲೆಕ್ಕಾಚಾರ, ಇಲ್ಲಿ ಮುಂದಾಗಬಹುದಾದ್ದನ್ನ ಕ್ಯಾಲ್ಕುಲೇಟ್ ಮಾಡಬಹುದು ಹಾಗಾಗಿ ಈ ಗಣಿತ ನಂಬಬಹುದಾದದ್ದು. ಆದರೆ ಪ್ರೀತಿಯಲ್ಲಿ ಕೆಲವು ಅವಶ್ಯಕ ಮಾರ್ಗದರ್ಶಿ ಸೂತ್ರಗಳಿವೆಯೇ ಹೊರತು ನಿರ್ದಿಷ್ಟ ನಿಯಮಗಳಿಲ್ಲ. ಇಲ್ಲಿ 1 + 1 = ಹನ್ನೊಂದು ಕೂಡ ಆಗಬಲ್ಲದು. ಆದ್ದರಿಂದಲೇ ಜನರಿಗೆ ಪ್ರೀತಿಯೆಂದರೆ ಗಾಬರಿ, ಇದು ಯಾವ ಅಪಾಯಕ್ಕೆ ತಮ್ಮನ್ನ ಕರೆದೊಯ್ಯುತ್ತದೆಯೋ ಎನ್ನುವ ಆತಂಕ. ಪ್ರೀತಿ ಕಾವ್ಯತ್ಮಕ, ಇಲ್ಲಿ ಸಾಗರವನ್ನು ಅಂಗೈಯಲ್ಲಿ ಹಿಡಿಯಬಹುದು, ಒಂದು ಹನಿ ನೀರಿನಲ್ಲಿ ಮುಳುಗಿ ಹೋಗಿಬಿಡಬಹುದು ಕೂಡ. ಆದ್ದರಿಂದಲೇ ಪ್ರೀತಿಯ ಬಗ್ಗೆ ಎಲ್ಲರಿಗೂ ಭಯ. ನೆನಪಿಡಿ ಖಂಡಿತ ಕಾನೂನು ಪಾಲಿಸಿರಿ ಆದರೆ ಅಲ್ಲೇ ನಿಂತುಬಿಡಬೇಡಿ ಏಕೆಂದರೆ ಅದು ನಿಮ್ಮ ಗುರಿ ಅಲ್ಲ, ಕೇವಲ ದಾರಿ ಮಾತ್ರ. ನೀವು ಸಮಾಜದಲ್ಲಿ ಕೂಡಿ ಬದುಕಬೇಕಾದವರು. ಕೆಲವು ನಿಯಮಗಳನ್ನು ಪಾಲಿಸಲೇಬೇಕಾದದ್ದು ನಿಮ್ಮ ಕರ್ತವ್ಯ. ಆದರೆ ಅವು ಕೇವಲ ನಿಯಮಗಳು ಮಾತ್ರ, ಆತ್ಯಂತಿಕ ಅಲ್ಲ, ಅವುಗಳಲ್ಲಿ ಯಾವ ದೈವಿಕತೆ ಇಲ್ಲ.

Let me tell you this:

Ten Commandments ನ ರೂಪಿಸಿದ್ದು ಮೋಸೆಸ್. ಅವು ಭಗವಂತನಿಂದ ರೂಪಿತವಾದ ನಿಯಮಗಳಲ್ಲ. ಈ Ten Commandments ಮನುಷ್ಯ ತಾನು ಆಡಬಯಸುತ್ತಿರುವ ಆಟದ ನಿಯಮಗಳು ಮಾತ್ರ. ಈಗ ಆಸ್ತಿ ವೈಯಕ್ತಿಕ ಸ್ವಾಮ್ಯ, ಆದದ್ದರಿಂದ “ ಕಳ್ಳತನ ಮಾಡಬಾರದು” ಎನ್ನುವುದು ಒಂದು ವ್ಯಾಲಿಡ್ ನಿಯಮ. ಆದರೆ ನಾಳೆ ಆಟದ ಬಗೆ ಚೇಂಜ್ ಆಗಿ “ ಆಸ್ತಿ ಎಲ್ಲರಿಗೂ ಸೇರಿದ್ದು” ಎಂದು ಆದಾಗ, “ ಕಳ್ಳತನ ಮಾಡಬಾರದು” ಎನ್ನುವುದು ನಿಯಮವೇ ಅಲ್ಲ. ಅಥವಾ ಮುಂದೆ ಯಾವಾಗೋ ಜಗತ್ತು ಸಂಪತ್ತಿನಿಂದ ತುಂಬಿ ತುಳುಕಿದರೆ, ಎಲ್ಲರೂ ಸಮಾನ ಸ್ಥಿತಿವಂತರಾದರೆ, ಕಳ್ಳತನ ಎನ್ನುವುದು ಇರುವುದೇ ಇಲ್ಲ. ಆಗ Ten Commandments ಗಳ ಅವಶ್ಯಕತೆಯೇ ಇಲ್ಲ. ಎಲ್ಲಿಯವರೆಗೆ ಅಸಮಾನತೆ ಇದೆಯೋ ಅಲ್ಲಿಯವರೆಗೆ ಮಾತ್ರ ಕಳ್ಳತನ ಮತ್ತು, ಕಳ್ಳತನ ಮಾಡಬಾರದು ಎನ್ನುವುದು ಕಾನೂನು. Ten Commandments ಮನುಷ್ಯರ ನಿರ್ಮಿತಿ. ಮೋಸೆಸ್ ಹುಟ್ಟುಹಾಕಿದ್ದು ಕಾನೂನು, ಆದರೆ ಜೀಸಸ್ ಆಚರಿಸಿದ್ದು ಸತ್ಯ, ಘನತೆ ಮತ್ತು ಪ್ರೀತಿ. ಕಾನೂನು ಮೈಂಡ್ ನ ನಿರ್ಮಿತಿಯಾದರೆ ಪ್ರೀತಿ ಭಂಗವಂತನ ಸೃಷ್ಟಿ.

ಪ್ರೀತಿ ಕಾರಣವಾಗಿ ಘನತೆ ಹುಟ್ಟಿಕೊಳ್ಳುತ್ತದೆ, ಸತ್ಯ ಅನಾವರಣವಾಗುತ್ತದೆ. ಜೀಸಸ್ ನ ಅರ್ಥಮಾಡಿಕೊಳ್ಳುವುದೆಂದರೆ ಪ್ರೀತಿ ಎನ್ನುವ ವಿದ್ಯಮಾನವನ್ನು ಅರ್ಥಮಾಡಿಕೊಳ್ಳುವುದು, ಘನತೆಯ ಸೂಕ್ಷ್ಮಗಳನ್ನು ಅರ್ಥಮಾಡಿಕೊಳ್ಳುವುದು, ಸತ್ಯದ ತಿರುಳನ್ನು ಅರ್ಥಮಾಡಿಕೊಳ್ಳುವುದು. ಒಮ್ಮೆ ಸತ್ಯ ದಕ್ಕಿತೆಂದರೆ, ಅದು ನಿಮ್ಮನ್ನು ಎಲ್ಲ ಬಂಧನಗಳಿಂದ ಬಿಡುಗಡೆ ಮಾಡುತ್ತದೆ. ಇದು ನಿಜವಾದ ಮುಕ್ತಿ, ಇದು ನಿಜವಾದ ಬಿಡುಗಡೆ, ಇದರ ಹೊರತಾಗಿ ಬೇರೆ ಯಾವ ನಿರ್ವಾಣವೂ ಇಲ್ಲ.


Source: ~ Osho | Come Follow To You Vol 1 And the Word was Made Flesh

Leave a Reply