‘ನಾನು ಯಾರು?’ ರಮಣರೊಂದಿಗೆ ಪ್ರಶ್ನೋತ್ತರ

ಶ್ರೀ ರಮಣ ಮಹರ್ಷಿಗಳು ತಮ್ಮ ಸಂದರ್ಶಕರು ಮತ್ತು ಶಿಷ್ಯರ ಪ್ರಶ್ನೆಗಳಿಗೆ ನೀಡಿದ ಉತ್ತರಗಳು ಇಲ್ಲಿವೆ. ಮಹರ್ಷಿಗಳ ಆರಂಭಿಕ ಶಿಷ್ಯರಲ್ಲಿ ಒಬ್ಬರಾದ ಶಿವಪ್ರಕಾಶಂ ಪಿಳ್ಳೈ ಇದನ್ನು ಸಂಕಲಿಸಿದ್ದರು. ಈ ಕೃತಿಯನ್ನು ಕನ್ನಡಕ್ಕೆ ತಂದವರು ಡಾ।। ಕೆ.ಎ.ನಾರಾಯಣನ್.

ಸಕಲ ಜೀವಿಗಳೂ ದುಃಖ ಎನ್ನುವುದಿಲ್ಲದೆ ಯಾವಾಗಲೂ ಸುಖವಾಗಿರಬೇಕೆಂದು ಬಯಸುತ್ತವೆ. ಪ್ರತಿಯೊಬ್ಬರಿಗೂ ತಮ್ಮಲ್ಲಿಪರಮ ಪ್ರೀತಿ ಇರುವುದು ಕಂಡುಬರುತ್ತಿದೆ. ಪ್ರೀತಿಗೆ ಸುಖವೇ ಕಾರಣವಾಗಿರುವುದರಿಂದ ಮನಸ್ಸಿಲ್ಲದ ಸುಷುಪ್ತಿ (ಗಾಢವಾದ ನಿದ್ರೆ) ಯಲ್ಲಿ ಪ್ರತಿ ದಿವಸವೂ ಅನುಭವಿಸುತ್ತಿರುವ ತನ್ನ ನಿಜಸ್ವಭಾವವಾದ ಆ ಸುಖವನ್ನು ಪಡೆಯಲು ತನ್ನನ್ನು ತಾನು ಅರಿತುಕೊಳ್ಳುವುದು ಅತ್ಯವಶ್ಯಕ. ಇದಕ್ಕೆ ‘ನಾನು ಯಾರು?’ಎನ್ನುವ ಜ್ಞಾನ ವಿಚಾರವೇ ಪ್ರಮುಖವಾದ ಸಾಧನೆ.

ನಾನು ಯಾರು?

ಮಹರ್ಷಿ: ಸಪ್ತ ಧಾತು (ಮಜ್ಜೆ ಮೂಳೆ, ಕೊಬ್ಬು ಮಾಂಸ, ರಕ್ತ, ಒಳಚರ್ಮ, ಹೊರಚರ್ಮ) ಗಳಿಂದ ಕೂಡಿರುವ ಸ್ಥೂಲ ಶರೀರವು ನಾನಲ್ಲ ಶಬ್ದ, ಸ್ಪರ್ಶ, ರೂಪ, ರಸ ಮತ್ತು ಗಂಧಗಳೆನ್ನುವ ಪಂಚೆ ವಿಷಯಗಳನ್ನು ಪ್ರತ್ಯೇಕ ಪ್ರತ್ಯೇಕವಾಗಿ ಅರಿಯುವ ಪಂಚೆ ಜ್ಞಾನೇಂದ್ರಿಯಗಳೂ ನಾನಲ್ಲ. ವಾಕ್ಕು, ಕೈಕಾಲುಗಳು, ಗುದೋಪಸ್ಥಗಳೆಂಬ ಪಂಚ ಕರ್ಮೇಂದ್ರಿಯಗಳೂನಾನಲ್ಲ ಪ್ರಾಣ, ಅಪಾನ, ವ್ಯಾನ, ಉದಾನ, ಸಮಾನವೆಂಬ ಪಂಚ ಪ್ರಾಣಗಳೂ ನಾನಲ್ಲ. ಸಂಕಲ್ಪಾತ್ಮಕ (ಆಲೋಚನಾತ್ಮಕ)ವಾದ ಮನಸ್ಸೂ ನಾನಲ್ಲ. ಸರ್ವ ವಿಷಯ (ಪದಾರ್ಥ) ಗಳೂ ಸರ್ವ ವೃತ್ತಿಗಳೂ ಇಲ್ಲದೆ ಕೇವಲ ವಿಷಯ ವಾಸನೆಯಿಂದ ಕೂಡಿರುವ ಅಜ್ಞಾನವೂ ನಾನಲ್ಲ

ಇವೆಲ್ಲವೂ ನಾನಲ್ಲ ಎಂದಾದರೆ ನಾನು ಯಾರು?
ಮಹರ್ಷಿ: ಮೇಲೆ ತಿಳಿಸಿರುವುದೆಲ್ಲವನ್ನೂ ನಾನಲ್ಲ (ನೇತಿ, ನೇತಿ) ಎಂದು ಅಲ್ಲಗಳೆದ ಬಳಿಕ ಉಳಿಯುವ ಶುದ್ಧ ಅರಿವೇ ನಾನು.

ಈ ಅರಿವಿನ ಸ್ವರೂಪವೇನು?
ಮಹರ್ಷಿ: ಈ ಅರಿವಿನ ಸ್ವರೂಪವೇ ಸಚ್ಚಿದಾನಂದ (ಸತ್‌, ಚಿತ್‌, ಆನಂದ).

ಸ್ವರೂಪ ದರ್ಶನವು (ಆತ್ಮಸಾಕ್ಟಾತ್ಕಾರವು) ಯಾವಾಗ ಲಭಿಸುತ್ತದೆ?
ಮಹರ್ಷಿ: ತೋರುತ್ತಿರುವ ಪ್ರಪಂಚವು ಇಲ್ಲವಾದಾಗ (ನಾನು ಶರೀರದಲ್ಲಿದ್ದೇನೆ. ಪ್ರಪಂಚವು ನನ್ನಿಂದ ಹೊರಗಿದೆ ಎಂಬ ಜಗದ್ ದೃಷ್ಟಿಯು ನಿವಾರಣೆಯಾದಾಗ) ಸ್ವರೂಪ ದರ್ಶನವು ಆಗುತ್ತದೆ.

ಪ್ರಪಂಚವು ಇದ್ದರೂ (ಸತ್ಯವೆಂದು ತೋರುತ್ತಿದ್ದರೂ) ಸ್ವರೂಪ ದರ್ಶನವು ಸಾಧ್ಯವಿಲ್ಲವೇ?
ಮಹರ್ಷಿ: ಸಾಧ್ಯವಿಲ್ಲ

ಏಕೆ?
ಮಹರ್ಷಿ: ನೋಡುವವನು (ದೃಕ್‌) ಮತ್ತು ನೋಡಲ್ಪಡುತ್ತಿರುವುದು (ದೃಶ್ಯ) ಇವೆರಡೂ ಹಗ್ಗ ಮತ್ತು ಹಾವಿನ ದೃಷ್ಟಾಂತದಂತೆ ಇರುತ್ತವೆ. ಹಗ್ಗದಲ್ಲಿ ಕಲ್ಪಿತವಾದ ಹಾವಿನ ಜ್ಞಾನವು (ಅಜ್ಞಾನ) ಹೋದ ಹೊರತು ಅದಕ್ಕೆ ಆಶ್ರಯವಾದ ಹಗ್ಗದ ಜ್ಞಾನವು ಆಗದಿರುವಂತೆ ಕಲ್ಪಿತವಾದ ಜಗದ್ದೃಷ್ಟಿಯು ಹೋದ ಹೊರತು ಅದಕ್ಕೆ ಆಶ್ರಯವಾದ ಸ್ವರೂಪ ದರ್ಶನವು ಸಾಧ್ಯವಾಗದು.

ತೋರುತ್ತಿರುವ ಪ್ರಪಂಚವು ಇಲ್ಲವಾಗುವುದು ಯಾವಾಗ?
ಮಹರ್ಷಿ: ಎಲ್ಲ ಅರಿವಿಗೂ ಮತ್ತು ಎಲ್ಲ ಕಾರ್ಯಗಳಿಗೂ ಕಾರಣವಾದ ಮನಸ್ಸು ಅಡಗಿದಾಗ (ಲಯವಾದಾಗ)ಲೇ ಪ್ರಪಂಚವೂ ಇಲ್ಲವಾಗುವುದು.


(ಮುಂದುವರಿಯುವುದು…)

1 Comment

Leave a Reply