ಈ ಪುಸ್ತಕದ ಮುಖ್ಯ ಒತ್ತಾಸೆ, ಬದುಕಿನ ಎರಡು ಮೂಲಭೂತ ಕ್ರಮಗಳಾದ “ ಹೊಂದುವ ವಿಧಾನ” ಮತ್ತು “ಆಗುವ ವಿಧಾನ” ಗಳನ್ನು ವಿಷ್ಲೇಷಣೆಗೆ ಒಳಪಡಿಸುವುದು. ಮೊದಲಿನ ಅಧ್ಯಾಯದಲ್ಲಿ ನಾನು ಈ ಎರಡು ವಿಧಾನಗಳ ನಡುವಿನ ವ್ಯತ್ಯಾಸಗಳ ಕುರಿತಾದ ನನ್ನ “ಮೊದಲ ನೋಟಗಳನ್ನು” ಪ್ರಸ್ತುತ ಪಡಿಸಲಿದ್ದೇನೆ. ಎರಡನೇಯ ಅಧ್ಯಾಯ ಈ ವ್ಯತ್ಯಾಸಗಳನ್ನು, ದೈನಂದಿನ ಅನುಭವಗಳ ಮೂಲಕ ಆಯ್ದುಕೊಂಡ, ಓದುಗರು ಸುಲಭವಾಗಿ ತಮ್ಮ ವೈಯಕ್ತಿಕ ಅನುಭವಗಳೊಂದಿಗೆ ಸಮೀಕರಿಸಬಹುದಾದ ಉದಾಹರಣೆಗಳೊಂದಿಗೆ ನಿವೇದಿಸುತ್ತದೆ. ಅಧ್ಯಾಯ ಮೂರು, ಹಳೆ ಮತ್ತು ಹೊಸ ಒಡಂಬಡಿಕೆಗಳು ಮತ್ತು Master Eckhart ಹೇಳುವ “ಹೊಂದುವುದು ಮತ್ತು ಆಗುವುದರ” ಕುರಿತಾದ ನೋಟಗಳನ್ನು ಸಾದರಪಡಿಸುತ್ತದೆ. ನಂತರದ ಅಧ್ಯಾಯಗಳು ಅತ್ಯಂತ ಕಠಿಣ ಸಮಸ್ಯೆಯೊಂದನ್ನ ನಿರ್ವಹಿಸುತ್ತವೆ… | ಎರಿಕ್ ಫ್ರಾಮ್; ಕನ್ನಡಕ್ಕೆ: ಚಿದಂಬರ ನರೇಂದ್ರ
ಹಿಂದಿನ ಭಾಗ ಇಲ್ಲಿ ಓದಿ… https://aralimara.com/2023/03/04/fromm-2/
Is there an Alternative to Catastrophe?
ಇಲ್ಲಿಯವರೆಗೆ ಮೇಲೆ ಪ್ರಸ್ತುತ ಪಡಿಸಿರುವ ಎಲ್ಲ ಮಾಹಿತಿ ಪಬ್ಲಿಶ್ ಆಗಿರುವಂಥದು ಮತ್ತು ಸಾಕಷ್ಟು ಪ್ರಚಾರ ಪಡೆದುಕೊಂಡಿರುವಂಥದು. ಆದರೆ ನಂಬಲು ಅಸಾಧ್ಯದ ವಾಸ್ತವವೆಂದರೆ, ಇಲ್ಲಿಯವರೆಗೆ ವಿಧಿಯ ಕೊನೆಯ ತೀರ್ಪು ಎಂದನಿಸುವಂಥ ಈ ಸಂಗತಿಯನ್ನು ತಪ್ಪಿಸುವ ಯಾವ ಪ್ರಯತ್ನಗಳನ್ನೂ ಮಾಡಲಾಗಿಲ್ಲ. ಪರಿಸ್ಥಿತಿ ಹೀಗಿರುವಾಗ, ನಮ್ಮ ಖಾಸಗಿ ಬದುಕಿನಲ್ಲಿ ಹುಚ್ಚು ಮನುಷ್ಯರನ್ನು ಬಿಟ್ಟರೆ ಬೇರೆ ಎಲ್ಲರೂ ಎಲ್ಲಿ ಇಂಥದೊಂದು ಪ್ರಯತ್ನ ತಮ್ಮ ಅಸ್ತಿತ್ವಕ್ಕೆ ಅಪಾಯವನ್ನುಂಟು ಮಾಡುತ್ತದೆಯೋ ಎಂದು ನಿಷ್ಕ್ರಿಯರಾಗಿ ದೂರ ನಿಂತಿದ್ದರೆ, ಸಾರ್ವಜನಿಕ ವ್ಯವಹಾರಗಳ ಜವಾಬ್ದಾರಿ ಹೊತ್ತವರು ಈ ಕುರಿತು ಪ್ರ್ಯಾಕ್ಟಿಕಲೀ ಯಾವ ಪ್ರಯತ್ನವನ್ನೂ ಮಾಡುತ್ತಿಲ್ಲ, ಮತ್ತು ಇವರಿಗೆ ತಮ್ಮ ನಿಯತಿಯನ್ನು ಒಪ್ಪಿಸಿ ಸುಮ್ಮನಾಗಿಬಿಟ್ಟಿರುವ ಬಾಕಿ ಜನ ಅವರ ನಿಷ್ಕ್ರಿತೆಯನ್ನು ನೋಡಿಯೂ ನೋಡದವರಂತೆ ತಮ್ಮ ಪಾಡಿಗೆ ತಾವು ಇದ್ದು ಬಿಟ್ಟಿದ್ದಾರೆ.
ಬದುಕುಳಿಯುವ (survival) ಉದ್ದೇಶವನ್ನು ಸದಾ ಎಚ್ಚರಿಕೆಯಿಂದ ಕಾಯ್ದುಕೊಂಡು ಬಂದಿರುವ ನಮ್ಮೊಳಗಿನ ಬಲವಾದ ಪ್ರವೃತ್ತಿಗಳು (instincts) ಯಾಕೆ ನಮ್ಮನ್ನು ಈ ಪ್ರಯತ್ನದ ದಾರಿಯಲ್ಲಿ ಮುನ್ನಡೆಸಲು ಮತ್ತು ಪ್ರೇರೇಪಿಸಲು ವಿಫಲವಾಗಿವೆ? ಈ ಕುರಿತು ನಾವು ಕೊಡಬಹುದಾದ ಎಲ್ಲರಿಗೂ ಗೊತ್ತಿರುವಂಥ ಒಂದು ಸ್ಪಷ್ಟ ವಿವರಣೆಯೆಂದರೆ, ನಮ್ಮ ಸಾರ್ವಜನಿಕ ಬದುಕಿನ ಹೊಣೆ ಹೊತ್ತಿರುವ ನಾಯಕರು, ತಾವು ಇಂಥದೊಂದು ದುರಂತವನ್ನು ನಿವಾರಿಸುವ ಪ್ರಯತ್ನ ಮಾಡುತ್ತಿದ್ದೇವೆ ಎಂದು ತೋರಿಸಿಕೊಳ್ಳುವ ಹಲವಾರು ಕ್ರಮಗಳನ್ನು ಕೈಗೆತ್ತಿಕೊಳ್ಳುತ್ತಾರೆಯೇನೋ ಹೌದು, ಆದರೆ ಈ ಕೊನೆಯಿಲ್ಲದ ಸಮಾವೇಶಗಳು, ಅಲ್ಲಿ ಕೈಗೊಂಡಿರುವ ನಿರ್ಣಯಗಳು, ಒಪ್ಪಂದದ ಮಾತುಕತೆಗಳು ಇವೆಲ್ಲ ಕೇವಲ ನಾವು ಸಮಸ್ಯೆಗಳನ್ನು ಗುರುತಿಸಿದ್ದೇವೆ ಮತ್ತು ಇವುಗಳ ಪರಿಹಾರಕ್ಕೆ ಕ್ರಮ ಕೈಗೊಳ್ಳುತ್ತಿದ್ದೇವೆ ಎನ್ನುವ ಅನಿಸಿಕೆಯನ್ನ ಮಾತ್ರ ನಮ್ಮಲ್ಲಿ ಮೂಡಿಸುತ್ತವೆ. ಆದರೆ ಯಾವ ನಿಜವಾದ ಮಹತ್ವದ್ದೂ ಘಟಿಸುವುದಿಲ್ಲ ; ಈ ನಾಯಕರು ಮತ್ತು ಅವರ ಹಿಂಬಾಲಕರೆನಿಸಿಕೊಂಡ ಎಲ್ಲರೂ ತಮ್ಮ ಪ್ರಜ್ಞೆಯನ್ನು ಮತ್ತು ಬದುಕುವ ಆಸ್ಥೆಯನ್ನು ನಿಷ್ಕ್ರಿಯವಾಗಿಸಿಕೊಂಡು (anesthetize their consciences) ತಮಗೆ ಸರಿಯಾದ ದಾರಿ ಗೊತ್ತಿದೆ ಮತ್ತು ನಾವು ಈ ದಿಕ್ಕಿನಲ್ಲಿ ಸಾಗುತ್ತಿದ್ದೇವೆ ಎನ್ನುವ ಭಾವವನ್ನು ಮಾತ್ರ ಎಲ್ಲರಲ್ಲೂ ಮೂಡಿಸುತ್ತಾರೆ.
ಇನ್ನೊಂದು ವಿವರಣೆ ; ವ್ಯವಸ್ಥೆ ಹುಟ್ಟುಹಾಕುವ ಸ್ವಾರ್ಥ, ಈ ನಾಯಕರು ತಮ್ಮ ವೈಯಕ್ತಿಕ ಯಶಸ್ಸು ತಮ್ಮ ಸಾಮಾಜಿಕ ಜವಾಬ್ದಾರಿಗಿಂತ ಹೆಚ್ಚು ಮಹತ್ವದ್ದು ಎಂದು ಮೌಲ್ಯೀಕರಣ ಮಾಡಲು ಪ್ರೇರೆಪಿಸುತ್ತದೆ ಎನ್ನುವುದು. ಈ ರಾಜಕೀಯ ನಾಯಕರು ಮತ್ತು ಬಿಸನೆಸ್ ಮ್ಯಾನ್ ಗಳು ತೆಗೆದುಕೊಳ್ಳುವ ನಿರ್ಧಾರಗಳು ಕೇವಲ ಅವರ ವೈಯಕ್ತಿಕ ಲಾಭಕ್ಕಾಗಿ ಎಂದು ಅನಿಸುತ್ತದೆಯಾದರೂ, ಅದೇ ಸಮಯಕ್ಕೆ ಅವು, ಸಮಾಜದ ಒಳಿತಿಗೆ ಅಪಾಯಕಾರಿ ಮತ್ತು ನಾಶಕ್ಕೆ ಕಾರಣಗಳೂ ಆಗಿರುತ್ತವೆ. ಹೌದು ಸ್ವಾರ್ಥ, ಇವತ್ತಿನ ಪ್ರ್ಯಾಕ್ಟಿಕಲ್ ನೈತಿಕತೆಯ ಒಂದು ಪಿಲ್ಲರ್ ಎನ್ನುವುದು ನಿಜವಾದರೆ, ಯಾರಾದರೂ ಯಾಕೆ ತಮ್ಮ ವೈಯಕ್ತಿಕ ಯಶಸ್ಸಿಗಿಂತ ಸಮಾಜದ ಹಿತ ಮುಖ್ಯ ಎಂದು ತಿಳಿಯುತ್ತಾರೆ? ಆದರೆ ಅವರಿಗೆ ಗೊತ್ತಿರದೇ ಇರಬಹುದಾದ ಸಂಗತಿಯೆಂದರೆ, ಈ ಸ್ವಾರ್ಥ ( ಅಧೀನತೆಯಂತೆ – like submission) ಜನರನ್ನ ಮೂರ್ಖರನ್ನಾಗಿಸುತ್ತದೆ, ಅವರ ವೈಯಕ್ತಿಕ ಹಿತಾಸಕ್ತಿಗಳ ಹುಟುಕಾಟದಲ್ಲಿ, ಅವರ ಸ್ವಂತದ ಬದುಕಿನ ಮತ್ತು ಅವರ ಕುಟುಂಬದ ಸದಸ್ಯರ ಬದುಕಿನ ಹಿತಾಸಕ್ತಿಗಳ ವಿಷಯದಲ್ಲಿ ಕೂಡ (cf. J. Piaget, The moral judgement of the child). ಅದೇ ಕಾಲಕ್ಕೆ ಸಾರ್ವಜನಿಕರು ಕೂಡ, ತಮ್ಮ ಖಾಸಗಿ ವ್ಯವಹಾರಗಳ ಕುರಿತಾಗಿ ಎಷ್ಟು ಸ್ವಾರ್ಥಪರರಾಗಿರುತ್ತಾರೆಂದರೆ, ಅವರು ತಮ್ಮ ವೈಯಕ್ತಿಕ ಲೋಕವನ್ನು ಮೀರಲು ಸಹಾಯ ಮಾಡುವ ಎಲ್ಲ ಅವಕಾಶಗಳ ಬಗ್ಗೆ ಅತ್ಯಂತ ಕಡಿಮೆ ಆಸಕ್ತಿಯನ್ನು ತೋರಿಸುತ್ತಾರೆ.
ನಮ್ಮ ಬದುಕುಳಿಯುವ ಪ್ರವೃತ್ತಿಗಳು (survival instincts) ನಾಶ ಹೊಂದುತ್ತಿರುವ ಕುರಿತಾಗಿ ಇರುವ ಮತ್ತೊಂದು ವಿವರಣೆಯೆಂದರೆ, ಬದುಕಲು ಅಗತ್ಯವಾಗಿ ಮಾಡಿಕೊಳ್ಳಬೇಕಾಗಿರುವ ಬದಲಾವಣೆಗಳು ಎಷ್ಟು ತೀವ್ರಗತಿಯವಾಗಿವೆಯೆಂದರೆ ಜನ, ಈಗ ಈ ಉದ್ದೇಶಕ್ಕಾಗಿ ತ್ಯಾಗಗಳನ್ನು ಮಾಡುವುದಕ್ಕಿಂತ ಭವಿಷ್ಯದಲ್ಲಿ ಎದುರಾಗಬಹುದಾದ ದುರಂತಗಳಿಗೆ ಆದ್ಯತೆ ನೀಡುತ್ತಾರೆ. ಸ್ಪ್ಯಾನಿಶ್ ಅಂತಃಕಲಹದ (Spanish civil war) ಸಮಯದಲ್ಲಿ Arthur Koestler ತಾನು ಅನುಭವಿಸಿದ ಸಂಗತಿಗಳ ಬಗ್ಗೆ ನೀಡಿರುವ ವಿವರಣೆ, ಜನರಲ್ಲಿ ಬೆಳೆಯುತ್ತಿದ್ದ ಈ ವ್ಯಾಪಕ ಧೋರಣೆಗೆ ಉದಾಹರಣೆಯಂತಿದೆ : ಫ್ರ್ಯಾಂಕೋ ನ ಸೈನಿಕರು ದಾಳಿ ಮಾಡಲು ಮುನ್ನಡೆಯುತ್ತಿದ್ದಾಗ ಆರ್ಥರ್, ತನ್ನ ಗೆಳೆಯನ ವಿಲ್ಲಾದಲ್ಲಿ ಆರಾಮಾಗಿ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದ ; ವಿರೋಧಿ ಸೈನಿಕರು ರಾತ್ರಿ ಆಕ್ರಮಣ ಮಾಡುವ ಬಗ್ಗೆ ಮತ್ತು ಆರ್ಥರ್ ನನ್ನು ಹತ್ಯೆ ಮಾಡಲು ಪ್ರಯತ್ನಿಸುವ ವಿಷಯದ ಬಗ್ಗೆ ಎಲ್ಲರಿಗೂ ಗೊತ್ತಿತ್ತು. ತನ್ನ ಜೀವ ಉಳಿಸಿಕೊಳ್ಳಲು ಆರ್ಥರ್ ಆ ಜಾಗ ಖಾಲೀ ಮಾಡಿ ಓಡಿ ಹೋಗಬಹುದಾಗಿತ್ತು, ಆದರೆ ಆ ರಾತ್ರಿ ತುಂಬ ಚಳಿ ಇತ್ತು ಮತ್ತು ಮಳೆ ಒಂದೇ ಸವನೇ ಸುರಿಯುತ್ತಿತ್ತು, ಗೆಳೆಯನ ಬೆಚ್ಚಗಿನ ವೈಭವೋಪೇತ ಮನೆಯನ್ನು ಬಿಟ್ಟು ಹೋಗಲು ಆರ್ಥರ್ ನಿಗೆ ಮನಸ್ಸಾಗಲಿಲ್ಲ. ಅದೃಷ್ಟಕ್ಕೆ ಫ್ರ್ಯಾಂಕೋ ನ ಸೈನಿಕರು ಆರ್ಥರ್ ನ ಹತ್ಯೆ ಮಾಡಲಿಲ್ಲ, ಅವನನ್ನು ತಮ್ಮ ವಶಕ್ಕೆ ತೆಗೆದುಕೊಂಡರು ಬಂಧಿಯನ್ನಾಗಿ ಮಾಡಿಕೊಂಡರು. ಆಮೇಲೆ ಎಷ್ಟೋ ವಾರಗಳ ನಂತರ ತನ್ನ ಪತ್ರಕರ್ತ ಗೆಳೆಯರ ಸತತ ಪ್ರಯತ್ನದ ಕಾರಣವಾಗಿ ಆರ್ಥರ್ ಪವಾಡ ಸದೃಶ್ಯ ರೀತಿಯಲ್ಲಿ ತನ್ನ ಪ್ರಾಣ ಉಳಿಸಿಕೊಂಡು ಬಂಧನದಿಂದ ಪಾರಾಗಿ ಬಂದ. ಇದು ತಮ್ಮ ಮಾರಕ ಕಾಯಿಲೆಗೆ, ವೈದ್ಯರಿಂದ ತಪಾಸಣೆ ಮಾಡಿಸಿಕೊಂಡು, ಒಂದು ದೊಡ್ಡ ಸರ್ಜರಿಗೆ ಒಳಗಾಗಿ ಗುಣವಾಗುವುದಕ್ಕಿಂತ, ಹಾಗೆ ತಮ್ಮ ಕಾಯಿಲೆಯನ್ನ ಸಹಿಸಿಕೊಳ್ಳುತ್ತ ಸಾವಿನ ಅಪಾಯದ ರಿಸ್ಕ ತೆಗೆದುಕೊಳ್ಳುವುದು ಮೇಲು ಎಂದು ತಿಳಿಯುವ ಜನರ ಸ್ವಭಾವವನ್ನು ಹೋಲುತ್ತದೆ.
ಈ ಎಲ್ಲ ವಿವರಣೆಗಳ ಹೊರತಾಗಿ, ಬದುಕು ಮತ್ತು ಸಾವಿನ ವಿಷಯದಲ್ಲಿ ಮನುಷ್ಯರು ತೋರುವ ಕರಾಳ ನಿಷ್ಕ್ರಿಯತೆಗೆ ನನ್ನ ಇನ್ನೊಂದು ವಿವರಣೆಯೂ ಇದೆ, ಮತ್ತು ಈ ಪುಸ್ತಕವನ್ನು ನಾನು ಬರೆಯಲು ಕಾರಣವಾದ ಮುಖ್ಯ ಪ್ರೇರಣೆಗಳಲ್ಲಿ ಇದು ಕೂಡ ಒಂದು. ಕಾರ್ಪೋರೇಟ್ ಬಂಡವಾಳಶಾಹಿ, ಸಾಮಾಜಿಕ ಪ್ರಜಾಸತ್ತಾತ್ಮಕತೆ ಅಥವಾ ಸೋವಿಯತ್ ಸಮಾಜವಾದ, ಅಥವಾ ತಂತ್ರಜ್ಞರ “ನಗುಮುಖದ ಫ್ಯಾಸಿಸಂ” ( technocratic “ fascism with smiling face” ) ಈ ಎಲ್ಲ ಮಾದರಿಗಳಿಗೆ ಪರ್ಯಾಯವೇ ಇಲ್ಲ ಎನ್ನುವ ಜನರ ದೃಷ್ಟಿಕೋನದ ಬಗ್ಗೆ ನಾನು ನಿಮ್ಮ ಗಮನ ಸೆಳೆಯಲು ಪ್ರಯತ್ನಿಸುತ್ತಿದ್ದೇನೆ. ಜನರ ಈ ದೃಷ್ಟಿಕೋನ ಜನಪ್ರಿಯವಾಗಲು ಮುಖ್ಯ ಕಾರಣ, ಪೂರ್ತಿ ಹೊಸದಾದ ಸೋಷಿಯಲ್ ಮಾಡೆಲ್ ಗಳ ಸೃಷ್ಟಿಯ ಕಾರ್ಯಸಾಧ್ಯತೆಯ ಬಗ್ಗೆ ಮತ್ತು ಅವುಗಳ ಯಶಸ್ಸಿನ ಕುರಿತಾಗಿ ನಡೆದಿರುವ ಅತ್ಯಂತ ಕಡಿಮೆ ಅಧ್ಯಯನ ಹಾಗು ಪ್ರಯೋಗಗಳು. ಹೌದು, ಎಲ್ಲಿಯವರಿಗೆ ವಿಜ್ಞಾನ, ತಂತ್ರ, ಮತ್ತು ಆಲೋಚನಾ ಶಕ್ತಿಯ ನಮ್ಮ ಅತ್ಯುತ್ತಮ ಮನಸ್ಸುಗಳಿಗೆ (best minds) ಸಾಮಾಜಿಕ ಪುನರುತ್ಥಾನದ ಸಮಸ್ಯೆಗಳು ಪೂರ್ತಿಯಾಗಿ ಅಲ್ಲದಿದ್ದರೂ, ಭಾಗಶಃವಾದರೂ ಸರಿ, ಮುಖ್ಯ ಅನಿಸುವುದಿಲ್ಲವೋ ಅಲ್ಲಿಯವರೆಗೆ, ಹೊಸ ವಾಸ್ತವಿಕ ಪರ್ಯಾಯಗಳನ್ನು ಕಲ್ಪಿಸಿಕೊಳ್ಳುವಲ್ಲಿ ಕೊರತೆ ಎದ್ದು ಕಾಣುತ್ತದೆ.
ಈ ಪುಸ್ತಕದ ಮುಖ್ಯ ಒತ್ತಾಸೆ, ಬದುಕಿನ ಎರಡು ಮೂಲಭೂತ ಕ್ರಮಗಳಾದ “ ಹೊಂದುವ ವಿಧಾನ” (mode of Having) ಮತ್ತು “ಆಗುವ ವಿಧಾನ” (mode of Being) ಗಳನ್ನು ವಿಷ್ಲೇಷಣೆಗೆ ಒಳಪಡಿಸುವುದು. ಮೊದಲಿನ ಅಧ್ಯಾಯದಲ್ಲಿ ನಾನು ಈ ಎರಡು ವಿಧಾನಗಳ ನಡುವಿನ ವ್ಯತ್ಯಾಸಗಳ ಕುರಿತಾದ ನನ್ನ “ಮೊದಲ ನೋಟಗಳನ್ನು” ಪ್ರಸ್ತುತ ಪಡಿಸಲಿದ್ದೇನೆ. ಎರಡನೇಯ ಅಧ್ಯಾಯ ಈ ವ್ಯತ್ಯಾಸಗಳನ್ನು, ದೈನಂದಿನ ಅನುಭವಗಳ ಮೂಲಕ ಆಯ್ದುಕೊಂಡ, ಓದುಗರು ಸುಲಭವಾಗಿ ತಮ್ಮ ವೈಯಕ್ತಿಕ ಅನುಭವಗಳೊಂದಿಗೆ ಸಮೀಕರಿಸಬಹುದಾದ ಉದಾಹರಣೆಗಳೊಂದಿಗೆ ನಿವೇದಿಸುತ್ತದೆ. ಅಧ್ಯಾಯ ಮೂರು, ಹಳೆ ಮತ್ತು ಹೊಸ ಒಡಂಬಡಿಕೆಗಳು ಮತ್ತು Master Eckhart ಹೇಳುವ “ಹೊಂದುವುದು ಮತ್ತು ಆಗುವುದರ” ಕುರಿತಾದ ನೋಟಗಳನ್ನು ಸಾದರಪಡಿಸುತ್ತದೆ. ನಂತರದ ಅಧ್ಯಾಯಗಳು ಅತ್ಯಂತ ಕಠಿಣ ಸಮಸ್ಯೆಯೊಂದನ್ನ ನಿರ್ವಹಿಸುತ್ತವೆ : ಇಲ್ಲಿ ನಾನು ಅಸ್ತಿತ್ವದ ಎರಡು ವಿಧಾನಗಳಾದ “ ಹೊಂದುವುದು ಮತ್ತು ಆಗುವುದರ” ನಡುವಿನ ವ್ಯತ್ಯಾಸಗಳನ್ನು ಪ್ರಾಯೋಗಿಕ ದತ್ತಾಂಶಗಳ ( empirical data) ಗಳ ಆಧಾರದ ಮೇಲೆ ವಿಶ್ಲೇಷಣೆ ಮಾಡುತ್ತ ಸೈದ್ಧಾಂತಿಕ ತೀರ್ಮಾನವೊಂದನ್ನು (theoretical conclusion) ಸಿದ್ಧಪಡಿಸುವ ಪ್ರಯತ್ನ ಮಾಡುತ್ತೇನೆ. ಈ ಅಧ್ಯಾಯಗಳ ತನಕ ಪುಸ್ತಕ, ಅಸ್ತಿತ್ವದ ಈ ಎರಡು ಮೂಲ ವಿಧಾನಗಳ ಬಗೆಗಿನ ವೈಯಕ್ತಿಕ ಅಂಶಗಳ ಬಗ್ಗೆ ಮುಖ್ಯವಾಗಿ ಕಾಳಜಿ ವಹಿಸುತ್ತದೆಯಾದರೆ, ಕೊನೆಯ ಅಧ್ಯಾಯ ಹೊಸ ಮನುಷ್ಯರ ಮತ್ತು ಹೊಸ ಸಮಾಜವೊಂದರ ನಿರ್ಮಾಣದ ವಿಷಯದಲ್ಲಿ ಈ ಎರಡು ವಿಧಾನಗಳ ಪ್ರಸ್ತುತತೆಯನ್ನೂ ಮತ್ತು ಹೇಗೆ ಇವು ಜಗತ್ತಿನ ವೈಯಕ್ತಿಕ ಆರೋಗ್ಯ ರಹಿತ (individual ill-being) ಸ್ಥಿತಿಗೆ ಹಾಗು ಸಮಾಜೋಆರ್ಥಿಕ ದುರಂತಗಳಿಗೆ ಪರ್ಯಾಯಗಳನ್ನು ನಿರ್ಮಿಸಿಕೊಳ್ಳಲು ಸಹಾಯ ಮಾಡಬಲ್ಲವು ಎನ್ನುವ ಸಾಧ್ಯತೆಯನ್ನು ಪರಿಶಿಲಿಸುತ್ತದೆ.
(ಮುಂದುವರೆಯುತ್ತದೆ)
(ಎರಿಕ್ ಫ್ರಾಂ ಬಹುಚರ್ಚಿತ ಕೃತಿ To have or To Be ಇನ್ನು ಕನ್ನಡದಲ್ಲಿ ಪ್ರತಿ ಶನಿವಾರ ಮತ್ತು ಭಾನುವಾರ ಸರಣಿಯಾಗಿ ಅರಳಿಮರದಲ್ಲಿ ಪ್ರಕಟಗೊಳ್ಳಲಿದೆ. ಫ್ರಾಂ ಅವರ “The art of Loving” ಅನುವಾದ ಮಾಡಿದ್ದ ಚಿದಂಬರ ನರೇಂದ್ರ ಅವರು ಅರಳಿಮರ ಓದುಗರಿಗಾಗಿ ಈ ಸರಣಿಯನ್ನು ಅನುವಾದಿಸುತ್ತಿದ್ದಾರೆ. )