ಭಾಷೆಯ ಸಮಕಾಲೀನ ಬಳಕೆ : To have or To be #10

ಮೂಲ: ಎರಿಕ್ ಫ್ರಾಮ್; ಕನ್ನಡಕ್ಕೆ: ಚಿದಂಬರ ನರೇಂದ್ರ

Du Marais ನ ನಂತರದ ಎರಡು ನೂರು ವರ್ಷಗಳ ಅವಧಿಯಲ್ಲಿ, ಭಾಷೆಯಲ್ಲಿ ಕ್ರಿಯಾಪದಗಳಿಗೆ ಬದಲಾಗಿ ನಾಮಪದಗಳನ್ನು ಬಳಸುವ ಟ್ರೆಂಡ್, Du Marais ಗೆ ಕೂಡ ಆಶ್ಚರ್ಯವಾಗುವ ರೀತಿಯಲ್ಲಿ ಹೆಚ್ಚಾಗುತ್ತ ಹೋಯಿತು. ಸ್ವಲ್ಪ ಉತ್ಪ್ರೇಕ್ಷೆ ಅನಿಸಿದರೂ ಈ ಕುರಿತಾದ ಒಂದು ಟಿಪಿಕಲ್ ಉದಾಹರಣೆಯತ್ತ ನಿಮ್ಮ ಗಮನ ಸೆಳೆಯ ಬಯಸುತ್ತೇನೆ. ಒಬ್ಬ ಮನೋವಿಶ್ಲೇಷಕನ ಬಳಿ ಸಹಾಯ ಕೇಳಿಕೊಂಡು ಬರುವ ಒಬ್ಬ ರೋಗಿ, ತನ್ನ ಮಾತುಕತೆಯನ್ನ ಪ್ರಾರಂಭಿಸುವುದು ಹೀಗೆ :

“ ಡಾಕ್ಟರ್, ನಾನು ಒಂದು ಸಮಸ್ಯೆಯನ್ನ ಹೊಂದಿದ್ದೇನೆ, ನನಗೆ ನಿದ್ರಾಹೀನತೆಯ ಸಮಸ್ಯೆ ಇದೆ, ಭವ್ಯವಾದ ಮನೆ, ಸುಂದರ ಸಂಗಾತಿ, ಮುದ್ದಾದ ಮಕ್ಕಳು, ಸುಖೀ ದಾಂಪತ್ಯ ನನ್ನದಾಗಿದ್ದರೂ, ನಾನು ಸಾಕಷ್ಟು ಚಿಂತೆಗಳನ್ನು ಹೊಂದಿದ್ದೇನೆ (I have many worries)”.

ಕೆಲವು ದಶಕಗಳಷ್ಟೇ ಹಿಂದೆ, “ ನಾನು ಒಂದು ಸಮಸ್ಯೆಯನ್ನು ಹೊಂದಿದ್ದೇನೆ” ಎನ್ನುವುದಕ್ಕೆ ಬದಲಾಗಿ ರೋಗಿಗಳು, “ನನಗೆ ತೊಂದರೆಯಾಗುತ್ತಿದೆ” ಎಂದೂ, “ನನಗೆ ನಿದ್ರಾಹೀನತೆಯ ಸಮಸ್ಯೆ ಇದೆ” ಎನ್ನುವುದರ ಬದಲಾಗಿ “ ನನಗೆ ಸರಿಯಾಗಿ ನಿದ್ದೆ ಬರುತ್ತಿಲ್ಲ” ಎಂದೂ, “ನನ್ನದು ಸುಖೀ ದಾಂಪತ್ಯ “ ಎನ್ನುವುದಕ್ಕೆ ಬದಲಾಗಿ “ ನಾನು ಸಂಗಾತಿಯೊಡನೆ ಖುಶಿಯಾಗಿದ್ದೇನೆ” ಎಂದೂ ತಮ್ಮ ಕಷ್ಟ ಸುಖಗಳನ್ನು ಹೇಳಿಕೊಳ್ಳುತ್ತಿದ್ದರು.

ತೀರ ಇತ್ತೀಚಿಗಿನ ಭಾಷಾ ಶೈಲಿ, ಅತ್ಯಂತ ಹೆಚ್ಚಿನ ಮಟ್ಟದ ಪರಕೀಯತೆ ನಮ್ಮನ್ನು ಆವರಿಸಿಕೊಂಡಿರುವುದನ್ನ ಸೂಚಿಸುತ್ತದೆ. “ನಾನು ತೊಂದರೆಗೊಳಗಾಗಿದ್ದೇನೆ” ಎನ್ನುವುದರ ಬದಲಾಗಿ “ನಾನು ಸಮಸ್ಯೆಯನ್ನು ಹೊಂದಿದ್ದೇನೆ” ಎನ್ನುವ ಮೂಲಕ ವ್ಯಕ್ತಿನಿಷ್ಠ ಅನುಭವವನ್ನು ತೆಗೆದುಹಾಕಲಾಕಲಾಗಿದೆ : “ತೊಂದರೆಗೊಳಗಾಗಿದ್ದೇನೆ” ಎನ್ನುವ ಅನುಭವವನ್ನ, “ಹೊಂದಿದ್ದೇನೆ” ಎನ್ನುವ ಸ್ವಾಧೀನತೆಯ ಮೂಲಕ ರೀಪ್ಲೇಸ್ ಮಾಡಲಾಗಿದೆ. ನಾನು ನನ್ನ ತೊಂದರೆಯ ಭಾವಗಳನ್ನ ನಾನು ಸ್ವಾಧೀನಪಡಿಸಿಕೊಂಡಿರುವ “ಸಮಸ್ಯೆ” ಎನ್ನುವ ಸಂಗತಿಯೊಂದರ ಮೇಲೆ ಆರೋಪಿಸಿಕೊಂಡಿದ್ದೇನೆ. ಆದರೆ “ಸಮಸ್ಯೆ” ಎನ್ನುವುದು ನಾವು ಅನುಭವಿಸುತ್ತಿರುವ ಎಲ್ಲ ತೊಂದರೆಗಳ ಅಮೂರ್ತ ರೂಪ. ನಾನು ಸಮಸ್ಯೆಯನ್ನು ಹೊಂದುವುದು ಸಾಧ್ಯವಿಲ್ಲ ಏಕೆಂದರೆ ಅದು ನಾನು ಸ್ವಾಧೀನ ಪಡಿಸಿಕೊಳ್ಳಬಹುದಾದ ನಿರ್ದಿಷ್ಟ ಸಂಗತಿಯಲ್ಲ; ಬದಲಾಗಿ ಅದು ನನ್ನನ್ನು ಹೊಂದಬಹುದು. ಹೀಗೆ ಹೇಳುವುದೆಂದರೆ, ನಾನು ನನ್ನನ್ನು “ಸಮಸ್ಯೆ” ಯಾಗಿ ರೂಪಾಂತರಗೊಳಿಸಿಕೊಂಡಿದ್ದೇನೆ, ಮತ್ತು ಈಗ ನಾನು ನನ್ನ ಸೃಷ್ಟಿಯೊಂದರ ಒಡೆತನಕ್ಕೆ ಸಿಕ್ಕಿಹಾಕಿಕೊಂಡಿದ್ದೇನೆ. ಈ ಬಗೆಯ ಮಾತುಕತೆ, ಒಳಗೆ ಅಡಗಿಕೊಂಡಿರುವ ಪ್ರಜ್ಞಾಹೀನ ಪರಕೀಯತೆಯನ್ನು ವಂಚಿಸುತ್ತದೆ.

ಹೌದು ಯಾರಾದರೂ ನಿದ್ರಾಹೀನತೆಗೂ, ಗಂಟಲು ನೋವು ಮತ್ತು ಹಲ್ಲು ನೋವಿನ ಹಾಗೆಯ ಭೌತಿಕ ಗುಣಲಕ್ಷಣಗಳು ಇವೆ ಆದ್ದರಿಂದ “ನಮಗೆ ನಿದ್ರಾಹೀನತೆಯ ಸಮಸ್ಯೆ ಇದೆ” ಎನ್ನುವುದು “ನನಗೆ ಗಂಟಲು ನೋವಿದೆ” ಎಂದು ಹೇಳಿದ ಹಾಗೆ, ಇದು ಸರಿಯಾದ ವಾಕ್ಯ ಎಂದು ವಾದಿಸಬಹುದು. ಆದರೆ ಇಲ್ಲಿ ಒಂದು ವ್ಯತ್ಯಾಸವಿದೆ : ಗಂಟಲು ನೋವು ಅಥವಾ ಹಲ್ಲು ನೋವು, ಹೆಚ್ಚು ಅಥವಾ ಕಡಿಮೆ ಇರಬಹುದಾದ ದೈಹಿಕ ಸೆನ್ಸೇಷನ್, ಆದರೆ ಇದಕ್ಕೆ ಇರುವ ದೈಹಿಕ ಗುಣ ಲಕ್ಷಣ (physical quality) ಅಷ್ಟು ಎದ್ದು ಕಾಣುವಂಥದ್ದಲ್ಲ. ಗಂಟಲು ಇರುವವರಿಗೆ ಗಂಟಲು ನೋವು ಇರುವುದು ಅಥವಾ ಹಲ್ಲು ಇರುವವರಿಗೆ ಹಲ್ಲು ನೋವು ಬರುವುದು ಸಾಧ್ಯ. ಇದಕ್ಕೆ ವ್ಯತಿರಿಕ್ತವಾಗಿ ನಿದ್ರಾಹೀನತೆ ಒಂದು ದೈಹಿಕ ಸೆನ್ಸೇಷನ್ ಅಲ್ಲ, ಅದು ನಿದ್ದೆ ಬರದಿರುವ ಒಂದು ಮನಸ್ಸಿನ ಒಂದು ಸ್ಥಿತಿ (state of mind). “ನನಗೆ ನಿದ್ದೆ ಬರುತ್ತಿಲ್ಲ” ಎನ್ನುವುದರ ಬದಲಿಗೆ “ ನಾನು ನಿದ್ರಾಹೀನತೆಯ ಸಮಸ್ಯೆಯನ್ನು ಹೊಂದಿದ್ದೇನೆ” ಎನ್ನುವಾಗ, ನನ್ನ ನಿದ್ರಾಹೀನತೆಗೆ ಕಾರಣಗಳಾದ ನನ್ನೊಳಗಿನ ಆತಂಕ, ಒತ್ತಡ, ಚಡಪಡಿಕೆ ಮುಂತಾದ ಅನೇಕ ಭಾವಗಳನ್ನು ವ್ಯಕ್ತಪಡಿಸಲು ನನಗೆ ಸಾಧ್ಯವಾಗುತ್ತಿಲ್ಲ, ಮತ್ತು ಈ ಮಾನಸಿಕ ವಿದ್ಯಮಾನಗಳನ್ನ, ದೈಹಿಕ ಗುಣ ಲಕ್ಷಣಗಳು (bodily symptoms) ಎನ್ನುವಂತೆ ನಿಭಾಯಿಸಲು ಸಾಧ್ಯವಾಗುತ್ತಿಲ್ಲ.

ಇನ್ನೊಂದು ಉದಾಹರಣೆ : “ I have great love for you” ಎಂದು ಹೇಳುವುದು ಅರ್ಥಹೀನ. ಏಕೆಂದರೆ ಲವ್ ಎನ್ನುವುದು ಒಬ್ಬರು ಹೊಂದಬಹುದಾದ ಸಂಗತಿಯಲ್ಲ, ಬದಲಾಗಿ ಅದು ಒಬ್ಬರು ಭಾಗವಹಿಸುತ್ತಿರುವ ಒಂದು ಪ್ರಕ್ರಿಯೆ, ಒಂದು ಅಂತರಂಗದ ಚಟುವಟಿಕೆ. ನಾನು ಪ್ರೀತಿಸಬಹುದು, ನಾನು ಪ್ರೀತಿಯೊಳಗೆ ಇರಬಹುದು ಆದರೆ in loving , I have……. nothing. ಹಾಗೆ ನೋಡಿದರೆ, ನನ್ನ ಬಳಿ ಕಡಿಮೆ ಇದ್ದಷ್ಟೂ, ನಾನು ಹೆಚ್ಚು ಹೆಚ್ಚು ಪ್ರೀತಿಸಬಹುದು.

(ಮುಂದುವರಿಯುವುದು…)


(ಎರಿಕ್ ಫ್ರಾಂ ಬಹುಚರ್ಚಿತ ಕೃತಿ To have or To Be ಇನ್ನು ಕನ್ನಡದಲ್ಲಿ ಪ್ರತಿ ಶನಿವಾರ ಮತ್ತು ಭಾನುವಾರ ಸರಣಿಯಾಗಿ ಅರಳಿಮರದಲ್ಲಿ ಪ್ರಕಟಗೊಳ್ಳಲಿದೆ. ಫ್ರಾಂ ಅವರ “The art of Loving” ಅನುವಾದ ಮಾಡಿದ್ದ ಚಿದಂಬರ ನರೇಂದ್ರ ಅವರು ಅರಳಿಮರ ಓದುಗರಿಗಾಗಿ ಈ ಸರಣಿಯನ್ನು ಅನುವಾದಿಸುತ್ತಿದ್ದಾರೆ. )

1 Comment

Leave a Reply