ಅಪ್ರಜ್ಞೆಯ ಸ್ಥಿತಿಯಿಂದ ಬಿಡಿಸಿಕೊಳ್ಳುವುದು ಹೇಗೆ? : ಓಶೋ ವ್ಯಾಖ್ಯಾನ

ನಿಮ್ಮ ತಪ್ಪುಗಳು ನಿಮ್ಮ ಅಪ್ರಜ್ಞೆಯ ಸ್ಥಿತಿಯಲ್ಲಿ ಘಟಿಸಿವೆ ಹಾಗೆಯೇ ನಿಮ್ಮಿಂದ ಆಗಿರುವ ಒಳ್ಳೆಯ ಕೆಲಸಗಳೂ ಕೂಡ. ಹಾಗಾಗಿ ನಿಮ್ಮ ಕೆಟ್ಟ ಮತ್ತು ಒಳ್ಳೆಯ ಕೆಲಸಗಳ ನಡುವೆ ಅಂಥ ದೊಡ್ಡ ವ್ಯತ್ಯಾಸವೇನಿಲ್ಲ… ~ ಓಶೋ ; ಕನ್ನಡಕ್ಕೆ: ಚಿದಂಬರ ನರೇಂದ್ರ

ಒಂದು ದಿನ ಅಕ್ಬರ ತನ್ನ ಆನೆಯ ಮೇಲೆ ಕುಳಿತುಕೊಂಡು ರಾಜಧಾನಿಯಲ್ಲಿ ಪ್ರಯಾಣ ಮಾಡುತ್ತಿದ್ದ. ಅವನ ಆನೆ ಒಂದು ಸಣ್ಣ ರಸ್ತೆಯ ಮುಖಾಂತರ ಹಾಯ್ದು ಹೋಗುತ್ತಿದ್ದಾಗ, ತನ್ನ ಮನೆಯ ಮಹಡಿಯ ಮೇಲೆ ಕುಳಿತಿದ್ದ ವ್ಯಕ್ತಿಯೊಬ್ಬ ಅಕ್ಬರ್ ನನ್ನು ನಿಂದಿಸಲು ಶುರುಮಾಡಿದ. ಕೂಡಲೇ ಅಕ್ಬರ್ ನ ಸೈನಿಕರು ಆ ವ್ಯಕ್ತಿಯನ್ನು ಬಂಧಿಸಿ ಅವನನ್ನು ಮರುದಿನ ಆಕ್ಬರನ ಎದುರು ಹಾಜರುಪಡಿಸಿದರು.

“ ನಿನ್ನೆ ರಾತ್ರಿ ಅಷ್ಟು ಕೆಟ್ಟದಾಗಿ ನನ್ನ ನಿಂದಿಸಿದೆಯಲ್ಲ ಏನಾಗಿತ್ತು ನಿನಗೆ? ನಾನು ಈ ದೇಶದ ಸುಲ್ತಾನ ಎನ್ನುವ ಅರಿವು ನಿನಗಿರಲಿಲ್ಲವೆ ಮೂರ್ಖ ?” ಅಕ್ಬರ್ ಆ ವ್ಯಕ್ತಿಯನ್ನು ಪ್ರಶ್ನೆ ಮಾಡಿದ.

“ ಸುಲ್ತಾನರೇ, ನಿನ್ನೆ ರಾತ್ರಿ ನಾನು ಸಾರಾಯಿ ಕುಡಿದುಬಿಟ್ಟಿದ್ದೆ, ನಾನು ಏನು ಮಾತನಾಡಿದೆನೆಂದು ನನಗೇ ನೆನಪಿಲ್ಲ. ನಿಮ್ಮನ್ನು ನಿಂದಿಸಿದ್ದು ನನ್ನೊಳಗಿನ ಸಾರಾಯಿಯೇ ಹೊರತು ನಾನಲ್ಲ. ನಶೆ ಇಳಿದಾಗ, ನಾನು ತುಂಬ ಪಶ್ಚಾತಾಪ ಪಟ್ಟೆ. ಇದು ನಾನು ಪ್ರಜ್ಞಾಪೂರ್ವಕವಾಗಿ ಮಾಡಿದ ಕೆಲಸವಲ್ಲವಾದ್ದರಿಂದ, ತಾವು ದಯವಿಟ್ಟು ನನ್ನನ್ನು ಕ್ಷಮಿಸಬೇಕು”. ಆ ವ್ಯಕ್ತಿ ಅಕ್ಬರ್ ನನ್ನು ಅಂಗಲಾಚಿ ಬೇಡಿಕೊಂಡ.

ಅಕ್ಬರ್ ತಿಳುವಳಿಕೆಯ ಮನುಷ್ಯನಾಗಿದ್ದರಿಂದ, ಪ್ರಜ್ಞೆಯಲ್ಲಿ ಇಲ್ಲದಾಗ ಒಬ್ಬ ವ್ಯಕ್ತಿ ಮಾಡಿದ ತಪ್ಪುಗಳಿಗೆ ಶಿಕ್ಷೆ ನೀಡಿ ಪ್ರಯೋಜನವಿಲ್ಲವೆನ್ನುವುದನ್ನ ಅವನು ಅರಿತಿದ್ದ. ಆ ವ್ಯಕ್ತಿ ಆ ಸ್ಥಿತಿಯಲ್ಲಿ ಕೆಟ್ಟದಾಗಿ ವರ್ತಿಸಿದ್ದು ನಿಜ, ಆ ಸ್ಥಿತಿಯಲ್ಲಿ ಅವನ ಅದೃಷ್ಟ ಚೆನ್ನಾಗಿದ್ದರೆ ಅವನು ಪವಾಡವನ್ನೂ ಮಾಡುವ ಸಾಧ್ಯತೆಯಿತ್ತು.

ನಿಮ್ಮಿಂದ ಯಾವುದಾದರೂ ಒಳ್ಳೆಯ ಕೆಲಸ ಸಾಧ್ಯವಾಯಿತೆಂದರೆ ಅದು ಪವಾಡ ಏಕೆಂದರೆ, ನಿಮ್ಮ ಅಪ್ರಜ್ಞೆಯ ಸ್ಥಿತಿಯಲ್ಲಿ ನೀವು ತಪ್ಪು ಕೆಲಸ ಮಾಡುವುದೇ ಸಹಜ. ನಿಮ್ಮ ಅಪ್ರಜ್ಞೆಯ ಸ್ಥಿತಿಯಲ್ಲಿ ನೀವು ಮಾಡಿದ ತಪ್ಪುಗಳಿಗೆ ದೇವರು ನಿಮಗೆ ಶಿಕ್ಷೆ ಕೊಡುವುದಿಲ್ಲ ಎಂದು ಗುರ್ಜೇಫ್ ಮೇಲಿಂದ ಮೇಲೆ ಹೇಳುತ್ತಿದ್ದ. ನಮ್ಮ ಕಾನೂನು ಕೂಡ ಕುಡಿತದ ಸ್ಥಿತಿಯಲ್ಲಿ ವ್ಯಕ್ತಿ ಮಾಡಿದ ತಪ್ಪುಗಳಿಗೆ ಕಡಿಮೆ ಶಿಕ್ಷೆ ಕೊಡುತ್ತದೆ, ಒಮ್ಮೊಮ್ಮೆ ಕ್ಷಮಿಸಿಬಿಡುತ್ತದೆ. ಹೌದು ದೇವರಿಗೆ ನಮ್ಮ ನ್ಯಾಯಾಲಯಗಳಿಗೆ ಇರುವಷ್ಟು ವಿವೇಕವಂತೂ ಖಂಡಿತ ಇದೆ. ಅವನು ಅಪ್ರಜ್ಞೆಯ ಜನರ ಪಾಪಗಳನ್ನ ಗಣನೆಗೆ ತೆಗೆದುಕೊಳ್ಳುವುದಿಲ್ಲ.

ನಿಮ್ಮ ತಪ್ಪುಗಳು ನಿಮ್ಮ ಅಪ್ರಜ್ಞೆಯ ಸ್ಥಿತಿಯಲ್ಲಿ ಘಟಿಸಿವೆ ಹಾಗೆಯೇ ನಿಮ್ಮಿಂದ ಆಗಿರುವ ಒಳ್ಳೆಯ ಕೆಲಸಗಳೂ ಕೂಡ. ಹಾಗಾಗಿ ನಿಮ್ಮ ಕೆಟ್ಟ ಮತ್ತು ಒಳ್ಳೆಯ ಕೆಲಸಗಳ ನಡುವೆ ಅಂಥ ದೊಡ್ಡ ವ್ಯತ್ಯಾಸವೇನಿಲ್ಲ. ನಿಮ್ಮ ಒಳ್ಳೆಯ ಮತ್ತು ಕೆಟ್ಟ ಕೆಲಸಗಳ ಕ್ವಾಲಿಟಿ ಒಂದೇ. ನೀವು ಸನ್ಯಾಸಿಯಾಗಿದ್ದರೂ ಅಥವಾ ಮನೆಗೆಲಸ ಮಾಡುತ್ತಿದ್ದರೂ ನಿಮ್ಮಿಬ್ಬರ ಕೆಲಸಗಳ ಗುಣಮಟ್ಟದಲ್ಲಿ ಯಾವ ವ್ಯತ್ಯಾಸ ಇಲ್ಲ ಏಕೆಂದರೆ, ನೀವಿಬ್ಬರೂ ಪ್ರಜ್ಞಾಪೂರ್ವಕವಾಗಿ ಏನನ್ನೂ ಮಾಡುತ್ತಿಲ್ಲ. ನೀವು ಅಂಗಡಿಯಲ್ಲಿದ್ದೂ, ದೇವಸ್ಥಾನದಲ್ಲಿದ್ದರೂ, ಆಫೀಸಿನಲ್ಲಿದ್ದರೂ ಅಥವಾ ನೀವು ನಿಮ್ಮ ಗುರುವಿನ ಆಶ್ರಮದಲ್ಲಿದ್ದರೂ, ನೀವು ಅಪ್ರಜ್ಞೆಯ ಸ್ಥಿತಿಯಲ್ಲಿ ಇರುವಿರಾದರೆ ನಿಮ್ಮ ನಡುವೆ ಯಾವ ವ್ಯತ್ಯಾಸವೂ ಇಲ್ಲ.

ನೀವು ಬಟ್ಟೆ ಹಾಕಿಕೊಂಡಿದ್ದರೂ ಅಥವಾ ಬೆತ್ತಲೆಯಾಗಿದ್ದರೂ, ನೀವು ಅರಿವು ರಹಿತ ಸ್ಥಿತಿಯಲ್ಲಿ ಇರುವ ತನಕ ಯಾವ ವ್ಯತ್ಯಾಸವಿಲ್ಲ. ಸವಾಲಿನ ವಿಷಯ ನಿಮ್ಮ ಕ್ರಿಯೆಗಳನ್ನ ಬದಲಾಯಿಸಿಕೊಳ್ಳುವುದಲ್ಲ, ಈ ಅರಿವು ರಹಿತ ಸ್ಥಿತಿಯಿಂದ ಹೊರಗೆ ಬರುವುದು. ಏಕೆಂದರೆ ಕ್ರಿಯೆಗಳನ್ನು ಬದಲಾಯಿಸಿಕೊಳ್ಳುವುದು ಬಹಳ ಸುಲಭದ ವಿಷಯ. ನೀವು ಒಂದು ಕೆಲಸದಲ್ಲಿ ಅಪ್ರಜ್ಷೆಯ ಸ್ಥಿತಿಯಲ್ಲಿರುವಿರಾದರೆ, ಇನ್ನೂಂದು ಕೆಲಸದಲ್ಲೂ ನಿಮ್ಮದು ಅಪ್ರಜ್ಞೆಯ ಸ್ಥಿತಿ. ಹಾಗಾದರೆ ಅಪ್ರಜ್ಞೆಯ ಸ್ಥಿತಿಯಿಂದ ಬಿಡಿಸಿಕೊಳ್ಳುವುದು ಹೇಗೆ

ಒಮ್ಮೆ ಒಬ್ಬ ಸಾಧಕ, ಸೂಫಿ ಅನುಭಾವಿ ಶೇಖ್ ಫರೀದ್ ನ ಬಳಿ ಬಂದು ಕೇಳಿಕೊಂಡ,

“ ನನ್ನನ್ನು ಕಟ್ಟಿಹಾಕಿರುವ ಬಂಧನಗಳಿಂದ, ಸಿದ್ಧಾಂತಗಳಿಂದ, ಪೂರ್ವಾಗ್ರಹಗಳಿಂದ ಬಿಡಿಸಿಕೊಳ್ಳುವುದು ಹೇಗೆ? “

ಈ ಪ್ರಶ್ನೆ ಕೇಳುತ್ತಿದ್ದಂತೆಯೇ ಫರೀದ್ ಓಡಿ ಹೋಗಿ ಹತ್ತಿರದ ಕಂಬವೊಂದನ್ನ ಗಟ್ಟಿಯಾಗಿ ಹಿಡಿದುಕೊಂಡು ಕೂಗತೊಡಗಿದ,

“ ಯಾರಾದರೂ ನನ್ನನ್ನ ಈ ಕಂಬದಿಂದ ಬಿಡಿಸಿ “

ಫರೀದ್ ನ ಕೂಗಾಟ ಕೇಳುತ್ತಿದ್ದಂತೆಯೇ ಸುತ್ತ ಮುತ್ತಲಿನ ಜನ ಅಲ್ಲಿ ಬಂದು ಸೇರಿದರು. ಅವರಲ್ಲಿ ಹಿರಿಯ ಮನುಷ್ಯನೊಬ್ಬ ಫರೀದ್ ನ ಗದರಿಸಿದ.

“ ಫರೀದ್, ನಿನಗೆ ಹುಚ್ಚು ಹಿಡಿದಿದೆಯಾ? ಕಂಬ ಹಿಡಿದುಕೊಂಡಿರೋದು ನೀನು, ನಿನ್ನ ಕಂಬ ಹಿಡಿದುಕೊಂಡಿಲ್ಲ, ಸುಮ್ಮನೇ ತರಲೆ ಮಾಡಬೇಡ”

“ ತರಲೆ ಮಾಡುತ್ತಿರೋದು ನಾನಲ್ಲ, ಆ ಮನುಷ್ಯ “ ಫರೀದ್ ಪ್ರಶ್ನೆ ಕೇಳಿದ ಸಾಧಕನತ್ತ ಕೈ ಚಾಚಿ ತೋರಿಸಿದ.

ಫರೀದ್ ನ ಮಾತು ಕೇಳುತ್ತಿದ್ದಂತೆಯೇ ಸಾಧಕನಿಗೆ ನಾಚಿಕೆಯಾಯಿತು. ಆತ ಓಡಿ ಬಂದು ಫರೀದ್ ನ ಪಾದ ಮುಟ್ಟಿ ಕ್ಷಮೆ ಕೇಳಿದ.

Leave a Reply