Having ಮತ್ತು Being – ದಿನನಿತ್ಯದ ಅನುಭವಗಳು: To have or to be #13

ಮೂಲ: ಎರಿಕ್ ಫ್ರಾಮ್; ಕನ್ನಡಕ್ಕೆ: ಚಿದಂಬರ ನರೇಂದ್ರ

ಹಿಂದಿನ ಭಾಗ ಇಲ್ಲಿ ಓದಿ: https://aralimara.com/2023/03/26/fromm-9/

ಭಾಗ 2

ನಾವು ಬದುಕುತ್ತಿರುವ ಸಮಾಜ, ಆಸ್ತಿ ಸ್ವಾಧೀನಪಡಿಸಿಕೊಳ್ಳುವುದಕ್ಕೆ ಮತ್ತು ಲಾಭ ಮಾಡಿಕೊಳ್ಳುವುದಕ್ಕೆ ತನ್ನನ್ನು ತಾನು ಸಮರ್ಪಿಸಿಕೊಂಡಿದೆ. ಇಂಥ ಸಮಾಜದಲ್ಲಿ ಬಹಳ ಅಪರೂಪಕ್ಕೆ ಅಸ್ತಿತ್ವದ being ವಿಧಾನದ ಕುರಿತಾಗಿ ಸಾಕ್ಷಿಗಳು ಸಿಗುತ್ತವೆ. ಬಹುತೇಕ ಜನರು having ವಿಧಾನವನ್ನೇ ಅಸ್ತಿತ್ವದ ಅತ್ಯಂತ ಸಹಜ ಜೀವನ ವಿಧಾನ ಮತ್ತು ಅದು ಮಾತ್ರವೇ ಬದುಕಿನ ಅಂಗೀಕೃತ ದಾರಿ ಎಂದುಕೊಂಡಿದ್ದಾರೆ. ಈ ಎಲ್ಲ ಸಂಗತಿಗಳು, being ವಿಧಾನದ ಸಹಜ ಗುಣಲಕ್ಷಣಗಳನ್ನು ಜನ ಗ್ರಹಿಸಲು ಮತ್ತು having ವಿಧಾನವೊಂದೇ ಬದುಕಲು ಸಾಧ್ಯವಿರುವ ದೃಷ್ಟಿಕೋನ ಎನ್ನುವುದನ್ನ ಸ್ಪಷ್ಟಪಡಿಸಿಕೊಳ್ಳಲು ಕೂಡ ವಿಶೇಷವಾಗಿ ಅಡತಡೆಗಳನ್ನು ನಿರ್ಮಿಸುತ್ತವೆ. ಏನೇ ಆದರೂ ಈ ಎರಡೂ ಪರಿಕಲ್ಪನೆಗಳು ಮನುಷ್ಯರ ಅನುಭವಗಳಲ್ಲಿ ತಮ್ಮ ಬೇರುಗಳನ್ನ ಚಾಚಿಕೊಂಡಿವೆ. ಈ ಎರಡು ವಿಧಾನಗಳಲ್ಲಿ ಒಂದನ್ನು ಕೂಡ ಅಮೂರ್ತವಾಗಿ, ಮತ್ತು ಕೇವಲ ಶುದ್ಧ ಬೌದ್ಧಿಕ ರೀತಿಯಲ್ಲಿ ಪರಿಶೀಲನೆ ಮಾಡಬಾರದು ಅಷ್ಟೇ ಅಲ್ಲ ಇಂಥದೊಂದು ಪರಿಶೀಲನೆ ಸಾಧ್ಯವಾಗುವುದಿಲ್ಲ ಕೂಡ. ಈ ಎರಡೂ ವಿಧಾನಗಳು ನಮ್ಮ ಪ್ರತಿನಿತ್ಯದ ಬದುಕಿನಲ್ಲಿ ಬಿಂಬಿಸಲ್ಪಡುತ್ತಲೇ ಇರುತ್ತವೆ ಮತ್ತು ಇವನ್ನು ತುಂಬ ಆಳವಾಗಿ ಪರಿಶೀಲಿಸಬೇಕಿದೆ. having ಮತ್ತು being ವಿಧಾನಗಳು ನಮ್ಮ ದಿನ ನಿತ್ಯದ ಬದುಕಿನಲ್ಲಿ ಹೇಗೆ ಪ್ರದರ್ಶಿಸಲ್ಪಡುತ್ತಿರುತ್ತವೆ ಎನ್ನುವುದನ್ನ ವಿವರಿಸುವ ಈ ಕೆಳಗಿನ ಕೆಲವು ಸರಳ ಉದಾಹರಣೆಗಳು, ಅಸ್ತಿತ್ವದ ಈ ಎರಡು ಪರ್ಯಾಯ ವಿಧಾನಗಳನ್ನ ಓದುಗರು ಅರ್ಥ ಮಾಡಿಕೊಳ್ಳಲು ಸಹಾಯ ಮಾಡಬಹುದು.

ಕಲಿಯುವಿಕೆ ( Learning ) :

ಅಸ್ತಿತ್ವದ having ವಿಧಾನವನ್ನು ಅಳವಡಿಸಿಕೊಂಡಿರುವ ವಿದ್ಯಾರ್ಥಿಗಳು ಪಾಠಗಳನ್ನು ಕೇಳುತ್ತಾರೆ, ಪ್ರತಿ ಶಬ್ದವನ್ನು ಕೇಳುತ್ತ ಮತ್ತು ತಮಗೆ ಸಾಧ್ಯವಾದಷ್ಟು ಮಟ್ಟಿಗೆ ಅದರ ತಾರ್ಕಿಕ ರಚನೆಯನ್ನ ಮತ್ತು ಅರ್ಥವನ್ನ ಅರ್ಥಮಾಡಿಕೊಳ್ಳುತ್ತ, ತಮ್ಮ ಬಿಡಿ ಹಾಳೆಯ ನೋಟ್ ಬುಕ್ ನಲ್ಲಿ ದಾಖಲು ಮಾಡಿಕೊಳ್ಳುತ್ತಾರೆ, ಮುಂದೆ ಈ ನೋಟ್ಸ್ ಗಳನ್ನ ಬಾಯಿಪಾಠ ಮಾಡಿ ಪರೀಕ್ಷೆ ಪಾಸ್ ಮಾಡಲು ಸಹಾಯವಾಗುವಂತೆ. ಆದರೆ ಈ ಪಾಠಗಳು ಅವರ ವೈಯಕ್ತಿಕ ವಿಚಾರ ಸರಣಿಯ ಭಾಗವಾಗುವುದಿಲ್ಲ, ಆ ವಿಚಾರಗಳನ್ನು ಬೆಳೆಸುವುದಿಲ್ಲ, ಶ್ರೀಮಂತಗೊಳಿಸುವುದಿಲ್ಲ. ಬದಲಾಗಿ ಅವರು ತಾವು ಕೇಳಿದ ಶಬ್ದಗಳನ್ನ, ಸಿದ್ಧಾಂತಗಳನ್ನ, ನಿರ್ದಿಷ್ಟ ಅರ್ಥ ಸಮೂಹಗಳನ್ನಾಗಿ (fixed clusters) ಬದಲಾಯಿಸಿಕೊಂಡು ಸಂಗ್ರಹಿಸಿಟ್ಟುಕೊಳ್ಳುತ್ತಾರೆ. ವಿದ್ಯಾರ್ಥಿ ಮತ್ತು ಪಾಠದ ವಿಷಯ, ಒಬ್ಬರಿಗೊಬ್ಬರು ಅಪರಿಚಿತರಾಗಿಯೇ ಉಳಿಯುತ್ತಾರೆ, ಮತ್ತು ಪ್ರತಿ ವಿದ್ಯಾರ್ಥಿಯೂ ತನ್ನ ಸಂಗ್ರಹದ ಇನ್ನೊಬ್ಬರು ಮಾಡಿದ ಸ್ಟೇಟಮೆಂಟ್ ಗಳ ಮಾಲಿಕನಾಗುತ್ತಾನೆ ( ಇನ್ನೊಬ್ಬರು ಮಾಡಿದ ಈ ಸ್ಟೇಟಮೆಂಟ್ ಗಳು ಅವರ ಸ್ವಂತದ್ದಾಗಿರಬಹುದು ಅಥವಾ ಬೇರಿನ್ನೊಂದು ಮೂಲದಿಂದ ಪಡೆದುಕೊಂಡದ್ದಾಗಿರಬಹುದು).

ಅಸ್ತಿತ್ವದ having ವಿಧಾನದಲ್ಲಿ ಮುಂದುವರೆಯುತ್ತಿರುವ ವಿದ್ಯಾರ್ಥಿಗಳದ್ದು ಒಂದೇ ಉದ್ದೇಶ : ತಾವು “ಕಲಿತಿರುವ” ವಿಷಯಕ್ಕೆ ಅಂಟಿಕೊಳ್ಳುವುದು, ತಮ್ಮ ನೆನಪಿಗೆ ಆ ವಿಷಯವನ್ನು ಒಪ್ಪಿಸುವ ಮೂಲಕ ಅಥವಾ ತಮ್ಮ ನೋಟ್ಸ್ ಗಳನ್ನ ಜಾಗರೂಕತೆಯಿಂದ ಕಾಪಾಡಿಕೊಳ್ಳುವ ಮೂಲಕ. ಅವರು ಹೊಸದೊಂದನ್ನ ನಿರ್ಮಿಸುವ ಅಥವಾ ಸೃಷ್ಟಿಸುವ ಹೊಣೆ ಹೊತ್ತುಕೊಂಡಿಲ್ಲ. ವಾಸ್ತವದಲ್ಲಿ having ರೀತಿಯ ವ್ಯಕ್ತಿಗಳಿಗೆ, ಹೊಸ ವಿಚಾರಗಳೆಂದರೆ, ಅಥವಾ ವಿಷಯದ ಕುರಿತಾದ ಹೊಸ ಹೊಳಹುಗಳೆಂದರೆ ಕಳವಳದ ಸಂಗತಿ ಏಕೆಂದರೆ, ಹೊಸ ಸಂಗತಿ ಅವರ ನಿರ್ದಿಷ್ಟ ಮಾಹಿತಿ ಸಂಗ್ರಹಣೆಯನ್ನು ಪ್ರಶ್ನೆ ಮಾಡುತ್ತದೆ ಎನ್ನುವ ಕಾರಣಕ್ಕಾಗಿ. ಹೌದು, ಯಾರಿಗೆ having ವಿಧಾನ, ಜಗತ್ತಿನೊಡನೆಯ ಅವರ ಅತ್ಯಂತ ಪ್ರಮುಖ ಸಂಬಂಧದ ದಾರಿಯಾಗಿದೆಯೋ ಅವರಿಗೆ, ಹಿಡಿದಿಡಲು ಸಾಧ್ಯವಾಗದಂಥ ( ಬರೆದಿಡಲು ಸಾಧ್ಯವಾಗದ) ಐಡಿಯಾಗಳೆಂದರೆ ಭಯ – ಉದಾಹರಣೆಗೆ, ಬೆಳವಣಿಗೆ ಹೊಂದುವ, ಬದಲಾಗುವ ಮತ್ತು ಹಾಗಾಗಿ ಹತೋಟಿಗೆ ಸಿಗದ ಐಡಿಯಾಗಳು.

ಆದರೆ, being ವಿಧಾನದ ಮೂಲಕ ಜಗತ್ತಿನೊಡನೆ ತಮ್ಮ ಸಂಬಂಧವನ್ನು ಸ್ಥಾಪಿಸಬಯಸುತ್ತಿರುವ ವಿದ್ಯಾರ್ಥಿಗಳ “ ಕಲಿಯುವಿಕೆ ಪ್ರಕ್ರಿಯೆ” ಯ ಕ್ವಾಲಿಟಿ ಸಂಪೂರ್ಣ ವಿಭಿನ್ನ ರೀತಿಯದು. ಶುರುವಾತಿನಲ್ಲಿ ಅವರು ಕೋರ್ಸ್ ನ ಪಾಠಗಳಿಗೆ ಹಾಜರಾಗುವುದಿಲ್ಲ, ಮೊದಲ ಪಾಠಕ್ಕೆ ಕೂಡ, as tabular rasae ( with clean slate). ಪಾಠಗಳಲ್ಲಿ ನಿರ್ವಹಿಸಲಾಗುವ ಸಮಸ್ಯೆಗಳ ಬಗ್ಗೆ ಅವರಿಗೆ ಮೊದಲೇ ಕೆಲವು ಅಭಿಪ್ರಾಯಗಳಿರುತ್ತವೆ ಮತ್ತು ಅವರ ಮೈಂಡ್ ನಲ್ಲಿ ಈ ಕುರಿತಾಗಿ ಅವರದೇ ಆದ ಕೆಲವು ಪ್ರಶ್ನೆಗಳಿರುತ್ತವೆ ಹಾಗು ಅವರವೇ ಆದ ಸಮಸ್ಯೆಗಳು. ಅವರು ಈಗಾಗಲೇ ವಿಷಯವನ್ನು ತಮ್ಮ ತಲೆಯಲ್ಲಿ ತುಂಬಿಕೊಂಡಿದ್ದಾರೆ ಮತ್ತು ಅದು ಅವರಿಗೆ ಆಸಕ್ತಿಯ ವಿಷಯವಾಗಿದೆ. ಪಾಠದಲ್ಲಿನ ಶಬ್ದಗಳಿಗೆ ಮತ್ತು ಐಡಿಯಾಗಳಿಗೆ ನಿಷ್ಕ್ರೀಯ (passive) ರಿಸೀವರ್ ಆಗುವುದರ ಬದಲು ಅವರು, ಪಾಠವನ್ನು ಗಮನವಿಟ್ಟು ಕೇಳುತ್ತಾರೆ, ಮತ್ತು ಮುಖ್ಯವಾಗಿ ಅವರು ವಿಚಾರಗಳನ್ನು ಸ್ವೀಕರಿಸುತ್ತಾರೆ ಹಾಗು ಕ್ರಿಯಾತ್ಮಕವಾಗಿ, ಸೃಜನಾತ್ಮಕವಾಗಿ ಪ್ರತಿಕ್ರಯಿಸುತ್ತಾರೆ. ಅವರು ಕೇಳಿಸಿಕೊಂಡಿರುವುದು ಅವರ ಚಿಂತನಾ ಕ್ರಮವನ್ನು ಪ್ರಚೋದಿಸುತ್ತದೆ. ಹೊಸ ಪ್ರಶ್ನೆಗಳು, ಹೊಸ ಐಡಿಯಾಗಳು, ಹೊಸ ದೃಷ್ಟಿಕೋನಗಳು ಅವರ ಮನಸ್ಸಿನಲ್ಲಿ ಹುಟ್ಟಿಕೊಳ್ಳುತ್ತವೆ. ಅವರ ಕೇಳುವಿಕೆ ಒಂದು ಜೀವಂತಿಕೆಯ ಪ್ರಕ್ರಿಯೆ. ಅವರು ಆಸಕ್ತಿಯಿಂದ, ಉಪನ್ಯಾಸಕರು ಹೇಳುವುದನ್ನ ಗಮನವಿಟ್ಟು ಕೇಳುತ್ತಾರೆ ಮತ್ತು ಸಹಜವಾಗಿ (spontaneously) ತಾವು ಕೇಳಿಸಿಕೊಂಡಿದ್ದಕ್ಕೆ ಪ್ರತಿಕ್ರಿಯೆ ಎಂಬಂತೆ ಜೀವಂತಿಕೆಯನ್ನ ಸಾಧಿಸುತ್ತಾರೆ. ಅವರು ಜ್ಞಾನವನ್ನು ಸಂಗ್ರಹಿಸುವುದು ಮನೆಗೆ ತೆಗೆದುಕೊಂಡು ಹೋಗಿ ಬಾಯಿಪಾಠ ಮಾಡುವುದಕ್ಕಲ್ಲ. ಪ್ರತಿಯೊಬ್ಬ ವಿದ್ಯಾರ್ಥಿಯ ಮೇಲೆಯೂ ವಿಷಯ ಪರಿಣಾಮ ಬೀರಿದೆ ಹಾಗು ಪ್ರತಿಯೊಬ್ಬರೂ ಬದಲಾವಣೆಗೆ ಒಳಗಾಗಿದ್ದಾರೆ : ಪ್ರತಿಯೊಬ್ಬರೂ ತಾವು ಪಾಠ ಕೇಳುವುದಕ್ಕಿಂತ ಮುಂಚಿನ ಅವನು ಅಥವಾ ಅವಳು ಆಗಿ ಉಳಿದಿಲ್ಲ. ಖಂಡಿತ ಈ ರೀತಿಯ ಕಲಿಯುವಿಕೆ ವಿಧಾನ ಸಾಧ್ಯವಾಗುವುದು, ಪಾಠದ ವಿಷಯ ಉತ್ತೇಜನಾತ್ಮಕ (stimulating material) ಗುಣವನ್ನು ಹೊಂದಿರುವಾಗ ಮಾತ್ರ. Being ವಿಧಾನದಲ್ಲಿ, ಖಾಲಿ ಮಾತುಗಳಿಗೆ (empty talk) ಪ್ರತಿಕ್ರಿಯೆ ನೀಡುವುದು ಅಸಾಧ್ಯ ಮತ್ತು ಇಂಥ ಸಂದರ್ಭದಲ್ಲಿ being ವಿಧಾನದ ವಿದ್ಯಾರ್ಥಿಗಳು ಈ ಬಗೆಯ ಪಾಠಗಳನ್ನು ಕೇಳಿಸಿಕೊಳ್ಳುವುದಕ್ಕಿಂತ ತಮ್ಮ ವಿಚಾರ ಪ್ರಕ್ರಿಯೆಯ ಮೇಲೆ ಹೆಚ್ಚು ಗಮನ ಕೇಂದ್ರೀಕರಿಸುವುದು ಉತ್ತಮ ಎನ್ನುವ ತೀರ್ಮಾನಕ್ಕೆ ಬರುತ್ತಾರೆ.

ಕೊನೆಪಕ್ಷ “ಆಸಕ್ತಿ” (interest) ಎನ್ನುವ ಪದದ ಕುರಿತು ಒಂದು ಸಣ್ಣ ವಿವರಣೆಯನ್ನಾದರೂ ನಾವು ಇಲ್ಲಿ ಕೊಡಲೇಬೇಕು, ಏಕೆಂದರೆ ಈ ಪದ ಸದ್ಯದ ಬಳಕೆಯಲ್ಲಿ ಕಳೆ ಕಳೆದುಕೊಂಡಿದೆ, ಸವೆತು ಹೋಗಿದೆ. ಆದರೂ ಈ ಪದದ ಅವಶ್ಯಕ ಅರ್ಥ ಅದರ ಮೂಲದಲ್ಲಿಯೇ ಇದೆ : ಲ್ಯಾಟಿನ್ ಭಾಷೆಯಲ್ಲಿ inter-esse, (to be in or among). ಮಧ್ಯ ಕಾಲೀನ ಇಂಗ್ಲಿಷ್ ನಲ್ಲಿ ಈ ಕ್ರಿಯಾತ್ಮಕ ಆಸಕ್ತಿಯನ್ನ (active interest) “to list” (adjective, listy ; advert, listly) ಎನ್ನುವ ಪದದ ಮೂಲಕ ಅಭಿವ್ಯಕ್ತಿಸಲಾಗಿದೆ. ಆಧುನಿಕ ಇಂಗ್ಲಿಷ್ ನಲ್ಲಿ “to list” ನ ಕೇವಲ ಪ್ರಾದೇಶಿಕ ಭಾವದಲ್ಲಿ ಬಳಸಲಾಗುತ್ತದೆ : ಉದಾಹರಣೆಗೆ, “the ship lists”, ಭೌತಿಕ ರೂಪದಲ್ಲಿ ಇದರ ಮೂಲ ಅರ್ಥವನ್ನ ನಾವು ಇದರ ಋಣಾತ್ಮಕ ಅರ್ಥದ ಮೂಲಕ ಮಾತ್ರ ಕಂಡುಕೊಳ್ಳಬಹುದು “listless”. “To list” ಎನ್ನುವುದರ ಅರ್ಥ ಒಮ್ಮೆ actively striving for ಅಥವಾ to be genuinely interested in ಆಗಿತ್ತು. ಇದರ ಮೂಲ “lust” ಪದದ ಮೂಲವೇ ಆಗಿದೆ, ಆದರೆ to list ಎಂದರೆ ನಮ್ಮ ಕಾಡುವ lust ಅಲ್ಲ, ಅದರ ಅರ್ಥ ಮಕ್ತ ಮತ್ತು ಕ್ರಿಯಾತ್ಮಕ ಆಸಕ್ತಿ (free and active interest in) ಅಥವಾ ತುಡಿತ “striving for”. “To list” ಎನ್ನುವುದು The cloud of unknowing (Evelyn Underhill,ed.) ರಚಿಸಿದ, ಹದಿನಾಲ್ಕನೇ ಶತಮಾನದ ಮಧ್ಯದ ಅನಾಮಿಕ ಬರಹಗಾರನೊಬ್ಬನ ಅತ್ಯಂತ ಮುಖ್ಯ ಅಭಿವ್ಯಕ್ತಿ (key expression). ಭಾಷೆ, ಪದದ ಅರ್ಥವನ್ನ ಕೇವಲ ಅದರ ಋಣಾತ್ಮಕ ಭಾವದಲ್ಲಿ ಉಳಿಸಿಕೊಂಡಿರುವುದು, ಹನ್ನೆರಡು ಮತ್ತು ಹದಿಮೂರನೇ ಶತಮಾನದ ಕಾಲಾವಧಿಯಲ್ಲಿ ಬದಲಾದ ಸಮಾಜದ ಧೋರಣೆಯ (spirit) ವಿಶೇಷತೆಯನ್ನ ಸೂಚಿಸುತ್ತದೆ.

( ಮುಂದುವರೆಯುತ್ತದೆ )


1 Comment

Leave a Reply