ನೆನಪಿಸಿಕೊಳ್ಳುವಿಕೆ ( Remembering) : To have or to be #14

ಮೂಲ: ಎರಿಕ್ ಫ್ರಾಮ್; ಕನ್ನಡಕ್ಕೆ: ಚಿದಂಬರ ನರೇಂದ್ರ

ಹಿಂದಿನ ಭಾಗ ಇಲ್ಲಿ ಓದಿ: https://aralimara.com/2023/04/01/fromm-10/

ನೆನಪಿಸಿಕೊಳ್ಳುವಿಕೆ, having ಅಥವಾ being ಎರಡೂ ಜೀವನ ವಿಧಾನಗಳಲ್ಲೂ ಸಾಧ್ಯವಾಗಬಹುದು. ಈ ಎರಡೂ ಬಗೆಯ ನೆನಪಿಸಿಕೊಳ್ಳುವಿಕೆಯ ವ್ಯತ್ಯಾಸಗಳಿಗೆ ಮುಖ್ಯವಾಗೋದು, ಅವು ಸಾಧಿಸುವ ಕನೆಕ್ಷನ್. Having ವಿಧಾನದ ನೆನಪಿಸಿಕೊಳ್ಳುವಿಕೆಯಲ್ಲಿ, ಈ ಕನೆಕ್ಷನ್ ಸಂಪೂರ್ಣವಾಗಿ ಯಾಂತ್ರಿಕವಾದದ್ದು, ಇಲ್ಲಿ ಒಂದು ಪದ ಮತ್ತು ಅದರ ಮುಂದಿನ ಪದದ ನಡುವಿನ ಕನೆಕ್ಷನ್ ಗಟ್ಟಿಯಾಗಿ ಸ್ಥಾಪಿತವಾಗೋದು, ಈ ಕನೆಕ್ಷನ್ ನ ಎಷ್ಟು ಬಾರಿ (frequency) ನಾವು ಮತ್ತೆ ಮತ್ತೆ ಆರೋಪಿಸುತ್ತೇವೆ ಎನ್ನುವುದರ ಆಧಾರದ ಮೇಲೆ. ಅಥವಾ ಈ ಕನೆಕ್ಷನ್ ನ ಶುದ್ಧ ತರ್ಕದ ಆಧಾರದ ಮೇಲೆ ನಿರ್ಮಿಸಲಾಗಿರುತ್ತದೆ ಉದಾಹರಣೆಗೆ, ಎರಡು ವೈರುಧ್ಯಗಳ ನಡುವಿನ ಕನೆಕ್ಷನ್ ಅಥವಾ ಒಂದರಲ್ಲೊಂದು ಕೂಡಿಕೊಳ್ಳುತ್ತಿರುವ ಪರಿಕಲ್ಪನೆಗಳ ಕನೆಕ್ಷನ್ ಅಥವಾ, ಕಾಲ , ದೇಶ, ಗಾತ್ರ, ಬಣ್ಣಗಳ ಕುರಿತಾದ ಅಥವಾ, ಒಂದೇ ಆಲೋಚನಾ ವ್ಯವಸ್ಥೆಯ ಭಾಗವಾದ ಸಂಗತಿಗಳ ಕನೆಕ್ಷನ್…. ಇತ್ಯಾದಿಯಾಗಿ.

Being ವಿಧಾನದಲ್ಲಿ ನೆನಪಿಸಿಕೊಳ್ಳುವಿಕೆ ಎಂದರೆ, ಶಬ್ದಗಳನ್ನ, ಐಡಿಯಾಗಳನ್ನ, ನೋಟಗಳನ್ನ, ಪೇಂಟಿಂಗ್ ಗಳನ್ನ, ಸಂಗೀತವನ್ನ ಕ್ರಿಯಾತ್ಮಕವಾಗಿ ನೆನಪಿಸಿಕೊಳ್ಳುವುದು. ಹಾಗೆಂದರೆ, ಹಲವಾರು ಸಂಗತಿಗಳ ಜೊತೆ (data) ಕನೆಕ್ಟೆಡ್ ಆದ, ಒಂದು ಸಂಗತಿಯೊಂದಿಗಿನ (single datum) ಕನೆಕ್ಷನ್ ನ ನೆನಪಿಸಿಕೊಳ್ಳುವುದು. ಹಾಗಾಗಿ being ಜೀವನ ವಿಧಾನದಲ್ಲಿನ ಕನೆಕ್ಷನ್ ಗಳು ಯಾಂತ್ರಿಕ ಅಲ್ಲ, ಶುದ್ಧ ತಾರ್ಕಿಕವೂ ಅಲ್ಲ, ಆದರೆ ಜೀವಂತಿಕೆಯಿಂದ ಕೂಡಿದಂಥವು. ಇಲ್ಲಿ ಒಂದು ಪರಿಕಲ್ಪನೆ ಇನ್ನೊಂದರೊಂದಿಗೆ ಕನೆಕ್ಟೆಡ್ ಆಗಿರುವುದು, ಒಬ್ಬರು ಒಂದು ಸರಿಯಾದ ಪದವನ್ನು ಹುಡುಕುವಾಗ, mobilize ಆಗುವ ಆಲೋಚನೆಯಂಥ (thinking) ಸೃಜನಾತ್ಮಕ ಕ್ರಿಯೆಯ ಮೂಲಕ ( ಅಥವಾ ಭಾವನಾತ್ಮಕವಾಗಿ – Through feeling). ಇದಕ್ಕೆ ಒಂದು ಸರಳ ಉದಾಹರಣೆ : ನಾನು ತಲೆನೋವು ಎನ್ನುವ ಪದದ ಜೊತೆ pain ಅಥವಾ aspirin ಎನ್ನುವ ಪದವನ್ನ ಹೊಂದಿಸಬಲ್ಲೆನಾದರೆ ನಾನು, ತಾರ್ಕಿಕವಾದ, ಸಾಂಪ್ರದಾಯಿಕವಾದ ಸಹಯೋಗವೊಂದನ್ನ (association) ನಿಭಾಯಿಸುತ್ತಿದ್ದೇನೆ. ಆದರೆ ನಾನು stress ಅಥವಾ anger ಎನ್ನುವ ಪದವನ್ನ “ತಲೆನೋವು” ಎನ್ನುವ ಪದದ ಜೊತೆ ಹೊಂದಿಸುವೆನಾದರೆ, ನಾನು ಒಂದು ಸಂಗತಿಯನ್ನ (datum) ಅದರ ಸಾಧ್ಯ ಪರಿಣಾಮಗಳ ಜೊತೆ ಕನೆಕ್ಟ್ ಮಾಡುತ್ತಿದ್ದೇನೆ, ಇದು ಈ ವಿದ್ಯಮಾನವನ್ನು ಅಧ್ಯಯನ ಮಾಡುವಾಗ ನನಗೆ ದೊರೆತ ಒಳನೋಟ. ಈಗ ಹೇಳಿದ ಈ ಬಗೆಯ ನೆನಪಿಸಿಕೊಳ್ಳುವಿಕೆ ತನ್ನೊಳಗೆ ಸೃಜನಾತ್ಮಕ ಆಲೋಚನೆಯಂಥ ಪ್ರಕ್ರಿಯೆಯನ್ನ ಒಳಗೊಂಡಿದೆ. ಈ ಬಗೆಯ ಜೀವಂತ ನೆನಪಿಸಿಕೊಳ್ಳುವಿಕೆಯ ಎದ್ದು ಕಾಣುವ ಉದಾಹರಣೆಗಳೆಂದರೆ, ಫ್ರಾಯ್ಡ್ ಸಂಯೋಜಿಸಿದ “free associations “.

ವಿಷಯಗಳನ್ನು ಸಂಗ್ರಹಿಸಿಟ್ಟುಕೊಳ್ಳುವಲ್ಲಿ ಹೆಚ್ಚು ಒಲವು ಇಲ್ಲದ ಜನರಿಗೆ, ಅವರ ನೆನಪುಗಳು ತುಂಬ ಚೆನ್ನಾಗಿ ಕೆಲಸ ಮಾಡಲು, ಒಂದು ಶಕ್ತಿಶಾಲಿ ತುರ್ತು ಆಸಕ್ತಿಯ ಅವಶ್ಯಕತೆಯಿರುತ್ತದೆ. ಉದಾಹರಣೆಗೆ, ಜನರು ಬಹಳ ಹಿಂದೆ ಮರೆತು ಹೋಗಿರುವ ವಿದೇಶಿ ಭಾಷೆಯ ಕೆಲ ಪದಗಳನ್ನು ನೆನಪಿಟ್ಟುಕೊಳ್ಳುತ್ತಾರೆ, ಅವು ನೆನಪಿಟ್ಟುಕೊಳ್ಳಲೇ ಬೇಕಾದ ಮಹತ್ವದ ಪದಗಳಾಗಿದ್ದರೆ. ನನ್ನ ವೈಯಕ್ತಿಕ ಅನುಭವದಲ್ಲಿ ಹೇಳುವುದಾದರೆ, ನನಗೆ ಅಷ್ಟೇನೂ ಒಳ್ಳೆಯ ನೆನಪಿನಶಕ್ತಿ ಇಲ್ಲವಾದರೂ, ನಾನು ವಿಶ್ಲೇಷಣೆ ಮಾಡಿದ ವ್ಯಕ್ತಿಯ ಕನಸು ನನಗೆ ನೆನಪಿರುತ್ತದೆ, ಎರಡು ವಾರ ಆಗಲಿ ಅಥವಾ ಐದು ವರ್ಷ ಆಗಲಿ ಮತ್ತೆ ಆ ವ್ಯಕ್ತಿ ನನಗೆ ಮುಖಾಮುಖಿಯಾದಾಗ ಮತ್ತು ನಾನು ಆ ವ್ಯಕ್ತಿಯ ಸಂಪೂರ್ಣ ವ್ಯಕ್ತಿತ್ವದ ಮೇಲೆ concentrate ಮಾಡಿದಾಗ. ಆದರೆ ಐದು ನಿಮಿಷಗಳ ಮೊದಲು ಕಂಡ ಕನಸು ಏನು ಮಾಡಿದರೂ ನೆನಪಾಗುವುದಿಲ್ಲ.

Being ಜೀವನ ವಿಧಾನದಲ್ಲಿ ನೆನಪಿಸಿಕೊಳ್ಳುವಿಕೆ ಎಂದರೆ, ಈ ಹಿಂದೆ ಕೇಳಿದ ಅಥವಾ ನೋಡಿದ ಸಂಗತಿಯೊಂದನ್ನು ಜೀವಂತಗೊಳಿಸಿಕೊಳ್ಳುವುದು. ಈ ಹಿಂದೆ ನೋಡಿದ ವ್ಯಕ್ತಿಯ ಚೆಹರೆಯನ್ನು ಅಥವಾ ದೃಶ್ಯವೊಂದನ್ನ ಕಲ್ಪನೆ ಮಾಡಿಕೊಳ್ಳಲು ಪ್ರಯತ್ನಿಸುವುದರ ಮೂಲಕ ನಾವು ಈ ಬಗೆಯ ಸೃಜನಾತ್ಮಕ ನೆನಪಿಸಿಕೊಳ್ಳುವಿಕೆಯನ್ನು ಅನುಭವಿಸಬಹುದು. ಈ ಎರಡೂ ಪ್ರಕರಣಗಳಲ್ಲಿ ಥಟ್ಚನೆ ನೆನಪು ಮಾಡಿಕೊಳ್ಳುವುದು ನಮಗೆ ಸಾಧ್ಯವಾಗಲಾರದು; ನಾವು ಈ ಸಂಗತಿಯನ್ನು ಮತ್ತೆ ಹೊಸದಾಗಿ ಕಟ್ಟಿಕೊಳ್ಳಬೇಕು ಹಾಗು ನಮ್ಮ ಮೈಂಡ್ ನಲ್ಲಿ ಜೀವಂತಗೊಳಿಸಿಕೊಳ್ಳಬೇಕು. ಈ ರೀತಿಯ ನೆನಪಿಸಿಕೊಳ್ಳುವಿಕೆ ಯಾವಾಗಲೂ ಅಷ್ಟು ಸರಳವೇನಲ್ಲ; ನೋಡಿದ ವ್ಯಕ್ತಿಯ ಚಹರೆಯನ್ನ ಅಥವಾ ದೃಶ್ಯವನ್ನ ಸ್ಪಷ್ಟವಾಗಿ ನೆನಪಿಸಿಕೊಳ್ಳಲು ನಾವು ಆ ವ್ಯಕ್ತಿಯ ಚಹರೆಯನ್ನ ಅಥವಾ ಆ ದೃಶ್ಯವನ್ನ ಸಾಕಷ್ಟು ಏಕಾಗ್ರತೆಯಿಂದ ಗಮನಿಸಿರಬೇಕು. ಯಾವಾಗ ಇಂಥ ನೆನಪಿಸಿಕೊಳ್ಳುವಿಕೆ ಸಫಲವಾಗುತ್ತದೆಯೋ ಆಗ ಯಾವ ವ್ಯಕ್ತಿಯ ಚಹರೆಯನ್ನ ನಾವು ನೆನಪಿಸಿಕೊಳ್ಳುವ ಪ್ರಯತ್ನ ಮಾಡಿರುತ್ತೇವೆಯೋ ಆ ವ್ಯಕ್ತಿ ಮತ್ತು ಆ ದೃಶ್ಯ ಭೌತಿಕವಾಗಿ ನಮ್ಮ ಕಣ್ಣ ಮುಂದಿರುವಂತೆ ಜೀವಂತಿಕೆಯನ್ನ ತಾಳುತ್ತವೆ.

Having ಜೀವನ ವಿಧಾನದಲ್ಲಿರುವವರು ಚೆಹರೆಯನ್ನ, ದೃಶ್ಯವನ್ನ ನೆನಪಿಸಿಕೊಳ್ಳುವುದು, ಬಹುತೇಕ ಜನರು ಫೋಟೋಗ್ರಾಫ್ ನ ನೋಡುವ ವಿಧಾನದಲ್ಲಿ. ಫೋಟೋಗ್ರಾಫ್ ಕೇವಲ ಅವರ ನೆನಪನ್ನ ಹರಿತಗೊಳಿಸಿ ಚೆಹರೆ ಮತ್ತು ದೃಶ್ಯಗಳನ್ನ ಗುರುತಿಸುವಲ್ಲಿ ಮಾತ್ರ ಸಹಾಯ ಮಾಡುತ್ತದೆ, ಹೀಗೆ ಅವರು ನೆನಪಿಸಿಕೊಂಡಾಗ “ ಹೌದು ಇವರೇ ಅವರು” ಅಥವಾ “ಯಸ್ ನಾನು ಇಲ್ಲಿಗೆ ಹೋಗಿದ್ದೆ” ಎಂದು ಉದ್ಗರಿಸುತ್ತಾರೆ. ಬಹುತೇಕ ಜನರಲ್ಲಿ ಫೋಟೋಗ್ರಾಫ್ ಒಂದು ಪರಕೀಯ ನೆನಪಿನಂತೆ (alienated memory) ಕೆಲಸ ಮಾಡುತ್ತದೆ.

ಕಾಗದಕ್ಕೆ ವಹಿಸಿಕೊಡಲಾಗಿರುವ ನೆನಪು ಪರಕೀಯ ನೆನಪಿಸಿಕೊಳ್ಳುವಿಕೆಯ ಇನ್ನೊಂದು ರೂಪ. ನಾನು ಏನು ನೆನಪಿಟ್ಟುಕೊಳ್ಳಬೇಕು ಎನ್ನುವುದನ್ನ ಕಾಗದದಲ್ಲಿ ಬರೆದಿಡುವ ಮೂಲಕ ನಾನು ನೆನಪಿನ ಕುರಿತಾದ ಎಲ್ಲ ಮಾಹಿತಿಯನ್ನ ಸಂಗ್ರಹಿಸಿದ್ದೇನೆ ಮತ್ತು ನನ್ನ ಮೆದುಳಿನಲ್ಲಿ ಇದನ್ನ ಬರೆದಿಟ್ಟುಕೊಳ್ಳಬೇಕಾದ ಯಾವ ಅವಶ್ಯಕತೆಯೂ ಇಲ್ಲ. ನನಗೆ ನನ್ನ ಸಂಗ್ರಹದ ಬಗ್ಗೆ ಖಚಿತತೆ ಇದೆ. ಆದರೆ ನನ್ನ ನೋಟ್ಸ್ ಕಳೆದುಹೋದಾಗ, ವಿಷಯದ ಕುರಿತಾದ ನನ್ನ ನೆನಪನ್ನೂ ನಾನು ಕಳೆದುಕೊಂಡು ಬಿಡುತ್ತೇನೆ. ನನ್ನ ನೆನಪಿನ ಸಾಮರ್ಥ್ಯ ನನ್ನನ್ನು ಬಿಟ್ಟು ಹೋಗಿದೆ, ನನ್ನ ನೆನಪಿನ ಬ್ಯಾಂಕ್ ನನ್ನನ್ನು ಹೊರತುಪಡಿಸಿದ ನನ್ನ ಭಾಗವಾಗಿದೆ (externalised part of me), ನನ್ನ ನೋಟ್ಸ್ ಗಳ ರೂಪದಲ್ಲಿ.

ಸಮಕಾಲೀನ ಸಮಾಜದಲ್ಲಿ ಜನರು ನೆನಪಿಟ್ಟುಕೊಳ್ಳಲೇಬೇಕಾಗಿರುವ ಬಹುಸಂಖ್ಯೆಯ ಮಾಹಿತಿಯನ್ನ ಗಮನಿಸಿದರೆ, ಸ್ವಲ್ಪ ಮಟ್ಟಿಗಿನ ನೋಟ್ಸ್ ಮಾಡಿಕೊಳ್ಳುವುದು ಮತ್ತು ಪುಸ್ತಕಗಳಲ್ಲಿನ ಮಾಹಿತಿಯನ್ನ ಗುರುತಿಸಿಟ್ಟುಕೊಳ್ಳುವುದನ್ನ ತಪ್ಪಿಸುವುದು ಸಾಧ್ಯವೇ ಇಲ್ಲ. ಆದರೆ ನೆನಪಿಟ್ಟುಕೊಳ್ಳುವುದರ ಬದಲಾಗಿ ಹೀಗೆ ನೋಟ್ಸ್ ಮಾಡಿಕೊಳ್ಳುವ ಪ್ರವೃತ್ತಿ ಅವಶ್ಯಕತೆಗಿಂತಲೂ ಜಾಸ್ತಿ ಆಗುತ್ತಿರುವುದನ್ನ ನಾವು ಗಮನಿಸಬಹುದು. ನಾವು ನಮ್ಮನ್ನೇ ಸ್ವಲ್ಪ ಆಳವಾಗಿ ನೋಡಿಕೊಂಡಾಗ, ಬರೆದಿಟ್ಟುಕೊಳ್ಳುವ ನಮ್ಮ ಪ್ರವೃತ್ತಿ ನಮ್ಮ ನೆನಪಿನ ಶಕ್ತಿಯನ್ನ ಕಡಿಮೆ ಮಾಡುತ್ತಿರುವುದನ್ನ ನಾವು ಗಮನಿಸಬಹುದು. ಇದನ್ನು ಅರ್ಥಮಾಡಿಕೊಳ್ಳಲು ಈ ಕೆಲವು ಉದಾಹರಣೆಗಳು ನಮಗೆ ಸಹಾಯ ಮಾಡಬಹುದು.

ದಿನ ನಿತ್ಯ ಅಂಗಡಿಗಳಲ್ಲಿ ನಡೆಯುವ ಈ ಉದಾಹರಣೆಯನ್ನ ಗಮನಿಸಿ. ಇವತ್ತು ಅಂಗಡಿಯ ಕ್ಯಾಶ್ ಕೌಂಟರ್ ನಲ್ಲಿ ಕುಳಿತಿರುವ ವ್ಯಕ್ತಿ ಬಹಳ ಅಪರೂಪಕ್ಕೆ ಎರಡು ಅಥವಾ ಮೂರು ಸಂಗತಿಗಳ ಬೆಲೆಯನ್ನ ತನ್ನ ತಲೆಯಲ್ಲಿ ಆ್ಯಡ್ ಮಾಡಿ ನಿಮಗೆ ಒಟ್ಟು ಮೊತ್ತವನ್ನ ಹೇಳಬಲ್ಲ, ಅವರು ಇಷ್ಟು ಸರಳ ಲೆಕ್ಕಕ್ಕೆ ಕೂಡಲೇ ಕ್ಯಾಲ್ಕುಲೇಟರ್ ಬಳಸಲು ಮುಂದಾಗುತ್ತಾರೆ. ಕ್ಲಾಸ್ ರೂಂ ಗಳಲ್ಲಿ ನಡೆಯುವ ಇನ್ನೊಂದು ಪ್ರಸಂಗವನ್ನು ಗಮನಿಸಿ. ಇದನ್ನ ಟೀಚರ್ ಗಳು ಧೃಡೀಕರಿಸಬಹುದು ; ಕ್ಲಾಸ್ ರೂಮಿನಲ್ಲಿ ಟೀಚರ್ ಹೇಳಿದ ಪ್ರತೀ ವಾಕ್ಯವನ್ನ ಬರೆಗಿಟ್ಟುಕೊಳ್ಳುವ ವಿದ್ಯಾರ್ಥಿಗಳಿಂತ, ತಮ್ಮ ನೆನಪಿನ ಶಕ್ತಿಯ ಮೇಲೆ ಭಾರ ಹಾಕಿ ಟೀಚರ್ ಹೇಳಿದ್ದನ್ನ ಗಮನವಿಟ್ಟು ಕೇಳುತ್ತ , ವಿಷಯವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುವ ವಿದ್ಯಾರ್ಥಿಗಳು ಹೆಚ್ಚು ಸಂಗತಿಗಳನ್ನ ನೆನಪಿಟ್ಟುಕೊಳ್ಳುತ್ತಾರೆ, ಕೊನೆಪಕ್ಷ ಅವಶ್ಯಕ ಸಂಗತಿಗಳನ್ನಾದರೂ ಸರಿ. ಹಾಗೆಯೇ ಸಂಗೀತಕಾರರು, ಯಾರಿಗೆ ಮ್ಯೂಸಿಕ್ ನೋಟ್ಸ್ ನ (score) ನೋಡುತ್ತ-ಓದುತ್ತ ನುಡಿಸುವುದು ಸುಲಭವೋ ಅವರಿಗೆ, ಮ್ಯೂಸಿಕ್ ನೋಟ್ಸ್ ನ ಸಹಾಯವಿಲ್ಲದೇ ಸಂಗೀತವನ್ನು ನೆನಪಿಟ್ಟುಕೊಳ್ಳುವುದು ತುಂಬ ಕಠಿಣ ( Toscanini, ಯಾರ ನೆನಪಿನ ಶಕ್ತಿ ಅಗಾಧವಾಗಿತ್ತೋ, ಅವನು being ವಿಧಾನದ ಸಂಗೀತಗಾರನಾಗಿ ಉತ್ತಮ ಉದಾಹರಣೆ). ಕೊನೆಯ ಉದಾಹರಣೆ, ಮೆಕ್ಸಿಕೋದಲ್ಲಿ ನಾನು ಗಮನಿಸಿದ ಸಂಗತಿಯೆಂದರೆ, ಅನಕ್ಷರಸ್ಥ ಜನರು ಅಥವಾ ಯಾರಿಗೆ ಓದುಬರಹ ಸ್ವಲ್ಪ ಮಾತ್ರ ಗೊತ್ತೋ ಅವರ ನೆನಪಿನ ಶಕ್ತಿ ಸರಾಗವಾಗಿ ಓದು ಬರೆಯಬಲ್ಲ ಕೈಗಾರಿಕಾ ದೇಶಗಳ ಅಕ್ಷರಸ್ತರಿಗಿಂತ ಹೆಚ್ಚು ಉನ್ನತ ದರ್ಜೆಯದಾಗಿತ್ತು. ಬಾಕಿ ಎಲ್ಲ ಸಂಗತಿಗಳ ಜೊತೆ ಈ ವಿಷಯ ಸ್ಪಷ್ಟಪಡಿಸುವುದೇನೆಂದರೆ, ನಾವು ಪ್ರಚಾರ ಮಾಡುವ ಹಾಗೆ ಸಾಕ್ಷರತೆ ಒಂದು ವರ ಅಲ್ಲ, ಯಾವಾಗ ಜನ ತಮ್ಮ ಈ ಸಾಕ್ಷರತೆಯನ್ನ ಕೇವಲ ಯಾಂತ್ರಿಕ ಓದಿಗಾಗಿ ಬಳಸುತ್ತಾರೆ ಮತ್ತು ಅವರ ಇಂಥ ಪ್ರವೃತ್ತಿ ಅವರ ಅನುಭವಿಸುವ ಹಾಗು ಕಲ್ಪನೆ ಮಾಡುವ ಸಾಮರ್ಥ್ಯವನ್ನ ಕುಂಠಿತಗೊಳಿಸುತ್ತದೆ.

(ಮುಂದುವರೆಯುತ್ತದೆ)


1 Comment

Leave a Reply