ಯಾರಿಗೆ ಸಾವಿಗೂ ಮುಂಚೆ ಅರಿವು ಸಾಧ್ಯವಾಗುತ್ತದೆಯೋ ಅವರಿಗೆ ಸಾವಿಲ್ಲ ; ಆದರೆ ಯಾರು ಸಾವು ಸಮೀಪಿಸುವವರೆಗೂ ನಿದ್ರಿಸುತ್ತಿದ್ದಾರೋ ಅವರು ಬದುಕಿನಿಂದ ವಂಚಿತರು… ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ನಿಮಗೆ ಊಟದಲ್ಲಿನ ರುಚಿ ಬೇಕೊ?
ಅಥವಾ ನೀವು
ಊಟದಲ್ಲಿ ರುಚಿ ಬೆರೆಸುವವನ
ರುಚಿ ನೋಡ ಬೇಕೊ?
ಸಾಗರದಲ್ಲಿ ಅದ್ಬುತ ಸಂಗತಿಗಳಿವೆ,
ಒಪ್ಪುವ ಮಾತು,
ಮತ್ತು ಸ್ವತಃ ಇಡೀ ಸಾಗರವೇ ಇದೆಯಲ್ಲ?
ಮನೆ ಕಟ್ಟುವವನ ತಿಳುವಳಿಕೆಯ ಬಗ್ಗೆ
ಗೌರವ ಸರಿ,
ಈಗ ಆ ತಿಳುವಳಿಕೆಯನ್ನೇ ಕಟ್ಟಿದವನ ಬಗ್ಗೆ
ಒಮ್ಮೆ ಯೋಚಿಸಿ.
ಬೀಜದಿಂದ ಎಣ್ಣೆ ತೆಗೆಯುವುದು ಕಲೆ ಹೌದು,
ಕಣ್ಣೊಳಗೆ ದೃಷ್ಟಿ ಮನೆಮಾಡಿರುವ
ಅದ್ಭುತದ ಮೇಲೊಮ್ಮೆ ಕಣ್ಣು ಹಾಯಿಸಿ.
ಇಡೀ ರಾತ್ರಿ, ಬೇಕುಗಳ ಹುಚ್ಚಾಟ.
ಬೆಳಕು ಹರಿಯುತ್ತಿದ್ದಂತೆಯೇ
ನಿನ್ನ ಅಂಗೈಯಲ್ಲಿ ನನ್ನ ಅಂಗೈ ಹಿಡಿದುಕೊ.
ಇದು ಸಾಧ್ಯವೇ ಎಂದು
ಸಂದೇಹ ಪಡುವವರು ಇದ್ದಾರೆ ಇನ್ನೂ.
ಅವರು ಬಂಗಾರದ ಹುಡಿಯನ್ನು
ಬಿಸಾಕುತ್ತಾರೆ ಖಾಲಿ ತೊಟ್ಟಿಯಲ್ಲಿ,
ಕೊಟ್ಟಿಗೆಗೆ ಹೋಗುತ್ತಾರೆ
ಕತ್ತೆಗಳನ್ನು ಹುಡುಕಿಕೊಂಡು.
ಈಗ ಮಾತು ಸಾಕು ಗೆಳೆಯ,
ಕಿವಿಗೆ ಕಣ್ಣು ಹಚ್ಚುವ ಸಾಧ್ಯತೆ ನಿನ್ನಲ್ಲಿದೆ.
ಕವಿತೆಯ ಉಳಿದ ಭಾಗವನ್ನು
ಆ ಭಾಷೆಯಲ್ಲಿ ಹಾಡು.
- ರೂಮಿ.
ಒಮ್ಮೆ ನಸ್ರುದ್ದೀನ್ ಓಡೋಡುತ್ತ ನದಿಯ ದಂಡೆಗೆ ಬಂದ. ಅವನಿಗೆ ಅವಶ್ಯಕ ಕೆಲಸದ ಮೇಲೆ ನದಿಯಾಚೆಯ ಊರಿಗೆ ತುರ್ತಾಗಿ ಹೋಗಬೇಕಾಗಿತ್ತು. ಎಲ್ಲಿ ದೋಣಿ ತಪ್ಪಿಹೋಗುತ್ತದೆಯೋ ಎಂದು ಅವನು ನದಿಯ ದಂಡೆಗೆ ಧಾವಿಸಿ ಬಂದಿದ್ದ. ಅವನು ನದಿ ತಲುಪಿದಾಗ, ದೋಣಿ ದಂಡೆಯಿಂದ ಸ್ವಲ್ಪ ದೂರ ಇರುವುದು ಕಾಣಿಸಿತು. ಎಲ್ಲಿ ದೋಣಿ ಮಿಸ್ ಆಗುತ್ತದೆಯೋ ಎಂದು ನಸ್ರುದ್ದೀನ್ ನೀರಿನಲ್ಲಿ ಧುಮುಕಿ ಈಜುತ್ತ ದೋಣಿಯನ್ನು ಹೋಗಿ ಸೇರಿಕೊಂಡ. ಈ ಗಲಾಟೆಯಲ್ಲಿ ಅವನು ಜಾರಿ ಬಿದ್ದು ತನ್ನ ಬಟ್ಟೆ ಹರಿದುಕೊಂಡಿದ್ದ, ಮೊಣ ಕೈಗೆ ಗಾಯ ಮಾಡಿಕೊಂಡಿದ್ದ, ಆದರೂ ಅವನು ದೋಣಿ ಸಿಕ್ಕ ಖುಶಿಯಲ್ಲಿದ್ದ. ತನ್ನ ಸಹ ಪ್ರಯಾಣಿಕರನ್ನು ನೋಡಿ ನಸ್ರುದ್ದೀನ್ ಖುಶಿಯಿಂದ ಉದ್ಗರಿಸಿದ, “ ಅಬ್ಬಾ ಸ್ವಲ್ಪದರಲ್ಲಿ ಬಚಾವಾದೆ, ದೋಣಿ ತಪ್ಪಿಹೋಗಿಬಿಡುತ್ತಿತ್ತು ! “
ನಸ್ರುದ್ದೀನ್ ನ ಈ ಧಾವಂತವನ್ನು ಗಮನಿಸಿದ ಸಹಪ್ರಯಾಣಿಕನೊಬ್ಬ ಮಾತನಾಡಿದ, “ ಮುಲ್ಲಾ, ನೀನು ಯಾಕೆ ಇಷ್ಟು ರಿಸ್ಕ್ ತೊಗೊಂಡೆ ? ದೋಣಿ ಎಲ್ಲೂ ಹೋಗುತ್ತಿಲ್ಲ, ಈಗ ಅದು ದಂಡೆಗೆ ಬಂದು ಮುಟ್ಟುವುದಿತ್ತು”.
ಕೊನೆಯ ಸಮಯದಲ್ಲಿ ನಿಮಗೂ ಈ ಸತ್ಯ ಗೊತ್ತಾಗುತ್ತದೆ, ಇಷ್ಟು ದಿನದ ನಿಮ್ಮ ಬದುಕಿನ ಧಾವಂತ, ಕೊನೆಗೆ ಯಾವ ಉಪಯೋಗಕ್ಕೂ ಬರಲಿಲ್ಲ ಎನ್ನುವುದು. ನಿಮ್ಮನ್ನು ಕರೆದುಕೊಂಡು ಹೋಗಬೇಕಾಗಿರುವ ದೋಣಿ ಈಗ ದಂಡೆಗೆ ಬಂದು ಮುಟ್ಟುತ್ತಿರಬಹುದು. ಆದರೆ ಈಗ ಕಳೆದು ಹೋದದ್ದಕ್ಕೆ ಚಿಂತಿಸಿ ಫಲವಿಲ್ಲ, ಇನ್ನೂ ಸ್ವಲ್ಪ ಹೊತ್ತು ಬಾಕಿ ಇದೆ, ಏನಾದರೂ ಮಾಡಬಹುದಾ ನೋಡಿ.
ಯಾರಿಗೆ ಸಾವಿಗೂ ಮುಂಚೆ ಅರಿವು ಸಾಧ್ಯವಾಗುತ್ತದೆಯೋ ಅವರಿಗೆ ಸಾವಿಲ್ಲ ; ಆದರೆ ಯಾರು ಸಾವು ಸಮೀಪಿಸುವವರೆಗೂ ನಿದ್ರಿಸುತ್ತಿದ್ದಾರೋ ಅವರು ಬದುಕಿನಿಂದ ವಂಚಿತರು. ಅವರ ಬದುಕು ಸಾವಿನಿಂದ ಕೊನೆಗೊಳಿಸಲ್ಪಟ್ಟ ಒಂದು ಸುದೀರ್ಘ ಕನಸು. ಯಾರು ತಮ್ಮ ಬದುಕಿನ ಕಾಲಮಾನದಲ್ಲಿ ಅರಿವನ್ನು ಸಾಧ್ಯಮಾಡಿಕೊಳ್ಳುತ್ತಾರೋ ಅವರು, ತಮ್ಮ ಪ್ರಕೃತಿಯನ್ನ ಗಮನಿಸುತ್ತಾರೆ ಮತ್ತು ಅನುಭವಿಸುತ್ತಾರೆ, ಅದು ಅಮರ ಎನ್ನುವುದನ್ನ ಗೊತ್ತು ಮಾಡಿಕೊಳ್ಳುತ್ತಾರೆ.
ನೀವು ಅಪ್ರಜ್ಞೆಯ ಸ್ಥಿತಿಯಲ್ಲಿರುವಾಗಲೂ ಬದುಕು ಸಾಗುತ್ತಲೇ ಇರುತ್ತದೆ, ಈ ಸ್ಥಿತಿಯಲ್ಲಿ ನೀವು ನಶೆಯಲ್ಲಿರುವವರಂತೆ, ಎಲ್ಲಿಗೆ ಹೋಗುತ್ತಿದ್ದೀರಿ, ಯಾಕೆ ಹೋಗುತ್ತಿದ್ದೀರಿ, ಒಂದೂ ನಿಮಗೆ ಗೊತ್ತಿಲ್ಲ.
ಕುಡಿದು ಮತ್ತರಾಗಿದ್ದ ನಸ್ರುದ್ದೀನ್ ಮತ್ತು ಅವನ ಇಬ್ಬರು ಗಳೆಯರು ಮನೆಗೆ ಹೋಗಲು ಟ್ಯಾಕ್ಸಿ ಕೂಗಿ ನಿಲ್ಲಿಸಿದರು.
ಇವರ ಕುಡಿದ ಸ್ಥಿತಿ ಗಮನಿಸಿದ ಡ್ರೈವರ್ ಇವರನ್ನ ಟ್ಯಾಕ್ಸಿಯಲ್ಲಿ ಕೂರಿಸಿ ಎರಡು ಬಾರಿ ಇಂಜಿನ್ ಆನ್ ಆಫ್ ಮಾಡಿ “ ಎಲ್ಲ ಇಳಿಯರಿ ನಿಮ್ಮ ಜಾಗ ಬಂತು “ ಎಂದು ಮೂವರನ್ನೂ ಟ್ಯಾಕ್ಸಿಯಿಂದ ಇಳಿಸಿದ.
ಮೊದಲನೇಯ ಗೆಳೆಯ ಟ್ಯಾಕ್ಸಿ ಬಾಡಿಗೆ ಪೇ ಮಾಡಿದ.
ಎರಡನೇಯ ಗೆಳೆಯ ಡ್ರೈವರ್ ಗೆ ಥ್ಯಾಂಕ್ಸ್ ಹೇಳಿದ.
ಆದರೆ ನಸ್ರುದ್ದೀನ್ ಡ್ರೈವರ್ ನ ಕಪಾಳಕ್ಕೆ ಜೋರಾಗಿ ಬಾರಿಸಿದ.
ತಾನು ಮಾಡಿದ ಮೋಸ ಇವನಗೆ ಗೊತ್ತಾಗಿದೆ ಎಂದು ಭಯಪಟ್ಟ ಡ್ರೈವರ್, ನಸ್ರುದ್ದೀನ್ ನನ್ನು ಹೊಡೆದ ಕಾರಣ ಕೇಳಿದ.
“ ಎಷ್ಟು ಫಾಸ್ಟ್ ಓಡಿಸುತ್ತೀ ಟ್ಯಾಕ್ಸಿ ನೀನು, ಸ್ವಲ್ಪ ಸ್ಪೀಡ ಕಂಟ್ರೋಲ್ ಮಾಡು, ಇವತ್ತು ನಮ್ಮನ್ನ ಕೊಂದು ಬಿಡ್ತಾ ಇದ್ದೆ. “
ನಸ್ರುದ್ದೀನ್, ಡ್ರೈವರ್ ನ ಗದರಿಸಿದ.