ರಾಜಕಾರಣಿಗಳು ಧರ್ಮದ ಹೆಸರನ್ನು ಬಳಸಿಕೊಂಡು ಜನರನ್ನು ವಿಭಜಿಸುತ್ತಾರೆ. ಆ ಮೂಲಕ ಚುನಾವಣೆಗೆ ಯಾವುದೇ ಅಭಿವೃದ್ದಿಯ ವಿಷಯವನ್ನಲ್ಲದೇ ಧರ್ಮದ ಹೆಸರಿನಲ್ಲಿಯೇ ಸಮಾಜವನ್ನು ಕೋಮುದ್ರುವೀಕರಣ ಮಾಡಿ ಅಧಿಕಾರಕ್ಕೆ ಬರಲು ನಾನಾ ಆಟಗಳನ್ನು ಆಡುತ್ತಾರೆ … : ಓಶೋ ರಜನೀಶ್ | ಸಂಗ್ರಹ & ಅನುವಾದ: ವಿಶ್ವನಾಥ ಬಿ.ಎಂ
ರಾಜಕೀಯದಲ್ಲಿ ‘ಧರ್ಮ’ ಇರಬೇಕಾ? ಅಥವಾ ‘ಧರ್ಮ’ದ ಹೆಸರಿನಲ್ಲಿ ರಾಜಕೀಯ ಬೇಕಾ? ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡುವ ಕುರಿತು ಓಶೋ ಹೇಳಿದ್ದೇನು? ಈ ಪ್ರಶ್ನೆಗೆ ಉತ್ತರವನ್ನು ಕಂಡುಕೊಳ್ಳುವ ಒಂದು ಪ್ರಯತ್ನ ಇಲ್ಲಿದೆ.
ಓಶೋ ರಜನೀಶ್.. ಭಾರತ ಕಂಡ ಅತ್ಯಂತ ಅಪರೂಪದ ಆಧ್ಯಾತ್ಮಿಕ ವ್ಯಕ್ತಿ ಮತ್ತು ತತ್ವಜ್ಞಾನಿ. ತಾವು ಜೀವಿಸಿದ ಅವಧಿಯಲ್ಲಿ ಅದೆಷ್ಟು ಹೆಸರು ಸಂಪಾದನೆ ಮಾಡಿದ್ದರೂ ಅಷ್ಟೇ ವಿವಾದಾತ್ಮಕ ವ್ಯಕ್ತಿಯೂ ಎನಿಸಿಕೊಂಡಿದ್ದರು ಓಶೋ. ಅವರ ನೇರನುಡಿಗಳು, ಹರಿತವಾದ ಮಾತುಗಳು, ವಿಭಿನ್ನ ಒಳನೋಟಗಳ ಟೀಕೆಗಳು ಅನೇಕರನ್ನು ನಿದ್ದೆಗೆಡಿಸಿದ್ದವು. ಇದೇ ಕಾರಣದಿಂದ ವಿವಾದವನ್ನೂ ಹುಟ್ಟುಹಾಕಿವೆ ಎಂದರೆ ತಪ್ಪಿಲ್ಲ. ಆಧಾತ್ಮದಿಂದ ಲೈಂಗಿಕತೆಯವರೆಗೂ, ಪ್ರೀತಿಯಿಂದ ದ್ವೇಷದವರೆಗೂ, ಜನನದಿಂದ ಮರಣದವರೆಗೂ ವಿಶಿಷ್ಟವಾಗಿ ಮಾತನಾಡಿದವರು ಆಚಾರ್ಯ ರಜನೀಶ್. ಬಹುಶಃ ಅವರು ಮಾತನಾಡದ ವಿಷಯಗಳೇ ಇಲ್ಲವೇನೋ ಅನ್ನುವಷ್ಟರ ಮಟ್ಟಿಗೆ ಮಾತನಾಡಿದ್ದಾರೆ. ಮಾತುಗಳ ಮೂಲಕವೇ ಮೋಡಿ ಮಾಡಿದ ಆಯಸ್ಕಾಂತೀಯ ಸೆಳೆತವಿದ್ದ ವ್ಯಕ್ತಿ ಎಂದರೆ ಅದು ಓಶೋ.
ಇಂತಹ ಒಬ್ಬ ಆಧ್ಯಾತ್ಮಿಕ ಗುರು, ಚಿಂತಕ ಹಾಗೂ ತತ್ವಜ್ಞಾನಿ ರಾಜಕಾರಣದ ಬಗ್ಗೆ, ರಾಜಕಾರಣಿಗಳ ಬಗ್ಗೆ ಹಾಗೂ ರಾಜಕೀಯದಲ್ಲಿ ಧರ್ಮವನ್ನು ಎಳೆದು ತಂದು ರಾಜಕಾರಣ ಮಾಡುವ ಒಂದು ವಿಧಾನದ ಕುರಿತು ಏನು ಹೇಳಿದ್ದಾರೆ ಎನ್ನುವ ಪ್ರಶ್ನೆಯನ್ನು ಇಟ್ಟುಕೊಂಡು ಉತ್ತರ ಹುಡುಕಿಕೊಂಡು ಹೊರಟರೆ ನಮಗೆ ವಿಶಿಷ್ಟವಾದ ಒಳನೋಟಗಳು ಅವರ ಮಾತುಗಳಿಂದ/ಪ್ರವಚನಗಳಿಂದ ಸಿಗುತ್ತವೆ.
ರಾಜಕಾರಣ ಹಾಗೂ ರಾಜಕಾರಣಿಗಳ ಬಗ್ಗೆ ಒಂದು ವಿಶಿಷ್ಟವಾದಂತಹ ದೃಷ್ಟಿಕೋನವನ್ನು ಓಶೋ ಹೊಂದಿದ್ದರು. ಭಾರತದ ರಾಜಕೀಯ ವ್ಯವಸ್ಥೆ ಭ್ರಷ್ಟತೆಯಿಂದ ಕೂಡಿದೆ ಹಾಗೂ ದೋಷಪೂರಿತವಾಗಿದೆ ಎಂದು ಅತ್ಯಂತ ಕಟು ಶಬ್ದಗಳಿಂದ ಟೀಕಿಸಿದ್ದರು. ರಾಜಕಾರಣಿಗಳಿಗೆ ಸಮಾಜದ ಯೋಗಕ್ಷೇಮದ ಕುರಿತ ಕಾಳಜಿಗಿಂತ ಹೆಚ್ಚಾಗಿ ತಮಗೆ ಸಿಗಬೇಕಾದ ಅಧಿಕಾರ ಹಾಗೂ ವ್ಯವಸ್ಥೆಯನ್ನು ನಿಯಂತ್ರಿಸುವ ಶಕ್ತಿಯ ಕುರಿತೇ ಹೆಚ್ಚು ಆಸಕ್ತಿ ಇದೆ ಎಂದು ಹೇಳಿದ್ದಾರೆ. ರಾಜಕಾರಣಿಗಳಿಗೆ ಜನರ ಹಿತವನ್ನು ಕಾಯುವ ಕಾಳಜಿ ಇರುವುದಿಲ್ಲ, ಅದೇನಿದ್ದರೂ ಸಹ ತೋರ್ಪಡಿಕೆ ಮಾತ್ರ, ಬೇಕಿರುವುದು ಅಧಿಕಾರವಷ್ಟೇ ಎಂದು ರಾಜಕಾರಣಿಗಳನ್ನು ಟೀಕಿಸಿದ್ದಾರೆ.
ಓಶೋ ರಾಜಕಾರಣವನ್ನು ‘ವಂಚಿಸುವ, ಮೋಸ ಮಾಡುವ ಒಂದು ಆಟ’ವೆಂದು ಜರಿದರು. ಅವರ ಪ್ರಕಾರ, ರಾಜಕಾರಣವೆಂದರೆ ಬಣ್ಣಬಣ್ಣದ ಮಾತುಗಳನ್ನಾಡಿ ಸಾರ್ವಜನಿಕರನ್ನು ತಮ್ಮೆಡೆಗೆ ಸೆಳೆದುಕೊಂಡು, ದೊಡ್ಡ ದೊಡ್ಡ ಭರವಸೆಗಳನ್ನು ನೀಡಿ ಜನರನ್ನು ಮರಳು ಮಾಡಿ ಅಧಿಕಾರವನ್ನು ಉಳಿಸಿಕೊಳ್ಳಲು/ಪಡೆಯಲು ಮಾಡುವ ಒಂದು ಸರ್ಕಸ್. ಅಧಿಕಾರಕ್ಕಾಗಿ ರಾಜಕಾರಣಿಗಳು ಯಾವುದೇ ಕೆಳ ಹಂತಕ್ಕೂ ಹೋಗುವುದಕ್ಕೆ ಹೇಸುವುದಿಲ್ಲ. ಒಮ್ಮೆ ಅಧಿಕಾರ ರುಚಿ ಹತ್ತಿದರೆ ಅದನ್ನು ಮತ್ತೆ ಹೇಗಾದರೂ ಮಾಡಿ ಪಡೆಯಲೇಬೇಕು ಎನ್ನುವ ಕೆಟ್ಟ ಆಸೆಯಿಂದಲೇ ರಾಜಕಾರಣ ಇಷ್ಟೊಂದು ಹೊಲಸಾಗಿದೆ ಎಂದು ಅತ್ಯಂತ ಕಠೋರವಾಗಿ ರಾಜಕಾರಣಿಗಳನ್ನು ಟೀಕಿಸಿದರು.
ಇನ್ನು ಓಶೋ ಭಾರತೀಯ ರಾಜಕೀಯದಲ್ಲಿ ಧರ್ಮದ ಪಾತ್ರದ ಕುರಿತು ಹೇಳಿದ್ದೇನು ಗೊತ್ತಾ? ಧರ್ಮ ಮತ್ತು ರಾಜಕಾರಣ ಇವೆರಡೂ ಅತ್ಯಂತ ಅಪಾಯಕಾರಿ ಜೋಡಿ ಎಂದು ಅವರು ಅಭಿಪ್ರಾಯಪಟ್ಟಿದ್ದರು. ರಾಜಕಾರಣಿಗಳು ಧರ್ಮದ ಹೆಸರನ್ನು ಬಳಸಿಕೊಂಡು ಜನರನ್ನು ವಿಭಜಿಸುತ್ತಾರೆ. ಆ ಮೂಲಕ ಚುನಾವಣೆಗೆ ಯಾವುದೇ ಅಭಿವೃದ್ದಿಯ ವಿಷಯವನ್ನಲ್ಲದೇ ಧರ್ಮದ ಹೆಸರಿನಲ್ಲಿಯೇ ಸಮಾಜವನ್ನು ಕೋಮುದ್ರುವೀಕರಣ ಮಾಡಿ ಅಧಿಕಾರಕ್ಕೆ ಬರಲು ನಾನಾ ಆಟಗಳನ್ನು ಆಡುತ್ತಾರೆ ಎಂದು ಹೇಳಿದ್ದರು. ಧರ್ಮ ಯಾವತ್ತಿದ್ದರೂ ವೈಯಕ್ತಿಯ ವಿಷಯವಾಗಿರಬೇಕು. ರಾಜಕೀಯದಲ್ಲಿ ಅದಕ್ಕೆ ಸ್ಥಾನವಿಲ್ಲ. ರಾಜಕಾರಣಿಗಳು ಸಹ ಧರ್ಮವನ್ನು ರಾಜಕೀಯದಲ್ಲಿ ಬೆರೆಸಕೂಡದು ಎಂದಿದ್ದರು.
ಭಾರತೀಯ ರಾಜಕಾರಣ ಮತ್ತು ರಾಜಕಾರಣಿಗಳ ಬಗ್ಗೆ ಓಶೋ ಅವರ ಅಭಿಪ್ರಾಯಗಳು ತುಂಬಾ ಭಿನ್ನವಾಗಿದ್ದವು. ಹೀಗಾಗಿಯೇ ಅವು ಹೆಚ್ಚು ವಿವಾದಾತ್ಮಕತೆಗೂ ಒಳಗಾಗಿದ್ದವು. ಜನರು ತಾವು ಆಯ್ಕೆ ಮಾಡಿದ ಸರ್ಕಾರವನ್ನು, ರಾಜಕಾರಣಿಗಳನ್ನು ಅಥವಾ ರಾಜಕೀಯ ವ್ಯವಸ್ಥೆಯನ್ನು ಟೀಕಿಸುವುದು ಮತ್ತು ರಾಜಕಾರಣಿಗಳ ಕೆಲಸಗಳನ್ನು ಪ್ರಶ್ನಿಸುವುದು ಪ್ರಜೆಗಳ ಅತ್ಯಂತ ಮುಖ್ಯ ಕೆಲಸ ಎಂದು ಓಶೋ ನಂಬಿದ್ದರು. ಜನರು ಕೇವಲ ಮತಚಲಾಯಿಸಿ ಸುಮ್ಮನೆ ಕೂರುವುದಲ್ಲ, ಬದಲಾಗಿ ಆಯ್ಕೆ ಮಾಡಿದ ಸರ್ಕಾರ ಏನು ಮಾಡಿದೆ? ಏನು ಮಾಡಿಲ್ಲ? ನುಡಿದಂತೆ ನಡೆದಿದೆಯೇ? ಜನಹಿತವನ್ನು ಕಾಪಾಡಿದೆಯೇ ಎನ್ನುವುದನ್ನು ಪ್ರಶ್ನೆ ಮಾಡಿಕೊಳ್ಳಬೇಕು? ನ್ಯೂನತೆಗಳ ಕುರಿತು ಧ್ವನಿಎತ್ತಬೇಕು ಇದುವೇ ಪ್ರಜಾಪ್ರಭುತ್ವದ ಪ್ರಮುಖ ಲಕ್ಷಣ ಎಂದಿದ್ದರು. ಉತ್ತಮ ರಾಜಕಾಣವನ್ನು ಬರಮಾಡಿಕೊಳ್ಳುವ ವಿಧಾನ ಎಂದಿದ್ದರು.
ಓಶೋ ರಾಜಕಾರಣಿಗಳನ್ನು/ರಾಜಕಾರಣವನ್ನು ಟೀಕಿಸುವ ಜೊತೆ ಜೊತೆಗೆ ರಾಜಕಾರಣದ ಬದಲಾವಣೆಗೆ ಕೆಲವೊಂದಿಷ್ಟು ಸಲಹೆ ಸೂಚನೆಗಳನ್ನು ನೀಡಿದರು. ರಾಜಕಾರಣಿಗಳು ಆಧ್ಯಾತ್ಮಿಕತೆಯ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು. ಪ್ರೀತಿ, ಸಹಾನುಭೂತಿ ಹಾಗೂ ಶಾಂತಿ ಈ ಗುಣಗಳನ್ನು ಅಳವಡಿಸಿಕೊಂಡು ದ್ವೇಷ, ಹಿಂಸೆ ಹಾಗೂ ಸುಳ್ಳು ಹೇಳುವುದನ್ನು ಬಿಡಬೇಕು ಎಂದಿದ್ದರು. ಆಧ್ಯಾತ್ಮಿಕತೆಯೇ ರಾಜಕಾರಣಕ್ಕೆ ಮಾರ್ಗದರ್ಶನ ಮಾಡಬೇಕು. ರಾಜಕಾರಣಿಗಳು ತಮ್ಮ ಸ್ವಾರ್ಥ, ಅಸೂಹೆ ಹಾಗೂ ದ್ವೇಷದ ಗುಣದಿಂದ ಆಚೆಗೆ ಬಂದು ಒಳ್ಳೆಯ ಮನುಷ್ಯನಾದ ನಂತರ ರಾಜಕಾರಣ ಮಾಡಬೇಕು. ಈ ವಿಧಾನದಿಂದ ಸಮಾಜಕ್ಕೆ ಒಳಿತಾಗುತ್ತದೆ ಎನ್ನುವ ಅರ್ಥದಲ್ಲಿ ಓಶೋ ಮಾತನಾಡಿದ್ದರು. ಅಂತರಂಗದಲ್ಲಿ ಬದಲಾವಣೆಯಾಗದೇ (ವೈಯಕ್ತಿಕ ರೂಪಾಂತರ) ಸಮಾಜದಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ. ಆ ಅಂತರಂಗದ ಬದಲಾವಣೆಯನ್ನು ಆಧ್ಯಾತ್ಮ ತರುತ್ತದೆ. ಹೀಗಾಗಿ ಆಧ್ಯಾತ್ಮಿಕ ಮನೋಭಾವ ಉಳ್ಳವರಾಗಿ ನಂತರ ಸತ್ಯದ ದಾರಿಯಲ್ಲಿ ರಾಜಕಾರಣ ಮಾಡಬೇಕು ಎಂದಿದ್ದರು. ಆಧ್ಯಾತ್ಮಿಕ ಬೆಳಕಿನಲ್ಲಿದ್ದುಕೊಂಡು ರಾಜಕಾರಣಿಯಾದವರು ಸಮಾಜದಲ್ಲಿ ನಿಜವಾದ ಬದಲಾವಣೆಯನ್ನು ತರಬಹುದು ಎಂದು ಓಶೋ ಪ್ರತಿಪಾದಿಸಿದ್ದರು.