ಪರಸ್ಪರರ ನಡುವಿನ ಸಂಭಾಷಣೆ: To have or to be #15

ಯಾವ ಪೂರ್ವಸಿದ್ಧತೆಯೂ ಇಲ್ಲದೆ ಸಂಭಾಷಣೆಗೆ ತೊಡಗುವವರು ಪರಿಸ್ಥಿತಿಗೆ ತಕ್ಷಣವೇ ಅತ್ಯಂತ ಸಹಜವಾಗಿ, ಸೃಜನಾತ್ಮಕವಾಗಿ ಸ್ಪಂದಿಸುತ್ತಾರೆ; ತಮ್ಮನ್ನು ತಾವು ಮರೆತುಬಿಡುತ್ತ, ತಮ್ಮ ಜ್ಞಾನವನ್ನ, ತಮ್ಮ ಸ್ಥಾನ ಮಾನವನ್ನ ಮರೆತುಬಿಡುತ್ತ. ಅವರ ಅಹಂ, ಅವರ ದಾರಿಗೆ ಅಡ್ಡಗಾಲಾಗುವುದಿಲ್ಲ ಮತ್ತು ಈ ಒಂದು ಕಾರಣಕ್ಕಾಗಿಯೇ ಅವರು, ಇನ್ನೊಬ್ಬ ವ್ಯಕ್ತಿಗೆ ಮತ್ತು ಅವರ ಐಡಿಯಾಗಳಿಗೆ ಪರಿಪೂರ್ಣವಾಗಿ ಸ್ಪಂದಿಸುತ್ತಾರೆ. ಇಂಥವರು ಹೊಸ ಹೊಸ ಐಡಿಯಾಗಳನ್ನು ಹುಟ್ಟು ಹಾಕುತ್ತಾರೆ ಏಕೆಂದರೆ, ಅವರು ಯಾವುದಕ್ಕೂ ಅಂಟಿಕೊಂಡಿಲ್ಲ... ಮೂಲ: ಎರಿಕ್ ಫ್ರಾಮ್ । ಕನ್ನಡಕ್ಕೆ: ಚಿದಂಬರ ನರೇಂದ್ರ.

ಹಿಂದಿನ ಭಾಗವನ್ನು ಇಲ್ಲಿ ಓದಿ…. https://aralimara.com/2023/04/02/fromm-11/

ಪರಸ್ಪರರ ನಡುವಿನ ಸಂಭಾಷಣೆ (Conversing)

Having ಮತ್ತು Being ಜೀವನ ವಿಧಾನಗಳ ನಡುವಿನ ವ್ಯತ್ಯಾಸವನ್ನು ಪರಸ್ಪರರ ನಡುವಿನ ಸಂಭಾಷಣೆಯ ಎರಡು ಉದಾಹರಣೆಗಳಲ್ಲಿ ಬಹಳ ಸರಳವಾಗಿ ಗುರುತಿಸಬಹುದು. X ಅಭಿಪ್ರಾಯ ಹೊಂದಿರುವ ವ್ಯಕ್ತಿ A , ಮತ್ತು Y ಅಭಿಪ್ರಾಯ ಹೊಂದಿರುವ ವ್ಯಕ್ತಿ B ಯ ನಡುವಿನ ಚರ್ಚೆಯ ಸಂಭಾಷಣೆಯನ್ನು ಗಮನಿಸಿ. ಈ ಇಬ್ಬರು ವ್ಯಕ್ತಿಗಳಿಗೆ ಬೇಕಾಗಿರುವುದು ತಮ್ಮ ತಮ್ಮ ಅಭಿಪ್ರಾಯಗಳನ್ನು ಸಮರ್ಥಿಸಿಕೊಳ್ಳಲು ಉತ್ತಮವಾದ, ಸಮಂಜಸವಾದ ವಾದಗಳು. ಇಬ್ಬರು ವ್ಯಕ್ತಿಗಳಿಗೂ ತಮ್ಮ ಸ್ವಂತದ ಅಭಿಪ್ರಾಯ ಅಥವಾ ತಮ್ಮ ವಿರೋಧಿಯ ಅಭಿಪ್ರಾಯ ಬದಲಾಗುತ್ತದೆ ಎನ್ನುವ ನಿರೀಕ್ಷೆ ಇಲ್ಲ. ಈ ಇಬ್ಬರು ವ್ಯಕ್ತಿಗಳಿಗೂ ಎಲ್ಲಿ ತಮ್ಮ ಅಭಿಪ್ರಾಯವನ್ನು ಬದಲಾಯಿಸಿಕೊಳ್ಳಬೇಕಾದ ಪರಿಸ್ಥಿತಿ ಎದುರಾಗುತ್ತದೋ ಎನ್ನುವ ಭಯ, ಏಕೆಂದರೆ ಈ ಅಭಿಪ್ರಾಯಗಳು ಅವರ ಸ್ವಂತದ ಸ್ವತ್ತಾಗಿವೆ ಮತ್ತು ಇವನ್ನು ಬದಲಾಯಿಸಿಕೊಳ್ಳುವುದೆಂದರೆ ಅಥವಾ ಕಳೆದುಕೊಳ್ಳುವುದೆಂದರೆ ಮತ್ತಷ್ಟು ಬಡತನಕ್ಕೆ ಒಳಗಾಗುವುದು.

ಚರ್ಚೆ ಅಲ್ಲದ, ವಾದ ಅಲ್ಲದ ಸಂಭಾಷಣೆಯಲ್ಲಿ ಪರಿಸ್ಥಿತಿ ಕೊಂಚ ಭಿನ್ನವಾಗಿರುತ್ತದೆ. ಯಾರು ಇನ್ನೂ ಪ್ರಾಮುಖ್ಯತೆ, ಪ್ರಸಿದ್ಧಿ ಅಥವಾ ನೈಜ ಗುಣ ಸ್ವಭಾವದಂಥ ( man of real quality) ವೈಶಿಷ್ಟ್ಯಗಳನ್ನು ಹೊಂದಿರುವ ವ್ಯಕ್ತಿಗಳನ್ನ ಅಥವಾ ಯಾರಿಂದ ತಮಗೇನಾದರೂ ಆಗಬೇಕಾಗಿದೆಯೋ (ಒಳ್ಳೆಯ ಕೆಲಸ, ಪ್ರೀತಿ, ಹೊಗಳಿಕೆ ಇತ್ಯಾದಿ,) ಅಂಥ ವ್ಯಕ್ತಿಗಳನ್ನ, ಭೇಟಿ ಮಾಡುವಅನುಭವ ಹೊಂದಿಲ್ಲವೋ, ಅಂಥ ಸಂದರ್ಭದಲ್ಲಿ ಬಹಳಷ್ಟು ಜನ ಸ್ವಲ್ಪವಾದರೂ ಆತಂಕಿತರಾಗಿರುತ್ತಾರೆ, ಇಂಥ ಮುಖ್ಯ ಭೇಟಿಗಳಿಗಾಗಿ ಬಹುತೇಕರು ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಾರೆ. ಇಂಥ ಭೇಟಿಯ ಸಲುವಾಗಿ ಜನರು, ಇನ್ನೊಬ್ಬರಲ್ಲಿ ಆಸಕ್ತಿ ಹುಟ್ಟಿಸುವ ಟಾಪಿಕ್ ಗಳ ಬಗ್ಗೆ ಯೋಚನೆ ಮಾಡುತ್ತಾರೆ, ಸಂಭಾಷಣೆಯನ್ನು ಹೇಗೆ ಆರಂಭಿಸಬೇಕು ಎನ್ನುವ ಬಗ್ಗೆ ಮುಂಚಿತವಾಗಿಯೇ ತಲೆಕೆಡಿಸಿಕೊಂಡಿರುತ್ತಾರೆ, ಕೆಲವರಂತೂ ತಮ್ಮಿಬ್ಬರ ನಡೆಯಬಹುದಾದ ಇಡೀ ಸಂಭಾಷಣೆಯ ರೂಪ ರೇಖೆಗಳನ್ನ ಮ್ಯಾಪ್ ಮಾಡಿಕೊಂಡಿರುತ್ತಾರೆ, ಕೊನೆಪಕ್ಷ ತಮ್ಮ ಭಾಗದ ಸಂಭಾಷಣೆಯನ್ನಂತೂ ಗಟ್ಟಿ ಮಾಡಿಕೊಂಡಿರುತ್ತಾರೆ. ಅಥವಾ ತಾವು ಹೊಂದಿರಬಹುದಾದ ಸಂಗತಿಗಳ ಬಗ್ಗೆ ತಮ್ಮ ಹಿಂದಿನ ಯಶಸ್ಸುಗಳ ಬಗ್ಗೆ, ತಮ್ಮ ಆಕರ್ಷಕ ವ್ಯಕ್ತಿತ್ವದ ಬಗ್ಗೆ ( ಅಥವಾ ಭಯಪಡಿಸುವ ವ್ಯಕ್ತಿತ್ವದ ಬಗ್ಗೆ, ಅದು ಉಪಯೋಗ ಆಗುವ ಹಾಗಿದ್ದರೆ), ತಮ್ಮ ಸಾಮಾಜಿಕ ಸ್ಥಾನ ಮಾನದ ಬಗ್ಗೆ, ತಮ್ಮ ಕನೆಕ್ಷನ್ ಗಳ ಬಗ್ಗೆ, ತಮ್ಮ ಡ್ರೆಸ್ ಹಾಗು ಕಾಣಿಸಿಕೊಳ್ಳುವಿಕೆಯ ಬಗ್ಗೆ ಯೋಚನೆ ಮಾಡುತ್ತ, ತಮ್ಮನ್ನು ತಾವು ಪುಷ್ಟಿಕರಿಸಿಕೊಳ್ಳುತ್ತಾರೆ. ಒಂದೇ ಮಾತಿನಲ್ಲಿ ಹೇಳುವುದಾದರೆ, ಅವರು ಮಾನಸಿಕವಾಗಿ ತಮ್ಮ ಸ್ವತ್ತು-ಸಂಪತ್ತನ್ನು ಬ್ಯಾಲೆನ್ಸ್ ಮಾಡಿಕೊಳ್ಳುತ್ತ, ಈ ಮೌಲ್ಯಮಾಪನದ ಆಧಾರದ ಮೇಲೆ ತಮ್ಮ ಮುಂದಿನ ಸಂಭಾಷಣೆಗಳಲ್ಲಿ ತಮ್ಮ ವೈಶಿಷ್ಟ್ಯಗಳನ್ನು ಪ್ರದರ್ಶಿಸುತ್ತಾರೆ. ಇಂಥ ಪ್ರದರ್ಶನ ಕಲೆಯಲ್ಲಿ ಪಳಗಿರುವ ಜನ ಇನ್ನೊಬ್ಬರ ಮೇಲೆ ಪ್ರಭಾವ ಬೀರುವುದರಲ್ಲಿ ಯಶಸ್ವಿಯಾದರೂ, ಇಂಥ ಪ್ರಭಾವ ಬೀರುವಿಕೆಯಲ್ಲಿ ಅವರ ವೈಯಕ್ತಿಕ ಪ್ರದರ್ಶನದ ಅಂಶ ಕಡಿಮೆ, ಮತ್ತು ಪ್ರಭಾವಕ್ಕೊಳಗಾದ ಜನರ ನಿರ್ಣಯಿಸುವ ಸಾಮರ್ಥ್ಯದ ಕೊರತೆಯೇ ಹೆಚ್ಚು. ಪ್ರದರ್ಶನಕಾರ ಅಷ್ಟು ಚಾಲಾಕಿಯಾಗಿರದಿದ್ದ ಪಕ್ಷದಲ್ಲಿ ಅಂಥ ಪ್ರದರ್ಶನ ಜೀವಂತಿಕೆಯ ಕೊರತೆಯಿಂದಾಗಿ, ಬೋರಿಂಗ್, ಯೋಜಿತ ಎಂದೆನಿಸಿಕೊಳ್ಳುತ್ತ ಜನರಲ್ಲಿ ಆಸಕ್ತಿಯನ್ನು ಹೊರಹೊಮ್ಮಿಸುವಲ್ಲಿ ವಿಫಲವಾಗುತ್ತದೆ.

ಇಂಥದೊಂದು ಜೀವನ ವಿಧಾನಕ್ಕೆ ವಿರುದ್ಧವಾಗಿರುವವರು, ತಮ್ಮನ್ನು ತಾವು ಯಾವ ಬಗೆಯಲ್ಲೂ ಪುಷ್ಟೀಕರಿಸಿಕೊಳ್ಳದೆ, ಯಾವ ಪೂರ್ವಸಿದ್ಧತೆಯೂ ಇಲ್ಲದೆ ಪರಿಸ್ಥಿತಿಯನ್ನು ಎದುರುಗೊಳ್ಳುತ್ತಾರೆ. ಇವರು, ಪರಿಸ್ಥಿತಿಗೆ ತಕ್ಷಣವೇ ಅತ್ಯಂತ ಸಹಜವಾಗಿ (spontaneously) ಸೃಜನಾತ್ಮಕವಾಗಿ ಸ್ಪಂದಿಸುತ್ತಾರೆ; ತಮ್ಮನ್ನು ತಾವು ಮರೆತುಬಿಡುತ್ತ, ತಮ್ಮ ಜ್ಞಾನವನ್ನ, ತಮ್ಮ ಸ್ಥಾನ ಮಾನವನ್ನ ಮರೆತುಬಿಡುತ್ತ. ಅವರ ಅಹಂ, ಅವರ ದಾರಿಗೆ ಅಡ್ಡಗಾಲಾಗುವುದಿಲ್ಲ ಮತ್ತು ಈ ಒಂದು ಕಾರಣಕ್ಕಾಗಿಯೇ ಅವರು, ಇನ್ನೊಬ್ಬ ವ್ಯಕ್ತಿಗೆ ಮತ್ತು ಅವರ ಐಡಿಯಾಗಳಿಗೆ ಪರಿಪೂರ್ಣವಾಗಿ ಸ್ಪಂದಿಸುತ್ತಾರೆ. ಇಂಥವರು ಹೊಸ ಹೊಸ ಐಡಿಯಾಗಳನ್ನು ಹುಟ್ಟು ಹಾಕುತ್ತಾರೆ ಏಕೆಂದರೆ, ಅವರು ಯಾವುದಕ್ಕೂ ಅಂಟಿಕೊಂಡಿಲ್ಲ. Having ವಿಧಾನದ ಜನರು, ತಾವು ಹೊಂದಿರುವುದರ ಮೇಲೆ ಹೆಚ್ಚು ಅವಲಂಬಿತರಾಗಿರುತ್ತಾರಾದರೆ, being ವಿಧಾನದ ಜನರು ನಿರ್ಭರರಾಗಿರುವುದು ತಾವು ಇರುವುದರ ಮೇಲೆ (the fact that they are), ತಾವು ಜೀವಂತಿಕೆಯಿಂದ ಸ್ಪಂದಿಸುತ್ತಿರುವ ಕಾರಣವಾಗಿ ಮತ್ತು, ತಮಗೆ ಯಾವುದನ್ನಾದರೂ ಬಿಟ್ಟು ಬಿಡುವ ಹಾಗು ಯಾವುದಕ್ಕಾದರೂ ಪ್ರತಿಕ್ರಯಿಸುವ ಧೈರ್ಯ ಇದ್ದಾಗ ಮಾತ್ರ ತಾವು ಹೊಸದೇನನ್ನಾದರೂ ಹುಟ್ಟಿಸಬಹುದು ಎನ್ನುವುದು ಗೊತ್ತಿರುವ ಕಾರಣದ ಮೇಲೆ. ಇವರು ಪೂರ್ಣ ಜೀವಂತಿಕೆಯಿಂದ ಸಂಭಾಷಣೆಯಲ್ಲಿ ಭಾಗವಹಿಸುತ್ತಾರೆ ಏಕೆಂದರೆ, ತಾವು ಹೊಂದಿರುವುದರ ಕುರಿತಾದ ಯಾವ ಆತಂಕಗಳೂ ತಮ್ಮನ್ನು ನಿಗ್ರಹಿಸಲು ಅವರು ಅವಕಾಶ ನೀಡುವುದಿಲ್ಲ. ಇವರ ವೈಯಕ್ತಿಕ ಜೀವಂತಿಕೆ ಸಾಂಕ್ರಾಮಿಕ ಮತ್ತು ಇದು ಇನ್ನೊಬ್ಬರಿಗೆ, ಅವರ ತಮ್ಮ ಅಹಂಕೇಂದ್ರತ್ವವನ್ನು (egocentricity) ಮೀರಲು ಸಹಾಯ ಮಾಡುತ್ತದೆ. ಹಾಗಾಗಿ ಈ ಬಗೆಯ ಸಂಭಾಷಣೆ ಕೇವಲ ಸರಕುಗಳ (ಮಾಹಿತಿ, ಜ್ಞಾನ, ಸ್ಥಾನ-ಮಾನ) ವಿನಿಮಯವಾಗಿ ಕೊನೆಗೊಳ್ಳದೆ, ಒಂದು ಜೀವಂತ ಸಂವಾದವಾಗಿ (ಇಲ್ಲಿ ಯಾರು ಸರಿ ಎನ್ನುವುದಕ್ಕೆ ಯಾವ ಮಹತ್ವವೂ ಇಲ್ಲ) ರೂಪಗೊಳ್ಳುತ್ತದೆ. ಇಲ್ಲಿ ದ್ವಂದ್ವಗಳು ಕೂಡಿಯೇ ಕುಣಿಯಲು ಆರಂಭಿಸುತ್ತವೆ ಮತ್ತು ಅವು ಬೇರೆಯಾಗುವುದು ಗೆಲುವು ಮತ್ತು ದುಃಖದ ಮೂಲಕ ಅಲ್ಲ ( ಈ ಎರಡೂ ಕೂಡ ಸಮವಾಗಿ ಬರಡು ಸಂಗತಿಗಳು) ಖುಶಿಯ ಮೂಲಕ. ( ಮನೋವಿಶ್ಲೇಷಣಾತ್ಮಕ ಚಿಕಿತ್ಸೆಯ ಅವಶ್ಯಕ ಅಂಶವೆಂದರೆ ಚಿಕಿತ್ಸಕನ ಈ ಜೀವಂತಗೊಳಿಸುವ ಕ್ವಾಲಿಟಿ. ಚಿಕಿತ್ಸೆಯ ವಾತಾವರಣ, ಭಾರ, ನಿರ್ಜೀವ ಮತ್ತು ಬೋರಿಂಗ್ ಆಗಿರುವಾಗ, ಮನೋವಿಶ್ಲೇಷಣೆಯ ಎಷ್ಟೆಲ್ಲ ವಿವರಣೆಗಳು ಕೂಡ ಯಾವ ಪರಿಣಾಮವನ್ನೂ ಬೀರುವುದಿಲ್ಲ)

(ಮುಂದುವರೆಯುತ್ತದೆ… )


(ಎರಿಕ್ ಫ್ರಾಂ ಬಹುಚರ್ಚಿತ ಕೃತಿ To have or To Be ಇನ್ನು ಕನ್ನಡದಲ್ಲಿ ಪ್ರತಿ ಶನಿವಾರ ಮತ್ತು ಭಾನುವಾರ ಸರಣಿಯಾಗಿ ಅರಳಿಮರದಲ್ಲಿ ಪ್ರಕಟಗೊಳ್ಳಲಿದೆ. ಫ್ರಾಂ ಅವರ “The art of Loving” ಅನುವಾದ ಮಾಡಿದ್ದ ಚಿದಂಬರ ನರೇಂದ್ರ ಅವರು ಅರಳಿಮರ ಓದುಗರಿಗಾಗಿ ಈ ಸರಣಿಯನ್ನು ಅನುವಾದಿಸುತ್ತಿದ್ದಾರೆ. )

1 Comment

Leave a Reply