ನಗುವಿನ ಬುದ್ಧ, ನಗುವಿನ ಧ್ಯಾನ… : ಓಶೋ ವ್ಯಾಖ್ಯಾನ

ಮಾಸ್ಟರ್ ಹೊಟೈ ಉತ್ತರಿಸುತ್ತಾನೆ, “ ನಾನು ಯಾಕೆ ನಗುತ್ತಿದ್ದೇನೆ ಎಂದರೆ ನಾನು ಇಷ್ಟು ವರ್ಷ ಕಷ್ಟಪಟ್ಟು ಯಾವುದನ್ನು ಹುಡುಕುತ್ತಿದ್ದೆನೋ ಆ ಜ್ಞಾನೋದಯ ಮೊದಲೇ ನನ್ನೊಳಗೆ ಇತ್ತು. ನಮ್ಮೊಳಗೇ ಇರುವುದು ಹೊರಗೆ ಸಿಗುವುದು ಹೇಗೆ ಸಾಧ್ಯ? ಜ್ಞಾನಿ ಜ್ಞಾನೋದಯವನ್ನು ಹುಡುಕುವುದೆಂದರೆ ನಾಯಿ ತನ್ನ ಬಾಲವನ್ನು ಹುಡುಕಿದಂತೆ, ಮನುಷ್ಯ ತನ್ನ ನೆರಳನ್ನು ಹುಡುಕಿದಂತೆ. ಅದು ಸದಾ ಅವನ ಜೊತೆಯೇ ಇದೆ ಆದರೆ ಅದನ್ನು ಹಿಡಿದುಕೊಳ್ಳುವುದು ಸಾಧ್ಯವಿಲ್ಲ.” ~ ಓಶೋ । ಕನ್ನಡಕ್ಕೆ: ಚಿದಂಬರ ನರೇಂದ್ರ

ಇಡೀ ರಾತ್ರಿ
ತೆಂಗಿನ ಗರಿಗಳ ನೆರಳು
ಮೆಟ್ಚಿಲುಗಳನ್ನು ಗುಡಿಸುತ್ತಿತ್ತು.

ಒಂದು ಕಣ ಧೂಳೂ
ಕದಲಲಿಲ್ಲ

ಇಡೀ ರಾತ್ರಿ
ಚಂದ್ರನ ಕಿರಣಗಳು
ಸರೋವರವನ್ನು ಇರಿಯುತ್ತಿದ್ದವು

ಒಂದು ಹನಿ ಕಾಂತಿಯೂ
ಉಳಿಯಲಿಲ್ಲ.

~ The forest of Zen

ಜಪಾನ್ ಲ್ಲಿ ಒಬ್ಬ ಮಹಾ ಬುದ್ಧನ ಬಗ್ಗೆ ಒಂದು ಸುಂದರ ಕಥೆಯಿದೆ. ಅವನೇ ಝೆನ್ ಮಾಸ್ಟರ್ ಹೊಟೈ. ಜಪಾನ್ ಲ್ಲಿ ಎಲ್ಲ ಇವನನ್ನ ಲಾಫಿಂಗ್ ಬುದ್ಧ ಎಂದೇ ಕರೆಯುತ್ತಾರೆ, ಏಕೆಂದರೆ ಜ್ಞಾನೋದಯವಾದ ಕ್ಷಣದಿಂದ ನಗಲು ಶುರು ಮಾಡಿದ ಮಾಸ್ಟರ್ ಹೊಟೈ ಕೊನೆಯವರೆಗೂ ನಗುತ್ತಲೇ ಇದ್ದ.

ಜನ ಅವನನ್ನು ಪ್ರಶ್ನೆ ಮಾಡುತ್ತಾರೆ, “ ಯಾಕೆ ನೀನು ಇಷ್ಟು ನಗುತ್ತೀಯ?”

“ನನಗೆ ಜ್ಞಾನೋದಯವಾಗಿದೆ” ಇದು ಮಾಸ್ಟರ್ ಹೊಟೈ ನ ಉತ್ತರ.

“ ಜ್ಞಾನೋದಯಕ್ಕೂ ನಗುವಿಗೂ ಏನು ಸಂಬಂಧ? ನಗುವುದರಿಂದ ಏನು ಸಾಧಿಸುತ್ತಿದ್ದೀಯ?” ಜನ ಆಶ್ಚರ್ಯದಿಂದ ಮತ್ತೆ ಪ್ರಶ್ನೆ ಮಾಡುತ್ತಾರೆ.

ಮಾಸ್ಟರ್ ಹೊಟೈ ಉತ್ತರಿಸುತ್ತಾನೆ, “ ನಾನು ಯಾಕೆ ನಗುತ್ತಿದ್ದೇನೆ ಎಂದರೆ ನಾನು ಇಷ್ಟು ವರ್ಷ ಕಷ್ಟಪಟ್ಟು ಯಾವುದನ್ನು ಹುಡುಕುತ್ತಿದ್ದೆನೋ ಆ ಜ್ಞಾನೋದಯ ಮೊದಲೇ ನನ್ನೊಳಗೆ ಇತ್ತು. ನಮ್ಮೊಳಗೇ ಇರುವುದು ಹೊರಗೆ ಸಿಗುವುದು ಹೇಗೆ ಸಾಧ್ಯ? ಜ್ಞಾನಿ ಜ್ಞಾನೋದಯವನ್ನು ಹುಡುಕುವುದೆಂದರೆ ನಾಯಿ ತನ್ನ ಬಾಲವನ್ನು ಹುಡುಕಿದಂತೆ, ಮನುಷ್ಯ ತನ್ನ ನೆರಳನ್ನು ಹುಡುಕಿದಂತೆ. ಅದು ಸದಾ ಅವನ ಜೊತೆಯೇ ಇದೆ ಆದರೆ ಅದನ್ನು ಹಿಡಿದುಕೊಳ್ಳುವುದು ಸಾಧ್ಯವಿಲ್ಲ.”

“ಜ್ಞಾನೋದಯದ ಹುಡುಕಾಟ ಮಹಾ ಹಾಸ್ಯಾಸ್ಪದ, ಮಹಾ ಅಸಂಗತ ! ಆದ್ದರಿಂದಲೇ ನಾನು ನಗುತ್ತಿದ್ದೇನೆ. ನಾನು ಯಾವಾಗಲೂ ಬುದ್ಧನಾಗಿದ್ದೆ. ಎಷ್ಟೋ ಜನ್ಮಗಳಿಂದ ಈ ಕುರಿತು ನನಗೆ ಪ್ರಜ್ಞೆಯೇ ಇರಲಿಲ್ಲ. ನಾನು ಹೇಗೆ ನನ್ನನ್ನು ಮಿಸ್ ಮಾಡಿಕೊಳ್ಳುತ್ತಾ ಹೋದೆ ಎನ್ನುವುದನ್ನ ನಂಬಲು ಸಾಧ್ಯವಿಲ್ಲ. ಯಾವಾಗ ಈ ಕುರಿತು ನನಗೆ ಪ್ರಜ್ಞೆ ಬಂದಿತೋ, ಆಗ ಒಂದು ಮಹಾ ನಗು ನನ್ನೊಳಗೆ ಹುಟ್ಟಿಕೊಂಡಿತು, ಅದು ನಿಲ್ಲುತ್ತಲೇ ಇಲ್ಲ, ನಾನು ಏನು ಮಾಡಲಿ?” ಮಾಸ್ಟರ್ ಹೊಟೈ ತನ್ನ ನಿರಂತರ ನಗುವಿಗೆ ಕಾರಣ ಹೇಳಿದ.

ಮತ್ತು ಮಾಸ್ಟರ್ ತಾನು ಸಾಯುವವರೆಗೂ ನಗುತ್ತಲೇ ಇದ್ದ ಎಂದು ಹೇಳಲಾಗುತ್ತದೆ. ಇದು ಜಗತ್ತಿಗೆ ಅವನ ಸಂದೇಶ.

ಒಮ್ಮೆ ಒಬ್ಬ ಝೆನ್ ಮಾಸ್ಟರ್ ನ ಆಶ್ರಮಕ್ಕೆ ಬೇರೆ ಆಶ್ರಮದ ಇಬ್ಬರು ಝೆನ್ ಸನ್ಯಾಸಿಗಳು ಅತಿಥಿಗಳಾಗಿ ಬಂದಿದ್ದರು.

“ ಈ ಆಶ್ರಮದಲ್ಲಿ ಝೆನ್ ಬಗ್ಗೆ ತಿಳುವಳಿಕೆ ಇರುವ ಒಬ್ಬರೂ ಇಲ್ಲ “ ಎಂದು ಅವರಿಬ್ಬರೂ ಮಾತನಾಡಿಕೊಳ್ಳುವುದನ್ನ ಆ ಆಶ್ರಮದ ಹಿರಿಯ ಶಿಷ್ಯ ಕೇಳಿಸಿಕೊಂಡ.

ಕೆಲ ಹೊತ್ತಿನ ನಂತರ ಆಶ್ರಮದ ಎಲ್ಲರೂ ಕಟ್ಟಿಗೆ ಸಂಗ್ರಹಿಸುವ ಕೆಲಸದಲ್ಲಿ ನಿರತರಾಗಿದ್ದಾಗ ಈ ಇಬ್ಬರೂ ಅತಿಥಿ ಸನ್ಯಾಸಿಗಳು ವಿಶ್ರಾಂತಿ ತೆಗೆದುಕೊಳ್ಳುತ್ತಿರುವುದನ್ನು ಆಶ್ರಮದ ಹಿರಿಯ ಶಿಷ್ಯ ಗಮನಿಸಿದ.

ಅವ ತಕ್ಷಣವೇ ಕಟ್ಟಿಗೆಯೊಂದನ್ನು ಹಿಡಿದುಕೊಂಡು ಆ ಇಬ್ಬರು ಅತಿಥಿಗಳು ಎದುರು ಪ್ರತ್ಯಕ್ಷನಾದ. “ ಈ ಕಟ್ಟಿಗೆಯ ಝೆನ್ ಸ್ವಭಾವದ ಬಗ್ಗೆ ಹೇಳಿ ಹಾಗಾದರೆ” ಎಂದು ಸಿಟ್ಟಿನಿಂದ ಅವರಿಬ್ಬರಿಗೂ ಸವಾಲು ಹಾಕಿದ.

ಅತಿಥಿಗಳಿಬ್ಬರೂ ಮೂಕ ವಿಸ್ಮಿತರಾದರು. ಅವರಿಬ್ಬರ ಬಾಯಿಯಿಂದ ಒಂದು ಮಾತೂ ಹೊರಡಲಿಲ್ಲ.

“ ಈ ಆಶ್ರಮದಲ್ಲಿ ಝೆನ್ ಗೊತ್ತಿರುವವರು ಯಾರು ಇಲ್ಲ ಎಂದು ಹೇಳಿದ ಮಾತನ್ನ ವಾಪಸ್ ತೆಗೆದುಕೊಳ್ಳಿ” ಹಿರಿಯ ಶಿಷ್ಯ ಅವರನ್ನು ಅಣಕಿಸಿ ಮಾತನಾಡಿದ.

ಸಂಜೆ ಆಶ್ರಮದ ಝೆನ್ ಮಾಸ್ಟರ್ ವಾಪಸ್ ಬಂದಾಗ, ಹಿರಿಯ ಶಿಷ್ಯ ನಡೆದಿದ್ದನ್ನೆಲ್ಲ ಮಾಸ್ಟರ್ ಮುಂದೆ ನಿವೇದಿಸಿಕೊಂಡು ಮಾತನಾಡಿದ “ ಇವತ್ತು ಇಬ್ಬರು ಸನ್ಯಾಸಿಗಳ ಮೂರ್ಖತನವನ್ನು ಬಹಿರಂಗ ಮಾಡಿದೆ.”

“ ಓ ಹೌದಾ? ನನಗೇನೋ ಮೂವರು ಸನ್ಯಾಸಿಗಳ ಮೂರ್ಖತನ ಬಹಿರಂಗವಾಗಿದೆ ಎಂದು ಅನಿಸುತ್ತಿದೆಯಲ್ಲ” ಝೆನ್ ಮಾಸ್ಟರ್ ನಕ್ಕು ಬಿಟ್ಟ.

Leave a Reply