ಶಂಕರರು ಬೋಧಿಸಿದ ‘ಮಾಯಾವಾದ’ : ಶಂಕರ ಜಯಂತಿ ವಿಶೇಷ

ಅದ್ವೈತ ಸಿದ್ಧಾಂತಕ್ಕೆ ಒಂದು ತಾತ್ತ್ವಿಕ ನೆಲೆಗಟ್ಟು ಒದಗಿಸಿ ಕೊಟ್ಟು ಅದನ್ನು ದರ್ಶನದ ಮಟ್ಟಕ್ಕೆ ಕೊಂಡೊಯ್ದು ಪ್ರಚುರಪಡಿಸಿದವರು ಶ್ರೀ ಆದಿ ಶಂಕರರು. ಶ್ರೀ ಶಂಕರಾಚಾರ್ಯರು ಅದ್ವೈತವನ್ನು ಮಾಯಾವಾದ – ಅವಿದ್ಯೆ, ಮಿಥ್ಯಾವಾದ, ಅಧ್ಯಾಸ – ಸತ್ತಾ ತ್ರೈವಿಧ್ಯ, ಜ್ಞಾನಮಾರ್ಗ ಹಾಗೂ ಮಹಾವಾಕ್ಯಗಳ ಆಧಾರದ ಮೇಲೆ ವಿವರಿಸುತ್ತಾರೆ… । ಸಾ.ಹಿರಣ್ಮಯೀ

ಅದ್ವೈತ ಸಿದ್ಧಾಂತ ಜಗತ್ತಿನ ಪ್ರಾಚೀನತಮ ಅದ್ವಯ ಸಿದ್ಧಾಂತಗಳಲ್ಲಿ ಪ್ರಮುಖವಾದದ್ದು. ಅದ್ವೈತ ಅಂದರೆ ಎರಡಿಲ್ಲದ್ದು. ಅಂದರೆ, ‘ಒಂದೇ’ ಆಗಿರುವುದು. ಜೀವಿಯಲ್ಲಿರುವ ಆತ್ಮನೂ, ಪರಮ ಚೈತನ್ಯವಾದ ಜಗನ್ನಿಯಾಮಕ ಶಕ್ತಿಯೂ (ಪರಬ್ರಹ್ಮ, ಪರಮಾತ್ಮ ಅಥವಾ ಭಗವಂತ ಎಂದೂ ಕರೆಯಲ್ದಡುವ) ಒಂದೇ ಅನ್ನುವುದು ಅದರ ಸಾರ. ಇದು ಆತ್ಮ – ಪರಮಾತ್ಮರ ನಡುವಿನ ಭೇದವನ್ನು ತಿರಸ್ಕರಿಸುವ ಕಾರಣ ಈ ಸಿದ್ಧಾಂತವನ್ನು ‘ಅಭೇದ ಸಿದ್ಧಾಂತ’ವೆಂದೂ ಕರೆಯಲಾಗುತ್ತದೆ.

ಇಂಥಾ ಈ ಅದ್ವೈತ ಸಿದ್ಧಾಂತಕ್ಕೆ ಒಂದು ತಾತ್ತ್ವಿಕ ನೆಲೆಗಟ್ಟು ಒದಗಿಸಿ ಕೊಟ್ಟು ಅದನ್ನು ದರ್ಶನದ ಮಟ್ಟಕ್ಕೆ ಕೊಂಡೊಯ್ದು ಪ್ರಚುರಪಡಿಸಿದವರು ಶ್ರೀ ಆದಿ ಶಂಕರರು. ಶ್ರೀ ಶಂಕರಾಚಾರ್ಯರು ಅದ್ವೈತವನ್ನು ಮಾಯಾವಾದ – ಅವಿದ್ಯೆ, ಮಿಥ್ಯಾವಾದ, ಅಧ್ಯಾಸ – ಸತ್ತಾ ತ್ರೈವಿಧ್ಯ, ಜ್ಞಾನಮಾರ್ಗ ಹಾಗೂ ಮಹಾವಾಕ್ಯಗಳ ಆಧಾರದ ಮೇಲೆ ವಿವರಿಸುತ್ತಾರೆ.

ಶಂಕರರು ಪ್ರತಿಪಾದಿಸಿದ ಅದ್ವೈತ ಸಿದ್ಧಾಂತದ ಪ್ರಮುಖ ಅಂಗವೇ ‘ಮಾಯಾವಾದ’.

“ಸತ್ಯವನ್ನು ಮಾಯೆಯ ಆವರಣವು ಆವರಿಸಿಕೊಂಡಿದೆ. ಮಾಯೆಯ ಘನಸ್ವರೂಪವು ಇಡೀ ಸತ್ಯವನ್ನು ಕಾಣದಂತೆ ತಡೆಯೊಡ್ದಿರುತ್ತದೆ. ಪ್ರತಿ ಮನುಷ್ಯನೂ ತನ್ನ ಸುತ್ತಲಿನ ಜಗತ್ತಿನಲ್ಲಿ ಅನೇಕತೆಯನ್ನು ಕಾಣುವಂತೆ ಮಾಡುವುದೇ ಈ ಮಾಯೆ. ಸತ್ಯವನ್ನರಿಯಲಾಗದ ಮನುಷ್ಯನು ಈ ಜಗತ್ತಿನಲ್ಲಿ ನಾನು, ನನ್ನದು ಎಂಬ ಸ್ವಾರ್ಥವನ್ನೂ ಅಹಂಕಾರವನ್ನೂ ಬೆಳೆಸಿಕೊಳ್ಳುತಾನೆ. ಇದೇ ಅವಿದ್ಯೆ” ಅನ್ನುವುದು ಶಂಕರರ ವಿವರಣೆ.

“ಸತ್‌ ಚಿತ್‌ ಸ್ವರೂಪಿಯಾದ ಆತ್ಮನೇ ಬ್ರಹ್ಮ ಆದರೆ ಬ್ರಹ್ಮವಸ್ತುವಿನೊಡನೆ ಇರುವ ತಾದಾತ್ಮ್ಯವನ್ನು ಗುರುತಿಸಲು ಸಾಧ್ಯವಾಗದಂತೆ ಜಗತ್ತನ್ನು ಮಾಯೆಯು ಆವರಿಸಿದೆ. ಈ ಮಾಯೆಯ ಆವರಣವು ಎಷ್ಟು ಘನವಾಗಿದೆ ಅಂದರೆ, ಅದರ ಅಸ್ತಿತ್ವವೇ ಗಮನಕ್ಕೆ ಬರದಷ್ಟು! ಮಾಯೆಯ ಸಂಸರ್ಗದಿಂದಾಗಿ ಲೋಕದಲ್ಲಿ ಭಿನ್ನತೆಗಳೂ, ಭೇದಗಳೂ ಕಾಣಿಸತೊಡಗುತ್ತವೆ. ಮಾಯೆಯು ಲೌಕಿಕ ಜಗತ್ತಿನಲ್ಲಿ ತನ್ನನ್ನು ತಾನೇ ಅನೇಕ ರೂಪಾಂತರಗಳಾಗಿ ಮಾರ್ಪಡಿಸಿಕೊಳ್ಳುತ್ತದೆ. ಜೀವಿಗಳಲ್ಲಿರುವ ಎಲ್ಲ ಬಗೆಯ ಭೇದಗಳೂ ಮಾಯೆಯಿಂದ ಉಂಟಾಗಿರುವುದು. ವಸ್ತುತಃ ಇವೆಲ್ಲವೂ ಮೂಲ ಬ್ರಹ್ಮದ ಸ್ವರೂಪವೇ ಅನ್ನುವ ಸತ್ಯ ಆತ್ಮದ ಅರಿವಿಗೆ ಬರದಂತೆ ಮಾಯೆಯು ತಡೆಯೊಡ್ಡುತ್ತದೆ. ಯಾವುದು ವಾಸ್ತವದಲ್ಲಿ ಇಲ್ಲವೇ ಇಲ್ಲವೋ ಅದು ಇರುವಂತೆ ಭಾಸವಾಗುವುದು ಮಾಯೆಯ ಪ್ರಭಾವದಿಂದಾಗಿ” ಎಂದು ಶ್ರೀ ಶಂಕರರು ವಿವರಿಸುತ್ತಾರೆ.

ಶಂಕರರ ಮಿಥ್ಯಾವಾದವು “ಬ್ರಹ್ಮ ವಸ್ತುವೊಂದೇ ಸತ್ಯವಾದುದು, ಉಳಿದುದೆಲ್ಲವೂ ಮಿಥ್ಯೆ” ಎಂಬುದು ಇದರ ಸಾರ. ವಾಸ್ತವದಲ್ಲಿ ಇಂದ್ರಿಯಗಳಿಗೆ ಗೋಚರವಾಗುವ ಈ ಜಗತ್ತೇ ಮಿಥ್ಯೆ. ಮಾಯೆಯ ಆಟದಿಂದಾಗಿ ವಿಧ ವಿಧವಾಗಿ ಗೋಚರಿಸುವ ಜಗತ್ತಿನ ವಸ್ತುಗಳಿಗೆ ವಾಸ್ತವದಲ್ಲಿ ಪ್ರತ್ಯೇಕ ಅಸ್ತಿತ್ವವೇ ಇಲ್ಲ. ಮಾಯೆಯಿಂದ ಉಂಟಾದ ಈ ಭ್ರಮೆಯ ಮೇಲೆ ಮಾನವನ ಸಂಸಾರ ನಿಂತಿದೆ. ಹುಟ್ಟು ಸಾವು, ಸಂಬಂಧಗಳು,

ಸಂಸರ್ಗಗಳು, ವಿಯೋಗಗಳು, ಸುಖ, ದುಃಖ, ನೋವು, ನವಿವು – ಇವೆಲ್ಲವೂ ಈ ಭ್ರಮೆಯಿಂದ ಉಂಟಾಗುವ ಮನೋವಿಕಾರಗಳು. ಮಾಯೆಯಿಂದುಂಟಾದ ಈ ಮಿಥ್ಯಾ ಜಗತ್ತಿನಲ್ಲಿ ನಾವು ನಿತ್ಯ ಅನುಭವಿಸುವ ನೋವು, ನಲಿವುಗಳೆಲ್ಲವೂ ನಿಜವಾದುದೆಂಬ ಭ್ರಮೆಯಲ್ಲಿರುವ ಮಾನವನು ಈ ಮಿಥ್ಯಾಜಗತ್ತಿನಲ್ಲಿ ಸುಖ ಕಂಡುಕೊಳ್ಳುವುದೇ ಪರಮ ಪುರುಷಾರ್ಥವೆಂದು ತಿಳಿದಿರುತ್ತಾನೆ.

ಈ ಮಾಯೆಯು ನಿಜವೂ ಹೌದು, ನಿಜವಲ್ಲದ್ದೂ ಹೌದು. ವ್ಯಾವಹಾರಿಕ ಜಗತ್ತಿನಲ್ಲಿ ಮಾಯೆಯು ಇರುವ ಕಾರಣ ಮಾಯೆಯನ್ನು ಸಂಪೂರ್ಣ ಸುಳ್ಳೆನ್ನಲು ಆಗುವುದಿಲ್ಲ. ಆದರೆ ಅದ್ವೈತದ ಅರಿವು ಉಂಟಾದ ಮೇಲೆ, ಈ ಮಾಯೆಯು ಸಂಪೂರ್ಣವಾಗಿ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುವುದರಿಂದ ಮಾಯೆಯು ಪರಮಸತ್ಯವೆಂದು ಹೇಳಲಾಗದು.

ಹೀಗಾಗಿ ಶಂಕರರು ಮಾಯೆಯ ಸ್ವರೂಪವನ್ನು ವಿವರಿಸುವಾಗ ‘ಅಧ್ಯಾಸ’ವನ್ನು ವಿವರಿಸುತ್ತಾರೆ. ಅಧ್ಯಾಸವೆಂದರೆ ಒಂದು ಇನ್ನೊಂದರ ಮೇಲೆ ಆರೋಪಗೊಳ್ಳುವುದು. ಮಾಯೆಯಿಂದ ಉಂಟಾದ ಈ ಅಧ್ಯಾಸದಿಂದಾಗಿ ಜಗತ್ತಿನಲ್ಲಿ ಪರಬ್ರಹ್ಮ ವಸ್ತುವು ನಾನಾ ರೂಪಗಳಲ್ಲಿಯೂ ನಾನಾ ವಿಧಗಳಲ್ಲಿಯೂ ಕಂಡುಬರುತ್ತದೆ. ಈ ಅಧ್ಯಾಸದ ಕಾರಣವಾಗಿಯೇ ನಿಜ ಪರಬ್ರಹ್ಮ ವಸ್ತುವಿನ ಬಗ್ಗೆ ತಿಳಿದುಕೊಳ್ಳಲು ತೊಡಕಾಗುವುದು. ಅಧ್ಯಾಸದಿಂದಾಗಿ ಸತ್ಯವು ಪೂರ್ಣವಾಗಿ ಗೋಚರವಾಗುವುದಿಲ್ಲ. ಇದರಿಂದಾಗಿ ವಿವಿಧ ಸ್ತರಗಳಲ್ಲಿ ಸತ್ಯವು  ವಿಧ ವಿಧವಾಗಿ ಗೋಚರವಾಗುತ್ತದೆ. ಹೀಗೆ ಮೂರು ವಿಧದ ಸತ್ತೆಯ ಸ್ತರ (ಸತ್ತಾ ತ್ರೈವಿಧ್ಯ)ಗಳನ್ನು ಗುರುತಿಸಲಾಗುತ್ತದೆ. ಇದನ್ನು ವಿವರಿಸಲು ಶಂಕರಾಚಾರ್ಯರು ‘ಹಗ್ಗ ಮತ್ತು ಹಾವಿನ’ (ರಜ್ಜು- ಸರ್ಪ ನ್ಯಾಯ) ಉದಾಹರಣೆಯನ್ನು ಕೊಡುತ್ತಾರೆ.

ಅನೇಕ ಬಾರಿ ಬೆಳಕಿನ ಅಭಾವದಿಂದಾಗಿ ನೆಲದ ಮೇಲೆ ಬಿದ್ದ ಹಗ್ಗದ ಚೂರೊಂದು ಹಾವಿನಂತೆ ಮನಸ್ಸಿಗೆ ಭಾಸವಾಗುತ್ತದೆ. ಈ ಸಂದರ್ಭದಲ್ಲಿ ಹಾವು ಹಗ್ಗದ ಮೇಲೆ ಅಧ್ಯಾಸಗೊಂಡಿದ್ದು ಹಗ್ಗವು ಹಾವಿನಂತೆ ಗೋಚರವಾಗಿದೆ. ಆದರೆ ವಸ್ತುತಃ ಅಲ್ಲಿ ಹಾವು ಇಲ್ಲ, ಅದು ಹಗ್ಗ ಮಾತ್ರ ಎಂಬ ಜ್ಞಾನವುಂಟಾದ ಒಡನೆಯೇ ಹಾವಿನ ಚಿತ್ರವು ಮನಸ್ಸಿನಿಂದ ಮಾಯವಾಗಿ ಹಗ್ಗ ಮಾತ್ರ ಉಳಿಯುತ್ತದೆ.

ಈ ರೀತಿ ಜಗತ್ತಿನಲ್ಲಿ ದೈನಂದಿನ ಜೀವನದಲ್ಲಿಯೇ ಸಂದರ್ಭಾನುಸಾರವಾಗಿ ಅನೇಕ ವಸ್ತುಗಳು ಇತರ ಇನ್ನಾವುದೋ ವಸ್ತುಗಳಂತೆ ನಮಗೆ ಭಾಸವಾಗುತ್ತವೆ. ಇದನ್ನು ‘ಪ್ರಾತಿಭಾಸಿಕ ಸತ್ತೆ’ ಎಂದು ಕರೆಯಲಾಗುತ್ತದೆ. ಆದರೆ ಹಗ್ಗದ ಅಸ್ತಿತ್ವವೂ ಕೂಡ ಸತ್ಯವಾದುದಲ್ಲ, ಮಾಯೆಯ ಅಧ್ಯಾಸದಿಂದಾಗಿ ಪರಬ್ರಹ್ಮ ವಸ್ತುವು, ಹಗ್ಗವೂ ಸೇರಿದಂತೆ ಜಗತ್ತಿನ ವಿವಿಧ ವಸ್ತುಗಳಾಗಿ ಗೋಚರಿಸುತ್ತವೆ. ಇದನ್ನು ‘ವ್ಯಾವಹಾರಿಕ ಸತ್ತೆ’ ಎಂದು ಕರೆಯಲಾಗುತ್ತದೆ.

ಪರಬ್ರಹ್ಮನ ಜ್ಞಾನವುಂಟಾದ ಒಡನೆಯೇ, ಈ ಹಗ್ಗ ಹಾಗೂ ಜಗತ್ತಿನ ವೈವಿಧ್ಯಮಯ ಚಿತ್ರಣವು ಮಾಯವಾಗಿ ಪರಬ್ರಹ್ಮನ ಸರ್ವವ್ಯಾಪಕತ್ವವು ಗೋಚರವಾಗುತ್ತದೆ. ಆದ್ದರಿಂದ, ಬ್ರಹ್ಮ ವಸ್ತುವೊಂದೇ ಪರಮ ಸತ್ಯವಾದುದು. ಮಾಯೆ ಹರಿದ ಒಡನೆಯೇ ಈ ಅದ್ವೈತದ, ಪರಮಸತ್ಯದ ಅರಿವುಂಟಾಗುತ್ತದೆ. ಇದನ್ನೇ ‘ಪಾರಮಾರ್ಥಿಕ ಸತ್ತೆ’ ಎಂದು ಕರೆಯುವುದು – ಎಂದು ಶ್ರೀ ಶಂಕರರು ವಿವರಿಸುತ್ತಾರೆ.

Leave a Reply