ಸೂಫಿಗಳು ಇಷ್ಕ್ ನ ಪ್ರಕ್ರಿಯೆಯಲ್ಲಿ ಏಳು ಹಂತಗಳನ್ನ ಗುರುತಿಸುತ್ತಾರೆ. ಅವು ಹೀಗಿವೆ… । ಚಿದಂಬರ ನರೇಂದ್ರ
ಸೂಫಿಯಿಸಂ ಗೆ ಜ್ಞಾನದ ಬಗ್ಗೆ ಅಷ್ಟಾಗಿ ಆಸ್ಥೆ ಇಲ್ಲ. ಅವರ ಪರಮ ಕಾಳಜಿ ಪ್ರೇಮ, ಗಾಢ ಉತ್ಕಟ ಪ್ರೇಮ ; ಸಮಸ್ತದೊಂದಿಗೆ ಪ್ರೇಮದಲ್ಲಿ ಒಂದಾಗುವುದು ಹೇಗೆ? ಇಡೀ ಬ್ರಹ್ಮಾಂಡದ ಶ್ರುತಿಯಲ್ಲಿ ತನ್ನ ಶ್ರುತಿಯನ್ನ ಸೇರಿಸುವುದು ಹೇಗೆ? ಸೃಷ್ಟಿ ಮತ್ತು ಸೃಷ್ಟಿಕರ್ತನ ನಡುವಿನ ಅಂತರವನ್ನು ಬ್ರಿಜ್ ಮಾಡುವುದು ಹೇಗೆ? ಇವು ಸೂಫಿಯ ಕಾಳಜಿಗಳು. ಸೂಫಿಗಳು ಇಷ್ಕ್ ನ ಪ್ರಕ್ರಿಯೆಯಲ್ಲಿ ಏಳು ಹಂತಗಳನ್ನ ಗುರುತಿಸುತ್ತಾರೆ.
- ದಿಲ್ ಕಶಿ (ಆಕರ್ಷಣೆ)
ಇದು ಪ್ರೀತಿಯ ಮೊದಲ ಹಂತ. ಕಣ್ಣು ಕಣ್ಣುಗಳ ಸಮ್ಮಿಲನ. ಏನೋ ಒಂದು ಕಿಡಿ ಹಾಯ್ದು ಹೋಗುತ್ತದೆ ಇಬ್ಬರ ನಡುವೆಯೂ. ಯಾವ ಕಾರಣ ಗೊತ್ತಿಲ್ಲದೆಯೇ ಆಕರ್ಷಿತರಾಗುತ್ತಿದ್ದಾರೆ ಪರಸ್ಪರ ಇಬ್ಬರೂ. ಆದರೆ ಇಬ್ಬರಿಗೂ ಇನ್ನೊಬ್ಬರಲ್ಲಿ ತನ್ನನ್ನು ಸೆಳೆಯುತ್ತಿರುವ ಒಂದು ವಿಶಿಷ್ಟ ಆಕರ್ಷಣೆ ಇದೆ ಎನ್ನುವುದು ಮಾತ್ರ ಗೊತ್ತು, ಅದು ದೈಹಿಕ ಸೌಂದರ್ಯವಾಗಿರಬಹುದು, ಬುದ್ಧಿವಂತಿಕೆ, ಮಾತುಗಾರಿಕೆ, ಯಾವುದೋ ಒಂದು ವಿಶಿಷ್ಟ ಕಲೆ ಇತ್ಯಾದಿ.
- ಉನ್ಸ್ (ಬಾಂಧವ್ಯ)
ಈ ಹಂತದಲ್ಲಿ ಇಬ್ಬರೂ ಪರಸ್ಪರರಲ್ಲಿ ಹೆಚ್ಚಿನ ಆಸಕ್ತಿಯನ್ನು ಬೆಳೆಸಿಕೊಳ್ಳುತ್ತಿದ್ದಾರೆ, ಪರಸ್ಪರರನ್ನ ಒಲಿಸಿಕೊಳ್ಳುವ ನಿರ್ದಿಷ್ಟ ಪ್ರಯತ್ನಗಳಿಗೆ ಮುಂದಾಗಿದ್ದಾರೆ. ಪರಸ್ಪರರ ಜೊತೆ ಮಾತನಾಡುವ, ಭೇಟಿ ಮಾಡುವ ಅವಕಾಶಗಳಿಗೆ ಹಾತೊರೆಯುತ್ತಿದ್ದಾರೆ. ಇಬ್ಬರೂ ಇನ್ನೊಬ್ಬರಲ್ಲಿ ಆಸಕ್ತಿಯ ಸಂಕೇತಗಳಿಗಾಗಿ ಹುಡುಕಾಡುತ್ತಿದ್ದಾರೆ.
- ಮೊಹಬ್ಬತ್ ( ಪ್ರೀತಿ)
ಇದು ಅತ್ಯಂತ ಸುಂದರವಾದ, ಅತ್ಯಂತ ಆನಂದದಾಯಕವಾದ ಹಂತ. ಪರಸ್ಪರರ ಪ್ರೀತಿಯಲ್ಲಿ, ಪ್ರೇಮಿಗಳು ತಮ್ಮನ್ನು ತಾವು ಜಗತ್ತಿನ ಅತ್ಯಂತ ಎತ್ತರದ ಜಾಗೆಯಲ್ಲಿ ಕಂಡುಕೊಳ್ಳುತ್ತಿದ್ದಾರೆ, ಅವರಿಗೆ ಈಗ ಬದುಕಿನ ಬೇರೆ ಯಾವ ಪರಿಸ್ಥಿತಿಯ ಬಗ್ಗೆಯೂ ಪರಿವೆ ಇಲ್ಲ. ಒಬ್ಬರು ಇನ್ನೊಬ್ಬರಲ್ಲಿ ಕಳೆದುಹೋಗಿಬಿಟ್ಟಿದ್ದಾರೆ. ಒಬ್ಬರನ್ನು ಬಿಟ್ಟು ಇನ್ನೊಬ್ಬರು ಇರುವುದು ಅಸಾಧ್ಯ ಎನ್ನುವ ಭಾವ ಹೊಂದಿದ್ದಾರೆ ( ಅಥವಾ ಹಾಗೆಂದು ತಿಳಿದುಕೊಂಡಿದ್ದಾರೆ)
- ಅಕೀದತ್ ( ವಿಶ್ವಾಸ )
ಈಗ ಇಬ್ಬರಲ್ಲೂ ಇನ್ನೊಬ್ಬರ ಬಗ್ಗೆ ವಿಶ್ವಾಸ ಹುಟ್ಟುತ್ತಿದೆ. ಇಬ್ಬರೂ ಪರಸ್ಪರರನ್ನು ಎಲ್ಲಕ್ಕಿಂತ ಹೆಚ್ಚು ನಂಬತೊಡಗಿದ್ದಾರೆ. ಈ ಹಂತದಲ್ಲಿಯೇ ಅವರು ಸಂಬಂಧವೊಂದನ್ನು ಬೆಳೆಸಿಕೊಳ್ಳುವ ದಿಟ್ಟ ನಿರ್ಧಾರಕ್ಕೆ ಮುಂದಾಗಿದ್ದಾರೆ. ಇಬ್ಬರಿಗೂ ಪರಸ್ಪರರ ಕುರಿತಾದ ಭಾವನೆಗಳು ದಟ್ಟವಾಗುತ್ತಿವೆ. ಇಬ್ಬರೂ ಒಬ್ಬರಮೇಲೊಬ್ಬರು ಅವಲಂಬಿತರಾಗುತ್ತಿದ್ದಾರೆ. ಈ ಹಂತದ ನಂತರ ಪ್ರೀತಿಯಲ್ಲಿ ಹಿಂತಿರುಗಿ ನೋಡುವ ಮಾತೇ ಇಲ್ಲ.
- ಇಬಾದತ್ (ಆರಾಧನೆ)
ಈಗ ಪ್ರೀತಿ ಆರಾಧನೆಯ ಮಟ್ಟಕ್ಕೆ ಬಂದು ನಿಂತಿದೆ. ತಾವು ಆರಾಧಿಸುತ್ತಿರುವ ಸಂಗತಿಯ ಬಗ್ಗೆ ಅವರಿಗೆ ಯಾವ ಕೊರತೆಯೂ ಕಾಣಿಸುತ್ತಿಲ್ಲ. ಅವರು ಪರಸ್ಪರರ ಕುರಿತಾದ ಯಾವ ಆರೋಪಗಳನ್ನೂ ಕೇಳಿಸಿಕೊಳ್ಳುವ ಸ್ಥಿತಿಯಲ್ಲಿಲ್ಲ. ಈ ಹಂತದಲ್ಲಿ ಒಬ್ಬ ಸಂಗಾತಿ ಪ್ರೀತಿಯಲ್ಲಿ ವಿಮುಖರಾದರೂ ಇನ್ನೊಬ್ಬರ ಪ್ರೀತಿ ಮುಂದುವರೆಯುತ್ತಲೇ ಇರುತ್ತದೆ. ಅವರು ತಮ್ಮ ಮೇಲಿನ ಹಿಡಿತ ಕಳೆದುಕೊಳ್ಳುತ್ತಿದ್ದಾರೆ.
- ಜುನೂನ್ ( ಹುಚ್ಚುತನ)
ಈ ಹಂತದಲ್ಲಿ ಪ್ರೇಮಿಗಳು ಇನ್ನೊಬ್ಬರ ಹೊರತಾದ ತಮ್ಮ ಅಸ್ತಿತ್ವವನ್ನು ಅಪೂರ್ಣ ಎಂದು ತಿಳಿದುಕೊಳ್ಳುತ್ತಾರೆ ಮತ್ತು ಇದು ಅವರನ್ನು ಉನ್ಮಾದ ಅಥವಾ ಹುಚ್ಚುತನದವರೆಗೆ ಕರದೊಯ್ಯುತ್ತದೆ. ಈ ಹಂತದಲ್ಲಿಯೇ ಹೃದಯ, ಬುದ್ಧಿಯನ್ನು ತನ್ನ ಅಡಿಯಾಳಾಗಿಸಿಕೊಳ್ಳುವುದು. ಇದು ಅತ್ಯಂತ ಅಪಾಯಕಾರಿ ಹಂತ, ಪ್ರೇಮಿಯ ಕುರಿತಾದ ಹುಚ್ಚು ಬಿಟ್ಟು ಬೇರೆ ಯಾವುದು ಅವರ ಗಣನೆಗೆ ಬರುವುದಿಲ್ಲ.
- ಮೌತ್ (ಸಾವು)
ಇದು ಕೊನೆಯ ಹಂತ, ಇಲ್ಲಿ ಪ್ರೇಮಿಗಳ ಸ್ವಂತ ಅಸ್ತಿತ್ವ ಮಾಯವಾಗಿದೆ. ಇಬ್ಬರ ಅಹಂ ಗಳೂ ನಾಶವಾಗಿವೆ. ಇಲ್ಲಿ ಪ್ರೇಮಿಯ ಅಸ್ತಿತ್ವ ತನ್ನ ಸಂಗಾತಿಯ ಅಸ್ತಿತ್ವದ ಮೇಲೆ ನಿರ್ಭರವಾಗಿದೆ. ಇಬ್ಬರೂ ಒಂದೇ ಎನ್ನುವ ಹಾಗೆ ಬದುಕುತ್ತಿದ್ದಾರೆ. ಇನ್ನು ಹಿಂತಿರುಗುವುದು ಸಾಧ್ಯವೇ ಇಲ್ಲ. ಇಬ್ಬರ ಬದುಕು-ಸಾವು ಒಂದಾಗಿ ಹೆಣೆದುಕೊಂಡಿದೆ.
ಇಲ್ಲಿಗೆ ಇಷ್ಕ್ ಪರಿಪೂರ್ಣ
ಇಷ್ಕ್ ಮನುಷ್ಯರ ಅಂತಃಶಕ್ತಿ, ಅವರ ತಿರುಳು, ಅವರ ಅಸ್ತಿತ್ವದ ಕೇಂದ್ರದಿಂದ ಹುಟ್ಟಿಕೊಂಡು ಅವರನ್ನು ಇಡಿಯಾಗಿ ಆವರಿಸಿಕೊಂಡಿರುವುದು. ಇಷ್ಕ್ ನಿಮ್ಮ ನಿಯಂತ್ರಣದಲ್ಲಿ ಇಲ್ಲ ಬದಲಾಗಿ ನೀವು ಇಷ್ಕ್ ನ ಹತೋಟಿಯಲ್ಲಿರುವಿರಿ. ಹೇಗೆ ನಮ್ಮೊಳಗೆ ಇಷ್ಕ್ ನ ಹುಟ್ಟುಹಾಕುವುದು? ಹೇಗೆ ಇಷ್ಕ್ ನ ಉತ್ಕಟ ಅಲೆಗಳ ಮೇಲೆ ಸವಾರಿ ಮಾಡುತ್ತ ಆತ್ಯಂತಿಕವನ್ನ ಮುಟ್ಟುವುದು ಎನ್ನುವುದೇ ಸೂಫಿಗಳ ಪರಮ ಕಾಳಜಿ. ಸೂಫಿಗಳು ಈ ಇಷ್ಕ್ ನ ಸಾಧಿಸುವ ಹಲವಾರು ಮಾರ್ಗಗಳನ್ನ ಕಂಡುಕೊಂಡಿದ್ದಾರೆ, ಅದು ಅವರ ರಸವಿದ್ಯೆ.