ಶುದ್ಧ ಭಾವನೆಯ ಬೆನ್ನೇರಿ ಅಸಾಮಾನ್ಯ ಅಪರೂಪವೊಂದಕ್ಕೆ ಸಾಕ್ಷಿಯಾಗಿ । ಜಿಡ್ಡು ಚಿಂತನೆ

ನಿಮ್ಮ ವರ್ತನೆಯಿಂದ ಘಾಸಿ ಮಾಡುವ ಭಾವನೆ ಇರುವಾಗ, ಆ ಭಾವದೊಂದಿಗೆ ನಿಮಗೆ ಇರುವುದು ಸಾಧ್ಯವೆ? ಪ್ರಯತ್ನಿಸಿ ನೋಡಿ. ಸಾಧ್ಯವೇ? ಯಾವಾಗಲಾದರೂ ಪ್ರಯತ್ನ ಮಾಡಿದ್ದೀರಾ? ಆ ಭಾವನೆಯೊಂದಿಗೆ ಇರುವ ಪ್ರಯತ್ನ ಮಾಡಿ ನೋಡಿ ಆಗ ಏನಾಗುತ್ತದೆ ಎಂದು. ಅದು ನಿಮಗೆ ಸಹಿಸಲಸಾಧ್ಯವಾಗುತ್ತದೆ… ~ ಜಿಡ್ಡು ಕೃಷ್ಣಮೂರ್ತಿ । ಕನ್ನಡಕ್ಕೆ: ಚಿದಂಬರ ನರೇಂದ್ರ

ಒಂದು ಶುದ್ಧ ಸರಳ ಭಾವನೆಯೊಂದಿಗೆ ಇರುವುದು ನಿಮಗೆ ಯಾವಾಗಲೂ ಸಾಧ್ಯವಾಗುವುದಿಲ್ಲ. ಭಾವನೆಯ ಸುತ್ತ ನೀವು ಸದಾ ಪದಗಳ ಜಾತ್ರೆಯನ್ನ ಕಟ್ಟಿಕೊಂಡಿರುತ್ತೀರಿ. ಪದ, ಭಾವನೆಯನ್ನು ವಿಕೃತಗೊಳಿಸುತ್ತದೆ, ಭಾವನೆಯ ಸುತ್ತ ಸುಳಿದಾಡುತ್ತಿರುವ ಆಲೋಚನೆ ಅದನ್ನು ಕತ್ತಲೆಯಲ್ಲಿ ದೂಡುತ್ತ, ಪೂರ್ತಿಯಾಗಿ ಆವರಿಸಿಕೊಂಡು ಬೆಟ್ಟದಂಥ ಭಯ ಮತ್ತು ಬಯಕೆಗಳನ್ನು ಹುಟ್ಟುಹಾಕುತ್ತದೆ. ಶುದ್ಧ ಭಾವನೆಯೊಡನೆ ಅದು ದ್ವೇಷವಾಗಲಿ ಅಥವಾ ಅಪರೂಪದ ಚೆಲುವಿನ ಭಾವನೆಯೇ ಆಗಲಿ ಯಾವುದರೊಂದಿಗೆಯೂ ಇರುವುದು ನಿಮಗೆ ಸಾಧ್ಯವಾಗುವುದಿಲ್ಲ. ದ್ವೇಷದ ಭಾವನೆ ನಿಮ್ಮನ್ನು ಸುತ್ತುವರೆದಾಗ, ಎಂಥ ಕೆಟ್ಟ ಭಾವನೆ ಇದು ಎಂದು ನೀವು ಆಲೋಚಿಸಲು ಶುರು ಮಾಡುತ್ತೀರಿ, ಅದನ್ನು ನಿವಾರಿಸಿಕೊಳ್ಳುವ ಒತ್ತಡಕ್ಕೆ ಒಳಗಾಗುತ್ತೀರಿ ಅದರ ಕುರಿತಾಗಿಯೇ ಆಲೋಚನೆ ಮಾಡುತ್ತ ತಳಮಳಕ್ಕೆ ಒಳಗಾಗುತ್ತಾರಿ, ಅದು ಖುಶಿಯ ಭಾವನೆಯಾದರೆ ಅದನ್ನ ವಿಸ್ತರಿಸಿಕೊಳ್ಳುವ ಬಯಕೆಯಲ್ಲಿ ಮುಳುಗಿ ಹೋಗುತ್ತ ಗೊಂದಲದ ಗೂಡಾಗುತ್ತೀರಿ.

ನೀವು ಪ್ರೀತಿಯ ಭಾವನೆಯೊಂದಿಗೆ ಅಥವಾ ಪ್ರೀತಿ ಎನ್ನುವ ಪದದ ಜೊತೆ ಇರುವ ಆಸೆಯಿಂದಿರುವಾಗಲೂ.
ದ್ವೇಷದ ಭಾವನೆಯೊಂದಿಗೆ ಇರುವ ಪ್ರಯತ್ನ ಮಾಡಿ, ಹೊಟ್ಟೆಕಿಚ್ಚು, ಅಸೂಯೆಯ ಭಾವನೆಗಳೊಂದಿಗೆ, ಮಹತ್ವಾಕಾಂಕ್ಷೆ ಎಂಬ ವಿಷದೊಂದಿಗೆ ಇರುವ ಪ್ರಯತ್ನ ಮಾಡಿ, ಇವೇ ಅಲ್ಲವೇ ನಿಮ್ಮನ್ನು ಪ್ರತಿನಿತ್ಯ ಸಾಕಿ ಸಲಹುತ್ತಿರುವುದು. ನಿಮ್ಮಲ್ಲಿ ದ್ವೇಷದ ಭಾವನೆ ಇರುವಾಗ, ಇನ್ನೊಬ್ಬರನ್ನು ನಿಮ್ಮ ಮಾತಿನಿಂದ ಅಥವಾ
ನಿಮ್ಮ ವರ್ತನೆಯಿಂದ ಘಾಸಿ ಮಾಡುವ ಭಾವನೆ ಇರುವಾಗ, ಆ ಭಾವದೊಂದಿಗೆ ನಿಮಗೆ ಇರುವುದು ಸಾಧ್ಯವೆ? ಪ್ರಯತ್ನಿಸಿ ನೋಡಿ. ಸಾಧ್ಯವೇ? ಯಾವಾಗಲಾದರೂ ಪ್ರಯತ್ನ ಮಾಡಿದ್ದೀರಾ? ಆ ಭಾವನೆಯೊಂದಿಗೆ ಇರುವ ಪ್ರಯತ್ನ ಮಾಡಿ ನೋಡಿ ಆಗ ಏನಾಗುತ್ತದೆ ಎಂದು. ಅದು ನಿಮಗೆ ಸಹಿಸಲಸಾಧ್ಯವಾಗುತ್ತದೆ. ನಿಮ್ಮ ಮನಸ್ಸು ಆ ಭಾವನೆಯನ್ನು ಒಂಟಿಯಾಗಿರಲು ಬಿಡುವುದಿಲ್ಲ ಕೂಡಲೇ, ಅದು ತನ್ನ ನೆನಪುಗಳೊಂದಿಗೆ, ತನ್ನ ಸಹ ಭಾವನಗಳೊಂದಿಗೆ, ಅವುಗಳ ಬೇಕು ಬೇಡಗಳೊಡನೆ, ಅವುಗಳ ನಿರಂತರ ಬಡಬಡಿಕೆಯೊಂದಿಗೆ ಧಾವಿಸುತ್ತದೆ. ಯಾವ ಭಾವನೆಯಾದರೂ ಅದರ ಪರಿಪೂರ್ಣತೆಯೊಂದಿಗೆ ಬದುಕುವುದು ನಿಮಗೆ ಸಾಧ್ಯವಾಗುವುದಾದರೆ, ಆ ಭಾವನೆ ಸುಟ್ಟು ಹೋಗಿ ನಿಮ್ಮನ್ನು ಎಲ್ಲ ದುಗುಡಗಳಿಂದ ಪಾರು ಮಾಡಿತ್ತದೆ.

ಒಂದು ಕಪ್ಪೆಚಿಪ್ಪನ್ನು ಕೈಗೆತ್ತಿಕೊಳ್ಳಿ, ಅದರ ಚೆಲುವಿನ ಬಗ್ಗೆ ಒಂದೂ ಮಾತನಾಡದೇ, ಅದನ್ನು ಸೃಷ್ಟಿ ಮಾಡಿದ್ದು ಯಾವ ಪ್ರಾಣಿ ಎಂದು ಆಲೋಚನೆ ಮಾಡದೇ, ಅದನ್ನ ಸುಮ್ಮನೇ ನೋಡುವುದು, ಅದರ ಸೂಕ್ಷ್ಮ ಚೆಲುವಿಗೆ ಬೆರಗಾಗುವುದು ನಿಮಗೆ ಸಾಧ್ಯವೆ? ಮನಸ್ಸಿನ ಚಲನೆಯಿಲ್ಲದೆ ಯಾವುದನ್ನಾದರೂ ನಿಮಗೆ ನೋಡುವುದು ಸಾಧ್ಯವೆ? ಪದವನ್ನು ಬಿಟ್ಟು ಪದದ ಹಿಂದೆ ಇರುವ ಭಾವನೆಯೊಂದಿಗೆ ನಿಮಗೆ ಬದುಕುವುದು ಸಾಧ್ಯವೆ?

ಹೀಗೆ ಕೇವಲ ಭಾವನೆಯೊಂದಿಗೆ ಬದುಕುವುದು ನಿಮಗೆ ಸಾಧ್ಯವಾಗುವುದಾದರೆ, ಅಸಾಮಾನ್ಯ ಸಂಗತಿಯೊಂದು ನಿಮ್ಮೆದುರು ಅನಾವರಣಗೊಳ್ಳುತ್ತದೆ. ಕಾಲದ ಅಳತೆಗೆ ಸಿಗದ ಅಪರೂಪದ ಚಲನೆ, ಸುಡು ಬೇಸಿಗೆಯ ಬಗ್ಗೆ ಗೊತ್ತಿಲ್ಲದ ವಸಂತದ ದರ್ಶನ ನಿಮಗೆ ಸಾಧ್ಯವಾಗುತ್ತದೆ.

Leave a Reply