ಸಾವಿನ ದೇವತೆ ಸಾಲೊಮನ್ : ರೂಮಿಯ ‘ಮಸ್ನವಿ’ ಕೃತಿಯಿಂದ #2

ಮಸ್ನವಿ, ಜಲಾಲೂದ್ದೀನ್ ರೂಮಿಯ ಅನುಭಾವ ಕತೆಗಳ ಸಂಗ್ರಹ. ಮೇಲ್ನೋಟಕ್ಕೆ ಸರಳ ದೃಷ್ಟಾಂತ / ಸಾಮತಿ ಇಲ್ಲವೇ ಸರಳ ಕತೆಗಳಂತೆ ಕಂಡರೂ ಈ ಕೃತಿಯ ಪ್ರತಿಯೊಂದು ಕತೆಯೂ ಒಂದು ಗೂಢಾರ್ಥವನ್ನು, ಪರಮಾರ್ಥ ಚಿಂತನೆಯನ್ನು, ವ್ಯಕ್ತಿತ್ವ – ಆತ್ಮ ವಿಕಸನ ಪಾಠವನ್ನು ಹೊತ್ತುಕೊಂಡಿವೆ. ಅಂಥಹ ಕೆಲವು ಕತೆಗಳ ಕನ್ನಡ ನಿರೂಪಣೆ, ಅರಳಿಮರದಲ್ಲಿ ಪ್ರಕಟವಾಗಲಿವೆ… ~ ಚೇತನಾ ತೀರ್ಥಹಳ್ಳಿ

ಸಾವಿನ ದೇವತೆ ಸಾಲೊಮನ್ ಬಹಳ ಬುದ್ಧಿವಂತ. ಅವನು ಪ್ರತಿದಿನ ಒಂದಷ್ಟು ಸಮಯ ಜನರ ಜೊತೆ ಸಂವಹನಕ್ಕೆಂದೇ ತೆಗೆದಿಡುತ್ತಿದ್ದ. ಎಲ್ಲೆಡೆಯಿಂದ ಜನರು ಬಂದು ಅವನ ಬಳಿ ದೂರು ದುಮ್ಮಾನ ಹೇಳಿಕೊಳ್ಳುತ್ತಿದ್ದರು. ಸಾಲೊಮನ್ ಅವರಿಗೆ ಪರಿಹಾರವನ್ನೋ ಅದಾಗದಿದ್ದರೆ ಸಮಾಧಾನವನ್ನೋ ಹೇಳಿ ಕಳಿಸುತ್ತಿದ್ದ.

ಒಮ್ಮೆ ಹೀಗಾಯ್ತು.

ಸಾಲೊಮನ್ ಮುಂದೆ ತಮ್ಮ ದುಃಖ ತೋಡಿಕೊಳ್ಳಲು ಹತ್ತಾರು ಜನ ನೆರೆದಿದ್ದರು. ಅವರ ನಡುವೆ ದಾರಿ ಮಾಡಿಕೊಳ್ಳುತ್ತಾ, ಹೆಚ್ಚೂಕಡಿಮೆ ಹುಚ್ಚನಂತಾಗಿದ್ದ ವ್ಯಕ್ತಿಯೊಬ್ಬ ಓಡೋಡಿ ಬಂದ. ಅವನ ಅವಸ್ಥೆ ನೋಡಿದರೆ ಎಂಥವರಿಗೂ ಮರುಕ ಹುಟ್ಟುವಂತಿತ್ತು. ಸಾಲೊಮನ್ ಗೂ ಮರುಕವಾಯ್ತು. ಅವನನ್ನು ಮುಂದಕ್ಕೆ ಬರಲು ಹೇಳಿದ.

ಆ ದುರವಸ್ಥೆಯ ಮನುಷ್ಯ ಸಾಲೊಮನ್ನಿಗೆ ಸಲಾಮು ಸಲ್ಲಿಸಿ ತನ್ನ ದೂರು ಹೇಳತೊಡಗಿದ. “ಸಾವಿನ ದೇವತೆ, ಪ್ರಜಾರಕ್ಷಕ ದೊರೆ ಸಾಲೊಮನ್ನರೇ, ನೀವು ಆ ಸಾವಿನ ದೂತನಿಗೆ ಸ್ವಲ್ಪ ಬುದ್ಧಿ ಹೇಳಿ. ಅವನು ಎಲ್ಲೆಂದರಲ್ಲಿ ಹಿಂಬಾಲಿಸುತ್ತ ನನ್ನನ್ನು ಕೆಕ್ಕರಿಸಿ ನೋಡುತ್ತಾನೆ. ಇವತ್ತು ಬೆಳಗ್ಗೆ ನಾನು ಅವನನ್ನು ಕಂಡೆ. ಅವನು ನನ್ನನ್ನೇ ಹಿಂಬಾಲಿಸುತ್ತಿದ್ದ ಮತ್ತು ನನ್ನನ್ನು ನುಂಗುವಂತೆ ನೋಡುತ್ತಿದ್ದ” ಅಂದ.

ಸಾವಿನ ದೂತ ಅಜ್ರಾಯಿಲ್ ಬಗ್ಗೆ ಅದಾಗಲೇ ಸಾಲೊಮನ್ ಬಳಿ ಸಾಕಷ್ಟು ದೂರು ಬಂದಿದ್ದವು. ಈಗ ಮತ್ತೊಂದು ಹೊಸತಾಗಿ ಅಂದುಕೊಳ್ತಲೇ ಸಾಲೊಮನ್ ಅವನ ದೂರು ಆಲಿಸಿದ.

“ರಕ್ಷಕನೇ, ನಾನು ಇನ್ನಷ್ಟು ದಿನ ಬದುಕಬೇಕು. ನಾನಿನ್ನೂ ಬದುಕು ಕಂಡೇ ಇಲ್ಲ. ನನಗಿನ್ನೂ ಸಾಯುವ ಕಾಲ ಬಂದಿಲ್ಲ. ನನ್ನನ್ನು ಸಾವಿನ ದೂತನಿಂದ ಕಾಪಾಡು” ಅಂದ.

ಸಾಲೊಮನ್, “ಆಗಲಿ, ನಾನೇನು ಮಾಡಬೇಕೆಂದು ಬಯಸ್ತೀಯ?” ಅಂದ.

ಅದಕ್ಕಾಗೇ ಕಾದಿದ್ದ ದುರವಸ್ಥೆಯ ಮನುಷ್ಯ, “ಪೂರ್ವದ ಗಾಳಿಗೆ ಅಪ್ಪಣೆ ಕೊಟ್ಟು, ನನ್ನನ್ನು ಹಿಂದೂಸ್ಥಾನಕ್ಕೆ ಒಯ್ದು ಬಿಡಲು ಹೇಳಿ. ಅಜ್ರಾಯಿಲ್ ನನ್ನನ್ನು ಇಲ್ಲಿ ಹುಡುಕುತ್ತಿರಲಿ. ನಾನು ಅಲ್ಲೇ ಬದುಕಿಕೊಂಡು ಬೆಲ್ಲ ಬೇಡಿ ತಿನ್ನುತ್ತೇನೆ” ಅಂದ.

ಸಾಲೊಮನ್ ಆಗಲಿ ಅನ್ನುತ್ತಾ ಪೂರ್ವದ ಗಾಳಿಯನ್ನು ಕರೆದು ಆ ಮನುಷ್ಯನನ್ನು ಈಗಿಂದೀಗಲೇ ಹೊತ್ತೊಯ್ದು ಹಿಂದೂಸ್ಥಾನಕ್ಕೆ ಬಿಡುವಂತೆ ಆದೇಶಿಸಿದ. ಪೂರ್ವದ ಗಾಳಿ ಅವನನ್ನು ಹೊತ್ತೊಯ್ದಿತು. ಸಾಲೊಮನ್ ಸಭೆಯತ್ತ ಹೊರಳಿ ಬಾಕಿ ದೂರುಗಳನ್ನು ಆಲಿಸತೊಡಗಿದ. 

ಮಾರನೆ ದಿನ ಸಾಲೊಮನ್ ದರ್ಬಾರಿಗೆ ಬಂದಾಗ ಜನರ ನಡುವೆ ಅಜ್ರಾಯಿಲ್ ಓಡಾಡುತ್ತಿದ್ದುದನ್ನು ಕಂಡ. ಅವನಿಗೆ ಮುಂದೆ ಬರಲು ಆದೇಶವಿತ್ತು. ಅಜ್ರಾಯಿಲ್ ಮುಂದೆ ಬರುತ್ತಲೇ, “ನೀನ್ಯಾಕೆ ಪಾಪದ ಜನರನ್ನು ಕೆಕ್ಕರಿಸಿ ನೋಡಿ ಭಯ ಬೀಳಿಸೋದು? ಪಾಪ ಅವರು ಹೆದರಿ ಮನೆ ಮಠ ಬಿಟ್ಟು ದೇಶಾಂತರ ಹೋಗ್ತಿದ್ದಾರೆ ನಿನ್ನಿಂದ” ಅಂತ ಗದರಿದ.

ಅಜ್ರಾಯಿಲ್’ಗೆ ಸಾಲೊಮನ್ ಯಾರ ಬಗ್ಗೆ ಹೇಳ್ತಿದ್ದಾನೆಂದು ಗೊತ್ತಾಗಲಿಲ್ಲ.

“ನೆನ್ನೆ ಕೂಡಾ ಪಾಪದ ಮನುಷ್ಯನನ್ನು ಹೆದರಿಸಿ ಅವನು ಹಿಂದೂಸ್ಥಾನಕ್ಕೆ ಓಡುವಂತೆ ಮಾಡಿದೆ. ಅವನು ನಿನ್ನ ನೋಟಕ್ಕೆ ಹೆದರಿ ಇಲ್ಲಿಗೆ ಬಂದು ತನ್ನನ್ನು ಅಲ್ಲಿಗೆ ಹೊತ್ತೊಯ್ದು ಬಿಡಲು ಗಾಳಿಗೆ ಹೇಳುವಂತೆ ಕೇಳಿಕೊಂಡ” ಅಂದ.

ಅಜ್ರಾಯಿಲ್ ನಕ್ಕುಬಿಟ್ಟ. ಕೂಡಲೇ ಸಭಾ ಮರ್ಯಾದೆಗೋಸ್ಕರ ಸಂಭಾಳಿಸಿಕೊಳ್ಳುತ್ತಾ, “ದೊರೆ, ನಾನು ಖಂಡಿತಾ ಆ ಮನುಷ್ಯನಿಗೆ ಹೆದರಿಸಿಲ್ಲ. ನನಗೆ ಭಗವಂತ ನೆನ್ನೆ ಸಂಜೆ ಅವನ ಪ್ರಾಣವನ್ನು ಹಿಂದೂಸ್ಥಾನದಲ್ಲಿ ಹರಣ ಮಾಡಿ ತರಲು ಹೇಳಿದ್ದರು. ನಾನು ಹಿಂದೂಸ್ಥಾನದ ಕಡೆ ಹೊರಡುತ್ತಿರುವಾಗ ಆ ಮನುಷ್ಯ ನನಗೆ ಇದೇ ಊರಲ್ಲಿ, ಸಂತೆ ಬೀದಿಯಲ್ಲಿ ಕಾಣ ಸಿಕ್ಕ. ಅದಕ್ಕೇ ನನಗೆ ಅಚ್ಚರಿಯಾಯ್ತು. ಅವನು ನೂರು ರೆಕ್ಕೆ ಹಚ್ಚಿಕೊಂಡು ಹಾರಿದ್ದರೂ ಸಂಜೆಯೊಳಗೆ ಹಿಂದೂಸ್ಥಾನ ತಲುಪಲು ಸಾಧ್ಯವಿರುತ್ತಿರಲಿಲ್ಲ. ನಾನು ಹಿಂದೂಸ್ಥಾನದಲ್ಲಿ ಅವನ ಪ್ರಾಣ ಹರಣ ಮಾಡಲು ಹೇಗೆ ಸಾಧ್ಯ ಅಂತ ಯೋಚಿಸಿ ಅಚ್ಚರಿಪಟ್ಟಿದ್ದಷ್ಟೇ. ಕೊನೆಗೆ ನೋಡಿದರೆ, ನೆನ್ನೆ ಸಂಜೆ ಅವನು ಹಿಂದೂಸ್ಥಾನದಲ್ಲೇ ಸಿಕ್ಕ. ಆಗ ನನಗೆ ಮತ್ತಷ್ಟು ಅಚ್ಚರಿಯಾಗಿತ್ತು. ನೋಡಿದರೆ ವಿಷಯ ಹೀಗಿದೆ!”

ಅಷ್ಟೇ. ನಾವೆಷ್ಟೇ ತಪ್ಪಿಸಿಕೊಂಡರೂ ಕೊನೆಗೆ ಹೋಗಿ ಮುಟ್ಟುವುದು ಹೋಗಬೇಕಾದಲ್ಲಿಗೇ.

2 Comments

  1. ರೂಮಿಯ ನಿನ್ನೆ ರಾತ್ರಿಯ ಕನಸು ಕವನವನ್ನು ಮತ್ತು ಸತ್ತ ಹಾವು ಜೀವ ಪಡೆದುಇಡೀ ನಗರವನ್ನೆ (ಬಾಗ್ದಾದ್?) ನಿರ್ನಾಮ ಮಾಡಿದ ಕಥೆಯನ್ನು ವಿವರಿಸಿಕೊಡಿ ಪ್ಲೀಸ್ ಚೇತನಕ್ಕ…,

Leave a Reply