ಬಹುಶಃ ಅತ್ಯಂತ ಹೆಚ್ಚಿನ ಖುಶಿ, ವಸ್ತುಗಳ ಸ್ವಾಧೀನತೆಯಲ್ಲಿ ಇಲ್ಲ ಬದಲಾಗಿ, ಹೆಚ್ಚಿನ ಸಂತೋಷ ಜೀವಂತ ಮನುಷ್ಯರನ್ನು ತಮ್ಮ ಅಧೀನತೆಗೆ ಒಳಪಡಿಸಿಕೊಳ್ಳುವುದರಲ್ಲಿ ಇದೆ… | ~ ಮೂಲ: ಎರಿಕ್ ಫ್ರಾಮ್; ಕನ್ನಡಕ್ಕೆ: ಚಿದಂಬರ ನರೇಂದ್ರ
ಹಿಂದಿನ ಭಾಗ ಇಲ್ಲಿ ಓದಿ : https://aralimara.com/2023/05/21/fromm-23/
ಭಾಗ – 2 | ಅಧ್ಯಾಯ – 4 : Having ವಿಧಾನ ಎಂದರೇನು ?
ಹೊಟ್ಟೆಬಾಕ ಸಮಾಜ – Basis for having mode
ನಮ್ಮ ಗ್ರಹಿಕೆಗಳು ಅತ್ಯಂತ ಪಕ್ಷಪಾತದಿಂದ ಕೂಡಿರುವಂಥವು, ಏಕೆಂದರೆ ನಾವು ಬದುಕುತ್ತಿರುವ ಸಮಾಜ ತನ್ನ ಅಸ್ತಿತವಕ್ಕಾಗಿ ಅವಲಂಬಿಸಿರುವುದು ಖಾಸಗಿ ಆಸ್ತಿ, ಲಾಭ ಮತ್ತು ಅಧಿಕಾರ ಎನ್ನುವ ಆಧಾರಗಳನ್ನ. ಸ್ವಾಧೀನಪಡಿಸಿಕೊಳ್ಳುವಿಕೆ, ಸ್ವಂತ ಮಾಡಿಕೊಳ್ಳುವಿಕೆ ಮತ್ತು ಲಾಭ ಮಾಡಿಕೊಳ್ಳುವಿಕೆ ಇವು, ಕೈಗಾರಿಕಾ ಸಮಾಜದಲ್ಲಿ ಬದುಕುತ್ತಿರುವ ಯಾವುದೇ ವ್ಯಕ್ತಿಯ ಪವಿತ್ರ ಮತ್ತು ಯಾರಿಗೂ ಹಸ್ತಾಂತರ ಮಾಡಲಾಗದಂಥ ಹಕ್ಕುಗಳು.* ಆಸ್ತಿಯ ಮೂಲ ಏನು ಎನ್ನುವುದು ಇಲ್ಲಿ ಅಷ್ಟು ಮಹತ್ವದ ವಿಷಯ ಅಲ್ಲ; ಮತ್ತು ಸ್ವಾಧೀನತೆ, ಆಸ್ತಿಯ ಮಾಲಿಕರ ಮೇಲೆ ಯಾವ ಕಟ್ಟುಪಾಡಗಳನ್ನೂ ವಿಧಿಸುವುದಿಲ್ಲ. ಇಲ್ಲಿನ ತತ್ವ ಏನೆಂದರೆ : “ಎಲ್ಲಿ ಮತ್ತು ಹೇಗೆ ಆಸ್ತಿಯನ್ನ ಸ್ವಾಧೀನಪಡಿಸಿಕೊಳ್ಳಲಾಯಿತು ಅಥವಾ, ನಾನು ಆಸ್ತಿಯೊಂದಿಗೆ ಏನು ಮಾಡುತ್ತೇನೆ ಎನ್ನುವುದು ಕೇವಲ ನನ್ನ ಹೊರತಾಗಿ ಬೇರೆ ಯಾರಿಗೂ ಸಂಬಂಧಿಸಿದ ವಿಷಯ ಅಲ್ಲ ; ಎಲ್ಲಿಯವರೆಗೆ ನಾನು ಕಾನೂನು ಮೀರುವುದಿಲ್ಲವೋ ಅಲ್ಲಿಯವರೆಗೆ ನನ್ನ ಹಕ್ಕುಗಳು ಅನಿರ್ಬಂಧಿತ ಮತ್ತು ಸಂಪೂರ್ಣವಾಗಿ ನನಗೆ ಮಾತ್ರ ಸಂಬಂಧಿತ.
ಈ ಬಗೆಯ ಆಸ್ತಿಯನ್ನ ಖಾಸಗಿ ಆಸ್ತಿ (private property- from Latin word privare – to deprive of) ಎನ್ನಬಹುದು ಏಕೆಂದರೆ, ಆಸ್ತಿಯನ್ನ ಸ್ವಂತ ಮಾಡಿಕೊಂಡಿರುವ ವ್ಯಕ್ತಿ ಅಥವಾ ಜನರು, ಆಸ್ತಿಯ ಸಂಪೂರ್ಣ ಹಕ್ಕುದಾರರು ಮತ್ತು ಬೇರೆಯವರು ಆ ಆಸ್ತಿಯನ್ನು ಅನುಭವಿಸದಂತೆ ಅವಕಾಶವಂಚಿತರನ್ನಾಗಿಸುವ ಪೂರ್ಣ ಅಧಿಕಾರವನ್ನು ಹೊಂದಿದವರು. ಖಾಸಗಿ ಮಾಲಿಕತ್ವ ಸಹಜ ಮತ್ತು ಸಾರ್ವತ್ರಿಕ ಎನ್ನಬಹುದಾದರೂ, ಇಡೀ ಮಾನವ ಇತಿಹಾಸವನ್ನು ಗಮನಿಸಿದರೆ (ಇತಿಹಾಸ ಪೂರ್ವವನ್ನೂ ಒಳಗೊಂಡಂತೆ), ಮತ್ತು ನಿರ್ದಿಷ್ಟವಾಗಿ ಯುರೋಪ್ ನ ಹೊರಗಿನ ಸಂಸ್ಕೃತಿಗಳಲ್ಲಿ ಎಲ್ಲಿ ಬದುಕಿನ ಮುಖ್ಯಕಾಳಜಿ ಆರ್ಥಿಕತೆ (economy) ಆಗಿಲ್ಲವೋ ಅಲ್ಲೆಲ್ಲ ಅದು, ನಿಯಮಕ್ಕೆ ಬದಲಾಗಿ ಅಪವಾದ ಎನ್ನುವಂತೆ ಇದೆ.
ಖಾಸಗೀ ಆಸ್ತಿಯ ಹೊರತಾಗಿ ಇನ್ನೂ ಹಲವು ಬಗೆಯ ಆಸ್ತಿಗಳಿವೆ. ಸ್ವಂತ ಸೃಷ್ಟಿಯ ಆಸ್ತಿ (self created property), ಇದು ಒಬ್ಬರ ಸ್ವಂತದ ದುಡಿಮೆಯ ಫಲ; ನಿರ್ಬಂಧಿತ ಆಸ್ತಿ (restricted property), ತನ್ನ ಸಹಜೀವಿಗಳ ಸಹಾಯದ ಬಾಧ್ಯತೆಗೆ ಒಳಪಟ್ಚು ಸೀಮಿತವಾಗಿರುವ ಆಸ್ತಿ ; ಕ್ರಿಯಾತ್ಮಕ ಅಥವಾ ವೈಯಕ್ತಿಕ ಆಸ್ತಿ (functional or personal property), ಕೆಲಸದ ಸಾಧನಗಳನ್ನು ಅಥವಾ ಖುಶಿಗಾಗಿ ವಸ್ತು ವಿಶೇಷಗಳನ್ನು ಒಳಗೊಂಡ ಆಸ್ತಿ; ಸಾಮುದಾಯಿಕ ಆಸ್ತಿ (common property), ಇದು ಒಂದು ಗುಂಪು ಸಾಮುದಾಯಿಕ ಬಂಧ ಎನ್ನುವಂತೆ ತನ್ನೊಳಗೆ ಹಂಚಿಕೊಂಡ ಆಸ್ತಿ, ಉದಾಹರಣೆಗೆ ಇಸ್ರೇಲಿನ ಸಾಮುದಾಯಿಕ ಕೃಷಿ ವಸಾಹತು (Israeli kibbutzim).
ಸಮಾಜವನ್ನು ನಿಯಂತ್ರಿಸುವ ನಿಯಮಗಳು, ಆ ಸಮಾಜದ ಸದಸ್ಯರ ಗುಣ ಸ್ವಭಾವಗಳನ್ನೂ ರೂಪಿಸುತ್ತವೆ (Social character). ಕೈಗಾರಿಕಾ ಸಮಾಜದಲ್ಲಿ ಇವು : ಆಸ್ತಿಯನ್ನು ಸ್ವಾಧೀನ ಮಾಡಿಕೊಳ್ಳುವ ಇಚ್ಛೆ, ಅದನ್ನ ಸಂಭಾಳಿಸುವುದು, ಮತ್ತು ಅದನ್ನ ವೃದ್ಧಿಸುವುದು, ಹಾಗೆಂದರೆ ಲಾಭ ಮಾಡಿಕೊಳ್ಳುವುದು ಹಾಗು, ಆಸ್ತಿ ಹೊಂದಿದವರನ್ನು ಗೌರವದಿಂದ, ಅಸೂಯೆಯಿಂದ ಉನ್ನತ ಜೀವಿಗಳೆಂದು (superior being) ಪರಿಗಣಿಸುವುದು. ಆದರೆ ಬಹುಸಂಖ್ಯಾತ ಜನ ಬಂಡವಾಳ ಮತ್ತು ಬಂಡವಾಳದ ಸರಕುಗಳ (capital goods) ನೈಜ ಅರ್ಥದ ಪ್ರಕಾರದ ಯಾವ ಆಸ್ತಿಯನ್ನೂ ಹೊಂದಿಲ್ಲ, ಮತ್ತು ಈ ಕೆಲವು ಅಚ್ಚರಿಯ ಪ್ರಶ್ನೆಗಳನ್ನು ಈ ವಿಷಯದ ಕುರಿತಾಗಿ ಎತ್ತಬಹುದು : ಅವರ ಬಳಿ ಹೇಳಿಕೊಳ್ಳಲಿಕ್ಕೆ ಯಾವ ಆಸ್ತಿಯೂ ಇಲ್ಲದಿರುವಾಗ, ಹೇಗೆ ತಾನೇ ಇಂಥ ಜನ ಆಸ್ತಿಯನ್ನು ಹೊಂದುವ ಮತ್ತು ಸಂಭಾಳಿಸುವ ತಮ್ಮ ಉತ್ಕಟತೆಯನ್ನ ತುಂಬಿಕೊಳ್ಳಬಲ್ಲರು ಅಥವಾ ಸರಿದೂಗಿಸಬಲ್ಲರು ? ಅಥವಾ ಹೇಗೆ ತಾನೇ ಅವರು ಆಸ್ತಿಯ ಮಾಲಿಕರಂತೆ ಫೀಲ್ ಮಾಡಿಕೊಳ್ಳಬಲ್ಲರು?
ಹೌದು ಇದಕ್ಕೆ ಸ್ಪಷ್ಟ ವಾಸ್ತವದ ಉತ್ತರ ಏನೆಂದರೆ, ಆಸ್ತಿರಹಿತ ಬಡವರೂ ಏನೋ ಒಂದನ್ನ ಸ್ವಂತ ಮಾಡಿಕೊಂಡಿರುತ್ತಾರೆ, ಮತ್ತು ಅವರು ತಮ್ಮ ಸಣ್ಣ ಪುಟ್ಟ ಸ್ವಾಧೀನತೆಗಳನ್ನ, ದೊಡ್ಡ ಬಂಡವಾಳದ ಮಾಲಿಕರು ತಮ್ಮ ಆಸ್ತಿಯನ್ನು ಆನಂದಿಸುವಷ್ಟೇ ಆನಂದಿಸುತ್ತಾರೆ. ಹಾಗು ದೊಡ್ಡ ಬಂಡವಾಳದ ಮಾಲಿಕರಂತೆ ಬಡವರು ಕೂಡ ತಾವು ಹೊಂದಿರುವುದನ್ನ ರಕ್ಷಿಸಿಕೊಳ್ಳುವ, ವೃದ್ಧಿಸಿಕೊಳ್ಳುವ ಉತ್ಕಟತೆಯನ್ನ ಹೊಂದಿರುತ್ತಾರೆ, ಅದು ಅಪಾರ ಸೂಕ್ಷ್ಮದಷ್ಟಾದರೂ ಸರಿ (ಉದಾಹರಣೆಗೆ, ಇಲ್ಲೊಂದಿಷ್ಟು ಅಲ್ಲೊಂದಿಷ್ಚು ರೂಪಾಯಿ ಉಳಿತಾಯ ಮಾಡುತ್ತ).
ಬಹುಶಃ ಅತ್ಯಂತ ಹೆಚ್ಚಿನ ಖುಶಿ, ವಸ್ತುಗಳ ಸ್ವಾಧೀನತೆಯಲ್ಲಿ ಇಲ್ಲ ಬದಲಾಗಿ, ಹೆಚ್ಚಿನ ಸಂತೋಷ ಜೀವಂತ ಮನುಷ್ಯರನ್ನು ತಮ್ಮ ಅಧೀನತೆಗೆ ಒಳಪಡಿಸಿಕೊಳ್ಳುವುದರಲ್ಲಿ ಇದೆ. ಪಿತೃಪ್ರಧಾನ ಸಮಾಜದಲ್ಲಿ, ಬಡವರ್ಗದ ಅತ್ಯಂತ ಶೋಚನೀಯ ಗಂಡಸು ಕೂಡ ತನ್ನ ಹೆಂಡತಿಯ ಜೊತೆಗಿನ, ಮಕ್ಕಳ ಜೊತೆಗಿನ ಮತ್ತು ತನ್ನ ಸಾಕು ಪ್ರಾಣಿಗಳ ಜೊತೆಗಿನ ಸಂಬಂಧದಲ್ಲಿ ಆಸ್ತಿಯ ಮಾಲಿಕನಾಗಿರುತ್ತಾನೆ, ಅವರ ಮೇಲೆ ಅವನು ಸಂಪೂರ್ಣ ಸ್ವಾಮಿತ್ವವನ್ನು ಹೊಂದಿರುವ ಭಾವನೆಯನ್ನು ಅನುಭವಿಸುತ್ತಾನೆ. ಪಿತೃಪ್ರಧಾನ ಸಮಾಜದಲ್ಲಿ ಗಂಡಸಿಗೆ ಮಕ್ಕಳನ್ನು ಪಡೆಯುವುದು, ಯಾವ ಪ್ರಯತ್ನವನ್ನೂ ಮಾಡದೇ, ಯಾವ ಬಂಡವಾಳವನ್ನೂ ಹೂಡದೇ, ಮಾಲಿಕತ್ವವನ್ನು ಸ್ಥಾಪಿಸುವ ಏಕೈಕ ಮಾರ್ಗ. ಮಕ್ಕಳನ್ನು ಹೊರುವ, ಹೆರುವ ಮತ್ತು ಸಾಕುವ ಪೂರ್ಣ ಭಾರವನ್ನು ಹೆಣ್ಣು ಹೊರಬೇಕಾಗಿರುವುದನ್ನ ಗಮನಿಸಿದರೆ, ಪಿತೃಪ್ರಧಾನ ಸಮಾಜದಲ್ಲಿ ಮಕ್ಕಳನ್ನು ಹುಟ್ಟಿಸುವುದೆಂದರೆ, ಹೆಣ್ಣಿನ್ನು ಅತ್ಯಂತ ಕೆಟ್ಟದಾಗಿ ಶೋಷಿಸುವ ವಿಷಯವಾಗಿದೆ. ಆದರೆ ಮತ್ತೆ ತಿರುಗಿ ತಾಯಂದಿರು ಮಕ್ಕಳು ಚಿಕ್ಕವರಾಗಿರುವ ತನಕ ಅವರ ಮೇಲೆ ತಮ್ಮದೇ ಆದ ಬಗೆಯ ಮಾಲಿಕತ್ವವನ್ನು ಹೊಂದಿರುತ್ತಾರೆ. ಈ ಮಾಲಿಕತ್ವದ ವೃತ್ತ ಕೊನೆಯಿಲ್ಲದ್ದು ಮತ್ತು ಕೆಡುಕಿನಿಂದ ಕೂಡಿರುವಂಥದ್ದು : ಗಂಡ, ಹೆಂಡತಿಯನ್ನು ಶೋಷಿಸುತ್ತಾನೆ, ಅವಳು ತನ್ನ ಚಿಕ್ಕ ಮಕ್ಕಳನ್ನ ಶೋಷಿಸುತ್ತಾಳೆ, ಹದಿಹರೆಯದ ಗಂಡಸರು ಬೆಳೆದು ದೊಡ್ಡವರಾಗುತ್ತ, ಹೆಣ್ಣನ್ನು ಶೋಷಿಸುವುದರಲ್ಲಿ ಹಿರಿಯ ಗಂಡಸರನ್ನು ಸೇರಿಕೊಳ್ಳುತ್ತಾರೆ, ಮತ್ತು ಇದು ಹೀಗೇ ಮುಂದುವರೆಯುತ್ತದೆ.
ಪಿತೃಪ್ರಧಾನ ಸಮಾಜದಲ್ಲಿ ಗಂಡಿನ ಪ್ರಾಬಲ್ಯ ಸುಮಾರು ಐದಾರು ಸಾವಿರ ವರ್ಷಗಳಿಂದ ನಡೆದುಕೊಂಡು ಬಂದಿದೆ ಮತ್ತು, ಅದು ಬಡ ರಾಷ್ಟ್ರಗಳಲ್ಲಿ ಅಥವಾ, ಸಮಾಜದ ಬಡ ವರ್ಗಗಳಲ್ಲಿ ಇನ್ನೂ ಮುಂದುವರೆದಿದೆ. ಆದರೆ ಈ ಗಂಡಾಳ್ವಿಕೆ ನಿಧಾನವಾಗಿ ಸಮೃದ್ಧ ದೇಶಗಳಲ್ಲಿ ಅಥವಾ ಸಮಾಜಗಳಲ್ಲಿ, ಕಡಿಮೆಯಾಗುತ್ತ ಬರುತ್ತಿದೆ. ಸಮಾಜದ ಗುಣಮಟ್ಟ ಎಷ್ಟು ಸುಧಾರಣೆಯಾಗುತ್ತದೆಯೋ ಅಷ್ಟರಮಟ್ಟಿಗೆ ಹೆಣ್ಣಿನ, ಮಕ್ಕಳ ಮತ್ತು ಹದಿಹರೆಯದವರ ವಿಮೋಚನೆ ಸಾಧ್ಯವಾಗುತ್ತದೆ. ವ್ಯಕ್ತಿಗಳ ಮೇಲೆ ಮಾಲಿಕತ್ವದ ಅಧಿಕಾರ ಹೊಂದುವ ಹಳೆಯ ಮಾದರಿಯ ಪಿತೃಪ್ರಧಾನ ವ್ಯವಸ್ಥೆ ನಿಧಾನವಾಗಿ ಕುಸಿಯುತ್ತಿರುವಾಗ, ಈ ವ್ಯವಸ್ಥೆಯಲ್ಲಿ, ಪೂರ್ಣ ಅಭಿವೃದ್ಧಿ ಹೊಂದಿದ ಕೈಗಾರಿಕಾ ಸಮಾಜದ ಸಾಮಾನ್ಯ ಮತ್ತು ಬಡ ನಾಗರೀಕರು ತಮ್ಮ ಸ್ವಾಮಿತ್ವ ಸಾಧಿಸುವ, ಮುಂದುವರೆಸುವ ಮತ್ತು ಹೆಚ್ಚಿಸಿಕೊಳ್ಳುವ ಉತ್ಕಟತೆಯನ್ನ ಪೂರ್ಣವಾಗಿ ಸಾಧಿಸಿಕೊಳ್ಳುತ್ತಿದ್ದಾರೆಯೇ? ಇದಕ್ಕೆ ಉತ್ತರ, ಮಾಲಿಕತ್ವದ ಪರಿಧಿಯನ್ನ ಗೆಳೆಯರನ್ನ, ಪ್ರೇಮಿಗಳನ್ನ, ಆರೋಗ್ಯ, ಪ್ರಯಾಣ, ಕಲೆ, ದೇವರು, ಮತ್ತು ಸ್ವತಃ ವ್ಯಕ್ತಿಯ ಅಹಂ ನ ಒಳಗೊಳ್ಳುವಂತೆ ಇನ್ನೂ ಹೆಚ್ಚು ವಿಸ್ತರಿಸಿಕೊಳ್ಳುವುದರಲ್ಲಿ ಇದೆ. ಆಸ್ತಿಯ ಕುರಿತಾದ ಬೂರ್ಜ್ವಾ ಮಾದರಿಯ ಗೀಳಿನ ಅದ್ಭುತ ಚಿತ್ರವನ್ನ Max Stirner ಕಟ್ಟಿಕೊಡುತ್ತಾನೆ. ವ್ಯಕ್ತಿಗಳು ವಸ್ತುಗಳಾಗಿ ಮಾರ್ಪಾಡುಗೊಂಡು ; ಪರಸ್ಪರರ ಜೊತೆಗಿನ ಅವರ ಸಂಬಂಧ ಮಾಲಿಕತ್ವದ ಗುಣಲಕ್ಷಣಗಳನ್ನು ತನ್ನ ಮೇಲೆ ಹೊತ್ತುಕೊಂಡಿದೆ. “ವೈಯಕ್ತೀಕತೆ” (individualism) ತನ್ನ ಧನಾತ್ಮಕ ಅರ್ಥದಲ್ಲಿ ಸಾಮಾಜಿಕ ಸಂಕೋಲೆಗಳಿಂದ ಬಿಡುಗಡೆ ಎಂದಾದರೆ, ತನ್ನ ಋಣಾತ್ಮಕ ಅರ್ಥದಲ್ಲಿ “ಸ್ವ-ಮಾಲಿಕತ್ವ” (self/ownership), ತನ್ನ ಸ್ವಂತದ ಯಶಸ್ಸಿಗಾಗಿ ತನ್ನ ಶಕ್ತಿ ಸಾಮರ್ಥ್ಯವನ್ನು ಇನ್ವೆಸ್ಟ್ ಮಾಡುವ ಹಕ್ಕು ಮತ್ತು ಕರ್ತವ್ಯ.
(ಮುಂದುವರೆಯುತ್ತದೆ…)
(ಎರಿಕ್ ಫ್ರಾಂ ಬಹುಚರ್ಚಿತ ಕೃತಿ To have or To Be ಇನ್ನು ಕನ್ನಡದಲ್ಲಿ ಪ್ರತಿ ಶನಿವಾರ ಮತ್ತು ಭಾನುವಾರ ಸರಣಿಯಾಗಿ ಅರಳಿಮರದಲ್ಲಿ ಪ್ರಕಟಗೊಳ್ಳಲಿದೆ. ಫ್ರಾಂ ಅವರ “The art of Loving” ಅನುವಾದ ಮಾಡಿದ್ದ ಚಿದಂಬರ ನರೇಂದ್ರ ಅವರು ಅರಳಿಮರ ಓದುಗರಿಗಾಗಿ ಈ ಸರಣಿಯನ್ನು ಅನುವಾದಿಸುತ್ತಿದ್ದಾರೆ. )
1 Comment