ಅದಿನ್ನೂ ಹಾಡಹಗಲು. ಮುದುಕ ಸ್ಮಶಾನದಲ್ಲಿ ನಿದ್ದೆಹೋದ ಹೊತ್ತಿಗೇ ಅರಮನೆಯಲ್ಲಿ ಉಮರ್ ಖಲೀಫನೂ ನಿದ್ದೆಹೋದ. ಅವನು ಯಾವತ್ತೂ ಹಗಲಲ್ಲಿ ನಿದ್ದೆ ಮಾಡಿದವನೇ ಅಲ್ಲ. ಆದರೂ ಇದ್ದಕ್ಕಿದ್ದಂತೆ ಕಣ್ಣೆಳೆದು ಮಲಗಿಬಿಟ್ಟ. ಆ ನಿದ್ದೆಯಲ್ಲಿ ಅವನಿಗೊಂದು ಕನಸು ಬಿತ್ತು. ಆ ಕನಸಲ್ಲಿ ದೇವರು ಕಾಣಿಸಿಕೊಂಡು… | ರೂಮಿ ಹೇಳಿದ ಕತೆ; ಕನ್ನಡಕ್ಕೆ: ಚೇತನಾ ತೀರ್ಥಹಳ್ಳಿ
ಹಿಂದಿನ ಕಾಲದಲ್ಲಿ ಪ್ರತಿಭಾನ್ವಿತ ತಂತಿವಾದ್ಯ ವಾದಕರು ಬಹಳ ಕಡಿಮೆ ಇದ್ದರೆಂದೇ ಹೇಳಬಹುದು. ಆದರೆ ವಿಖ್ಯಾತ ಉಮರ್ ಖಲೀಫನ ಕಾಲದಲ್ಲಿ ಒಬ್ಬ ವಾದಕ ತನ್ನ ಪರಿಶ್ರಮದಿಂದ ಸಾಕಷ್ಟು ಹೆಸರುವಾಸಿಯಾಗಿದ್ದ. ಅವನು ಇಂಪಾಗಿ ಹಾಡುತ್ತಿದ್ದ, ಮಧುರವಾಗಿ ತಂತಿವಾದ್ಯ ನುಡಿಸುತ್ತಿದ್ದ. ಅವನು ವಾದ್ಯ ನುಡಿಸುತ್ತಾ ಹಾಡಲು ಕುಳಿತರೆ ಜನ ಒಬ್ಬೊಬ್ಬರಾಗೇ ಬಂದು ಗುಂಪು ಸೇರುತ್ತಿದ್ದರು, ಮೆಚ್ಚುಗೆಯಿಂದ ಕೈತುಂಬ ಹಣ ಕೊಡುತ್ತಿದ್ದರು.
ವರ್ಷಗಳು ಉರುಳಿದವು. ತಂತಿವಾದ್ಯ ವಾದಕನಿಗೆ ವಯಸ್ಸಾಯಿತು. ಅವನ ಧ್ವನಿ ಕ್ಷೀಣಿಸಿತು. ಬೆರಳುಗಳೂ ದುರ್ಬಲಗೊಂಡು ಅವನೀಗ ತಂತಿವಾದ್ಯ ನುಡಿಸುವುದೇ ದುಸ್ತರವಾಗಿಬಿಟ್ಟಿತು. ಅವನಿಂದ ಯಾರಿಗೂ ಏನೂ ಪ್ರಯೋಜನವಿಲ್ಲವಾಗಿ, ಅವನನ್ನು ಯಾರೂ ವಿಚಾರಿಸುತ್ತಿರಲಿಲ್ಲ. ಅವನೀಗ ಯಾರಿಗೂ ಬೇಡವಾಗಿ ಮೂಲೆಗುಂಪಾಗಿದ್ದ. ಅಷ್ಟಾಗಿಯೂ ಅವನು ಪ್ರಯತ್ನಪಟ್ಟು ಹಾಡಲು ಬಾಯ್ತೆರೆದರೆ ಕತ್ತೆ ಕೂಗಿದಂತಾಗುತ್ತಿತ್ತು. ಜನ ಅವನನ್ನು ದೂರ ಅಟ್ಟುತ್ತಿದ್ದರು.
ಇದೇ ಅವಸ್ಥೆಯಲ್ಲಿ ಅವನಿಗೆ ಎಪ್ಪತ್ತು ವರ್ಷ ತುಂಬಿತು. ಬಡತನ, ಅನಾರೋಗ್ಯಗಳು ಬಾಧಿಸತೊಡಗಿದವು. ಕೊನೆಗೊಮ್ಮೆ ಅವನು ಭಗವಂತನತ್ತ ಮುಖ ಮಾಡಿದ.
“ದೇವರೇ, ನೀನು ನನಗೆ ದೀರ್ಘಾಯುವನ್ನು ಕೊಟ್ಟೆ. ನಾನೆಷ್ಟು ಕೃತಘ್ನ! ಯಾವತ್ತೂ ನಿನ್ನ ಕರುಣೆಯನ್ನು ಹೊಗಳಲೇ ಇಲ್ಲ. ಆದರೂ ನೀನು ನನ್ನ ದಿನದಿನದ ಊಟಕ್ಕೆ ಕೊರತೆ ಮಾಡಲಿಲ್ಲ. ಆದರೆ ನಾನೀಗ ಮುದಿಯಾಗಿದ್ದೇನೆ. ನನ್ನ ಧ್ವನಿ ಉಡುಗಿಹೋಗಿದೆ. ಬೆರಳುಗಳೂ ದುರ್ಬಲವಾಗಿವೆ. ನನ್ನ ಹಾಡನ್ನು ಈಗ ಯಾರೂ ಕೇಳುತ್ತಿಲ್ಲ. ಜನರಿಗಾಗಿ ಹಾಡುವ ಬದಲು ನಾನು ನಿನಗಾಗಿ ಹಾಡಿರುತ್ತಿದ್ದರೆ ಇಂದು ಈ ಗತಿ ಬರುತ್ತಿರಲಿಲ್ಲವೇನೋ. ದೇವರೇ, ನಾನು ನಿನಗೆ ಮಾತು ಕೊಡುತ್ತೇನೆ. ಇನ್ನು ನಾನು ಹಾಡಿದರೆ ಅದು ನಿನಗಾಗಿ ಮಾತ್ರ, ತಂತಿವಾದ್ಯ ನುಡಿಸಿದರೆ ನಿನಗಾಗಿ ಮಾತ್ರ.”
ಇಷ್ಟು ಹೇಳಿ ವಿಷಾದದ ನಗೆಯೊಡನೆ ನಡೆಯಲು ಶುರು ಮಾಡಿದ. ಅವನಿಗೆ ಪಟ್ಟಣದಿಂದ ದೂರ, ಸ್ವಲ್ಪ ಏಕಾಂತ ಬೇಕನಿಸಿತ್ತು. ನಡೆಯುತ್ತ ಸೀದಾ ಸ್ಮಶಾನದ ಬಳಿ ಬಂದ. ಅಲ್ಲಿ ಯಾರೂ ಇರಲಿಲ್ಲ. ಮೌನವಾಗಿ ಒಳ ಹೊಕ್ಕ. ಅಲ್ಲೊಂದು ಕಡೆ ಕುಳಿತು, ಅಲ್ಲಾಹುವನ್ನು ನೆನೆಯುತ್ತಾ ತನಗೆ ತೃಪ್ತಿಯಾಗುವವರೆಗೆ ತಂತಿವಾದ್ಯ ನುಡಿಸಿದ. ಆಮೇಲೆ ಸುಸ್ತಾಗಿ ಅಲ್ಲೇ ಮಲಗಿ ನಿದ್ದೆ ಹೋದ.
ಅದಿನ್ನೂ ಹಾಡಹಗಲು. ಮುದುಕ ಸ್ಮಶಾನದಲ್ಲಿ ನಿದ್ದೆಹೋದ ಹೊತ್ತಿಗೇ ಅರಮನೆಯಲ್ಲಿ ಉಮರ್ ಖಲೀಫನೂ ನಿದ್ದೆಹೋದ. ಅವನು ಯಾವತ್ತೂ ಹಗಲಲ್ಲಿ ನಿದ್ದೆ ಮಾಡಿದವನೇ ಅಲ್ಲ. ಆದರೂ ಇದ್ದಕ್ಕಿದ್ದಂತೆ ಕಣ್ಣೆಳೆದು ಮಲಗಿಬಿಟ್ಟ. ಆ ನಿದ್ದೆಯಲ್ಲಿ ಅವನಿಗೊಂದು ಕನಸು ಬಿತ್ತು. ಆ ಕನಸಲ್ಲಿ ದೇವರು ಕಾಣಿಸಿಕೊಂಡು, “ಉಮರ್, ನೀನಿವತ್ತು ನನ್ನ ವಿಶೇಷ ಭಕ್ತನೊಬ್ಬನಿಗೆ ಸಹಾಯ ಮಾಡಬೇಕಿದೆ. ಸ್ಮಶಾನದಲ್ಲಿ ಒಬ್ಬ ತಂತಿವಾದ್ಯ ನುಡಿಸುವ ಮುದುಕನಿದ್ದಾನೆ. ನನ್ನ ಪರವಾಗಿ ನೀನು 700 ದಿನಾರುಗಳನ್ನು ಕೊಂಡೊಯ್ದು ಅವನಿಗೆ ಕೊಡಬೇಕು. ಅಷ್ಟೂ ಹಣ ಖರ್ಚಾದ ಮೇಲೆ ನಿನ್ನ ಬಳಿ ಬರಲು ಹೇಳಿ, ಅವನು ಬರಿಗೈಯಲ್ಲಿ ಬಂದಾಗ ಮತ್ತೆ ಅವನಿಗೆ 700 ದೀನಾರ್ ಕೊಡಬೇಕು” ಎಂದು ಸೂಚನೆ ಕೊಟ್ಟ.
ಕನಸು ಮುಗಿದ ಕೂಡಲೇ ಉಮರನಿಗೆ ಎಚ್ಚರವಾಯ್ತು. ಭಗವಂತ ಆದೇಶ ನಡೆಸಲು ಗಡಿಬಿಡಿಯಿಂದ ಎದ್ದವನೇ 700 ದಿನಾರ್ ತೆಗೆದುಕೊಂಡು ಸ್ಮಶಾನದತ್ತ ಹೊರಟ.
ಸ್ಮಶಾನದಲ್ಲಿ ಮುದುಕ ಇನ್ನೂ ಗಾಢ ನಿದ್ದೆಯಲ್ಲಿದ್ದ. ಖಲೀಫ ಬಂದಿದ್ದು ಅವನಿಗೆ ಗೊತ್ತಾಗಲಿಲ್ಲ. ಮುದುಕನನ್ನು ಕಂಡ ಉಮರ್ ಖಲೀಫ, ದೇವರ ಈ ವಿಶೇಷ ಭಕ್ತನನ್ನು ಎಬ್ಬಿಸಲು ಮನಸ್ಸಾಗದೆ ಪಕ್ಕದಲ್ಲಿ ಮೌನವಾಗಿ ಕುಳಿತ. ಎಷ್ಟೇ ಸದ್ದು ಮಾಡಬಾರದೆಂದುಕೊಂಡರೂ ಸ್ಮಶಾನದಲ್ಲಿ ಎದ್ದ ದೂಳಿಗೆ ಅವನ ಮೂಗು ಕಡಿದಂತಾಗಿ “ಅಕ್ಷೀ…” ಎಂದು ಸೀನಿದ.
ಖಲೀಫ ಸೀನಿದ ಹೊಡೆತಕ್ಕೆ ಮುದುಕನಿಗೆ ಎಚ್ಚರವಾಯ್ತು. ಗಾಬರಿಯಿಂದ ಎದ್ದು ಕುಳಿತ. ರಾಜ ಪೋಷಾಕಿನಲ್ಲಿದ್ದ ವ್ಯಕ್ತಿಯನ್ನು ಕಂಡು ಹೃದಯವೇ ಬಾಯಿಗೆ ಬಂದಂತಾಯಿತು. ಅವನು ಖಲೀಫನನ್ನು ಸಾವಿನ ದೂತ ಅಜ್ರಾಯಿಲ್ ಅಂದುಕೊಂಡುಬಿಟ್ಟ. ಗಟ್ಟಿಯಾಗಿ ಕಣ್ ಮುಚ್ಚಿ “ದೇವರೇ ಕಾಪಾಡು, ನನಗೆ ಈಗಲೇ ಸಾಯಲು ಮನಸ್ಸಿಲ್ಲ, ನನ್ನನ್ನು ಕಾಪಾಡು” ಎಂದು ಬೇಡತೊಡಗಿದ.
ಉಮರ್ ಅವನನ್ನು ಸಮಾಧಾನಪಡಿಸುತ್ತಾ, “ಹೆದರಬೇಡ, ನಾನು ನಿನಗೇನೂ ಕೇಡು ಮಾಡೋದಿಲ್ಲ. ದೇವರ ಅಣತಿಯಂತೆ ನಿನಗೆ 700 ದೀನಾರ್ ಕೊಡಲು ಇಲ್ಲಿಗೆ ಬಂದಿದ್ದೇನೆ. ಇದನ್ನು ತೆಗೆದುಕೊಂಡು ನನಗೆ ಆಶೀರ್ವಾದ ಮಾಡು. ಇವಿಷ್ಟು ಖರ್ಚಾದ ಮೇಲೆ ಮತ್ತೆ ನನ್ನ ಬಳಿಗೆ ಬಾ, ನಾನು ಮತ್ತೆ ಹಣ ಕೊಡುತ್ತೇನೆ. ” ಅಂದ.
ಮುದುಕ ತನ್ನ ಕಿವಿಯನ್ನೇ ತಾನು ನಂಬದಾದ. ಅವನ ಜಾಗದಲ್ಲಿ ಬೇರೆ ಯಾರಾದರೂ ಇದ್ದಿದ್ದರೆ ಖುಷಿಯಿಂದ ಕುಣಿಯುತ್ತಿದ್ದರೇನೋ. ಆದರೆ ಮುದುಕ ಉಮರನ ಮಾತು ಕೇಳಿ ಜೋರಾಗಿ ಅಳತೊಡಗಿದ. “ದೇವರೇ ನೀನು ನನ್ನನ್ನು ಎಲ್ಲಕ್ಕಿಂತಲೂ ಕಡೆ ಮಾಡಿಬಿಟ್ಟೆ. ನನ್ನ ಬಡತನವನ್ನು ನೀನೂ ಅಣಕಿಸ್ತಾ ಇದ್ದೀಯಾ?” ಅನ್ನುತ್ತ ಬಿಕ್ಕತೊಡಗಿದ. ಉಮರನ ಮುಖ ನೋಡಿದಷ್ಟು ಅವನಿಗೆ ಉಪಕೃತನಾಗುವ ತನ್ನ ಅವಸ್ಥೆಯ ಬಗ್ಗೆ ನಾಚಿಕೆಯಾಗುತ್ತಿತ್ತು. ಅಲ್ಲಿಂದ ಎದ್ದು ಹೊರಟ. ಹೊರಡುವ ಗಡಿಬಿಡಿಯಲ್ಲಿ ಕಲ್ಲು ಎಡವಿ ಅರ್ಧ ತೋಡಿ ಬಿಟ್ಟಿದ್ದ ಗುಂಡಿಯಲ್ಲಿ ಬಿದ್ದ. ಸಾವರಿಸಿಕೊಂಡು ಎದ್ದ. ಮತ್ತೆ ತಾನು ಮಲಗಿದ್ದ ಜಾಗದ ಕಡೆ ಬಂದ. ಅವನ ತಂತಿವಾದ್ಯದ ಪಕ್ಕ ಉಮರ್ ಖಲೀಫ ಅಲ್ಲಾಡದೆ ಕುಳಿತಿದ್ದ. ಮುದುಕನ ಪ್ರತಿಕ್ರಿಯ ಅವನಿಗೆ ವಿಚಿತ್ರವಾಗಿ ತೋರುತ್ತಿತ್ತು.
ಮುದುಕ ತಂತಿವಾದ್ಯ ಎತ್ತಿಕೊಂಡು ಹೊರಟವನು ಮತ್ತೆ ಎಡವಿ ಬಿದ್ದ. ಅವನು ಬಿದ್ದ ಹೊಡೆತಕ್ಕೆ ತಂತಿವಾದ್ಯ ಬಿದ್ದು ಪುಡಿಯಾಯಿತು. ಅವನಿಗೆ ಅದನ್ನು ನೋಡಿ ಸಿಟ್ಟೇ ಬಂತು. “ದೇವರು ನನಗೆ ದೀರ್ಘಾಯಸ್ಸು ಕೊಟ್ಟ. ಆದರೆ ನನ್ನ ಜೀವಿತದ ಉದ್ದಕ್ಕೂ ನನ್ನ ಮತ್ತು ದೇವರ ನಡುವೆ ತಡೆಯಾಗಿದ್ದು ನೀನೇ. ನಿನ್ನ ಸಹವಾಸದಲ್ಲಿ ನಾನು ಹಾಡುತ್ತಾ, ಕುಣಿಯುತ್ತಾ, ದುಡಿಯುತ್ತಾ ಇದ್ದುಬಿಟ್ಟೆ. ಅಲ್ಲಾಹುವನ್ನು ನೆನೆಯಲು, ಸ್ತುತಿಸಲು ಸಮಯವನ್ನೇ ಕೊಡಲಿಲ್ಲ. ನೀನು ನಾಶವಾಗಿ ಹೋಗು” ಅನ್ನುತ್ತಾ ಅದನ್ನು ತುಳಿತುಳಿದು ಹುಡಿಗಟ್ಟಿದ. “ನನ್ನನ್ನು ಕ್ಷಮಿಸಿಬಿಡು ದೇವರೇ! ನಾನೊಬ್ಬ ಪಾಪಿ. ಇಷ್ಟು ಕಾಲ ನಾನು ನಿನ್ನಿಂದ ದೂರವಿದ್ದೆ. ನನ್ನನ್ನು ಕ್ಷಮಿಸಿಬಿಡು” ಅನ್ನುತ್ತಾ ಮತ್ತೆ ಹನಿಗಣ್ಣಾದ.
ಉಮರ್ ಕುಳಿತಲ್ಲಿಂದ ಎದ್ದು ಬಂದ. ಮುದುಕನನ್ನು ಸಂತೈಸುತ್ತಾ, “ನೀನು ಇಷ್ಟು ವರ್ಷ ಯಾವ ತಪ್ಪು ಮಾದಿದ್ದೆಯೋ ಈಗಲೂ ಅದನ್ನೆ ಮಾಡ್ತಾ ಇದ್ದೀಯ. ನೀನು ಈಗಲೂ ಭೂತ – ಭವಿಷ್ಯಗಳ ಗಂಟಿನಲ್ಲಿ ಸಿಕ್ಕಿಕೊಂಡಿದ್ದೀಯ. ಇದರಿಂದ ಹೊರಗೆ ಬರದ ಹೊರತು, ನಡೆಯುವುದೆಲ್ಲವೂ ಭಗವಂತನ ಇಚ್ಛೆಯೆಂದು ಒಪ್ಪಿಕೊಳ್ಳದ ಹೊರತು, ಭಗವಂತನಲ್ಲಿ ಸಂಪೂರ್ಣ ಶರಣಾಗಿ ಅವನಲ್ಲಿ ಒಂದಾಗದ ಹೊರತು ನಿನ್ನ ಈ ಎಲ್ಲ ಪ್ರಲಾಪವೂ ವ್ಯರ್ಥ” ಎಂದು ತಿಳಿ ಹೇಳಿದ.
ಉಮರನ ಮಾತುಗಳು ಮುದುಕನನ್ನು ನಾಟಿದವು. ತಾನು ಈ ಕ್ಷಣದವರೆಗೂ ತನ್ನ ಬದುಕಿಗೆ ಮತ್ತೊಂದನ್ನೇ ಹೊಣೆಯಾಗಿಸುತ್ತಿದ್ದೆನೆಂದು ಅರಿವಾಯಿತು. ಮೊದಲು ಮತ್ತೊಬ್ಬರಿಗಾಗಿ ವಾದ್ಯ ನುಡಿಸುತ್ತಿದ್ದ ಕ್ರಿಯೆಯನ್ನೇ ಭಗವಂತನಿಗೂ ತನಗೂ ಅಡ್ಡಿಯೆಂದು ಆರೋಪಿಸಿದ್ದ. ಈಗ ತಂತಿವಾದ್ಯವನ್ನೇ ಆರೋಪಿ ಸ್ಥಾನದಲ್ಲಿ ನಿಲ್ಲಿಸಿದ್ದ. ಉಮರ್ ಖಲೀಫನ ಮಾತು ಅವನ ಒಳಗಣ್ಣು ತೆರೆಸಿದವು. ಜ್ಞಾನೋದಯವಾದಂತೆ ಆನಂದದ ಝರಿ ಅವನಲ್ಲಿ ಹರಿಯತೊಡಗಿತು.
ಅವನೀಗ ಸ್ಮಶಾನದಲ್ಲಿರಲಿಲ್ಲ. ಅವನು ಆ ಹೊತ್ತಿನವರೆಗೂ ಏನಾಗಿದ್ದನೋ ಅದಾಗಿರಲಿಲ್ಲ. ಸಂಪೂರ್ಣ ಬೇರೆಯದೇ ಲೋಕದಲ್ಲಿ, ಬೇರೆಯದೇ ಅವಸ್ಥೆಯಲ್ಲಿ, ಅತ್ಯಂತ ಹಗುರ ಸ್ಥಿತಿಯಲ್ಲಿ ತನ್ನನ್ನು ತಾನು ಕಂಡುಕೊಂಡ.
ಅವನೀಗ ಎಲ್ಲ ನೆವಗಳಿಂದಲೂ, ಕ್ರಿಯೆಗಳಿಂದಲೂ, ಬಂಧಗಳಿಂದಲೂ ಮುಕ್ತನಾಗಿದ್ದ.
ಮಸ್ನವಿ, ಜಲಾಲೂದ್ದೀನ್ ರೂಮಿಯ ಅನುಭಾವ ಕತೆಗಳ ಸಂಗ್ರಹ. ಮೇಲ್ನೋಟಕ್ಕೆ ಸರಳ ದೃಷ್ಟಾಂತ / ಸಾಮತಿ ಇಲ್ಲವೇ ಸರಳ ಕತೆಗಳಂತೆ ಕಂಡರೂ ಈ ಕೃತಿಯ ಪ್ರತಿಯೊಂದು ಕತೆಯೂ ಒಂದು ಗೂಢಾರ್ಥವನ್ನು, ಪರಮಾರ್ಥ ಚಿಂತನೆಯನ್ನು, ವ್ಯಕ್ತಿತ್ವ – ಆತ್ಮ ವಿಕಸನ ಪಾಠವನ್ನು ಹೊತ್ತುಕೊಂಡಿವೆ.
ತುಂಬಾ ಚನ್ನಾಗಿ ಮೂಡಿ ಬಂದಿದೆ ಕತೆ