ಹೊಟ್ಟೆಬಾಕ ಸಮಾಜ -2 : To have or to be #28

ಮೂಲ: ಎರಿಕ್ ಫ್ರಾಮ್; ಕನ್ನಡಕ್ಕೆ: ಚಿದಂಬರ ನರೇಂದ್ರ

ಹೊಟ್ಟೆಬಾಕ ಸಮಾಜ – Basis for having mode
(ಮುಂದುವರೆದ ಭಾಗ)

ಹಿಂದಿನ ಭಾಗ ಇಲ್ಲಿ ಓದಿ: https://aralimara.com/2023/05/27/fromm-24/

ನಮ್ಮ ಆಸ್ತಿಯ ಕುರಿತಾದ ಭಾವನೆಗಳಿಗೆ ನಮ್ಮ ಅಹಂ ಅತ್ಯಂತ ಮುಖ್ಯ ಕಾರಣ, ಮತ್ತು ಅದು ಹಲವಾರು ಸಂಗತಿಗಳನ್ನು ಒಳಗೊಂಡಿದೆ : ನಮ್ಮ ದೇಹ, ನಮ್ಮ ಹೆಸರು, ನಮ್ಮ ಸಾಮಾಜಿಕ ಸ್ಥಾನಮಾನ, ನಮ್ಮ ಸ್ವಾಧೀನದಲ್ಲಿರುವ ಸಂಗತಿಗಳು (ಜ್ಞಾನವನ್ನೂ ಒಳಗೊಂಡು), ನಮ್ಮ ಕುರಿತಾಗಿ ನಮಗಿರುವ ಇಮೇಜ್, ಮತ್ತು ನಾವು, ನಮ್ಮ ಬಗ್ಗೆ ಇನ್ನೊಬ್ಬರು ಹೊಂದಿರಬೇಕೆಂದು ಬಯಸುವ ಇಮೇಜ್ ಇತ್ಯಾದಿ. ನಮ್ಮ ಅಹಂ, ನಮ್ಮ ನೈಜ ಕ್ವಾಲಿಟಿ, (ಉದಾಹರಣೆಗೆ ಜ್ಞಾನ, ಕೌಶಲ್ಯ) ಮತ್ತು ನಮ್ಮ ನೈಜ ಕ್ವಾಲಿಟಿಯ ಸುತ್ತ ನಾವು ಕಟ್ಟಿಕೊಂಡಿರುವ ಕೆಲವು ಕಾಲ್ಪನಿಕ (fictitious) ಕ್ವಾಲಿಟಿಗಳ ಒಂದು ಬಗೆಯ ಮಿಶ್ರಣ. ಅವಶ್ಯಕ ಅಂಶ ಏನೆಂದರೆ, ಅಹಂ ಏನನ್ನೆಲ್ಲ ಹೊಂದಿದೆ ಎನ್ನುವುದು ಅಷ್ಟು ಮುಖ್ಯವಲ್ಲ ಆದರೆ, ನಮ್ಮ ಸ್ವಾಧೀನತೆಯಲ್ಲಿರುವ ಸಂಗತಿ ನಮ್ಮ ಅಹಂ ಗೆ ಕಾರಣವಾಗಿರುವುದು ಮತ್ತು, ಈ “ಸಂಗತಿ” ನಮ್ಮ ಗುರುತಿಸಿಕೊಳ್ಳುವ ಭಾವಕ್ಕೆ (sense of identity ) ಆಧಾರವಾಗಿರುವುದು ಬಹಳ ಮುಖ್ಯ ಅಂಶ.

ಆಸ್ತಿಯ ಕುರಿತಾದ ಈ ಚರ್ಚೆ, ಹತ್ತೊಂಭತ್ತನೇ ಶತಮಾನದಲ್ಲಿ ಪ್ರವರ್ಧಮಾನದಲ್ಲಿದ್ದ ಬಹುಮುಖ್ಯ ರೀತಿಯ ಆಸ್ತಿಬಾಂಧವ್ಯ, ಮೊದಲ ಮಹಾಯುದ್ಧದ ನಂತರದ ದಶಕಗಳಲ್ಲಿ ಕಡಿಮೆಯಾಗುತ್ತ ಬಂದು ಇಂದಿನ ದಿನಗಳಲ್ಲಿ ತುಂಬ ಕಡಿಮೆ ಪ್ರಮಾಣದಲ್ಲಿ ಕಂಡುಬರುವುದನ್ನ ಗಣನೆಗೆ ತೆಗೆದುಕೊಳ್ಳಬೇಕು. ಹಳೆಯ ಕಾಲದಲ್ಲಿ, ಒಬ್ಬರು ತಮ್ಮ ಅಧೀನತೆಯಲ್ಲಿದ್ದ ಎಲ್ಲವನ್ನೂ ತಮ್ಮ ಸುಖಕ್ಕೆ ಬಳಸಿಕೊಳ್ಳುತ್ತಿದ್ದರು, ಅದನ್ನು ಸಂಭಾಳಿಸುತ್ತಿದ್ದರು ಮತ್ತು ಅದನ್ನು ಅದರ ಮೀತಿಯ ತುಟ್ಟ ತುದಿಯವರೆಗೆ ಬಳಸುತ್ತಿದ್ದರು. ಆಗ ಕೊಳ್ಳುವುದೆಂದರೆ, ಕೊಂಡು “ಇಟ್ಟುಕೊಳ್ಳುವುದು” ಹಾಗು, ಹತ್ತೊಂಭತ್ತನೇ ಶತಮಾನದ ಧ್ಯೇಯವಾಕ್ಯವೇ : “ಹಳೆಯದೆಲ್ಲ ಸುಂದರ” (old is beautiful).

ಇಂದು ಕೊಂಡು, ಬಳಸುವ ಮೇಲೆ ಹೆಚ್ಚಿನ ಒತ್ತು, ಕೊಂಡು ಇಟ್ಟುಕೊಳ್ಳುವುದರ ಮೇಲಲ್ಲ, ಮತ್ತು ಕೊಂಡುಕೊಳ್ಳುವಿಕೆ ಎಂದರೆ “ಬೇಕಾಬಿಟ್ಟಿ” ಕೊಳ್ಳುವಿಕೆ. ಇಂದು ಒಬ್ಬರು ಕೊಳ್ಳುವುದು ಎಂದರೆ, ಅದು ಕಾರ್ ಆಗಿರಬಹುದು, ಡ್ರೆಸ್ ಆಗಿರಬಹುದು, ಯಾವುದಾದರೂ ಗ್ಯಾಡ್ಜೆಟ್ ಆಗಿರಬಹುದು, ಸ್ವಲ್ಪ ಕಾಲ ಉಪಯೋಗಿಸಿದ ನಂತರ ಅದು ಬೋರ್ ಅನಿಸತೊಡಗಿದಾಗ, ಹಳೆಯದನ್ನು ತ್ಯಜಿಸಿ ಹೊಸ ಮಾಡಲ್ ಕೊಳ್ಳಲು ಉತ್ಸುಕರಾಗುವುದು. ಸ್ವಾಧೀನ ಮಾಡಿಕೊಳ್ಳುವುದು -> ಕೆಲಕಾಲ ಇಟ್ಟುಕೊಳ್ಳುವುದು ಮತ್ತು ಬಳಸುವುದು -> ತ್ಯಜಿಸುವುದು (ಅಥವಾ ಸಾಧ್ಯವಾದರೆ, ಉತ್ತಮ ಹೊಸ ಮಾಡೆಲ್ ಜೊತೆ ಲಾಭದಾಯಕವಾಗಿ ವಿನಿಮಯ ಮಾಡಿಕೊಳ್ಳುವುದು) -> ಹೊಸದಾಗಿ ಸ್ವಾಧೀನಕ್ಕೆ ಮುಂದಾಗುವುದು, ಇದು ಇಂದಿನ ಬಳಕೆದಾರರ ಕೊಳ್ಳುವಿಕೆಯ ವಿಷವೃತ್ತ ಹಾಗು ಬಹುಶಃ ಇಂದಿನ ದಿನಗಳ ಧ್ಯೇಯವಾಕ್ಯ : “ಹೊಸದೆಲ್ಲ ಸುಂದರ” ( New is beautiful).

ಇಂದಿನ ಗ್ರಾಹಕರ ಕೊಳ್ಳುವ ವಿದ್ಯಮಾನದ ಕುರಿತಾದ ಎದ್ದುಕಾಣುವ ಉದಾಹರಣೆಯನ್ನು, ಅವರ ಖಾಸಗೀ ಅಟೋಮೋಬೈಲ್ ಗಳ ಕೊಳ್ಳುವಿಕೆಯಲ್ಲಿ ಕಾಣಬಹುದು. ನಮ್ಮ ಕಾಲವನ್ನ ಬೇಕಾದರೆ ಖಾಸಗೀ “ಅಟೋಮೋಬೈಲ್ ಗಳ ಯುಗ”ಎಂದು ಪರ್ಯಾಯವಾಗಿ ಗುರುತಿಸಬಹುದು, ಏಕೆಂದರೆ ಇಂದಿನ ನಮ್ಮ ಇಡೀ ಆರ್ಥಿಕತೆಯನ್ನ ಅಟೋಮೋಬೈಲ್ ಗಳ ಸುತ್ತ ನಿರ್ಮಿಸಲಾಗಿದೆ ಹಾಗು ನಮ್ಮ ಇಡೀ ಬದುಕಿನ ಸ್ವಾಸ್ಥ್ಯ ನಿರ್ಭರವಾಗಿರುವುದು ಕಾರ್ ನ ಗ್ರಾಹಕ ಮಾರುಕಟ್ಟೆಯ ಏಳು ಬೀಳುಗಳ ಮೇಲೆ.

ಯಾರು ಕಾರನ್ನು ಹೊಂದಿದ್ದಾರೆಯೋ ಅವರಿಗೆ ಅದು ಬದುಕಿಗೆ ಬಹಳ ಅವಶ್ಯಕವಾದದ್ದು ; ಯಾರು ಇನ್ನೂ ಕಾರ್ ಹೊಂದಿಲ್ಲವೋ, ವಿಶೇಷವಾಗಿ ಸಮಾಜವಾದೀ ದೇಶಗಳ ಪ್ರಜೆಗಳು, ಅವರಿಗೆ ಕಾರ್ ಒಂದು ಸುಖದ ಸಂಕೇತ. ಬಹುತೇಕ ಎಲ್ಲರಿಗೂ ಗೊತ್ತಿರುವಂತೆ ಕಾರ್ ಜೊತೆಗಿನ ಒಬ್ಬರ ಅನುರಕ್ತಿ ಅಷ್ಟು ಆಳ ಮತ್ತು ಅಷ್ಟು ತೀವ್ರವಾದದ್ದಲ್ಲ, ಬದಲಾಗಿ ಈ ಪ್ರೇಮ ಸಂಬಂಧ ಕೇವಲ ಕೆಲ ಕಾಲದ್ದು ಮಾತ್ರ, ಕಾರ್ ನ ಮಾಲಿಕ ಬಹುತೇಕ ಒಂದು ಅಥವಾ ಎರಡು ವರ್ಷಗಳ ಬಳಕೆಯ ನಂತರ, ತನ್ನ ಹಳೆಯ ಕಾರ್ ಜೊತೆ ಬೋರ್ ಆಗಿ ಹೊಸ ಕಾರ್ ಕೊಳ್ಳಲು ಲಾಭದಾಯಕ ಡೀಲ್ ಗಾಗಿ ಹುಡುಕಾಡಲು ಶುರು ಮಾಡುತ್ತಾನೆ. ಹೊಸ ಕಾರ್ ಗಾಗಿನ ಹುಡುಕಾಟದಿಂದ ಹಿಡಿದು, ಕಾರ್ ಕೊಳ್ಳುವವರೆಗೆ ನಡೆಯುವ ವ್ಯವಹಾರ ಒಂದು ಭ್ರಾಮಕ ಆಟದಂತೆ, ಮತ್ತು ಇಲ್ಲಿ ಒಳ್ಳೆಯ ಲಾಭದಾಯಕ ಡೀಲ್ ಸಿಗುವಾಗ ಆಗುವ ಆನಂದ ಹೆಚ್ಚಲ್ಲದಿದ್ದರೂ ಬ್ರ್ಯಾಂಡ್ ನ್ಯೂ ಕಾರ್ ನಮ್ಮ ಮನೆಯ ಅಂಗಳದಲ್ಲಿ ನಿಂತಾಗ ಆಗುವ ಆನಂದದಷ್ಟೇ ಇರುತ್ತದೆ.

ಮಾಲಿಕರ ಅಟೋಮೋಬೈಲ್ ನ ಜೊತೆಗಿನ ಆಸ್ತಿ ಬಾಂಧವ್ಯ ಮತ್ತು ಅದರ ಜೊತೆಗಿನ ಅವರ ಅಲ್ಪಕಾಲದ ಆಸಕ್ತಿಯ ನಡುವೆ ಎದ್ದುಕಾಣುವ ವೈರುಧ್ಯಗಳ ಕುರಿತಾಗಿನ ಒಗಟನ್ನು ಬಿಡಿಸಲು ಹಲವಾರು ಅಂಶಗಳನ್ನು ಗಣನೆಗೆ ತೆಗೆದುಕೊಳ್ಳಬೇಕು. ಮೊದಲನೇಯದಾಗಿ, ಕಾರ್ ಜೊತೆಗಿನ ಮಾಲಿಕರ ಸಂಬಂಧದಲ್ಲಿ ಅಪವಯಕ್ತೀಕರಣದ (depersonalisation) ಅಂಶ ಅಡಗಿದೆ; ಕಾರ್, ಮಾಲಿಕನ ಪ್ರೀತಿಗೆ ಒಳಗಾಗಿರುವ ಒಂದು ನಿರ್ದಿಷ್ಟ ಸಂಗತಿಯಲ್ಲ, ಬದಲಾಗಿ ಕಾರ್, ಮಾಲಿಕನ ಸ್ಟೇಟಸ್ ಸಿಂಬಲ್, ಅವನ ಅಧಿಕಾರದ ವಿಸ್ತರಣೆ – ಅವನ ಅಹಂ ಬಿಲ್ಡರ್; ಕಾರನ್ನ ತನ್ನ ಸ್ವಾಧೀನಕ್ಕೆ ತೆಗೆದುಕೊಳ್ಳುವ ಮೂಲಕ ಮಾಲಿಕ ನಿಜವಾಗಿ ಅಹಂ ನ ಹೊಸ ತುಂಡೊಂದನ್ನ ತನ್ನದಾಗಿಸಿಕೊಂಡಿದ್ದಾನೆ.

ಎರಡನೇಯ ಅಂಶ, ಪ್ರತೀ ಆರು ವರ್ಷಕ್ಕೆ ಬದಲಾಗಿ ಪ್ರತೀ ಎರಡು ವರ್ಷಕ್ಕೆ ಕಾರ್ ಬದಲಾಯಿಸಿಕೊಳ್ಳುವುದು, ಕೊಳ್ಳುವವನ ಸ್ವಾಧೀನ ಮಾಡಿಕೊಳ್ಳುವ ಥ್ರಿಲ್ ನ ಹೆಚ್ಚು ಮಾಡುತ್ತದೆ. ಹೊಸ ಕಾರ್ ನ ತನ್ನದಾಗಿಸಿಕೊಳ್ಳುವ ಪ್ರಕ್ರಿಯೆ ಒಂದು ಬಗೆಯ ಲೈಂಗಿಕ ವಿಜಯವನ್ನು ಹೋಲುವ ಭಾವವನ್ನು (defloration) ಅವರಲ್ಲಿ ಮೂಡಿಸುತ್ತದೆ – ಇದು ಒಬ್ಬರ ಹತೋಟಿಗೆ ತೆಗೆದುಕೊಳ್ಳುವ ಭಾವವನ್ನು ಹೆಚ್ಚು ಮಾಡುತ್ತದೆ, ಮತ್ತು ಹೆಚ್ಚು ಹೆಚ್ಚು ಬಾರಿ ಹೀಗಾದಾಗಲೆಲ್ಲ ಅವರು ಹೆಚ್ಚು ಹೆಚ್ಚು ಥ್ರಿಲ್ ಅನುಭವಿಸುತ್ತಾರೆ.

ಮತ್ತು ಮೂರನೇ ಅಂಶವೆಂದರೆ, ಮತ್ತೆ ಮತ್ತೆ ಕಾರ್ ಕೊಂಡುಕೊಳ್ಳುವುದೆಂದರೆ, ಹೆಚ್ಚು ಹೆಚ್ಚು ಡೀಲ್ ಮಾಡುವ, ವಿನಿಮಯದ ಮೂಲಕ ಹೆಚ್ಚು ಹೆಚ್ಚು ಲಾಭ ಮಾಡಿಕೊಳ್ಳುವ ಅವಕಾಶಗಳನ್ನು ತಮ್ಮದಾಗಿಸಿಕೊಳ್ಳುವುದು. ಇಂತಹದೊಂದು ತೃಪ್ತಿಗಾಗಿನ ಹಪಹಪಿ ಇಂದಿನ ಗಂಡು ಮತ್ತು ಹೆಣ್ಣು ಇಬ್ಬರಲ್ಲೂ ಆಳವಾಗಿ ಬೇರೂರಿದೆ.

ನಾಲ್ಕನೇ ಅಂಶ ಬಹಳ ಪ್ರಾಮುಖ್ಯತೆಯನ್ನ ಹೊಂದಿರುವಂಥದು : ಇದು ಹೊಸ ಹೊಸ ಪ್ರಚೋದನೆಗಳನ್ನು (stimuli) ಅನುಭವಿಸಬಯಸುವ ತುರ್ತು. ಏಕೆಂದರೆ ಹಳೆಯ ಪ್ರಚೋದನೆಗಳು ಅಲ್ಪ ಕಾಲದ ಬಾಂಧವ್ಯದಲ್ಲಿಯೇ ತಮ್ಮ ರುಚಿ ಕಳೆದುಕೊಂಡು ಬೋರ್ ಅನಿಸತೊಡಗುತ್ತವೆ. ಪ್ರಚೋದನೆಗಳನ್ನು ಕುರಿತಾದ ಹಿಂದಿನ ಚರ್ಚೆಯಲ್ಲಿ (The Anatomy of Human Destructiveness) ನಾನು “ಕ್ರಿಯಾತ್ಮಕ” ಮತ್ತು “ನಿಷ್ಕ್ರಿಯಾತ್ಮಕ” ಪ್ರಚೋದನೆಗಳನ್ನು ಬೇರೆ ಬೇರೆ ಎಂದು ಗುರುತಿಸಿ ಈ ಸಮೀಕರಣವನ್ನು ಸೂಚಿಸಿದ್ದೆ : “ಪ್ರಚೋದನೆ ಹೆಚ್ಚು ನಿಷ್ಕ್ರಿಯಾತ್ಮಕವಾಗಿದ್ದಾಗ ಅದನ್ನ ಬೇಗ ಬೇಗ ಅದರ ತೀವ್ರತೆಗಾಗಿ (intensity) ಮತ್ತು ಅಥವಾ ರೀತಿಗಾಗಿ (kind) ಬದಲಾಯಿಸಿಕೊಳ್ಳುತ್ತಿರಬೇಕಾಗುತ್ತದೆ ; ಪ್ರಚೋದನೆ ಹೆಚ್ಚು ಕ್ರಿಯಾತ್ಮಕವಾಗಿದ್ದಾಗ, ಅದು ಹೆಚ್ಚಿನ ಕಾಲ ತನ್ನ ಪ್ರಚೋದನಾ ಸಾಮರ್ಥ್ಯವನ್ನು ಉಳಿಸಿಕೊಂಡಿರುತ್ತದೆ ಮತ್ತು ತೀವ್ರತೆ ಹಾಗು ವಸ್ತುವಿನ ವಿಷಯದಲ್ಲಿ ಕಡಿಮೆ ಕಡಿಮೆ ಬದಲಾವಣೆಯನ್ನ ಅಪೇಕ್ಷಿಸುತ್ತದೆ”.

ಐದನೇ ಮತ್ತು ಅತ್ಯಂತ ಮುಖ್ಯ ಅಂಶ, ಕಳೆದ ಒಂದು-ಒಂದೂವರೆ ಶತಮಾನದಲ್ಲಿ ಸಾಮಾಜಿಕ ಸ್ವಭಾವದ (social character) ವಿಷಯದಲ್ಲಿ ಸಂಭವಿಸಿದ ಬದಲಾವಣೆಗಳಲ್ಲಿ ಅಡಗಿಕೊಂಡಿದೆ, ಅದು “ಸಂಗ್ರಹಣೆ” (hoarding) ಯಿಂದ ಹಿಡಿದು ಮಾರಾಟದ ಸ್ವಭಾವದ (marketing character) ತನಕ ಆದ ಬದಲಾವಣೆ. ಈ ಬದಲಾವಣೆ having ಧೋರಣೆಯನ್ನು ಬಿಟ್ಟುಬಿಡುವುದಿಲ್ಲವಾದರೂ , ಅದು ಈ ಧೋರಣೆಯನ್ನ ಸಾಕಷ್ಟು ಬದಲಾಯಿಸಿದ್ದಂತೂ ನಿಜ. (This development of marketing character is discussed in chapter VII)

(ಮುಂದುವರೆಯುತ್ತದೆ…)


(ಎರಿಕ್ ಫ್ರಾಂ ಬಹುಚರ್ಚಿತ ಕೃತಿ To have or To Be ಇನ್ನು ಕನ್ನಡದಲ್ಲಿ ಪ್ರತಿ ಶನಿವಾರ ಮತ್ತು ಭಾನುವಾರ ಸರಣಿಯಾಗಿ ಅರಳಿಮರದಲ್ಲಿ ಪ್ರಕಟಗೊಳ್ಳಲಿದೆ. ಫ್ರಾಂ ಅವರ “The art of Loving” ಅನುವಾದ ಮಾಡಿದ್ದ ಚಿದಂಬರ ನರೇಂದ್ರ ಅವರು ಅರಳಿಮರ ಓದುಗರಿಗಾಗಿ ಈ ಸರಣಿಯನ್ನು ಅನುವಾದಿಸುತ್ತಿದ್ದಾರೆ. )

1 Comment

Leave a Reply