ಜಲಾಲುದ್ದೀನ್ ಜನರ ಅತ್ಯಂತ ಪ್ರೀತಿಪಾತ್ರ ಸೂಫಿಯಾಗಿದ್ದ. ಜನ ಹಿಂದೆ ಯಾರನ್ನೂ ಇಷ್ಟು ಆಳವಾಗಿ ಪ್ರೀತಿಸಿರಲಿಲ್ಲ. ಮೇವ್ಲಾನಾ ಎಂದರೇನೇ “ಪ್ರೀತಿಯ ಗುರು” ಎಂದರ್ಥ. ಈ ಪದವನ್ನ ರೂಮಿಯನ್ನ ಹೊರತುಪಡಿಸಿ ಬೇರೆ ಯಾರ ಹೆಸರಿನ ಜೊತೆಯೂ ಬಳಸಲಾಗುವುದಿಲ್ಲ… ~ ಓಶೋ ; ಕನ್ನಡಕ್ಕೆ: ಚಿದಂಬರ ನರೇಂದ್ರ
ನಾನು,
ಎಷ್ಟು ಮತ್ತನಾಗಿದ್ದೇನೆಂದರೆ
ಒಳಗಿನ, ಹೊರಗಿನ ಯಾವ ದಾರಿಗಳೂ
ಕಾಣಿಸುತ್ತಿಲ್ಲ ನನ್ನ ಕಣ್ಣಿಗೆ.
ಈ ಭೂಮಿ, ಸೂರ್ಯ, ಚಂದ್ರ, ಆಕಾಶ
ಎಲ್ಲರನ್ನೂ ಕಳೆದುಕೊಂಡುಬಿಟ್ಟಿದ್ದೇನೆ.
ನನಗೆ ಇನ್ನೊಂದು ಕಪ್
ವೈನ್ ಕುಡಿಸುವ ಹುಕಿ ನಿನಗಿದ್ದರೆ
ನನ್ನ ಕೈಗೆ ಕೊಡಬೇಡ.
ಸುರಿ, ಸೀದಾ ಬಾಯಿಗೆ.
ನನ್ನ ಬಾಯಿಯ ವಿಳಾಸವನ್ನೂ
ನಾನು ಮರೆತುಬಿಟ್ಟಿದ್ದೇನೆ.
- ರೂಮಿ.
ಒಂದು ಸೂಫಿ ಪುಸ್ತಕ ಇದೆ. ಅದನ್ನ ನಾನು ಜಗತ್ತಿನ ಅತ್ಯಂತ ಶ್ರೇಷ್ಠ ಅಧ್ಯಾತ್ಮಿಕ ಗ್ರಂಥ ಎಂದು ಹೇಳುತ್ತೇನೆ. ಅದು ಬಹುತೇಕ ಹನ್ನೆರಡು ನೂರು ವರ್ಷಗಳ ಹಿಂದಿನ ಹಳೆಯ ಗ್ರಂಥ ಮತ್ತು ಮೊಟ್ಟ ಮೊದಲಬಾರಿಗೆ ಈ ಗ್ರಂಥವನ್ನು ಖರೀದಿಸಿದವನು ಮೇವ್ಲಾನಾ ಜಲಾಲುದ್ದೀನ್ ರೂಮಿ.
ರೂಮಿ ಎಲ್ಲರ ಎದುರಿಗೆ ಈ ಗ್ರಂಥವನ್ನು ಎಂದೂ ಓದುತ್ತಿರಲಿಲ್. ಈ ಕುರಿತಾಗಿ ರೂಮಿಯ ಶಿಷ್ಯರಿಗೆ ಅಸಾಧ್ಯ ಕುತೂಹಲ. ಯಾರೂ ಇಲ್ಲದಾಗ, ಎಲ್ಲರೂ ಹೋದ ಮೇಲೆ ರೂಮಿ, ಕೋಣೆಯ ಬಾಗಿಲು ಕಿಟಕಿಗಳನ್ನು ಮುಚ್ಚಿಕೊಂಡು ಈ ಪುಸ್ತಕ ಓದಲು ಕೂರುತ್ತಿದ್ದ. ಓದಿಯಾದಮೇಲೆ ಪುಸ್ತಕವನ್ನ ತನ್ನ ಹಾಸಿಗೆಯ ಕೆಳಗೆ ಮುಚ್ಚಿ ಇಡುತ್ತಿದ್ದ.
ರೂಮಿಯ ಈ ನಿಗೂಢ ಕಾರ್ಯಾಚರಣೆ ಸಹಜವಾಗಿಯೇ ಸುತ್ತಮುತ್ತಲಿನವರ ಕುತೂಹಲವನ್ನ ಕೆರಳಿಸಿತ್ತು. “ ಇದು ಎಂಥ ರಹಸ್ಯಮಯ ಪುಸ್ತಕ?” ಜನ ಈ ಪುಸ್ತಕದ ಬಗ್ಗೆ ಪತ್ತೆ ಮಾಡಲು ಹರಸಾಹಸ ಮಾಡುತ್ತಿದ್ದರು. ಕೆಲವೊಮ್ಮೆ ಶಿಷ್ಯರು ಮಾಳಿಗೆಯ ಮೇಲೆ ಹತ್ತಿ ಹಂಚುಗಳನ್ನು ಸರಿಸಿ ರೂಮಿ ಏನು ಓದುತ್ತಿದ್ದಾನೆ ಎನ್ನುವುದನ್ನ ನೋಡುವ ಪ್ರಯತ್ನ ಮಾಡಿದ್ದೂ ಉಂಟು, ಆದರೆ ಇವರ್ಯಾರಿಗೂ ರೂಮಿಯ ಪುಸ್ತಕದ ಬಗ್ಗೆಯ ನಿಗೂಢತೆಯನ್ನ ಪತ್ತೆಹಚ್ಚುವುದಾಗಿರಲಿಲ್ಲ.
ಜಲಾಲುದ್ದೀನ್ ಜನರ ಅತ್ಯಂತ ಪ್ರೀತಿಪಾತ್ರ ಸೂಫಿಯಾಗಿದ್ದ. ಜನ ಹಿಂದೆ ಯಾರನ್ನೂ ಇಷ್ಟು ಆಳವಾಗಿ ಪ್ರೀತಿಸಿರಲಿಲ್ಲ. ಮೇವ್ಲಾನಾ ಎಂದರೇನೇ “ಪ್ರೀತಿಯ ಗುರು” ಎಂದರ್ಥ. ಈ ಪದವನ್ನ ರೂಮಿಯನ್ನ ಹೊರತುಪಡಿಸಿ ಬೇರೆ ಯಾರ ಹೆಸರಿನ ಜೊತೆಯೂ ಬಳಸಲಾಗುವುದಿಲ್ಲ. ನನಗೆ ಗೊತ್ತಿರುವ ಹಾಗೆ ಕಳೆದ ಹನ್ನೆರಡು ನೂರು ವರ್ಷಗಳ ಇತಿಹಾಸದಲ್ಲಿ ಇಂಥ ಚಾರ್ಮಿಂಗ್, ಸುಂದರ, ಹೆಚ್ಚು ಪ್ರೀತಿಪಾತ್ರ, ಮಾನವೀಯ ಸೂಫಿಯನ್ನ ನಾನು ಗಮನಿಸಿಲ್ಲ.
ಆದರೆ ರೂಮಿ ತೀರಿಕೊಂಡ ದಿನ, ಶಿಷ್ಯರು, ಅವನ ದೇಹದ ಬಗ್ಗೆ ಅಷ್ಟು ಆಸಕ್ತಿ ತೋರಿಸದೇ, ಅವನ ಕೋಣೆಗೆ ಧಾವಿಸಿ ಅವನ ಹಾಸಿಗೆ ಕೆಳಗಿನಿಂದ ಆ ರಹಸ್ಯ ಪುಸ್ತಕವನ್ನ ಹೊರತೆಗೆದರು. ಆ ಪುಸ್ತಕವನ್ನು ತೆರೆದು ನೋಡಿದಾಗ ಒಂದು ಮಹಾ ಆಶ್ಚರ್ಯ ಅವರಿಗಾಗಿ ಕಾದಿತ್ತು. ಆ ಪುಸ್ತಕ ಸಂಪೂರ್ಣ ಖಾಲೀ ಆಗಿತ್ತು, ಅಲ್ಲಿ ಓದಲು ಒಂದೇ ಒಂದು ಅಕ್ಷರವೂ ಇರಲಿಲ್ಲ. ಇದರಿಂದಾಗಿ ಸ್ವಲ್ಪಹೊತ್ತು ಆಘಾತಕ್ಕೊಳಗಾದ ಶಿಷ್ಯರಿಗೆ ಅವರು ರೂಮಿಯನ್ನು ಆಪ್ತವಾಗಿ ಬಲ್ಲವರಾದ್ದರಿಂದ ಬಹುಬೇಗ ಪುಸ್ತಕದ ಮಹತ್ವದ ಬಗ್ಗೆ ಅರಿವಾಯಿತು.
ಅಕ್ಷರಗಳಿಂದ ಕಳಚಿಕೊಳ್ಳಬೇಕು. ಅಕ್ಷರಗಳಿಗೆ ಅಂಟಿಕೊಳ್ಳಬಾರದು. ಎಲ್ಲ ಕಲಿಕೆಯಿಂದ, ಆಚರಣೆಯಿಂದ ಅರಿವಿನ ಮೂಲಕ ದೂರ ಕಾಯ್ದುಕೊಳ್ಳಬೇಕು.
ಹೀಗಾದಾಗ ಮಾತ್ರ ಪರಿಪೂರ್ಣ ಮೌನ ಸಾಧ್ಯ.
ಒಮ್ಮೆ ಒಬ್ಬ ಝೆನ್ ಮಾಸ್ಟರ್ ಸಾವಿನ ಹಾಸಿಗೆಯಲ್ಲಿದ್ದ.
ಅವನ ಪ್ರೀತಿ ಪಾತ್ರ ಮತ್ತು ಅವನ ವಾರಸುದಾರ ಶಿಷ್ಯ, ಪ್ರಶ್ನೆ ಮಾಡಿದ.
ಮಾಸ್ಟರ್, ಇನ್ನೂ ಏನಾದರೂ ನಮಗೆ ಕಲಿಸುವುದು ಉಳಿದಿದೆಯೆ? ಹಾಗೇನಾದರೂ ಉಳಿದಿದ್ದರೆ ಸಾವಿಗೂ ಮುಂಚೆ ಆದಷ್ಟು ಬೇಗ ಹೇಳಿಕೊಡಿ.
ಮಾಸ್ಟರ್, ಒಂದು ಕ್ಷಣ ಧ್ಯಾನ ಮಗ್ನನಾಗಿ ಚಿಂತಿಸಿ ಮಾತನಾಡಿದ.
ನಿನ್ನ ಒಳನೋಟ ಅದ್ಭುತ, ನಿನ್ನ ಕಲಿಕೆ ಮತ್ತು ತರಬೇತಿ ಪರಿಪೂರ್ಣ, ಆದರೂ………
ಹೇಳಿ ಮಾಸ್ಟರ್, ಅದೇನಿದ್ದರೂ ನಾನು ಪರಿಹರಿಸಿಕೊಳ್ಳುವೆ.
ಏನಿಲ್ಲ, ನಿನ್ನ ಮೈ ಝೆನ್ ನಿಂದ ನಾರುತ್ತಿದೆ.