ಸಾವಿಗೆ ಹೆದರುವವರು… : ಓಶೋ ವ್ಯಾಖ್ಯಾನ

ಯಾರು, ಯಾಕೆ ತಾನೇ ಸಾವಿಗೆ ಭಯಪಡಬೇಕು? ಯಾರು ಬದುಕನ್ನ ಅನುಭವಿಸಿಲ್ಲವೋ ಅವರು ಮಾತ್ರ ಸಾವಿಗೆ ಹೆದರುತ್ತಾರೆ… ~ ಓಶೋ ರಜನೀಶ್ । ಕನ್ನಡಕ್ಕೆ: ಚಿದಂಬರ ನರೇಂದ್ರ

ನಾನು ಸತ್ತ ದಿನ
ನನ್ನ ಹೆಣವನ್ನು ಸ್ಮಶಾನಕ್ಕೆ
ಹೊತ್ತುಕೊಂಡು ಹೋಗುವಾಗ
ಕಣ್ಣೀರು ಹಾಕಬೇಡಿ.
ನಮ್ಮನ್ನೆಲ್ಲ ಬಿಟ್ಟುಹೋದ
ಎಂದು ದುಃಖಿಸಬೇಡಿ.

ಬಿಟ್ಟುಹೋಗುವುದಕ್ಕೂ
ಸಾವಿಗೂ
ಯಾವುದೇ ಸಂಬಂಧವಿಲ್ಲ.

ಸಂಜೆ ಸೂರ್ಯ ಮುಳುಗುತ್ತಾನೆ
ಬೆಳೆಗಾಗುತ್ತಲೇ ಚಂದ್ರ ಮರೆಯಾಗುತ್ತಾನೆ
ಎಂದರೆ
ಅವರು ನಮ್ಮನ್ನಗಲಿದರು
ಎಂದು ಅರ್ಥವೆ?

ಸಾವು ಎಂದರೆ ಮಿಲನ.
ಗೋರಿ, ಸೆರೆಮನೆಯಂತೆ
ಹೊಸ ಹುಟ್ಟಿನ ಜಾಗ.

ಬಾವಿಯಲ್ಲಿ ಕೊಡ ಮುಳುಗಿದಂತೆ
ದೇಹ, ಮಣ್ಣಿನಲ್ಲಿ ನಾಟಿಯಾಗುತ್ತದೆ.
ಒಳಗೆ ಹೋದದ್ದೆಲ್ಲ
ಹೊಸ ಚೆಲುವಿನೊಂದಿಗೆ ಹೊರ ಬರುತ್ತದೆ.

ನಿನ್ನ ಬಾಯಿ
ಇಲ್ಲಿ ಮುಚ್ಚುತ್ತಿದ್ದಂತೆಯೇ
ಅಲ್ಲಿ ಹೊಸ ಖುಶಿಯಿಂದ ಚೀರುತ್ತದೆ.

  • ರೂಮಿ.

ಸಾಕ್ರೆಟಿಸ್ ಸಾವಿಗೆ ಎದುರುಬದಿರಾಗಿ ನಿಂತಿದ್ದಾಗ ಒಬ್ಬರು ಪ್ರಶ್ನೆ ಮಾಡಿದರು.

“ಇಂದು ಸಂಜೆ ಸೂರ್ಯ ಮುಳುಗುವ ಹೊತ್ತಿಗೆ ನಿನಗೆ ವಿಷ ಕುಡಿಸಲಾಗುತ್ತದೆ, ಸಾವಿಗೆ ನೀನು ಹೆದರುತ್ತಿದ್ದೀಯ?”

ಸಾಕ್ರೆಟಿಸ್ ಉತ್ತರಿಸಿದ…….

ಸಾವಿಗೆ ನಾನ್ಯಾಕೆ ಹೆದರಬೇಕು? ಈಗ ನನ್ನೆದುರು ಇರೋದು ಎರಡು ಸಾಧ್ಯತೆಗಳು, ಒಂದು, ನಾನು ಸಾಯಬಹುದು, ಅಕಸ್ಮಾತ್ ನಾನು ಸತ್ತರೆ, ನಾನೇ ಇಲ್ಲವಾದ ಮೇಲೆ, ಆಗ ಚಿಂತೆ ಮಾಡುವವರು ಯಾರೂ ಇಲ್ಲ. ಅಥವಾ ನಾನು ಸಾಯುವುದಿಲ್ಲ, ಆಗ ಚಿಂತೆಗೆ ಯಾವ ಕಾರಣವೂ ಇಲ್ಲ. ಕೇವಲ ಎರಡು ಸರಳ ಸಾಧ್ಯತೆಗಳು, ಒಂದು ನಾನು ಸಂಪೂರ್ಣವಾಗಿ ಇಲ್ಲವಾಗುತ್ತೇನೆ, ಚಿಂತೆ ಮಾಡುವವರೇ ಇಲ್ಲ ಎಂದ ಮೇಲೆ ಚಿಂತೆಯೂ ಇಲ್ಲ, ನೋವು ಅನುಭವಿಸುವವರು ಇಲ್ಲ. ಅಥವಾ ನಾನು ಸಾಯದೇ ಹೋಗಬಹುದು, ನಾನು ಸಾಯುವುದಿಲ್ಲ ಎಂದ ಮೇಲೆ ಯಾಕೆ ಚಿಂತೆ ಮಾಡಬೇಕು?

ನಾನು ನನ್ನ ಇಡೀ ಬದುಕನ್ನ ಸಂಪೂರ್ಣವಾಗಿ ಖುಶಿಯಿಂದ ಬದುಕಿದ್ದೇನೆ. ಸಾವಿನ ನಂತರ ಇನ್ನೊಂದು ಬದುಕೇನಾದರೂ ಇದ್ದರೆ ಆ ಬದುಕನ್ನೂ ನಾನು ಖುಶಿಯಿಂದ ಬದುಕುತ್ತೇನೆ, ಏಕೆಂದರೆ ನನಗೆ ಖುಶಿಯಿಂದ ಬದುಕುವ ಕಲೆ ಗೊತ್ತು. ಸಾವಿನ ನಂತರ ಬದುಕು ಇರದಿದ್ದರೆ, ನಾನು ಪೂರ್ಣ ವಿಶ್ರಾಂತಿ ತೆಗೆದುಕೊಳ್ಳುತ್ತೇನೆ. ನನಗೆ ವಿಶ್ರಾಂತಿ ತೆಗೆದುಕೊಳ್ಳುವ ಕಲೆಯೂ ಗೊತ್ತು. ಹಾಗಾಗಿ ನನ್ನೆದುರು ಯಾವ ಸಮಸ್ಯೆಯೂ ಇಲ್ಲ. Either I will be dancing or I will be resting. ಆದರೆ ನನಗೆ ಗೊತ್ತು ಈ ಎರಡೂ ಕ್ರಿಯೆಗಳು ಅತ್ಯಂತ ಸುಂದರ. ಕುಣಿತಕ್ಕೆ ಹೇಗೋ ವಿಶ್ರಾಂತಿಗೂ ಹಾಗೇ ತನ್ನದೇ ಆದ ವಿಶಿಷ್ಟ ಸೌಂದರ್ಯವಿದೆ – ಚಿರಂತನ ವಿಶ್ರಾಂತಿ, ಯಾವ ಚಿಂತೆಯಿಲ್ಲದೇ, ಯಾವ ದುಗುಡ ಇಲ್ಲದೇ, ಯಾವ ಆತಂಕಗಳಿಲ್ಲದೆಯೇ, ಯಾವ ನೋವು ವೇದನೆಗಳಿಲ್ಲದೆಯೇ ಸಂಪೂರ್ಣ ವಿಶ್ರಾಂತಿ. ಕುಣಿತವನ್ನು ಕೂಡ ನಾನು ಅಷ್ಟೇ ಖುಶಿಯಿಂದ ಅನುಭವಿಸಬಲ್ಲೆ, ನನಗೆ ಆ ಕಲೆ ಗೊತ್ತು, ನಾನು ಚಿರಂತನವಾಗಿ ಕುಣಿತವನ್ನು ಅನುಭವಿಸುತ್ತಲೇ ಇರಬಲ್ಲೆ.

ಪ್ರತಿಯೊಬ್ಬ ಯಶಸ್ವಿ ವ್ಯಕ್ತಿಯ ಅಪ್ರೋಚ್ ಕೂಡ ಸಾಕ್ರೆಟಿಸ್ ನದೇ ಆಗಿರುತ್ತದೆ. ಯಾರು, ಯಾಕೆ ತಾನೇ ಸಾವಿಗೆ ಭಯಪಡಬೇಕು? ಯಾರು ಬದುಕನ್ನ ಅನುಭವಿಸಿಲ್ಲವೋ ಅವರು ಮಾತ್ರ ಸಾವಿಗೆ ಹೆದರುತ್ತಾರೆ.

ಮುಲ್ಲಾ ನಸ್ರುದ್ದೀನ್ ಮೇಲಿಂದ ಮೇಲೆ ತನ್ನ ಕತ್ತೆಯನ್ನ ಕಳೆದುಕೊಳ್ಳುತ್ತಿದ್ದ. ಒಮ್ಮೆ ಹೀಗೆ ತನ್ನ ಕಳೆದುಕೊಂಡ ಕತ್ತೆಯನ್ನ ಹುಡುಕುತ್ತ ಮುಲ್ಲಾ ಹಾಡುತ್ತ, ಕುಣಿಯುತ್ತ ಭಗವಂತನಿಗೆ ಧನ್ಯವಾದ ಹೇಳುತ್ತ ಒಂದು ಊರಿನ ರಸ್ತೆಯ ಮೂಲಕ ಹಾಯ್ದು ಹೋಗುತ್ತಿದ್ದ.

ಮುಲ್ಲಾ ಇಷ್ಟು ಖುಶಿಯಾಗಿದ್ದನ್ನ ಕಂಡ ಒಬ್ಬ ದಾರಿಹೋಕ ಪ್ರಶ್ನೆ ಮಾಡಿದ.

“ ಯಾಕೆ ನಸ್ರುದ್ದೀನ್ ಇಷ್ಟು ಖುಶಿಯಾಗಿದ್ದೀಯ ? ಯಾರೋ ಹೇಳಿದರು ನಿನ್ನ ನೆಚ್ಚಿನ ಕತ್ತೆ ಕಾಣೆಯಾಗಿದೆಯೆಂದು, ಆದರೂ ನೀನು ಖುಶಿಯಾಗಿದ್ದೀಯಲ್ಲ, ಕತ್ತೆ ಸಿಕ್ತಾ? “

“ ಇನ್ನೂ ಸಿಕ್ಕಿಲ್ಲ ಗೆಳೆಯ ಆದರೆ ಖುಶಿಯ ವಿಷಯ ಏನು ಗೊತ್ತಾ, ಆ ಕತ್ತೆ ಕಳೆದು ಹೋದಾಗ ಅದೃಷ್ಟವಶಾತ್ ನಾನು ಆ ಕತ್ತೆಯ ಮೇಲೆ ಕೂತಿರಲಿಲ್ಲ, ಹಾಗೇನಾದರೂ ಕೂತಿದ್ದರೆ ನಾನೂ ಕಳೆದು ಹೋಗಿ ಬಿಡುತ್ತಿದ್ದೆ “

ಮುಲ್ಲಾ ತನ್ನ ಖುಶಿಯ ಕಾರಣ ವಿವರಿಸಿದ.

ನಸ್ರುದ್ದೀನ್ ಗೆ ಕತ್ತೆ ಸಿಕ್ಕಿದರೂ ಸಂತೋಷ, ಸಿಗದಿದ್ದರೂ ಸಂತೋಷ. ಏಕೆಂದರೆ ಅವನಿಗೆ ಖುಶಿಯಿಂದ ಬದುಕುವ ಕಲೆ ಗೊತ್ತು.

Leave a Reply