ಅಂಟಿಕೊಳ್ಳುವುದು ಎಂದರೆ… । ಓಶೋ ವ್ಯಾಖ್ಯಾನ

ಅಂಟಿಕೊಳ್ಳುವುದು ಎಂದರೆ ನಿಮ್ಮ ಜೀವ ಶಕ್ತಿಯನ್ನ ನಿಮ್ಮೊಳಗಿಂದ ಕಿತ್ತು ಇನ್ನೊಬ್ಬರೊಳಗೆ, ಇನ್ನೊಂದು ಸಂಗತಿಯೊಳಗೆ ಸ್ಥಾಪಿಸುವುದು… ~ ಓಶೋ | ಕನ್ನಡಕ್ಕೆ: ಚಿದಂಬರ ನರೇಂದ್ರ

ಲೌಕಿಕದ ಆಮಿಷ
ನಿನ್ನ ಸೆಳೆಯುತ್ತಿದ್ದರೆ
ನೀನು ಕೇವಲ ಒಬ್ಬ ನೌಕರ.

ಅಲೌಕಿಕದ ತುಡಿತ
ನಿನ್ನ ಜಗ್ಗುತ್ತಿದೆಯಾದರೆ
ನೀನೊಬ್ಬ ಪಕ್ಕಾ ಸುಳ್ಳುಗಾರ.

ಎರಡೂ ಮೂರ್ಖ ಆಸೆಗಳೇ.

ಪ್ರೀತಿ ತಂದಿಡುವ
ಗೊಂದಲಕರ
ಅಮಾಯಕ ಆನಂದವೊಂದೆ
ನಿನ್ನ ಪರಮ ಅಗತ್ಯ.

ನೀನು ಮರೆತದ್ದನ್ನು
ಅವರು ಕ್ಷಮಿಸಿಬಿಡುತ್ತಾರೆ.

  • ರೂಮಿ

ಅಂಟಿಕೊಳ್ಳುವುದರಿಂದ (attachment ) ಮುಕ್ತರಾದಾಗಲೇ ವಿಜಯ ಸಂಪೂರ್ಣವಾಗುವುದು. ಹಾಗಾದರೆ ಈ ಅಂಟಿಕೊಳ್ಳುವುದು ಎಂದರೇನು? ಅಂಟಿಕೊಳ್ಳುವುದು ಎಂದರೆ, “ಆ ಇನ್ನೊಬ್ಬರಿಲ್ಲದೇ ನಾನು ಬದುಕಲಾರೆ, ಆ ಇನ್ನೊಬ್ಬರು ನನ್ನ ಬದುಕಿನ ಕೇಂದ್ರ” ಎನ್ನುವ ಜೀವನ ಧೋರಣೆ.

ಒಬ್ಬ ರಾಜನ ಜೀವ ಒಂದು ಗಿಳಿಯಲ್ಲಿ ಸುರಕ್ಷಿತವಾಗಿರುವ ಮಕ್ಕಳ ಕತೆಯನ್ನ ನೀವು ಕೇಳಿರಬಹುದು. ಹಾಗಾಗಿ ರಾಜನನ್ನು ಕೊಲ್ಲುವುದು ಸಾಧ್ಯವೇ ಇಲ್ಲ. ಗುಂಡು ರಾಜನ ದೇಹದಿಂದ ಹಾಯ್ದು ಹೋದರೂ ರಾಜ ಸಾಯುವುದಿಲ್ಲ, ಬಾಣ ರಾಜನ ಹೃದಯವನ್ನು ಚುಚ್ಚಿದರೂ ರಾಜನಿಗೆ ಸಾವಿಲ್ಲ, ನೀವು ರಾಜನಿಗೆ ವಿಷ ಉಣಿಸಿದರೂ ಅವನು ಜೀವಂತವಾಗಿಯೇ ಇರುತ್ತಾನೆ. ರಾಜನನ್ನು ಕೊಲ್ಲಬೇಕಾದರೆ ನೀವು ಅವನ ಜೀವಶಕ್ತಿಯನ್ನು ತನ್ನೊಳಗೆ ಅಡಗಿಸಿಟ್ಟುಕೊಂಡಿರುವ ಆ ಗಿಳಿಯನ್ನು ಹುಡುಕಿ ಕೊಲ್ಲಬೇಕು, ಆಗ ಮಾತ್ರ ರಾಜ ಸಾಯುತ್ತಾನೆ. ಇಂಥ ಕತೆಗಳು ಬಹಳ ಅರ್ಥಪೂರ್ಣ. ಯಾರಿಗೆ ಇಂಥ ಕತೆಗಳು ಅರ್ಥವಾಗುತ್ತವೆಯೋ ಅವರು ಬದುಕಿನಲ್ಲಿ ಸಫಲರಾಗುತ್ತಾರೆ.

ಅಂಟಿಕೊಳ್ಳುವುದು ಎಂದರೆ : ನೀವು ನಿಮ್ಮೊಳಗೆ ಬದುಕುತ್ತಿಲ್ಲ, ನಿಮ್ಮ ಜೀವ ಬೇರೆ ಇನ್ನಾವುದರಲ್ಲೋ ಇದೆ. ಉದಾಹರಣೆಗೆ, ಒಬ್ಬರ ಬದುಕು ಕ್ಯಾಶ್ ಬಾಕ್ಸ್ ನ ಸುತ್ತ ಸುತ್ತುತ್ತಿರುತ್ತದೆ. ನೀವು ಅವರ ಕುತ್ತಿಗೆ ಹಿಸುಕಿದರೂ ಅವರು ಸಾಯುವುದಿಲ್ಲ, ನೀವು ಅವರ ಸಂಪತ್ತನ್ನು ಕದ್ದು ನೋಡಿ, ತಕ್ಷಣವೇ ಅವರು ತಮ್ಮ ಪ್ರಾಣ ಕಳೆದುಕೊಳ್ಳುತ್ತಾರೆ. ಆ ಮನುಷ್ಯನ ಜೀವ ಅವನ ಸಂಪತ್ತಿನಲ್ಲಿದೆ, ಅವನ ಬ್ಯಾಂಕ್ ಬ್ಯಾಲನ್ಸ್ ಗೆ ಖೋತಾ ಆಗುವುದೆಂದರೆ ಅವನ ಶವ ಪೆಟ್ಟಿಗೆಗೆ ಮೊಳೆ ಹೊಡೆದಂತೆ. ಬೇರೆ ಯಾವ ರೀತಿಯಿಂದಲೂ ಅವನು ಸಾಯುವುದಿಲ್ಲ, ಅವನ ಜೀವ ಅವನ ಸಂಪತ್ತಿನಲ್ಲಿದೆ.

ಅಂಟಿಕೊಳ್ಳುವುದು ಎಂದರೆ ನಿಮ್ಮ ಜೀವ ಶಕ್ತಿಯನ್ನ ನಿಮ್ಮೊಳಗಿಂದ ಕಿತ್ತು ಇನ್ನೊಬ್ಬರೊಳಗೆ, ಇನ್ನೊಂದು ಸಂಗತಿಯೊಳಗೆ ಸ್ಥಾಪಿಸುವುದು. ಒಬ್ಬರು ತಮ್ಮ ಮಕ್ಕಳಲ್ಲಿ ಜೀವ ಇಟ್ಟುಕೊಂಡರೆ, ಇನ್ನೊಬ್ಬರ ಜೀವ ಅವರ ಹೆಂಡತಿ/ಗಂಡ/ಪ್ರೇಮಿಯಲ್ಲಿರುತ್ತದೆ, ಮತ್ತೊಬ್ಬರು ತಮ್ಮ ಜೀವವನ್ನ ಹಣ, ಅಧಿಕಾರ, ಪ್ರತಿಷ್ಠೆಯಲ್ಲಿ ಗುರುತಿಸುತ್ತಾರೆ. ನಿಮ್ಮ ಜೀವಶಕ್ತಿ ನಿಮ್ಮೊಳಗೆ, ನಿಮ್ಮ ಚೈತನ್ಯದಲ್ಲಿ ತನ್ನ ಎಲ್ಲ ಸೌಂದರ್ಯದೊಂದಿಗೆ ನಳನಳಿಸುತ್ತಿಲ್ಲ. ಅದು ಯಾವಾಗ ತಾನು ಇರಬೇಕಾದ ಜಾಗದಲ್ಲಿ ಇರುವುದಿಲ್ಲವೋ ಆಗ ನೀವು ಅಸಂಖ್ಯಾತ ತೊಂದರೆಗಳ ಆಗರವಾಗುತ್ತೀರಿ.

ಇಂಥ ಒಂದು ಅಂಟಿಕೊಳ್ಳುವುವಿಕೆಯೇ ಸಂಸಾರ, ಲೌಕಿಕತೆ. ನೀವು ಬೇರೆ ಯಾವುದರಲ್ಲಿ ನಿಮ್ಮ ಜೀವಶಕ್ತಿಯನ್ನ ಸ್ಥಾಪಿಸಿಕೊಂಡರೂ ನೀವು ಅವರ/ಅದರ ಗುಲಾಮರಾಗುತ್ತೀರಿ. ತನ್ನ ಜೀವಶಕ್ತಿಯನ್ನ ಗಿಳಿಯೊಳಗೆ ಅಡಗಿಸಿಟ್ಟಿದ್ದ ರಾಜ, ಆ ಗಿಳಿಯ ಗುಲಾಮ. ಆ ಗಿಳಿ ಸತ್ತಾಗ ಅವನೂ ಸಾಯಬೇಕಾಗುತ್ತದೆ.

ಒಂದು ದಿನ ಮುಲ್ಲಾ ನಸ್ರುದ್ದೀನ ಬೆಲೆ ಬಾಳುವ ಜರಿ ರುಮಾಲು ಸುತ್ತಿಕೊಂಡು ಸುಲ್ತಾನನ ರಾಜ್ಯ ಸಭೆಗೆ ಬಂದ. ಅವನನ್ನು ನೋಡಿದ ಕೂಡಲೇ ಸುಲ್ತಾನ, ಮುಲ್ಲಾ ಸುತ್ತಿಕೊಂಡಿದ್ದ ರುಮಾಲಿನ ಬಗ್ಗೆ ಅವನನ್ನು ವಿಚಾರಿಸಿದ.

“ ಸುಲ್ತಾನರೇ, ಇದು ವಿಶೇಷವಾಗಿ ತಯಾರಿಸಲಾದ ರುಮಾಲು, 1000 ಬಂಗಾರದ ದಿನಾರು ಕೊಟ್ಟು ಕೊಂಡು ಕೊಂಡೆ “ ಮುಲ್ಲಾ ಉತ್ತರಿಸಿದ.

“ 1000 ಬಂಗಾರದ ದಿನಾರುಗಳೇ ? ಸಾಧ್ಯವೇ ಇಲ್ಲ” ಸುಲ್ತಾನ ಆಶ್ಚರ್ಯಚಕಿತನಾದ.

“ ಆ ರುಮಾಲು ಮಾರುವವನಿಗೆ ನಾನೂ ಹಾಗೇ ಹೇಳಿದೆ ಸುಲ್ತಾನರೆ, ಆದರೆ ಅವ, ನಿಮ್ಮ ಸುಲ್ತಾನರನ್ನು ಹೋಗಿ ಕೇಳು, ಅವರಿಗೆ ಮಾತ್ರ ಈ ರುಮಾಲಿನ ವಿಶೇಷತೆ ಮತ್ತು ಸರಿಯಾದ ಬೆಲೆ ಗೊತ್ತು. ಸುಲ್ತಾನರಾಗಿದ್ದರೆ ಈ ರೂಮಾಲಿಗೆ 2000 ಬಂಗಾರದ ದಿನಾರು ಕೊಡುತ್ತಿದರು ಎಂದ“

ಮುಲ್ಲಾ ಸಮಜಾಯಿಶಿ ಕೊಟ್ಟ.

ಸುಲ್ತಾನ ಕೂಡಲೆ ತನ್ನ ಖಜಾನೆಯವರಿಗೆ ಹೇಳಿ ಮುಲ್ಲಾನಿಗೆ 2000 ಬಂಗಾರದ ದಿನಾರು ಕೊಟ್ಟು ಆ ರುಮಾಲು ಖರೀದಿಸಿದ.

ಸಭೆ ಮುಗಿದ ಮೇಲೆ ನಸ್ರುದ್ದೀನ ಹೊರಗೆ ಬಂದು ರಾಜ ಸಭೆಯಲ್ಲಿದ್ದ ಜನರಿಗೆ ಹೇಳಿದ.

“ ನನಗೆ ರುಮಾಲಿನ ಬೆಲೆ ಕಟ್ಟುವುದು ಗೊತ್ತಿಲ್ಲದಿರಬಹುದು ಆದರೆ ಸುಲ್ತಾನನ ಸ್ವಾಭಿಮಾನಕ್ಕೆ ಬೆಲೆ ಕಟ್ಟುವುದು ಮಾತ್ರ ಗೊತ್ತು. ಅವನ ಜೀವ ಅವನೊಳಗಿಲ್ಲ, ಅವನ ಪ್ರತಿಷ್ಠೆಯಲ್ಲಿದೆ. ಯಾರ ಜೀವ ಅವರೊಳಗಿಲ್ಲವೋ ಅವರನ್ನು ಬಹುಸುಲಭವಾಗಿ ದಾರಿತಪ್ಪಿಸಬಹುದು”.

Leave a Reply