ಬೆರಗು ಉಳಿಸಿಕೊಂಡವನೇ ನಿಜವಾದ ಸಂತ! : ಓಶೋ ವ್ಯಾಖ್ಯಾನ

“ಎಲ್ಲ ಗೊತ್ತು” ಎನ್ನುವುದು ನಮ್ಮನ್ನು ಕೊಲ್ಲುತ್ತದೆ. ಈ ಕಸವನ್ನು ಹೊರಗೆ ಹಾಕಿ ಹಗುರಾಗಿ. ಯಾವಾಗ ಈ ಕುರುಡು ತಿಳುವಳಿಕೆ ನಮ್ಮ ಕಣ್ಣುಗಳಿಂದ ಹೊರತಾಗುತ್ತದೆಯೋ ಆಗ ನಿಮ್ಮನ್ನು ವಿಸ್ಮಯಕಾರಿ ನಿಗೂಢತೆ ತುಂಬಿಕೊಳ್ಳುತ್ತದೆ… ~ ಓಶೋ ರಜನೀಶ್ । ಕನ್ನಡಕ್ಕೆ: ಚಿದಂಬರ ನರೇಂದ್ರ

ಬೆರಗು ಕಳೆದುಕೊಂಡವರು
ಧರ್ಮಕ್ಕೆ ಶರಣಾಗುತ್ತಾರೆ.
ಸ್ವಂತದ ಬಗ್ಗೆ ನಂಬಿಕೆಯಿಲ್ಲದವರು
ಅಧಿಕಾರವನ್ನು ಆಶ್ರಯಿಸುತ್ತಾರೆ.

ಆದ್ದರಿಂದಲೇ ಸಂತ
ಜನರಿಗೆ ಗೊಂದಲವಾಗದಿರಲೆಂದು
ಒಂದು ಹೆಜ್ಜೆ ಹಿಂದೆ ನಿಲ್ಲುತ್ತಾನೆ.
ಅವನು ಕಲಿಸುವ ರೀತಿ ಹೇಗೆಂದರೆ
ಜನರಿಗೆ
ಕಲಿಯುವ ಪ್ರಮೇಯವೇ ಇರುವುದಿಲ್ಲ.

~ ಲಾವೋತ್ಸೇ


ಎಕ್ಹಾರ್ಟ್ ಒಬ್ಬ ಅಸಾಮಾನ್ಯ ಕ್ರಿಶ್ಚಿಯನ್ ಅನುಭಾವಿ, ಅವನು ಒಂದು ಅನನ್ಯವಾದ ಹೇಳಿಕೆಯನ್ನ ಕೊಟ್ಟಿದ್ದಾನೆ, “ಎಲ್ಲದರಲ್ಲೂ ಬೆರಗು ಉಳಿಸಿಕೊಂಡವನೇ ನಿಜವಾದ ಸಂತ”. ಪ್ರತಿಯೊಂದೂ, ಪ್ರತಿ ಚಿಕ್ಕ ಸಂಗತಿಯೂ ಅವನನ್ನು ಬೆರಗುಗೊಳಿಸುತ್ತಿತ್ತು. ಒಂದು ಚಿಕ್ಕ ಕಲ್ಲು ನೀರಿನೊಳಗೆ ಬೀಳುತ್ತದೆ, ಒಂದು ಶಬ್ದವನ್ನು ಸೃಷ್ಟಿ ಮಾಡುತ್ತದೆ, ಆ ಕಲ್ಲು ಬಿದ್ದ ಜಾಗದ ಸುತ್ತ ವೃತ್ತಾಕಾರದಲ್ಲಿ ಅಲೆಗಳು ಹುಟ್ಟಲು ಶುರುವಾಗುತ್ತವೆ. ಪ್ರಕೃತಿಯ ಈ ಸೋಜಿಗವನ್ನು ನೋಡುತ್ತ ನಿಂತ ಸಂತ ಬೆರಗಾಗುತ್ತಾನೆ. ಇದು ಎಷ್ಟು ಅದ್ಭುತ, ಎಷ್ಟು ನಿಗೂಢ. ಅವನಿಗೆ ತಾನು ಉಸಿರಾಡುವುದು, ಬದುಕುವುದು ಎಲ್ಲವೂ ಅಚ್ಚರಿಯ ಭಾಗವೇ.

ಪ್ರತಿ ಮುಂಜಾನೆ ದೇವರಿಗೆ ಪ್ರಾರ್ಥನೆ ಸಲ್ಲಿಸುವಾಗ ಎಕ್ಹಾರ್ಟ್ ಹೇಳುತ್ತಾನೆ, “ಮತ್ತೊಂದು ದಿನ ಬಂದಾಯ್ತು, ಸೂರ್ಯ ಆಗಸದಲ್ಲಿ ಮತ್ತೆ ಹುಟ್ಟಿದ್ದಾನೆ, ನಿನ್ನ ಕರುಣೆ ಅಪಾರ. ಸೂರ್ಯ ಹುಟ್ಟದಿದ್ದರೆ ನಾವು ಏನು ಮಾಡಬಹುದಿತ್ತು? ತೀರ ಅಸಹಾಯಕ ಈ ಮನುಷ್ಯ”.

ಎಕ್ಹಾರ್ಟ್ ಹೇಳುತ್ತಿದ್ದ, “ಇವತ್ತು ನಾನು ಉಸಿರಾಡುತ್ತಿದ್ದೇನೆ, ನಾಳೆ ಉಸಿರಾಡಲಿಕ್ಕಿಲ್ಲ; ನನ್ನ ಕೈಯಲ್ಲಿ ಏನಿದೆ?”.

ಉಸಿರನ್ನ ಎಲ್ಲಿಂದಲೋ ಎಳೆದುಕೊಳ್ಳುವುದು ಸಾಧ್ಯವಿಲ್ಲ. ಅದು ನಿಮ್ಮ ಹತೋಟಿಯಲ್ಲಿಲ್ಲ. ಉಸಿರು ನಿನಗೆ ಅಷ್ಟು ಹತ್ತಿರದಲ್ಲಿದೆ ಆದರೂ ಅದರ ಮೇಲೆ ನಿನಗೆ ಯಾವ ಮಾಲಿಕತ್ವವೂ ಇಲ್ಲ. ಹೊರಗೆ ಹೋದ ಉಸಿರು ಮತ್ತೆ ಒಳಗೆ ಬರದೇ ಇದ್ದರೆ? ಆದರೆ ಉಸಿರು ಮತ್ತೆ ಬರುತ್ತದೆ! ನಮಗೆ ಇಷ್ಟು ಹತ್ತಿರ ಇರುವ ಈ ಸಂಗತಿಯ ಬಗ್ಗೆ ನಮಗೆ ಏನೂ ಗೊತ್ತಿಲ್ಲ, ಮತ್ತು ಅದರ ಮೇಲೆ ನಮಗೆ ಯಾವ ಅಧಿಕಾರವೂ ಇಲ್ಲ. ಆದರೂ ನಾವು ನಮಗೆ ಎಲ್ಲ ಗೊತ್ತು ಎನ್ನುವಂತೆ ಮೇರೆಯುತ್ತೇವೆ. “ಎಲ್ಲ ಗೊತ್ತು” ಎನ್ನುವುದು ನಮ್ಮನ್ನು ಕೊಲ್ಲುತ್ತದೆ. ಈ ಕಸವನ್ನು ಹೊರಗೆ ಹಾಕಿ ಹಗುರಾಗಿ. ಯಾವಾಗ ಈ ಕುರುಡು ತಿಳುವಳಿಕೆ ನಮ್ಮ ಕಣ್ಣುಗಳಿಂದ ಹೊರತಾಗುತ್ತದೆಯೋ ಆಗ ನಿಮ್ಮನ್ನು ವಿಸ್ಮಯಕಾರಿ ನಿಗೂಢತೆ ತುಂಬಿಕೊಳ್ಳುತ್ತದೆ.

ಸಹಜ ಸ್ಥಿತಿ ಎಂದರೆ ಬುದ್ಧಿ-ಮನಸ್ಸುಗಳ ಯಾವ ಹಸ್ತಕ್ಷೇಪವೂ ಇಲ್ಲದ ಸ್ಥಿತಿ. ನೀವು ಏನನ್ನ ನೋಡುತ್ತಿದ್ದೀರಿ ಎನ್ನುವುದು ನಿಮಗೆ ತಿಳಿಯದ ಸ್ಥಿತಿ. ಗೋಡೆಯ ಮೇಲಿನ ಗಡಿಯಾರವನ್ನ ಅರ್ಧ ಗಂಟೆ ನೋಡಿದರೂ, ಸಂತನಿಗೆ ಸಮಯ ಎಷ್ಟೆಂದು ಗೊತ್ತಿಲ್ಲ. ಅದು ಗಡಿಯಾರವೆಂದು ಕೂಡ ಗೊತ್ತಿಲ್ಲ. ಈ ನೋಡುವಿಕೆಯಲ್ಲಿ ಒಂದು ಬೆರಗು ಮಾತ್ರ ಉಂಟು. ಇಷ್ಟು ದಿನ ಕಲಿತಿದ್ದೆಲ್ಲವನ್ನ ಹಿನ್ನೆಲೆಯಲ್ಲಿ ಹಿಡಿದಿಡಲಾಗಿದೆ. ಈ ಮಾಹಿತಿಗಾಗೆ ಬೇಡಿಕೆ ಬರುವ ತನಕ ಆ ತಿಳುವಳಿಕೆ ಹಿನ್ನೆಲೆಯಲ್ಲೇ ಇರುತ್ತದೆ. “ ಈಗ ಎಷ್ಟು ಸಮಯ? “ ಎಂದು ನೀವು ಕೇಳಿದರೆ ಮಾತ್ರ “ ಒಂಭತ್ತು ಗಂಟೆ” ಎಂದು ಸರಿಯಾದ ಸಮಯ ಹೇಳಿ ಮತ್ತೆ ಸಂತ ಅದೇ ಹಿಂದಿನ ಬೆರಗಿನ ಸ್ಥಿತಿಗೆ ಮರಳುತ್ತಾನೆ.

Leave a Reply