ವೈರುಧ್ಯಗಳೇ ಸಮತೋಲನದ ಗುಟ್ಟು

  • ಚಿದಂಬರ ನರೇಂದ್ರ

ಈ ಜಗತ್ತಿನಲ್ಲಿ
ನಮ್ಮ ವಿಕಾಸಕ್ಕೆ ಕಾರಣವಾಗಿರುವುದು
ನಮ್ಮ ನಡುವೆ ಇರುವ ಸಮಾನತೆಗಳಲ್ಲ,
ಸಮಾನ ಹೋಲಿಕೆಗಳಲ್ಲ,
ಬದಲಾಗಿ
ನಮ್ಮನ್ನು ಕೈ ಹಿಡಿದು ಮುನ್ನಡೆಸುತ್ತಿರುವುದು
ನಮ್ಮ ನಡುವಿನ ವೈರುಧ್ಯಗಳು.

ಬ್ರಹ್ಮಾಂಡದ ಎಲ್ಲ ವೈರುಧ್ಯಗಳು
ಪ್ರತಿಯೊಬ್ಬರಲ್ಲೂ ಜಾಗ ಮಾಡಿಕೊಂಡಿವೆ.
ಪ್ರತೀ ಆಸ್ತಿಕನೂ ತನ್ನೊಳಗಿರುವ
ನಾಸ್ತಿಕನನ್ನು ಭೇಟಿ ಮಾಡಬೇಕು
ಮತ್ತು, ಪ್ರತೀ ನಾಸ್ತಿಕನೂ
ತನ್ನೂಳಗಿನ ಮೂಕ ಆಸ್ತಿಕನನ್ನು ಮುಟ್ಟಿ ಮಾತನಾಡಿಸಬೇಕು.

ಮನುಷ್ಯ
ತನ್ನ ಪರಿಪೂರ್ಣ ಸ್ಥಿತಿ ಮುಟ್ಟುವ ತನಕ
ನಂಬಿಕೆ ಕೇವಲ
ತನ್ನ ಬದ್ಧವೈರಿಯಂತೆ ಕಾಣಿಸುವ
ಅಪನಂಬಿಕೆಯನ್ನು ಉದ್ದೀಪಿಸುವ
ನಿಧಾನ ಪ್ರಕ್ರಿಯೆ ಮಾತ್ರ.

~ ಶಮ್ಸ್ ತಬ್ರೀಝಿ


ಒಮ್ಮೆ ಝೆನ್ ಮಾಸ್ಟರ್ ಹೊಟೈ ಒಂದು ಹಳ್ಳಿಯ ಮೂಲಕ ಹಾಯ್ದು ಹೋಗುತ್ತಿದ್ದ. ಮಾಸ್ಟರ್ ಹೊಟೈ ಈ ಭೂಮಿಯ ಮೇಲೆ ಓಡಾಡಿದ ಅತ್ಯಂತ ಅದ್ಭುತ ಮನುಷ್ಯರಲ್ಲಿ ಒಬ್ಬ. ಅವನು ಲಾಫಿಂಗ್ ಬುದ್ಧ ಎಂದೇ ಈ ಜಗತ್ತಿನಲ್ಲಿ ಪ್ರಸಿದ್ಧನಾದವನು, ಮಾಸ್ಟರ್ ಹೊಟೈ ಸದಾ ನಗುತ್ತಲೇ ಇದ್ದ ಮನುಷ್ಯ. ಆದರೆ ಯಾಕೋ ಅವತ್ತು ಹೊಟೈ ಮರದ ಕೆಳಗೆ ಕಣ್ಣು ಮುಚ್ಚಿಕೊಂಡು ಕುಳಿತುಬಿಟ್ಟಿದ್ದ. ಅವನಿಗೆ ಸಹಜವಾದ ನಗು ಅವನ ಮುಖದಿಂದ ಮಾಯವಾಗಿ ಹೋಗಿತ್ತು, ಕೊನೆಪಕ್ಷ ಒಂದು ಕಿರುನಗೆಯೂ ಅವನ ತುಟಿಯ ಮೇಲಿರಲಿಲ್ಲ.
ಮಾಸ್ಟರ್ ಹೊಟೈ ಇಡೀ ಅಸ್ತಿತ್ವವನ್ನು ತನ್ನೊಳಗೆ ತುಂಬಿಕೊಂಡವನಂತೆ , ಎಲ್ಲ ಭಾವನೆಗಳಲ್ಲಿ ಸುಖ ದುಃಖಗಳಲ್ಲಿ ಅನಾಸಕ್ತನಂತೆ ಸುಮ್ಮನೇ ಕುಳಿತಿದ್ದ.

“ ಯಾಕೆ ಮಾಸ್ಟರ್ ಹೊಟೈ ನೀನು ಇವತ್ತು ನಗುತ್ತಿಲ್ಲ?” ಯಾರೋ ಒಬ್ಬರು ಪ್ರಶ್ನೆ ಮಾಡಿದರು.

ಹೊಟೈ ಕಣ್ಣು ತೆರೆದು ಉತ್ತರಿಸಿದ, “ ನಾನು ಸಿದ್ಧನಾಗುತ್ತಿದ್ದೇನೆ”

“ ಸಿದ್ಧನಾಗುತ್ತಿದ್ದೇನೆ” ಹಾಗೆಂದರೇನು ಮಾಸ್ಟರ್ ? . ಮತ್ತೆ ಅವನನ್ನು ಪ್ರಶ್ನೆ ಮಾಡಲಾಯಿತು.

“ ನಗುವನ್ನ ಆವಾಹಿಸಿಕೊಳ್ಳಲು ನಾನು ಸಿದ್ಧತೆ ಮಾಡಿಕೊಳ್ಳಬೇಕಾಗುತ್ತದೆ. ಅದಕ್ಕಾಗಿ ನಾನು ಸಂಪೂರ್ಣ ಪ್ರಶಾಂತತೆಯನ್ನ ಅನುಭವಿಸಬೇಕಾಗುತ್ತದೆ. ನನ್ನ ಆಳಕ್ಕೆ ಇಳಿದು ನನ್ನ ಪ್ರತಿಯೊಂದನ್ನೂ ಸಂತೈಸಬೇಕಾಗುತ್ತದೆ. ಇಡೀ ಜಗತ್ತನ್ನು ಮರೆತು ನನ್ನನ್ನು ನಾನು ಹೊಸತಾಗಿಸಿಕೊಳ್ಳಬೇಕಾಗುತ್ತದೆ ಆಗ ಮಾತ್ರ ನನಗೆ ನಗು ಸಾಧ್ಯವಾಗುತ್ತದೆ”. ಮಾಸ್ಟರ್ ಹೊಟೈ ಉತ್ತರಿಸಿದ.

ನಿಮಗೆ ನಿಜವಾಗಿಯೂ ನಗುವ ಆಸೆ ಇದ್ದರೆ ಮೊದಲು ನೀವು ಅಳುವನ್ನ ಅರ್ಥಮಾಡಿಕೊಳ್ಳಬೇಕು. ಅಳುವುದು ನಿಮಗೆ ಸಾಧ್ಯವಾಗದಿದ್ದರೆ, ನಿಮ್ಮ ಕಣ್ಣುಗಳಿಗೆ ಕಣ್ಣಿರನ್ನು ಧರಿಸುವ ಸಾಮರ್ಥ್ಯ ಇರದಿದ್ದರೆ ನಿಮಗೆ ನಗು ಕೂಡ ಸಾಧ್ಯವಾಗುವುದಿಲ್ಲ. ನಗುವ ಮನುಷ್ಯ ಕಣ್ಣೀರಿನ ಮನುಷ್ಯನೂ ಹೌದು – ಆಗ ಮಾತ್ರ ಒಂದು ಸಮತೋಲನ ಸಾಧ್ಯ. ಉತ್ಕಟ ಆನಂದದ ಮನುಷ್ಯ, ಆಳ ಮೌನದ ಮೌನದ ಮನುಷ್ಯನೂ ಹೌದು – ಆಗ ಮಾತ್ರ ಸಮತೋಲನ ಸಾಧ್ಯ. ಈ ಎರಡೂ ಒಂದೇ ನಾಣ್ಯದ ಎರಡು ಮುಖಗಳು, ಒಂದಿಲ್ಲದೇ ಇನ್ನೊಂದಿಲ್ಲ. ಎರಡು ವಿರುದ್ಧ ಧ್ರುವಗಳ ಸಹಚರ್ಯದಲ್ಲಿಯೇ ಸಮಚಿತ್ತದ ಮನುಷ್ಯನ ಹುಟ್ಟು. ನಮ್ಮ ಉದ್ದೇಶ ಕೂಡ ಇದೇ ಆಗಬೇಕು, ಸಮತೋಲನವನ್ನ ಸಾಧಿಸುವುದು.

ಒಮ್ಮೆ ವಿದ್ಯಾರ್ಥಿಯೊಬ್ಬ ಮಾಸ್ಟರ್ ರೋಶಿಯವರನ್ನು ಪ್ರಶ್ನೆ ಮಾಡಿದ.

“ ಮಾಸ್ಟರ್, ಯಾಕೆ ಮಹಾ ಬಲಿಷ್ಠರಾದ ಜಪಾನಿಗಳು ಚಹಾದ ಕಪ್ ಗಳನ್ನ ಅಷ್ಚು ತೆಳುವಾಗಿ, ಅಷ್ಟು ನಾಜೂಕಾಗಿ ತಯಾರಿಸುತ್ತಾರೆ? ಅವು ಒಡೆದು ಹೋಗುವ ಭಯ ಇರುವುದಿಲ್ಲವೆ ಅವರಿಗೆ? “

ಮಾಸ್ಟರ್ ರೋಶಿ ಉತ್ತರಿಸಿದರು “ ಅದು ಹಾಗಲ್ಲ, ಅವನ್ನು ಬಳಸುವವರು ಕೂಡ ಜಾಗರೂಕರಾಗಿರಬೇಕು, ಹಗುರಾಗಿರಬೇಕು ಅಂತ, ಇದೂ ಕೂಡ ತರಬೇತಿಯ ಒಂದು ವಿಧಾನ “

ಒಂದು ಜಪಾನಿ ಸೆನ್ಯರೂ ನೆನಪಾಯಿತು

ಪುಟ್ಟ ಮಗುವನ್ನು ಎತ್ತಿಕೊಂಡ
ಸುಮೋ ಪೈಲ್ವಾನ
ಕುಗ್ಗಿ ಅಂಗೈಯಾದ


(ಆಕರ: ಓಶೋ ಪ್ರವಚನ)

Leave a Reply