ಸಂತರು ಮಕ್ಕಳ ಹಾಗೆ…

  • ಚಿದಂಬರ ನರೇಂದ್ರ

ಸಂತರಿಗೆ ಸ್ವಂತ ಬುದ್ಧಿ ಇರುವುದಿಲ್ಲ.
ಸಾಮಾನ್ಯರಲ್ಲಿ ಅವರು
‘ಅಸಾಮಾನ್ಯ’ ವನ್ನು ಕಾಣುತ್ತಾರೆ.

ಅವರಿಗೆ ಒಳ್ಳೆಯವರ ಬಗ್ಗೆ ಪ್ರೀತಿ
ಕೆಟ್ಟವರ ಬಗ್ಗೆಯೂ ಪ್ರೀತಿ
ಪ್ರೀತಿ ಒಂದು ಸಹಜ ಸ್ವಭಾವ.

ಅವರಿಗೆ ನಂಬಿಕೆಯ ಬಗ್ಗೆ ನಂಬಿಕೆ
ಅಪನಂಬಿಕೆಯ ಬಗ್ಗೆಯೂ ನಂಬಿಕೆ
ನಂಬಿಕೆ ಒಂದು ಹುಟ್ಟು ಗುಣ.

ಅವರು ಭೂಮಿಗೆ ಹತ್ತಿರವಾಗಿ ಬದುಕುತ್ತಾರೆ
ನೆಲದ ವ್ಯವಹಾರದಲ್ಲಿ ತಲೆಹಾಕುತ್ತಾರೆ
ಜನ ಕಣ್ಣು ಕಿವಿ ಅರಳಿಸಿ
ಬೆರಗಿನಿಂದ ಅವರನ್ನು ನೋಡುತ್ತಾರೆ

ಒಟ್ಟಿನಲ್ಲಿ ಸಂತರು ಮಕ್ಕಳ ಹಾಗೆ.

~ ಲಾವೋತ್ಸೇ


ಮಗು ಹುಟ್ಟುವಾಗ ಅದಕ್ಕೆ ಯಾವ ಧರ್ಮದ ಹಂಗೂ ಇಲ್ಲ. ಅದಕ್ಕೆ ನೀತಿ ಅನೀತಿ, ಸರಿ ತಪ್ಪು , ನ್ಯಾಯ ಅನ್ಯಾಯ ಯಾವುದರ ಪರಿಚಯವೂ ಇಲ್ಲ. ಅದು ತನ್ನಷ್ಟಕ್ಕೆ ತಾನೇ ಖುಶಿ ಖುಶಿಯಾಗಿ ಈ ಭೂಮಿಯ ಮೇಲೆ ಕಾಲಿಡುತ್ತದೆ. ಆಗ ತಾನೇ ಹುಟ್ಟಿದ ಮಗುವಿಗೆ ಯಾವ ಸಿದ್ಧಾಂತ, ಯಾವ ಆಯ್ಕೆಗಳು, ಯಾವ ಜಡ್ಜಮೆಂಟ್ ಕೂಡ ಇಲ್ಲ. ಹಸಿವೆಯಾದಾಗ ಅದು ಆಹಾರಕ್ಕಾಗಿ ಬೇಡಿಕೆ ಇಡುತ್ತದೆ ಮತ್ತು ನಿದ್ದೆ ಬಂದಾಗ ಮಲಗಿಕೊಳ್ಳುತ್ತದೆ. ಝೆನ್ ಮಾಸ್ಟರ್ ಗಳ ಪ್ರಕಾರ ಇದು ಅತ್ಯಂತ ಉನ್ನತ ಮಟ್ಟದ ಧಾರ್ಮಿಕತೆ. ಹಸಿವೆಯಾದಾಗ ಊಟ ಮಾಡುವುದು ಮತ್ತು ನಿದ್ದೆ ಬಂದಾಗ ಮಲಗಿಕೊಳ್ಳುವುದು ಸರಳವಾಗಿ ಕಂಡರೂ ಅಷ್ಟು ಸುಲಭದ ಪ್ರ್ಯಾಕ್ಟೀಸ್ ಅಲ್ಲ. ಬದುಕನ್ನ ತನ್ನ ಪಾಡಿಗೆ ಹರಿಬಿಟ್ಟು ಯಾವ ಹಸ್ತಕ್ಷೇಪ ಮಾಡದೇ ಅದರ ಹರಿವಿನಲ್ಲಿ ಒಂದಾಗುವುದು ಆತ್ಯಂತಿಕ ಮಟ್ಟದ ಅಧ್ಯಾತ್ಮಿಕ ಸಾಧನೆ.

ಹುಟ್ಟುವಾಗ ಮಗುವಿಗೆ ಯಾವ ಧರ್ಮವೂ ಇಲ್ಲ, ಆದರೆ ಬೆಳೆಯುತ್ತ ಬೆಳೆಯುತ್ತ ಅದು ತನ್ನ ಈ ಸರಳತೆಯನ್ನ ಕಳೆದುಕೊಳ್ಳುತ್ತದೆ. ಇದು ಬದುಕಿನ ಸಂಚು, ಇದು ಹೀಗೆಯೇ ಆಗಬೇಕು. ಇದು ನಮ್ಮ ಬೆಳವಣಿಗೆಯ, ಪ್ರಬುದ್ಧತೆಯ, ನಿಯತಿಯ ಭಾಗ. ಮಗು ತನ್ನ ಈ ಶ್ರೇಷ್ಠ ಧಾರ್ಮಿಕತೆಯನ್ನ ಕಳೆದುಕೊಂಡು ಮತ್ತೆ ಪಡೆಯಬೇಕು. ತನ್ನ ಈ ಸರಳತೆಯನ್ನ ಕಳೆದುಕೊಂಡಾಗ ಮಗು ಸಾಧಾರಣವಾಗುತ್ತದೆ, ಲೌಕಿಕಕ್ಕೆ ಸೇರಿಕೊಳ್ಳುತ್ತದೆ. ಮತ್ತೆ ಇದನ್ನ ಪಡೆದುಕೊಂಡಾಗ ಮಗು ಅದರ ನಿಜವಾದ ಅರ್ಥದಲ್ಲಿ ಧಾರ್ಮಿಕವಾಗುತ್ತದೆ.

ಬಾಲ್ಯದ ಮುಗ್ಧತನ ನಮಗೆ ಅತೀ ಸೋವಿಯಾಗಿ ಸಿಕ್ಕದ್ದು, ಇದು ಅಸ್ತಿತ್ವ ನಮಗೆ ಕೊಡಮಾಡಿರುವ ಬಳುವಳಿ. ಇದು ನಾವು ಗಳಿಸಿದ್ದಲ್ಲ, ಹಾಗಾಗಿ ಇದನ್ನ ನಾವು ಕಳೆದುಕೊಳ್ಳಲೇಬೇಕಾಗಿದೆ. ಇದನ್ನು ಕಳೆದುಕೊಂಡಾಗಲೇ ನಾವು ಕಳೆದುಕೊಂಡಿರುವುದು ನಮ್ಮ ಅರಿವಿಗೆ ಬರುತ್ತದೆ. ಆಗ ನಾವು ಮತ್ತೆ ಅದನ್ನ ಹುಡುಕುವ ಪ್ರಯತ್ನ ಮಾಡುತ್ತೇವೆ. ಯಾವಾಗ ನಾವು ಅದನ್ನ ಹುಡುಕಿಕೊಳ್ಳುತ್ತೇವೆಯೋ, ಗಳಿಸುತ್ತೇವೆಯೋ, ನಮ್ಮದಾಗಿಸಿಕೊಳ್ಳುತ್ತೇವೆಯೋ , ನಾವೇ ಅದಾಗುತ್ತೇವೆಯೋ ಆಗ ನಮಗೆ ಅದರ ಅಪಾರ ಮೌಲ್ಯದ ಅರಿವಾಗುತ್ತದೆ.

ಒಮ್ಮೆ ಝೆನ್ ಮಾಸ್ಟರ್ ಜೋಶು ನ ಆಶ್ರಮಕ್ಕೆ ಒಬ್ಬ ಅತಿಥಿ ಮೊದಲ ಬಾರಿ ಆಗಮಿಸಿದ್ದ. ಆಶ್ರಮದ ಉದ್ಯಾನವನದಲ್ಲಿ ಪ್ರಖರ ತೇಜಸ್ಸಿನಿಂದ ಕಂಗೊಳಿಸುತ್ತಿದ್ದ ಒಬ್ಬ ವೃದ್ಧ ಸನ್ಯಾಸಿ ಧ್ಯಾನ ಮಾಡುತ್ತ ಕುಳಿತಿರುವುದನ್ನ ಆ ಅತಿಥಿ ಗಮನಿಸಿದ. ಆ ವೃದ್ಧನ ಬಗ್ಗೆ ಅತಿಥಿಗೆ ಕುತೂಹಲ ಬೆಳೆಯಿತು.

ಉದ್ಯಾನವನದ ಬಾಗಿಲಲ್ಲೇ ಕುಳಿತಿದ್ದ ಕೆಲಸಗಾರನನ್ನು ಅತಿಥಿ ಪ್ರಶ್ನೆ ಮಾಡಿದ. “ ಯಾರು ಆ ತೇಜಸ್ವಿ ಸನ್ಯಾಸಿ? ಅವನೇನಾ ಝೆನ್ ಮಾಸ್ಟರ್ ಜೋಶೋ?

“ ಅಲ್ಲ, ಅಲ್ಲ ನಾನು ಜೋಶು, ಅವ ನನ್ನ ನೆಚ್ಚಿನ ಶಿಷ್ಯ” ಕೆಲಸಗಾರ ಮುದುಕ ಉತ್ತರಿಸಿದ.


(ಆಕರ: ಓಶೋ ಉಪನ್ಯಾಸ)

Leave a Reply