ಸಾಧನೆಯ ಪ್ರದರ್ಶನ! : ಎರಡು ದೃಷ್ಟಾಂತ ಕತೆಗಳು

ಸಾಧನೆಯ ಪ್ರದರ್ಶನ ಎಷ್ಟು ಸಿಲ್ಲಿ ಅನ್ನುವುದನ್ನು ಮಾರ್ಮಿಕವಾಗಿ ಹೇಳುವ ಒಂದು ಸೂಫಿ ಮತ್ತೊಂದು ಝೆನ್ ಕತೆ ಇಲ್ಲಿವೆ. ಸಂಗ್ರಹ ಮತ್ತು ನಿರೂಪಣೆ: ಚಿದಂಬರ ನರೇಂದ್ರ

ಉಪದೇಶ ಮಾಡುವ ಗುರುಗಳು,
ತಂತ್ರಗಳನ್ನು ಕಲಿಸಲು
ಶುರು ಮಾಡುತ್ತಿದ್ದಂತೆಯೇ
ನಾವು ದೂರ ಹೋಗಿ ನಿಲ್ಲುವುದು
ಜಾಣತನ. ಕೆಲ ದೇವರುಗಳಿಗೆ ಸಂಯಮ ಕಡಿಮೆ.
ಸಿಟ್ಟು ಬಂದರೆ ಚಪ್ಪಲಿ ತೆಗೆದು
ಆ ಗುರುವಿನತ್ತ ಎಸೆದುಬಿಡುತ್ತಾರೆ.

  • ಹಾಫಿಜ್

ಒಮ್ಮೆ ಹಜರತ್ ರಾಬಿಯಾ ಯುಫ್ರೆತ್ ನದಿಯ ದಂಡೆಯ ಮೇಲೆ ಕುಳಿತಿದ್ದಾಗ ಅಲ್ಲಿಗೆ ಬಂದ ಹಜರತ್ ಹಸನ್ ಅಲ್ ಬಸ್ರಿ, ನದಿಯ ನೀರಿನ ಮೇಲೆ ತನ್ನ ಪ್ರಾರ್ಥನೆಯ ಚಾಪೆಯನ್ನೆಸೆದು, ಆ ಪ್ರಾರ್ಥನೆಯ ಮೇಲೆ ಕುಳಿತು ನಮಾಜ್ ಮಾಡುವಂತೆ ರಾಬಿಯಾಳನ್ನು ಆಹ್ವಾನಿಸಿದ.

“ನೀನು ನಿನ್ನ ಅಥ್ಯಾತ್ಮಿಕ ಶಕ್ತಿಗಳನ್ನು ಈ ಲೌಕಿಕ ಜಗತ್ತಿನಲ್ಲಿ ಪ್ರದರ್ಶನ ಮಾಡಬಯಸುವೆಯಾದರೆ, ನಿನ್ನ ಸುತ್ತಮುತ್ತಲಿನ ಯಾವ ಮನುಷ್ಯನಿಗೂ ಯಾವ ಪ್ರಾಣಿ, ಪಕ್ಷಿ, ಕ್ರಿಮಿ ಕೀಟಕ್ಕೂ ಸಾಧ್ಯವಾಗದಂಥ ಶಕ್ತಿಗಳನ್ನು ಪ್ರದರ್ಶನ ಮಾಡು”, ಹೀಗೆ ಹೇಳುತ್ತಲೇ ರಾಬಿಯಾ, ತನ್ನ ಪ್ರಾರ್ಥನೆಯ ಚಾಪೆಯೊಂದಿಗೆ ಆಕಾಶದಲ್ಲಿ ಹಾರಿದಳು, ಹಸನ್ ಅಲ್ ಬಸ್ರಿಗೆ ತನ್ನ ಜೊತೆ ಆಕಾಶದಲ್ಲಿ ಹಾರುತ್ತ ಎಲ್ಲರಿಗೂ ಕಾಣುವ ಹಾಗೆ ಪ್ರಾರ್ಥನೆ ಮಡುವಂತೆ ಪಂಥಾಹ್ವಾನ ನೀಡಿದಳು.

ಇನ್ನೂ ತನ್ನ ಜ್ಞಾನೋದಯದ ಸ್ಥಿತಿಯಿಂದ ದೂರ ಇದ್ದ ಹಸನ್ ಸುಮ್ಮನೇ ಕುಳಿತಿರುವುದನ್ನ ನೋಡಿ ರಾಬಿಯಾ ಮತ್ತೆ ಮಾತನಾಡಿದಳು, “ನೀನು ಮಾಡುವುದನ್ನ ಸಣ್ಣ ಪುಟ್ಟ ಮೀನುಗಳೂ ಮಾಡಬಲ್ಲವು, ನಾನು ಈಗ ಮಾಡುತ್ತಿರುವುದು ಒಂದು ಸೊಳ್ಳೆಗೂ ಕೂಡ ಸಾಧ್ಯನಾಗುವಂಥದು”.

ನಿಜವಾದ ಅಧ್ಯಾತ್ಮಿಕ ಸಾಧನೆ ಈ ಎರಡನ್ನೂ ಮೀರುವಂಥದು.

ಇನ್ನೊಮ್ಮೆ ಹೀಗಾಯಿತು……

ಮೂವರು ಸನ್ಯಾಸಿಗಳು ಒಂದು ಕೊಳದ ದಂಡೆಯ ಮೇಲೆ ಧ್ಯಾನದಲ್ಲಿ ಮಗ್ನರಾಗಿದ್ದರು. ಹೀಗಿರುವಾಗ ಒಬ್ಬ ಸನ್ಯಾಸಿ, ಥಟ್ಟನೇ ಎದ್ದು ನಿಂತ, “ ನನ್ನ ಚಾಪೆ ಮರೆತು ಬಂದಿದ್ದೇನೆ, ಇದೋ ಈಗ ಬಂದೆ “ ಎನ್ನುತ್ತಾ ಸರಸರನೇ ಕೊಳದ ನೀರಿನ ಮೇಲೆ ನಡೆಯುತ್ತ, ಆಚೆ ದಡಕ್ಕೆ ಹೋಗಿ ತನ್ನ ಚಾಪೆಯೊಂದಿಗೆ ಮತ್ತೆ ನೀರಿನ ಮೇಲೆ ನಡೆಯುತ್ತ ವಾಪಸ್ ಬಂದ.

ಆತ ಬರುವುದೇ ತಡ, ಇನ್ನೊಬ್ಬ ಸನ್ಯಾಸಿ ಎದ್ದು ನಿಂತ. “ ಓಹ್ ! ಹಸಿ ಬಟ್ಟೆ ಹಾಗೇ ಬಿಟ್ಟು ಬಂದಿದ್ದೇನೆ, ಒಣಗಲು ಹಾಕಬೇಕು, ಈಗ ಬಂದೆ “ ಎನ್ನುತ್ತಾ ಕೊಳದ ನೀರಿನ ಮೇಲೆ ಲಗು ಬಗೆಯಿಂದ ನಡೆಯುತ್ತ ಆಚೆ ದಂಡೆಗೆ ಹೋಗಿ, ಕೆಲಸ ಮುಗಿಸಿ ವಾಪಸ್ ಬಂದ.

ಈ ಇಬ್ಬರು ಸನ್ಯಾಸಿಗಳನ್ನು ಗಮನಿಸುತ್ತಿದ್ದ ಮೂರನೇ ಸನ್ಯಾಸಿ, ಇದನ್ನು ಸವಾಲಿನಂತೆ ಪರಿಗಣಿಸಿದ. ತಾನೂ ತನ್ನ ಶಕ್ತಿ ಸಾಮರ್ಥ್ಯಗಳನ್ನ ಅವರೆದುರು ಪ್ರದರ್ಶನ ಮಾಡಬೇಕೆಂದು ತೀರ್ಮಾನಿಸಿ, ಘೋಷಣೆ ಮಾಡಿದ. “ ನಿಮಗಿಬ್ಬರಿಗೂ ನಿಮ್ಮ ಸಾಧನೆ ನನಗಿಂತ ಮೇಲು ಎನ್ನುವ ಭ್ರಮೆಯಲ್ಲವೆ? ಹಾಗಾದರೆ ಇಲ್ಲಿ ನೋಡಿ “ ಎನ್ನುತ್ತ ಗಡಿಬಿಡಿಯಿಂದ ಕೊಳದ ಹತ್ತಿರ ಹೋಗಿ, ನೀರಿನ ಮೇಲೆ ಹೆಜ್ಜೆ ಇಟ್ಟ. ಅವ ನೀರಿನ ಮೇಲೆ ಕಾಲಿಡುವುದೇ ತಡ, ಧೊಪ್ಪಂತ ಜಾರಿ ಕೊಳದಲ್ಲಿ ಬಿದ್ದ. ಎರಡು ಮೂರು ಬಾರಿ ಪ್ರಯತ್ನಿಸಿದರೂ ಮತ್ತೆ ಮತ್ತೆ ನೀರಿನಲ್ಲಿ ಬಿದ್ದ.

ಮೂರನೆಯವನ ಹುಂಬ ಸಾಹಸವನ್ನು ನೋಡುತ್ತಿದ್ದ ಮೊದಲ ಸನ್ಯಾಸಿ, ಎರಡನೇಯವನಿಗೆ ಕೂಗಿ ಹೇಳಿದ, “ ಅಯ್ಯೋ ಪಾಪ ! ನಾವು ಅವನಿಗೆ ಕೊಳದ ಒಳಗೆ ಹಾಸುಗಲ್ಲುಗಳಿರುವ ಜಾಗ ತೋರಿಸಬೇಕಿತ್ತು “

Leave a Reply