ಬುದ್ಧನ ಪ್ರಧಾನ ಶಿಷ್ಯ ಆನಂದನಿಗೆ ಜ್ಞಾನೋದಯವಾಗಿದ್ದು ಯಾವಾಗ ಗೊತ್ತೇ? : ಓಶೋ; ಕನ್ನಡಕ್ಕೆ: ಚಿದಂಬರ ನರೇಂದ್ರ
ಆನಂದ, ಬುದ್ಧನ ಬದುಕಿನ ಕೊನೆಯ ಇಪ್ಪತ್ತು ವರ್ಷಗಳ ಪ್ರಧಾನ ಶಿಷ್ಯ, ಸಹಾಯಕನಾಗಿದ್ದ. ಬುದ್ಧನ ಪ್ರಮುಖ ಅವಶ್ಯಕತೆಗಳನ್ನ ನೋಡಿಕೊಳ್ಳುವುದರ ಜೊತೆಗೆ ಆನಂದನ ಇತರ ಕೆಲಸಗಳೆಂದರೆ, ಬೇರೆ ಬೇರೆ ಸಭೆಗಳಲ್ಲಿ ಬುದ್ಧನನ್ನು ಪ್ರತಿನಿಧಿಸುವುದು, ಬುದ್ಧನ ಮಾತುಗಳನ್ನ ಕಂಠಸ್ಥ ಮಾಡಿಕೊಂಡು ಅವನ್ನು ಬುದ್ಧನ ಅನುಪಸ್ಥಿತಿಯಲ್ಲಿ ಇತರರ ಎದುರಿಗೆ ಪ್ರಸ್ತುತ ಪಡಿಸುವುದು, ಬುದ್ಧನ ಮೆಸೆಂಜರ್ ಆಗಿ ಪ್ರವಾಸ ಮಾಡುತ್ತ ಬುದ್ಧನ ತತ್ವಗಳ ಪ್ರಚಾರ ಮಾಡುವುದು. ಈ ಕೆಲಸಗಳಲ್ಲಿ ಆನಂದ ಸದಾ ವ್ಯಸ್ತನಾಗಿರುತ್ತಿದ್ದ.
ಆನಂದ ಈ ಕೆಲಸಗಳಲ್ಲಿ ಎಷ್ಟು ಅವಿಶ್ರಾಂತವಾಗಿ ತೊಡಗಿಸಿಕೊಳ್ಳುತ್ತಿದ್ದನೆಂದರೆ, ಸ್ವಂತದ ಧ್ಯಾನ ಮುಂತಾದ ಆಚರಣೆಗಳಿಗಾಗಿ ಅವನ ಬಳಿ ಸಮಯವೇ ಉಳಿಯುತ್ತಿರಲಿಲ್ಲ. ಅಧ್ಯಾತ್ಮಿಕ ಆಚರಣೆಗಳಲ್ಲಿ ಅಷ್ಟು ತೊಡಗಿಸಿಕೊಂಡಿರಲಿಲ್ಲವಾದರೂ ಆನಂದ, ಬುದ್ಧನ ಎಲ್ಲ ಶಿಷ್ಯರಲ್ಲಿ ಅತ್ಯಂತ ಕರುಣಾಮಯಿ ಎಂದು ಹೆಸರು ಮಾಡಿದ್ದ. ತನ್ನ ಬಿಡುವಿನ ಸಮಯವನ್ನು ಆನಂದ, ಜನರಿಗೆ ಸಹಾಯ ಮಾಡುತ್ತ ಕಳೆಯುತ್ತಿದ್ದನಾದ್ದರಿಂದ ಅವನ ಬಳಿ ಸ್ವಂತದ ಸಾಧನೆಗಾಗಿ ಸಮಯವೇ ಇರುತ್ತಿರಲಿಲ್ಲ. ಬುದ್ಧ ತೀರಿಕೊಳ್ಳುವ ಸಮಯ ಹತ್ತಿರವಾಗುವವರೆಗೂ ಆನಂದ ಇನ್ನೂ ಜ್ಞಾನೋದಯವನ್ನು ಸಾಧಿಸಿಕೊಂಡಿರಲಿಲ್ಲ. ಬುದ್ಧನ ಸಾವು ಸಂಭವಿಸಿದಾಗ ಅವನ ಎಲ್ಲ ಪ್ರಧಾನ ಶಿಷ್ಯರು ಆ ಸಾವನ್ನು ಪ್ರಶಾಂತತೆಯಿಂದ ಸ್ವೀಕರಿಸಿದರಾದರೆ ಆನಂದ ಮಾತ್ರ ಬಿಕ್ಕಿ ಬಿಕ್ಕಿ ಅತ್ತು ಬಿಟ್ಟ.
ಬುದ್ಧನ ಸಾವಿನ ನಂತರವಷ್ಟೇ ಆನಂದನಿಗೆ ಸ್ವಂತದ ಸಾಧನೆಗಾಗಿ ಸಮಯ ಸಿಕ್ಕಿತು. ಅದೇ ಸಮಯದಲ್ಲಿ ಬುದ್ಧನ ಇನ್ನೊಬ್ಬ ಪ್ರಧಾನ ಶಿಷ್ಯ ಅರ್ಹತ ಮಹಾಕಶ್ಯಪ, ಪ್ರಪ್ರಥಮ ಬೌದ್ಧ ಸಮಾವೇಶವನ್ನು ಆಯೋಜಿಸುತ್ತಿದ್ದ. ಈ ಸಮಾವೇಶದಲ್ಲಿ ಬುದ್ಧನ ಎಲ್ಲ ಜ್ಞಾನೋದಯ ಹೊಂದಿದ ಶಿಷ್ಯರು ಮತ್ತು ಬೌದ್ಧ ವಿದ್ವಾಂಸರು ಸೇರಿಕೊಂಡು ಬುದ್ಧನ ಎಲ್ಲ ಜ್ಞಾನವನ್ನು ಕ್ರೂಢೀಕರಿಸುವ ಪ್ರಯತ್ನ ಮಾಡುವವರಿದ್ದರು. ಈ ಸಮಾವೇಶಕ್ಕೂ ಮೊದಲೇ ತಾನು ಜ್ಞಾನೋದಯವನ್ನು ಸಾಧಿಸಿಕೊಳ್ಳಬೇಕೆನ್ನುವುದು ಆನಂದನ ತೀವ್ರ ಬಯಕೆಯಾಗಿತ್ತು. ಆ ಜ್ಞಾನೋದಯದ ಸಲುವಾಗಿ ಆನಂದ ಸತತ ಧ್ಯಾನದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದ.
ಸಮಾವೇಶದ ಸಮಯ ಸಮೀಪಿಸುತ್ತಿದ್ದರೂ ಆನಂದ ಇನ್ನೂ ಜ್ಞಾನೋದಯದ ಹತ್ತಿರಕ್ಕೂ ಬಂದಿರಲಿಲ್ಲ. ಸಮಾವೇಶದ ಹಿಂದಿನ ರಾತ್ರಿಯಂತೂ ಅತ್ಯಂತ ಕಠಿಣ ಸಾಧನೆಗೆ ಮುಂದಾದ ಆನಂದ, ತೀವ್ರ ಧ್ಯಾನದಲ್ಲಿ ಮಗ್ನನಾದ. ಆದರೂ ಯಾವ ಪ್ರಯೋಜನವಾಗಲಿಲ್ಲ, ಆನಂದ ಜ್ಞಾನೋದಯದಿಂದ ಇನ್ನೂ ಬಹಳ ದೂರವೇ ಇದ್ದ. ಇಷ್ಟು ಗಡಿಬಿಡಿ ಮಾಡಿ ಉಪಯೋಗವಿಲ್ಲ, ಇನ್ನು ತಾನು ವಿಶ್ರಾಂತಿ ಮಾಡಬೇಕು, ಸಮಾವೇಶ ಮುಗಿದ ಬಳಿಕ ಮತ್ತೆ ಸಾಧನೆಯಲ್ಲಿ ತೊಡಗಿಸಿಕೊಳ್ಳಬೇಕೆಂದು ನಿರ್ಧರಿಸಿ ಆನಂದ ವಿಶ್ರಾಂತಿಗೆ ಜಾರಿದ.
ವಿಶಾಂತಿ ಮಾಡಬೇಕೆಂದು ನಿರ್ಧರಿಸಿ ಆನಂದ ತನ್ನ ಹಾಸಿಗೆಗೆ ತಲೆ ಹಚ್ಚಿದ ಕ್ಷಣದಲ್ಲಿಯೇ ಅವನಿಗೆ ಜ್ಞಾನೋದಯವಾಯಿತು ಎಂದು ಹೇಳಲಾಗುತ್ತದೆ.