ಕೊಡುವ, ಹಂಚಿಕೊಳ್ಳುವ ಮತ್ತು ತ್ಯಾಗ ಮಾಡುವ ಇಚ್ಛಾಶಕ್ತಿ #2 :To have or to be #46

ಮೂಲ: ಎರಿಕ್ ಫ್ರಾಮ್; ಕನ್ನಡಕ್ಕೆ: ಚಿದಂಬರ ನರೇಂದ್ರ.
ಹಿಂದಿನ ಭಾಗ ಇಲ್ಲಿ ಓದಿ: https://aralimara.com/2023/08/05/fromm-42/

ಕೊಡುವ, ಹಂಚಿಕೊಳ್ಳುವ ಮತ್ತು ತ್ಯಾಗ ಮಾಡುವ ಇಚ್ಛಾಶಕ್ತಿ : (ಮುಂದುವರೆದ ಭಾಗ – ೧)

ಯುದ್ಧ ಮತ್ತು ಸಂಕಟದ ಸಮಯಗಳು ಮಾತ್ರ ಮನುಷ್ಯರಲ್ಲಿಯ ತ್ಯಾಗ ಭಾವನೆಯನ್ನು ಉದ್ದೀಪಿಸುತ್ತವೆ ಮತ್ತು ಶಾಂತಿ ಕಾಲ ಮನುಷ್ಯರೊಳಗಿನ ಸ್ವಾರ್ಥಕ್ಕೆ ಉತ್ತೇಜನ ನೀಡುತ್ತದೆ ಎನ್ನುವ ನಮ್ಮ ನಾಗರೀಕತೆಯ ಮೇಲಿನ ಟಿಪ್ಪಣಿ ದುರುದೃಷ್ಟಕರವಾದದ್ದು. ಅದೃಷ್ಟಕ್ಕೆ ಇದಕ್ಕೆ ವಿರುದ್ಧ ಅನಿಸುವ ಶಾಂತಿಕಾಲದ ಸಂದರ್ಭದ ಹಲವು ಉದಾಹರಣೆಗಳು ನಮ್ಮ ಮುಂದಿವೆ, ಇಂಥ ಸಂದರ್ಭಗಳಲ್ಲಿ ಮನುಷ್ಯರ ವೈಯಕ್ತಿಕ ಸ್ವಭಾವದಲ್ಲಿ ತ್ಯಾಗ ಮತ್ತು ಒಗ್ಗಟ್ಟಿನ ಭಾವನೆ ಪ್ರಬಲವಾಗಿ ಅಭಿವ್ಯಕ್ತಿಗೊಂಡಿರುವುದನ್ನ ನಾವು ಗಮನಿಸಬಹುದು. ಕಾರ್ಮಿಕರ ಮುಷ್ಕರ, ವಿಶೇಷವಾಗಿ ಮೊದಲ ಮಹಾಯುದ್ಧದವರೆಗಿನ ಅವಧಿಯ ಮುಷ್ಕರ ಅಹಿಂಸಾತ್ಮಕವಾಗಿ ನಡೆದ ಉದಾಹರಣೆ ನಮ್ಮ ಕಣ್ಣ ಮುಂದಿದೆ. ಹೆಚ್ಚಿನ ಸಂಬಳಕ್ಕಾಗಿ ಒತ್ತಾಯ ಮಾಡುತ್ತಿದ್ದ ಕಾರ್ಮಿಕರು ತಮ್ಮ ಸ್ವಂತದ ಘನತೆಗಾಗಿ ಮತ್ತು ಮನುಷ್ಯ ಒಗ್ಗಟ್ಟಿನ ತೃಪ್ತಿಯನ್ನು ಅನುಭವಿಸುವುದಕ್ಕಾಗಿ ಹೆಚ್ಚಿನ ರಿಸ್ಕ್ ತೆಗೆದುಕೊಂಡು ಕಠಿಣ ಕೆಲಸ ಮಾಡುವುದಕ್ಕೆ ಒಪ್ಪಿಗೆ ಸೂಚಿಸಿದರು. ಈ ಮುಷ್ಕರ ಎಷ್ಟರ ಮಟ್ಟಿಗೆ ಆರ್ಥಿಕ ವಿದ್ಯಮಾನಕ್ಕೆ ಸಂಬಂಧಿಸಿದ್ದಾಗಿತ್ತೋ ಅಷ್ಟೇ ಧಾರ್ಮಿಕವೂ ಆಗಿತ್ತು. ಇವತ್ತೀಗೂ ಇಂಥ ಮುಷ್ಕರಗಳು ನಡೆಯುತ್ತವೆಯಾದರೂ ಅವು ಬಹುತೇಕ ಆರ್ಥಿಕ ಕಾರಣವನ್ನು ತಮ್ಮ ಗುರಿಯಾಗಿರಿಸಿಕೊಂಡಿರುತ್ತವೆ ಮತ್ತು ಕೆಲವು ಮುಷ್ಕರಗಳು ಮಾತ್ರ ಉತ್ತಮ ಕೆಲಸದ ವಾತಾವರಣಕ್ಕಾಗಿ ಇರುತ್ತವೆ.

ಕೊಡುವ , ಹಂಚಿಕೊಳ್ಳುವ ಮತ್ತು ಬೇರೆಯವರ ಸಲುವಾಗಿ ತ್ಯಾಗಮಾಡುವ ಮನೋಭಾವವನ್ನು ಈಗಲೂ ನಾವು ಕೆಲವು ವೃತ್ತಿಗಳ ಸದಸ್ಯರುಗಳಲ್ಲಿ ಕಾಣಬಹುದು, ಉದಾಹರಣೆಗೆ ದಾದಿಯರಲ್ಲಿ, ವೈದ್ಯರಲ್ಲಿ, ಮಾಂಕ್ ಗಳಲ್ಲಿ, ಕ್ರೈಸ್ತ ಸನ್ಯಾಸಿನಿಯರಲ್ಲಿ. ಎಲ್ಲರಲ್ಲಿ ಅಲ್ಲದಿದ್ದರೂ ಬಹುತೇಕರಲ್ಲಿ ಸಹಾಯ ಮಾಡುವುದು ಮತ್ತು ತ್ಯಾಗ ಮಾಡುವುದು ಕೇವಲ ಬಾಯಿ ಮಾತಿನದಾದರೂ, ಬಹಳ ಒಳ್ಳೆಯ ಸಂಖ್ಯೆಯ ಜನ ತಾವು ಆಡಿದಂತೆ ನಡೆಯುತ್ತಾರೆ. ಇದೇ ಅವಶ್ಯಕತೆಯ ಧೃಡೀಕರಣ ಮತ್ತು ಅಭಿವ್ಯಕ್ತಿ ಹಲವಾರು ಸಮುದಾಯಗಳಲ್ಲಿ ಶತಮಾನಗಳುದ್ದಕ್ಕೂ ಕಾಣಬಹುದು, ಆ ಸಮುದಾಯಗಳು ಧಾರ್ಮಿಕ, ಸಮಾಜವಾದಿ, ಅಥವಾ ಮಾನವತಾವಾದಿ ಸಮುದಾಯಗಳಾಗಿದ್ದರೂ. ಹಲವಾರು ಸಂದರ್ಭಗಳಲ್ಲಿ ತಮ್ಮ ಆರೋಗ್ಯವನ್ನು ರಿಸ್ಕ್ ಗೆ ಒಡ್ಡಿ, ಸ್ವ ಇಚ್ಛೆಯಿಂದ (ಯಾವ ಹಣದ ನಿರೀಕ್ಷೆಯಿಲ್ಲದೆ) ರಕ್ತದಾನ ಮಾಡಿ ಜನರ ಜೀವ ಉಳಿಸುವ ಇಚ್ಛೆಯನ್ನ ಈ ಸಮುದಾಯಗಳ ಹಲವಾರು ಜನರಲ್ಲಿ ಕಾಣಬಹುದು. ನಿಜವಾಗಿ ಪ್ರೀತಿ ಮಾಡವವರಲ್ಲಿ ಕೂಡ ಕೊಡುವ ಇಚ್ಛೆ ಅಭಿವ್ಯಕ್ತಗೊಂಡಿರುವುದನ್ನ ನಾವು ಕಾಣಬಹುದು. “ಸುಳ್ಳು ಪ್ರೀತಿ” ಹಾಗೆಂದರೆ ಹಂಚಿಕೊಂಡಿರುವ ಪರಸ್ಪರ ಸ್ವಾರ್ಥ, ಜನರನ್ನ ಹೆಚ್ಚು ಸ್ವಾರ್ಥಿಗಳನ್ನಾಗಿಸುತ್ತದೆ ( ಮತ್ತು ಇದನ್ನ ನಾವು ಮೇಲಿಂದ ಮೇಲೆ ನೋಡುತ್ತಿರುತ್ತೇವೆ). ಸಾಚಾ ಪ್ರೀತಿ ಜನರ ಕೊಡುವ, ಹಂಚಿಕೊಳ್ಳುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ನಿಜದ ಪ್ರೇಮಿ ನಿರ್ದಿಷ್ಟ ವ್ಯಕ್ತಿಯ ಪ್ರೇಮದಲ್ಲಿ ಇಡೀ ಜಗತ್ತನ್ನು ಪ್ರೀತಿಸುತ್ತಿರುತ್ತಾನೆ.

ವ್ಯತಿರಿಕ್ತವಾಗಿ ನಾವು ಗಮನಿಸಬಹುದಾದದ್ದೇನೆಂದರೆ ಬಹಳಷ್ಟು ಜನರು, ವಿಶೇಷವಾಗಿ ಹದಿ ಹರೆಯದವರು ಶ್ರೀಮಂತ ಕುಟುಂಬಗಳಲ್ಲಿ ತಮ್ಮ ಸುತ್ತ ಆವರಿಸಿಕೊಂಡಿರುವ ಆಡಂಬರ ಮತ್ತು ಸ್ವಾರ್ಥವನ್ನು ಸೈರಿಸಿಕೊಳ್ಳಲಾರರು. ತಮ್ಮ ಮಕ್ಕಳು ಬಯಸಿದ ಎಲ್ಲವೂ ಅವರ ಬಳಿಯಲ್ಲಿದೆ ಎಂದು ನಂಬಿರುವ ಕುಟುಂಬದ ಹಿರಿಯರ ನಿರೀಕ್ಷೆಗೆ ವಿರುದ್ಧವಾಗಿ ಮಕ್ಕಳು ಈ ನಿರ್ಜೀವ ವಾತಾವರಣ ಮತ್ತು ಪ್ರತ್ಯೇಕತಾಭಾವದ ವಿರುದ್ಧ ಬಂಡೇಳುತ್ತಾರೆ. ನಿಜ ಏನೆಂದರೆ, ಅವರ ಬಳಿ ಅವರು ಬಯಸಿದ್ದು ಇರುವುದಿಲ್ಲ ಮತ್ತು ಅವರು, ತಮ್ಮ ಬಳಿ ಇಲ್ಲದಿರುವುದನ್ನ ಬಯಸುತ್ತಿರುತ್ತಾರೆ.

ಹಿಂದಿನ ಇತಿಹಾಸದ ಇಂಥ ಜನರ ಅತ್ಯುತ್ತಮ ಉದಾಹರಣೆಗಳೆಂದರೆ, ಬಡತನ ಮತ್ತು ಪ್ರೇಮದ ಧರ್ಮವನ್ನು ಅಪ್ಪಿಕೊಂಡ ರೋಮನ್ ಸಾಮ್ರಾಜ್ಯದ ಶ್ರೀಮಂತರ ಮಕ್ಕಳು; ಮತ್ತು ಬುದ್ಧ, ತಾನು ರಾಜಕುಮಾರನಾಗಿದ್ದರೂ, ತನ್ನ ಬಳಿ ಎಲ್ಲ ಸುಖ ಹಾಗು ಐಷಾರಾಮಿ ಇದ್ದಾಗಲೂ, ಆಸೆಗಳು ದುಃಖಕ್ಕೆ ಕಾರಣ ಎನ್ನುವುದನ್ನ ಕಂಡುಕೊಂಡವನು. ತೀರ ಇತ್ತೀಚಿನ ಉದಾಹರಣೆ ಎಂದರೆ (ಹತ್ತೊಂಭತ್ತನೇ ಶತಮಾನದ ಎರಡನೇ ಭಾಗದಲ್ಲಿ) ರಷಿಯಾದ ಮೇಲ್ವರ್ಗದ ಕುಟುಂಬಗಳ ಮಕ್ಕಳು (Narodniki). ತಮ್ಮ ಸಮಾಜದಲ್ಲಿಯ ಆಲಸ್ಯ ಮತ್ತು ಅನ್ಯಾಯದ ಬದುಕನ್ನು ಸಹಿಸುವುದು ಸಾಧ್ಯವಾಗದೆಯೇ, ಈ ಯುವಜನರು ತಮ್ಮ ಕುಟುಂಬಗಳನ್ನು ಬಿಟ್ಟುಬಂದು ಬಡವರ ಜೊತೆ ಸೇರಿಕೊಂಡು ಅವರಿಗೆ ಸಹಾಯ ಮಾಡುತ್ತ ರಷ್ಯಾದ ಕ್ರಾಂತಿಕಾರಿ ಸಂಘರ್ಷಕ್ಕೆ ಅಡಿಪಾಯ ಹಾಕಿದರು.

ಇಂಥಹದೇ ಉದಾಹರಣೆಗಳನ್ನ ನಾವು ಅಮೇರಿಕ ಮತ್ತು ಜರ್ಮನಿಯ ಶ್ರೀಮಂತ ಕುಟುಂಬಗಳ ಮಕ್ಕಳಲ್ಲಿಯೂ ಗಮನಿಸಬಹುದು. ಈ ಮಕ್ಕಳು ತಮ್ಮ ಸುತ್ತಲಿನ ಐಷಾರಾಮಿ ಬದುಕನ್ನ ಬೋರಿಂಗ್ ಮತ್ತು ಅರ್ಥಹೀನ ಎಂದು ಅನುಭವಿಸುತ್ತಾರೆ. ಇದಕ್ಕಿಂತ ಹೆಚ್ಚಾಗಿ ಅವರು ಬಡವರ ಬಗ್ಗೆಯ ಜಗತ್ತಿನ ಉದಾಸೀನತೆಗೆ ಗಾಬರಿಯಾಗಿದ್ದಾರೆ, ಸ್ವಂತದ ಅಹಂಕಾರದ ಕಾರಣವಾಗಿ ದೇಶಗಳು ಪರಮಾಣು ಯುದ್ಧದತ್ತ ಒಲವು ತೋರಿಸುತ್ತಿರುವುದು ಅವರಿಗೆ ಸಹಿಸಲಸಾಧ್ಯವಾಗಿದೆ. ಹಾಗಾಗಿ ಅವರು ತಮ್ಮ ಮನೆಯ ವಾತಾವರಣದಿಂದ ವಿಮುಖರಾಗಿ ಹೊಸ ಜೀವನ ಶೈಲಿಗಾಗಿ ಹಾತೊರೆಯುತ್ತಿದ್ದಾರೆ ಆದರೆ, ಯಾವ ರಚನಾತ್ಮಕ ಪ್ರಯತ್ನಗಳಿಗೂ ಅವಕಾಶ ಸಾಧ್ಯವಿಲ್ಲವಾದ್ದರಿಂದ ಅವರು ಅತೃಪ್ತರಾಗಿಯೇ ಉಳಿಯುತ್ತಾರೆ. ಈ ಯುವ ಜನರಲ್ಲಿ ಬಹಳಷ್ಟು ಜನರು ಮೂಲದಲ್ಲಿ ಆದರ್ಶವಾದಿಗಳು ಮತ್ತು ಸಂವೇದನಾಶೀಲರು ಆದರೆ ಸಂಪ್ರದಾಯಗಳಿಂದ, ಪ್ರಬುದ್ಧತೆಯಿಂದ, ಅನುಭವದಿಂದ, ರಾಜಕೀಯ ವಿವೇಕದಿಂದ ದೂರ ಉಳಿದವರು, ಹಾಗಾಗಿ ಇವರು ಹತಾಶರಾಗಿ ತಮ್ಮನ್ನು ತಾವು ಅತೀ ಸಾಮರ್ಥ್ಯಶಾಲಿಗಳೆಂದುಕೊಂಡು ಫೋರ್ಸ್ ಮೂಲಕ ಅಸಾಧ್ಯವನ್ನು ಸಾಧಿಸಲು ಮುಂದಾಗುತ್ತಾರೆ. ಇವರು ಕ್ರಾಂತಿಕಾರಿ ಹೆಸರಿನ ಗುಂಪುಗಳನ್ನ ಕಟ್ಟಿಕೊಂಡು ಉಗ್ರವಾದ ಮತ್ತು ವಿನಾಶದ ಮೂಲಕ ನಾವು ಜಗತ್ತನ್ನು ಕಾಪಾಡುತ್ತೇವೆ ಎಂದು ಹೊರಡುತ್ತಾರೆ ಆದರೆ ಇವರಿಗೆ, ತಾವು ಉಗ್ರವಾದವನ್ನು ಅಪ್ಪಿಕೊಳ್ಳುವ ಮೂಲಕ ಹಿಂಸೆ, ಮತ್ತು ಅಮಾನವೀಯತೆಯನ್ನು ಪೋಷಿಸುತ್ತಿದ್ದೇವೆ ಎನ್ನುವುದು ಅರಿವಾಗುವುದೇ ಇಲ್ಲ. ಅವರು ತಮ್ಮ ಪ್ರೀತಿಸುವ ಸಾಮರ್ಥ್ಯವನ್ನು ಕಳೆದುಕೊಂಡಿದ್ದಾರೆ ಮತ್ತು ಅದರ ಜಾಗದಲ್ಲಿ ತಮ್ಮ ಬದುಕುಗಳನ್ನ ತ್ಯಾಗ ಮಾಡುವ ಭಾವವನ್ನು ತುಂಬಿಕೊಂಡಿದ್ದಾರೆ ( ಸ್ವ – ತ್ಯಾಗ, self sacrifice ಎನ್ನುವುದು ಉತ್ಕಟತೆಯಿಂದ ಪ್ರೀತಿಸ ಬಯಸುವ ಆದರೆ ತಮ್ಮ ಪ್ರೀತಿಸುವ ಸಾಮರ್ಥ್ಯವನ್ನು ಕಳೆದುಕೊಂಡ ಕೆಲವರಲ್ಲಿ ಔಷಧಿ ಎನ್ನುವಂತೆ ಕೆಲಸ ಮಾಡುತ್ತದೆ ಮತ್ತು ಅವರು, ಅವರು ತಮ್ಮ ಈ ಸ್ವ ತ್ಯಾಗದಲ್ಲಿ ಅತ್ಯುನ್ನತ ಮಟ್ಟದ ಪ್ರೀತಿಯ ಅನುಭವವನ್ನ ಕಾಣುತ್ತಾರೆ).

ಆದರೆ ಇಂಥ ಸ್ವ-ತ್ಯಾಗಕ್ಕೆ ಮುಂದಾಗಿರುವ ಯುವ ಜನಾಂಗದ ಗಂಡು ಹೆಣ್ಣುಗಳು, ಪ್ರೀತಿಗಾಗಿಯೇ ಪ್ರಾಣ ಬಿಟ್ಟವರಿಗಿಂತ ವಿಭಿನ್ನ, ಈ ಪ್ರೇಮದ ಹುತಾತ್ಮರುಗಳು ಬದುಕಲು ಬಯಸುವುದು ಅವರು ಬದುಕನ್ನ ಪ್ರೀತಿಸುತ್ತಿರುವುದರಿಂದ ಮತ್ತು ಅವರು ಸಾವನ್ನು ಅಪ್ಪಿಕೊಳ್ಳಲು ಸಿದ್ಧರಾಗುವುದು ತಮ್ಮನ್ನು ತಾವು ವಂಚಿಸಿಕೊಳ್ಳಲು ನಿರಾಕರಿಸುವಾಗ ಮಾತ್ರ. ಆದರೆ ಇವತ್ತಿನ ದಿನ ಸ್ವ-ತ್ಯಾಗ ಮನೋಭಾವದ ಯುವಜನರು ಆರೋಪಕ್ಕೆ ಒಳಗಾಗಿರುವವರು ಅದೇ ಸಮಯದಲ್ಲಿ ಅವರು ಆರೋಪ ಮಾಡುತ್ತಿದ್ದಾರೆ ಕೂಡ. ಇದಕ್ಕೆ ಕಾರಣ, ನಮ್ಮ ಸಾಮಾಜಿಕ ವ್ಯವಸ್ಥೆಯಲ್ಲಿನ ಅತ್ಯಂತ ಉತ್ತಮ ಯುವಕ ಯುವತಿಯರು ಅನ್ಯ (isolated) ಹಾಗು ಹತಾಶ ಭಾವವನ್ನುಅನುಭವಿಸುತ್ತಿದ್ದಾರೆ ಮತ್ತು ಈ ಕಾರಣವಾಗಿ ಅವರಿಗೆ ವಿನಾಶ ಮತ್ತು ಅಂಧಾಭಿಮಾನ (fanaticism) ಮಾತ್ರ ಉಳಿದಿರುವ ದಾರಿಗಳಾಗಿ ಕಾಣಿಸುತ್ತಿವೆ.

1 Comment

Leave a Reply