ಎಲ್ಲವೂ ಶೂನ್ಯ ಎಂದಾದಮೇಲೆ… : ಝೆನ್ ತಿಳಿವು

ಝೆನ್ ಮಾಸ್ಟರ್ ಹಂಗ್ ಜೆನ್ ಆಶ್ರಮದ ಅಡುಗೆಯವ ಹುಯಿ ನೆಂಗ್ ಗೆ ಆರನೇ ಝೆನ್ ಗುರುವಿನ ಪಟ್ಟ ಕಟ್ಚಿದ್ಯಾಕೆ ಗೊತ್ತಾ? : ಚಿದಂಬರ ನರೇಂದ್ರ

ನೀರು,
ಅತ್ಯಂತ ಶುದ್ಧವಾಗಿರುವಾಗ
ಮೀನುಗಳಿಗೆ ಜಾಗವಿಲ್ಲ.

~ ಝೆನ್

ಒಂದು ದಿನ ಐದನೇ ತಲೆಮಾರಿನ ಝೆನ್ ಗುರು ಹಂಗ್ ಜೆನ್ ತನ್ನ ಎಲ್ಲ ಶಿಷ್ಯರನ್ನೂ ಒಟ್ಟುಗೂಡಿಸಿ ಹೀಗೆ ಹೇಳಿದ,

“ ನಿಮ್ಮ ಮೈಂಡ್ ನಲ್ಲಿ ಪ್ರಜ್ಞೆಯನ್ನ ಕಂಡುಹಿಡಿದುಕೊಂಡು ಆ ಬಗ್ಗೆ ನನಗಾಗಿ ನಾಕು ಸಾಲು (ಗಾಥಾ) ಬರೆಯಿರಿ. ಬೌದ್ಧ ಪ್ರಕೃತಿಯ ಬಗ್ಗೆ ಯಾರಿಗೆ ಹೆಚ್ಚು ಗೊತ್ತು ಎನ್ನುವುದು ನನಗೆ ಕಂಡುಬರುತ್ತದೆಯೋ ಅವರು ನನ್ನ ನಂತರದ ಆರನೇಯ ಝೆನ್ ಪ್ಯಾಟ್ರಿಯಾಕ್ ಆಗಲು ಅರ್ಹರಾಗುತ್ತಾರೆ”.

ಮೊದಲು ಪ್ರಧಾನ ಶಿಷ್ಯ ಶಿನ್ ಶೌ ನಾಕು ಸಾಲುಗಳನ್ನ ಸಂಯೋಜಿಸಿ ಅದನ್ನು ಝೆನ್ ಮಾಸ್ಟರ್ ನೋಡಲಿ ಎಂದು ಆಶ್ರಮದ ಗೋಡೆಯ ಮೇಲೆ ಬರೆದ. ಅವನು ಬರೆದ ಎರಡು ಸಾಲುಗಳು ಹೀಗಿದ್ದವು,

ನಮ್ಮ ದೇಹ ಒಂದು ಬೋಧೀ ವೃಕ್ಷ
ಮತ್ತು ಮನಸ್ಸು ಪ್ರಖರ ಕನ್ನಡಿ
ಅವುಗಳ ಮೇಲೆ ಧೂಳು ಬೀಳಬಾರದಿರಲು
ಒರೆಸುತ್ತಲೇ ಇರಬೇಕು ಸತತವಾಗಿ.

ಒಬ್ಬ ಹರೆಯದ ಸನ್ಯಾಸಿ ಗೋಡೆಯ ಮೇಲಿನ ಈ ಬರಹವನ್ನ ಗಟ್ಟಿಯಾಗಿ ಓದುತ್ತಿರುವುದನ್ನ ಕೇಳಿಸಿಕೊಂಡ ಆಶ್ರಮದ ಅಡುಗೆಯವ ಹುಯಿ ನೆಂಗ್ ಗೆ ಯಾಕೋ ಈ ಸಾಲುಗಳುಗಳು ನಿಜವಾದ ಬೌದ್ಧ ಪ್ರಕೃತಿಯನ್ನ ಅಭಿವ್ಯಕ್ತಿಸುತ್ತಿವೆ ಎಂದು ಅನ್ನಿಸಲೇ ಇಲ್ಲ. ತಕ್ಷಣ ಅವನ ಮನಸ್ಸಿನಲ್ಲಿ ನಾಕು ಸಾಲುಗಳು ಹುಟ್ಟಿಕೊಂಡವು ಆದರೆ ಅವನಿಗೆ ಬರೆಯಲು ಬರುತ್ತಿರಲಿಲ್ಲವಾದ್ದರಿಂದ ಅವನು ಹರೆಯದ ಸನ್ಯಾಸಿಗೆ ತನ್ನ ಸಾಲುಗಳನ್ನ ಗೋಡೆಯ ಮೇಲೆ ಬರೆಯಲು ಕೇಳಿಕೊಂಡ. ಆ ಸಾಲುಗಳು ಹೀಗಿದ್ದವು.

ಯಾವ ಬೋಧಿವೃಕ್ಷವೂ ಇಲ್ಲ
ಯಾವ ಕನ್ನಡಿಯೂ
ಎಲ್ಲವೂ ಶೂನ್ಯ ಎಂದಾದಮೇಲೆ
ಎಲ್ಲಿ ಬೀಳುತ್ತದೆ ಕಸ?

ಈ ಸಾಲುಗಳನ್ನ ಗಮನಿಸಿದ ಮೇಲೆ ಝೆನ್ ಮಾಸ್ಟರ್ ಹಂಗ್ ಜೆನ್ ಆಶ್ರಮದ ಅಡುಗೆಯವ ಹುಯಿ ನೆಂಗ್ ಗೆ ಆರನೇ ಝೆನ್ ಗುರುವಿನ ಪಟ್ಟ ಕಟ್ಚಿ ತನ್ನ ದಿರಿಸು ಮತ್ತು ದಂಡವನ್ನ ಅವನಿಗೆ ಪ್ರದಾನ ಮಾಡಿದ.

ಒಮ್ಮೆ ದೇವಸ್ಥಾನದಲ್ಲಿ ಕಸಗುಡಿಸುತ್ತಿದ್ದ ಝೆನ್ ಮಾಸ್ಟರ್ ನನ್ನು ಸನ್ಯಾಸಿ ಪ್ರಶ್ನಿಸಿದ.

ಸನ್ಯಾಸಿ : ಮಾಸ್ಟರ್, ನಿಮ್ಮಂಥ ಮಹಾಜ್ಞಾನಿ ಕಸಗುಡಿಸುವಂಥ ತುಚ್ಛ ಕೆಲಸದಲ್ಲಿ ಸಮಯ ವ್ಯರ್ಥ ಮಾಡೋದು ಸರಿಯೇ?

ಮಾಸ್ಟರ್ : ಏನು ಮಾಡೋದು? ಹೊರಗಿಂದ ಕಸ ಬಂದಿತ್ತು ಅದಕ್ಕೇ ಸ್ವಚ್ಛ ಮಾಡುತ್ತಿದ್ದೆ.

ಸನ್ಯಾಸಿ : ಇದು ಅತ್ಯಂತ ಸ್ವಚ್ಛ ದೇವಾಲಯ, ಇಲ್ಲೆಲ್ಲಿದೆ ಕಸ ಮಾಸ್ಟರ್,

ಮಾಸ್ಟರ್ : ಆಹ್! ನೋಡು ಮತ್ತಷ್ಟು ಕಸ.

1 Comment

Leave a Reply