ಆಧ್ಯಾತ್ಮಿಕ ಗೆಳೆತನದ ಬಗ್ಗೆ ಸೂಫಿ ಮತ್ತು ಬುದ್ಧರ ಚಿಂತನೆ… : ಚಿದಂಬರ ನರೇಂದ್ರ
ರೂಮಿ ಹೇಳುತ್ತಿದ್ದಾನಂತೆ,
ನನ್ನಂಥವನ ಒಳಗೆ
ಭಗವಂತನನ್ನು ಕಾಣ ಬಯಸುತ್ತಿದ್ದಾನಂತೆ
ಈ ಶಮ್ಸ್ ,
ದಡ್ಡ ರೂಮಿ, ಇದು ಪೂರ್ಣ ತಪ್ಪು ತಿಳುವಳಿಕೆ,
ನಾನು, ಹುಡುಕುತ್ತಿದ್ದೇನೆ ರೂಮಿಯನ್ನು.
ಭಗವಂತನ ಒಳಗೆ.
~ ಶಮ್ಸ್ ತಬ್ರೀಝಿ
**********************
ಒಂದು ವಿಷಯ ಶಿಷ್ಯ ಆನಂದನ ತಲೆಯಲ್ಲಿ ಸದಾ ಕೊರೆಯುತ್ತಿತ್ತು. ಒಂದು ಮುಂಜಾನೆ ಆನಂದ ಧೈರ್ಯ ಮಾಡಿ ಬುದ್ಧನನ್ನು ಕೇಳಿಯೇ ಬಿಟ್ಟ.
“ಗುರುವೇ, ಒಂದು ವಿಷಯ ಎಷ್ಟೋ ಜಿನಗಳಿಂದ ನನ್ನನ್ನು ಸತಾಯಿಸುತ್ತಿದೆ, ದಯಮಾಡಿ ನನ್ನ ಸಂಶಯವನ್ನು ಪರಿಹರಿಸುವೆಯಾ? ಅಧ್ಯಾತ್ಮಿಕ ಗೆಳೆತನ , ಅಧ್ಯಾತ್ಮಿಕ ಬದುಕಿಗಿಂತ ಕೊನೆ ಪಕ್ಷ ಅರ್ಧದಷ್ಟಾದರೂ ಮಹತ್ವದ್ದು ಅಲ್ಲವೇ?”
ಬುದ್ಧ ಉತ್ತರಿಸಿದ……
“ಹಾಗೆ ಹೇಳಬೇಡ ಆನಂದ, ಖಂಡಿತ ಹಾಗೆ ಹೇಳಬೇಡ . ಅಧ್ಯಾತ್ಮಿಕ ಗೆಳೆತನ ಎಂದರೇನೇ ಸಮಸ್ತ ಅಧ್ಯಾತ್ಮಿಕ ಬದುಕಿನ ಒಟ್ಟು ಮೊತ್ತ. ಅಧ್ಯಾತ್ಮಿಕ ಗೆಳತನ ಎಲ್ಲಕ್ಕಿಂತ ದೊಡ್ಡದು”.