ಝೆನ್ ಆಚರಿಸುವ ಬಗೆ…

ನಮ್ಮ ಮನಸ್ಸಿನಲ್ಲಿ ಏಳುವ ಆಲೋಚನೆಯ ಅಲೆಗಳು ನಮ್ಮ ಪ್ರಜ್ಞೆಯನ್ನು ಕಲುಷಿತಗೊಳಿಸುವ ರಾಡಿಯ ರೀತಿ. ಸ್ವಲ್ಪ ಹೊತ್ತು ನಾವು ಈ ಆಲೋಚನೆಗಳಿಗೆ ಲಕ್ಷ್ಯ ಕೊಡದೇ, ಅವುಗಳ ಜೊತೆ ಸಹಕರಿಸದೇ, ಅವುಗಳ ಬಗ್ಗೆ ವಿಶ್ಲೇಷಣೆ ಮಾಡದೇ ಸುಮ್ಮನಾಗಿಬಿಟ್ಟಾಗ, ಮೌನ ನಮ್ಮನ್ನು ಪೂರ್ಣವಾಗಿ ಆವರಿಸಿಕೊಳ್ಳುವುದು ಹಾಗು ಮತ್ತೆ ನಮ್ಮ ನಮ್ಮ ಪ್ರಜ್ಞೆ ಪರಿಶುದ್ಧವಾಗುವುದು… । ಚಿದಂಬರ ನರೇಂದ್ರ

ಒಂದಾನೊಂದು ಕಾಲದಲ್ಲಿ
‘ತಾವೋ’ ವನ್ನು ಅರೆದು ಕುಡಿದವರು
ಕಣ್ಣಿಗೆ ಕಾಣಿಸಿಯೂ ಕಾಣಿಸದಷ್ಟು
ಕೈಗೆ ಸಿಕ್ಕೂ ಸಿಗದಷ್ಟು
ಸೂಕ್ಷ್ಮರೂ, ನಿಗೂಢರೂ,
ಹರಿತ ಜಗಳಗಂಟರೂ ಆಗಿದ್ದರು.

ಅವರ ಆಳ, ಅಗಲಗಳನ್ನು
ಬಲ್ಲವರಿಲ್ಲವಾದ್ದರಿಂದ
ಅವರು ಹೇಗಿದ್ದಿರಬಹುದು ಎಂದು
ಊಹೆ ಮಾತ್ರ ಮಾಡಬಲ್ಲೆ.

ಚಳಿಗಾಲದ ನದಿಯಲ್ಲಿ ನಡೆಯುವವರಂತೆ
ಹೆಜ್ಜೆ ಮೇಲೆ ಹೆಜ್ಜೆ ಇಡುವವರು,
ಪಕ್ಕದ ಮನೆಯ ಕಿಟಕಿಯ ಬಗ್ಗೆ
ಮೈಯೆಲ್ಲ ಕಣ್ಣಾದವರು,
ಮನೆಗೆ ಬಂದ ದೂರದ ನೆಂಟರಂತೆ
ವಿನಮ್ರರು ಮತ್ತು ಭಿಡೇ ಸ್ವಭಾವದವರು,
ಕರಗುವ ಮಂಜಿನಂತೆ ಜಾರಿಕೊಳ್ಳುವವರು,
ಕೆತ್ತಲು ಸಿದ್ಧವಾಗಿರುವ ಮರದ ತುಂಡಿನಂತೆ
ಮುಗ್ಧರು, ಸುಲಭ ಸಾಧ್ಯರು,
ಆಳ ಕಣಿವೆಗಳಂತೆ
ಖಾಲಿ ತೆರೆದುಕೊಳ್ಳುವವರು,
ಬಗ್ಗಡದ ನೀರಿನಂತೆ
ಕೃದ್ಧರು, ದಂಗೆ ಎದ್ದವರು.

ನಿಂತು ನಿಂತು ತಿಳಿಯಾಗುವ
ಕಲೆಯ ತಿಳಿದವರು.
ಚಲನೆಗೊಂದು ಅರ್ಥ ಬರುವತನಕ
ಜಪ್ಪಯ್ಯ ಅಂದರೂ ಏಳದವರು

ತುಂಬಿಕೊಳ್ಳಲೊಲ್ಲದ ಉಡಾಳರು,
ಖಾಲಿತನ ಸೃಷ್ಟಿಸುವ ಅವಕಾಶಗಳ
ಮಹತ್ವ ಅರಿತ ಮಹಾತ್ಮರು.

~ ಲಾವೋತ್ಸು

***************

ಒಂದು ಊರಿನಲ್ಲಿ ಬುದ್ಧನಿಗೆ ಜನರನ್ನು ಉದ್ದೇಶಿಸಿ ಮಾತನಾಡುವುದಿತ್ತು, ಅದಕ್ಕಾಗಿ ಅವನು ತನ್ನ ಪ್ರಧಾನ ಶಿಷ್ಯ ಆನಂದನೊಡನೆ ಆ ಊರಿಗೆ ಹೊರಟಿದ್ದ.

ದಾರಿಯಲ್ಲಿ ಎದುರಾದ ಕಾಲುವೆಯೊಂದನ್ನ ದಾಟಿ ಇಬ್ಬರೂ ತಮ್ಮ ಗಮ್ಯದತ್ತ ಪ್ಪಯಾಣ ಮುಂದುವರೆಸಿದರು. ಅದು ಕಡು ಬೇಸಿಗೆಯ ದಿನ. ನೆತ್ತಿಯ ಮೇಲೆ ಸೂರ್ಯ ಸುಡುತ್ತಿದ್ದ. ಬುದ್ಧನಿಗೆ ಬಾಯಾರಿಕೆ ಆಗತೊಡಗಿತು. ಬುದ್ಧ ಒಂದು ಮರದ ನೆರಳಿನಲ್ಲಿ ಹೋಗಿ ಕುಳಿತ.

ತಾವು ಸ್ವಲ್ಪ ಹೊತ್ತಿಗೆ ಮುಂಚೆ ದಾಟಿ ಬಂದ ಕಾಲುವೆಯಿಂದ ಕುಡಿಯಲು ನೀರು ತರುವಂತೆ ಬುದ್ಧ, ಶಿಷ್ಯ ಆನಂದನನ್ನು ಕೇಳಿಕೊಂಡ. ಆನಂದ ವಾಪಸ್ ಆ ಕಾಲುವೆಯ ಹತ್ತಿರ ಬರುವಷ್ಟರಲ್ಲಿ, ಚಕ್ಕಡಿಯೊಂದು ಆ ಕಾಲುವೆಯನ್ನು ಹಾಯ್ದು ಹೋಗಿತ್ತು, ಕಾಲುವೆಯ ನೀರೆಲ್ಲವೂ ಮಣ್ಣು ಮಣ್ಣಾಗಿತ್ತು. ಕಾಲುವೆಯ ನೀರು ಕುಡಿಯಲು ಸೂಕ್ತವಾಗಿರಲಿಲ್ಲ. ಆನಂದ ವಾಪಸ್ ಬುದ್ಧನ ಬಳಿ ಬಂದು ಕಾಲುವೆಯ ನೀರು ಕುಡಿಯಲು ಯೋಗ್ಯ ಅಲ್ಲ ಎಂದು ವಿಷಯ ತಿಳಿಸಿದ.

ಆದರೆ ಬುದ್ಧ ಮತ್ತೆ ಕಾಲುವೆಯ ಬಳಿ ಹೋಗಿ ನೀರು ತಿಳಿಯಾಗುವ ಕನಕ ಕಾಯುವಂತೆ ಆನಂದನನ್ನು ಒತ್ತಾಯಿಸಿದ. ಬುದ್ಧನ ಮಾತಿಗೆ ಮಣಿದು ಆನಂದ ಮತ್ತೆ ಕಾಲುವೆಯ ಹತ್ತಿರ ಬಂದ. ಅಷ್ಟು ಹೊತ್ತಿಗಾಗಲೇ ಕಾಲುವೆಯ ನೀರು ಸಾಕಷ್ಟು ತಿಳಿಯಾಗಿತ್ತು ಆದರೂ ಅದು, ಅನ್ನೂ ಕುಡಿಯಲು ಯೋಗ್ಯವಾಗಿರಲಿಲ್ಲ.

ನಿರುಪಾಯನಾಗಿ ಆನಂದ ಕಾಲುವೆಯ ದಂಡೆಯ ಮೇಲೆ ಕುಳಿತು ಧ್ಯಾನ ಮಗ್ನನಾದ. ಸ್ವಲ್ಪ ಹೊತ್ತಿನ ನಂತರ ಕಣ್ಣು ತೆರೆದಾಗ ಆನಂದನಿಗೆ ಅಲ್ಲೊಂದು ಆಶ್ಚರ್ಯ ಕಾದಿತ್ತು. ಕಾಲುವೆಯ ನೀರು ಪೂರ್ಣ ತಿಳಿಯಾಗಿತ್ತು, ಸೇವಿಸಲು ಯೋಗ್ಯವಾಗಿತ್ತು.

ನಮ್ಮ ಮನಸ್ಸಿನ ಸ್ವಭಾವವೂ ಇದೇ ಥರ. ನಮ್ಮ ಮನಸ್ಸಿನಲ್ಲಿ ಏಳುವ ಆಲೋಚನೆಯ ಅಲೆಗಳು ನಮ್ಮ ಪ್ರಜ್ಞೆಯನ್ನು ಕಲುಷಿತಗೊಳಿಸುವ ರಾಡಿಯ ರೀತಿ. ಸ್ವಲ್ಪ ಹೊತ್ತು ನಾವು ಈ ಆಲೋಚನೆಗಳಿಗೆ ಲಕ್ಷ್ಯ ಕೊಡದೇ, ಅವುಗಳ ಜೊತೆ ಸಹಕರಿಸದೇ, ಅವುಗಳ ಬಗ್ಗೆ ವಿಶ್ಲೇಷಣೆ ಮಾಡದೇ ಸುಮ್ಮನಾಗಿಬಿಟ್ಟಾಗ, ಮೌನ ನಮ್ಮನ್ನು ಪೂರ್ಣವಾಗಿ ಆವರಿಸಿಕೊಳ್ಳುವುದು ಹಾಗು ಮತ್ತೆ ನಮ್ಮ ನಮ್ಮ ಪ್ರಜ್ಞೆ ಪರಿಶುದ್ಧವಾಗುವುದು.

ಝೆನ್ ಶಾಸ್ತ್ರದಲ್ಲಿ, ಕಲಿಕೆಯಲ್ಲಿ ಪಾರಂಗತನಾದ ಸನ್ಯಾಸಿಯೊಬ್ಬನಿದ್ದ. ತಾನು ಕಲಿತದ್ದನ್ನು ಆತ ಯಾರೊಂದಿಗೂ ಹಂಚಿಕೊಂಡಿರಲಿಲ್ಲ.

ಒಂದು ರಾತ್ರಿ ದಾರಿಯಲ್ಲಿ ಹೋಗುವಾಗ ಆತನ ಹೆಜ್ಜೆ, ಯಾವುದೋ ಒಂದು ವಸ್ತುವಿನ ಮೇಲೆ ಬಿತ್ತು. ಆತ ಅದನ್ನು ತುಳಿಯುತ್ತಿದ್ದಂತೆಯೇ ಪಿಚಕ್ ಎಂದು ಸದ್ದಾಯಿತು. ಮೊಟ್ಟೆ ಧರಿಸಿದ ಕಪ್ಪೆ ಅದು ಎಂದು ಆತ ಭಾವಿಸಿದ.

ಅವನಿಗೆ ತೀವ್ರ ಆತಂಕವಾಗತೊಡಗಿತು. ಬೌದ್ಧರ ಪ್ರಕಾರ ಜೀವಹತ್ಯೆ ಮಹಾಪಾಪ. ರಾತ್ರಿ ಅವ ನಿದ್ದೆಗಿಳಿಯುತ್ತಿದ್ದಂತೆಯೇ ನೂರಾರು ಕಪ್ಪೆಗಳು ಕನಸಲ್ಲಿ ಬಂದು ಅವನ ಜೀವ ಕೇಳತೊಡಗಿದವು.

ಸನ್ಯಾಸಿಗೆ ಇಡೀ ರಾತ್ರಿ ನಿದ್ದೆ ಬರಲಿಲ್ಲ. ಬೆಳಕು ಹರಿಯುತ್ತಿದ್ದಂತೆ ಆತ ರಾತ್ರಿ ಘಟನೆ ನಡೆದ ಜಾಗಕ್ಕೆ ಹೋಗಿ ನೋಡಿದ. ರಾತ್ರಿ ಅವ ತುಳಿದದ್ದು ಕಪ್ಪೆಯಾಗಿರದೇ, ಕೊಳೆತ ಬದನೆಕಾಯಿಯಾಗಿತ್ತು.

ಆ ಕ್ಷಣದಲ್ಲಿ ಅವನ ಅನಿಶ್ಚಿತತೆ ಕೊನೆಯಾಯಿತು ಮೊದಲ ಬಾರಿಗೆ ಅವನಿಗೆ “ವಾಸ್ತವದ ಜಗತ್ತು ಇಲ್ಲ” ಎಂಬ ಬುದ್ಧನ ಮಾತಿನ ಅರ್ಥ ಗೊತ್ತಾಯಿತು, ಝೆನ್ ಆಚರಿಸುವುದು ಹೇಗೆ ಎನ್ನುವುದು ಸ್ಪಷ್ಟವಾಯಿತು

Leave a Reply