ಬದುಕಿನ ಅತ್ಯಂತ ಶ್ರೇಷ್ಠ ಅರ್ಥಶಾಸ್ತ್ರ… : ಓಶೋ ವ್ಯಾಖ್ಯಾನ

ಬದುಕಿನ ಆನಂದವನ್ನು ಯಾರು ಅನುಭವಿಸಲಾರರೋ ಅವರಿಂದ ಇರುವ ಆನಂದವನ್ನೂ ಕಸಿದುಕೊಳ್ಳಲಾಗುವುದು. ನೀವು ಹೆಚ್ಚು ಪ್ರೇಮಮಯಿ ಆದಂತೆಲ್ಲ ಹೆಚ್ಚು ಹೆಚ್ಚು ಪ್ರೇಮ ನಿಮ್ಮದಾಗುವುದು. ನೀವು ಹೆಚ್ಚು ಸಮಾಧಾನಿ ಆದಂತೆಲ್ಲ ಹೆಚ್ಚು ಹೆಚ್ಚು ಸಮಾಧಾನ ನಿಮ್ಮದಾಗುವುದು. ನೀವು ಹೆಚ್ಚು ಹಂಚಿದಂತೆಲ್ಲ ಹಂಚಲು ಹೆಚ್ಚು ಹೆಚ್ಚು ನಿಮ್ಮನ್ನು ಸೇರುವುದು… ~ ಓಶೋ ರಜನೀಶ್ । ಕನ್ನಡಕ್ಕೆ: ಚಿದಂಬರ ನರೇಂದ್ರ

ಜೀಸಸ್ ಒಂದು ದ್ವಂದ್ವಾತ್ಮಕ ಅನಿಸಬಲ್ಲ ಮಾತು ಹೇಳುತ್ತಾನೆ….

ನೀವು ಸಾಕಷ್ಟು ಹೊಂದಿರುವಿರಾದರೆ,
ನಿಮಗೆ ಇನ್ನಷ್ಟು ಹೆಚ್ಚು ಕೊಡಲಾಗುವುದು,
ಮತ್ತು ನಿಮ್ಮ ಬಳಿ ಸಾಕಷ್ಟು ಇಲ್ಲವಾದರೆ
ನಿಮ್ಮ ಹತ್ತಿರ ಇರುವ ಎಲ್ಲವನ್ನೂ
ವಾಪಸ್ ಪಡೆಯಲಾಗುವುದು.

ಇದು ಅಸಂಗತ, ಆ್ಯಂಟಿ ಕಮ್ಯುನಿಸ್ಟ್ , ಪ್ರತಿಗಾಮಿ ಅನಿಸಬಹುದು. ಇದು ಸಾಮಾನ್ಯ ಅರ್ಥಶಾಸ್ತ್ರ ಅಲ್ಲ. ಕೇವಲ ಅವರು,
ಯಾರ ಬಳಿ ಸಾಕಷ್ಟಿದೆಯೋ ಅವರಿಗೆ ಮಾತ್ರ ಇನ್ನಷ್ಟು ಒದಗಿಸಲಾಗುವುದು. ಹಾಗೆಂದರೆ ಅವರು, ಯಾರು ಹೆಚ್ಚು ಹೆಚ್ಚು ಆನಂದ ಹೊಂದುವರೋ, ಆನಂದ ಇನ್ನಷ್ಟು ಇನ್ನಷ್ಟು ಅವರ ಪಾಲಾಗುವುದು.

ಬದುಕಿನ ಆನಂದವನ್ನು ಯಾರು ಅನುಭವಿಸಲಾರರೋ ಅವರಿಂದ ಇರುವ ಆನಂದವನ್ನೂ ಕಸಿದುಕೊಳ್ಳಲಾಗುವುದು. ನೀವು ಹೆಚ್ಚು ಪ್ರೇಮಮಯಿ ಆದಂತೆಲ್ಲ ಹೆಚ್ಚು ಹೆಚ್ಚು ಪ್ರೇಮ ನಿಮ್ಮದಾಗುವುದು. ನೀವು ಹೆಚ್ಚು ಸಮಾಧಾನಿ ಆದಂತೆಲ್ಲ ಹೆಚ್ಚು ಹೆಚ್ಚು ಸಮಾಧಾನ ನಿಮ್ಮದಾಗುವುದು. ನೀವು ಹೆಚ್ಚು ಹಂಚಿದಂತೆಲ್ಲ ಹಂಚಲು ಹೆಚ್ಚು ಹೆಚ್ಚು ನಿಮ್ಮನ್ನು ಸೇರುವುದು.

ಆದರೆ ನೀವು ಹಂಚದೇ ಇರುವಿರಾದರೆ, ಪ್ರೇಮಿಸದೇ ಹೋದರೆ, ನಿಮ್ಮಲ್ಲಿ ಈಗಾಗಲೇ ಇರುವುದರ ಮಾಹಿತಿ ಕೂಡ ನಿಮಗೆ ಇಲ್ಲವಾಗುವುದು, ಆಗ ನಿಮ್ಮ ಬಳಿ ಇರುವುದು ಕೂಡ ನಿರುಪಯುಕ್ತವಾಗುವುದು. ಇದು ಬದುಕಿನ ಅತ್ಯಂತ ಶ್ರೇಷ್ಠ ಅರ್ಥಶಾಸ್ತ್ರ.

ಈ ಬದುಕು ಈಗಾಗಲೇ ಅಪಾರ.
ಅಪರಿಮಿತ ಬದುಕಿನ ಬಗ್ಗೆ,
ಬದುಕಿನ ಚಿಕ್ಕ ಪುಟ್ಚ ಸಂಗತಿಗಳ ಬಗ್ಗೆ ಕೂಡ
ಉನ್ಮತ್ತರಾಗಿರಿ.
ಪ್ರತಿ ಆಹಾರವೂ ದಿವ್ಯ ಸಂಸ್ಕಾರವಾಗಲಿ,
ಇನ್ನೊಬ್ಬರ ಕೈ ಕುಲುಕುವುದೂ ಪ್ರಾರ್ಥನೆಯಾಗಲಿ,
ಸುತ್ತಲಿನ ಜನರೊಡನೆಯ ಸಹವಾಸ
ಪರಮ ಆನಂದ ನೀಡಲಿ,
ಏಕೆಂದರೆ, ನಿಮಗೆ ಲಭ್ಯವಾಗಿರುವುದು
ಎಲ್ಲಿಯೂ, ಇನ್ನಾರಿಗೂ ಸಾಧ್ಯವಾಗಿಲ್ಲ.

**************

ಒಮ್ಮೆ ಹಳ್ಳಿಯ ಜನ ಸೂಫಿ ಸಂತ ಫರೀದ್ ನ ಹತ್ತಿರ ಬಂದು ಹಳ್ಳಿಯ ಬಡ ಮಕ್ಕಳಿಗಾಗಿ ಶಾಲೆ ಕಟ್ಟಿಸಲು ದೊರೆ ಅಕ್ಬರ್ ನಿಂದ ಹಣದ ಸಹಾಯ ಕೊಡಿಸುವಂತೆ ಕೇಳಿಕೊಂಡರು. ಅಕ್ಬರ್ ಯಾವತ್ತೂ ಫರೀದ್ ನ ಮಾತು ತೆಗೆದುಹಾಕುವುದಿಲ್ಲ ಎನ್ನುವುದು ಹಳ್ಳಿಗರಿಗೆ ಗೊತ್ತಿತ್ತು.

ಹಣದ ಸಹಾಯ ಕೇಳಲು ಫರೀದ್, ಅಕ್ಬರ್ ನ ಅರಮನೆಗೆ ಬಂದ. ಅದೇ ಸಮಯಕ್ಕೆ ಅಕ್ಬರ್ ಅರಮನೆಯಲ್ಲಿ ಪ್ರಾರ್ಥನೆ ಮಾಡುತ್ತಿದ್ದ. ಆದರೂ ಫರೀದ್ ನನ್ನು ಅಕ್ಬರ್ ನ ಪ್ರಾರ್ಥನಾ ಜಾಗಕ್ಕೆ ಕರೆದುಕೊಂಡು ಹೋಗಲಾಯಿತು. ಫರೀದ್ ಸುಮ್ಮನೇ ಹೋಗಿ ಅಕ್ಬರ್ ನ ಹಿಂದೆ ಕುಳಿತುಕೊಂಡ. ಪ್ರಾರ್ಥನೆಯ ಕೊನೆಯಲ್ಲಿ ಅಕ್ಬರ್ ಜೋರಾಗಿ ಸರ್ವ ಶಕ್ತ ಭಗವಂತನನ್ನು ಬೇಡಿರೊಂಡ,

“ದಯಾಮಯನಾದ ದೇವರೇ, ನನಗೆ ಇನ್ನೂ ಹೆಚ್ಚಿನ ಶ್ರೀಮಂತಿಕೆಯನ್ನ ಕೊಡು, ನನ್ನ ರಾಜ್ಯವನ್ನು ಇನ್ನೂ ಹೆಚ್ಚು ಹೆಚ್ಚು ಬೆಳೆಯುವಂತೆ ಮಾಡು!”

ಅಕ್ಬರ್ ನ ಈ ಪ್ರಾರ್ಥನೆಯನ್ನು ಕೇಳಿ ಫರೀದ್ ಅಲ್ಲಿಂದ ಎದ್ದು ಹೊರಡಲು ಅನುವಾದ. ತನ್ನ ಹಿಂದೆ ಹೆಜ್ಜೆ ಸಪ್ಪಳ ಕೇಳಿ ಅಕ್ಬರ್ ಹಿಂತಿರುಗಿ ನೋಡಿದಾಗ ಅವನಿಗೆ ಫರೀದ್ ಅಲ್ಲಿಂದ ಹೊರಗೆ ಹೋಗುತ್ತಿರುವುದು ಕಾಣಿಸಿತು.

ಅಕ್ಬರ್ ಓಡಿ ಹೋಗಿ ಫರೀದ್ ನ ಕಾಲಿಗೆ ಬಿದ್ದು ನಮಸ್ಕಾರ ಮಾಡಿದ. “ಮೊದಲ ಬಾರಿ ನೀವು ನನ್ನ ಅರಮನೆಗೆ ಬಂದಿರುವಿರಿ, ಯಾಕೆ ನನ್ನ ಹತ್ತಿರ ಬಂದಿರಿ, ಯಾಕೆ ಏನೂ ಹೇಳದೇ ಹೋಗುತ್ತಿದ್ದೀರಿ? “ ಅಕ್ಬರ್, ಫರೀದ್ ನ ಪ್ರಶ್ನೆ ಮಾಡಿದ.

ಫರೀದ್ ಉತ್ತರಿಸಿದ, “ನೀನು ಶ್ರೀಮಂತನೆಂದು ತಿಳಿದು ನನ್ನ ಹಳ್ಳಿಯ ಶಾಲೆಗೆ ಸಹಾಯ ಕೇಳಲು ನಾನು ಇಲ್ಲಿಗೆ ಬಂದೆ. ಆದರೆ ನಿನ್ನ ಪ್ರಾರ್ಥನೆ ಕೇಳಿದ ಮೇಲೆ ನೀನು ಶ್ರೀಮಂತ ಅಲ್ಲ ಬಡವ ಎನ್ನುವುದು ನನಗೆ ಗೊತ್ತಾಯಿತು. ಬಡವನಿಂದ ಯಾವ ಸಹಾಯ ತಾನೇ ನಿರೀಕ್ಷಿಸುವುದು ಸಾಧ್ಯ? ನಾನೂ ಆ ಸರ್ವಶಕ್ತ ಭಗವಂತನಿಂದಲೇ ಸಹಾಯ ಬೇಡುತ್ತೇನೆ.”

ಅಕ್ಬರ್ ಈ ಘಟನೆಯ ಕುರಿತು ತನ್ನ ಆತ್ಮಚರಿತ್ರೆಯಲ್ಲಿ ಬರೆದುಕೊಂಡಿದ್ದಾನಂತೆ. ಅಂದು ಅವನಿಗೆ ಮೊದಲ ಬಾರಿ ತಾನು ಬಡವ ಎನ್ನುವುದು ಗೊತ್ತಾಯಿತು, ಮೊದಲಬಾರಿಗೆ ತನ್ನೊಳಗಿರುವ ಅತೃಪ್ತಿಯ ಪರಿಚಯವಾಯಿತು. ತನ್ನ ಎಲ್ಲ ಶ್ರೀಮಂತಿಕೆಯೂ ತನಗೆ ಯಾವ ಸಮಾಧಾನ ನೀಡದಿರುವುದನ್ನ ತಿಳಿದು ನಾಚಿಕೆಯಾಯಿತು. ತನಗೆ ಸಮಾಧಾನ ಆಗಬೇಕಾದರೆ, ತಾನು ಶ್ರೀಮಂತನಾಗಬೇಕಾದರೆ ಬೇಡುವುದನ್ನು ನಿಲ್ಲಿಸಬೇಕು, ಕೊಡುವುದನ್ನು ಶುರು ಮಾಡಬೇಕು ಎನ್ನುವುದು ಗೊತ್ತಾಯಿತು.

ಬಡವ ಯಾವಾಗಲೂ ಭೌತಿಕ ಸಂಗತಿಗಳಿಗಾಗಿ ಪ್ರಾರ್ಥನೆ ಮಾಡುತ್ತಾನೆ. ಆದರೆ ನಿಜವಾದ ಶ್ರೀಮಂತನ ಪ್ರಾರ್ಥನೆಯಲ್ಲಿ ಅಧ್ಯಾತ್ಮವಿದೆ. ತನ್ನ ಎಲ್ಲ ಬೇಕುಗಳನ್ನು ಕಳೆದುಕೊಂಡಾಗಲೇ ಅವನಿಗೆ ಅವನ ಶ್ರೀಮಂತಿಕೆಯ ಪರಿಚಯವಾಗುತ್ತದೆ.

Leave a Reply