“ನೀನು ಯಾಕೆ ಅವನನ್ನು ನೋಡಲು ಹೋಗಬೇಕು ? ಅವನೊಬ್ಬ ಸಾಮಾನ್ಯ ಮನುಷ್ಯ, ಅವನನ್ನೇ ಇಲ್ಲಿಗೆ ಬರುವಂತೆ ಹೇಳಬಹುದಿತ್ತಲ್ಲ? ಇದನ್ನು ನಾನು ಒಪ್ಪುವುದಿಲ್ಲ” ಸಾರಥಿ ಕೃಷ್ಣನ ಮುಂದೆ ತನ್ನ ಅತೃಪ್ತಿಯನ್ನ ಹೊರಹಾಕಿದ. ಅದಕ್ಕೆ ಕೃಷ್ಣ ಕೊಟ್ಟ ಉತ್ತರವೇನು ಗೊತ್ತೇ? । ಚಿದಂಬರ ನರೇಂದ್ರ
ಒಮ್ಮೆ ಹೀಗಾಯಿತು, ಕೃಷ್ಣ ಕನ್ನಡಿಯ ಮುಂದೆ ನಿಂತುಕೊಂಡು ಅಲಂಕಾರ ಮಾಡಿಕೊಳ್ಳುತ್ತಿದ್ದ. ಬೇರೆ ಬೇರೆ ವಿನ್ಯಾಸದ ಕಿರೀಟಗಳನ್ನ, ಆಭರಣಗಳನ್ನ ಧರಿಸಿ ಟ್ರೈ ಮಾಡುತ್ತ ಯಾವುದು ತನಗೆ ಚೆನ್ನಾಗಿ ಕಾಣುತ್ತದೆ ಎಂದು ನೋಡಿಕೊಳ್ಳುತ್ತಿದ್ದ.
ಅದೇ ಸಮಯದಲ್ಲಿ ಕೃಷ್ಣನ ಸಾರಥಿ ಅವನಿಗಾಗಿ ಹೊರಗೆ ಕಾಯುತ್ತಿದ್ದ. ಬಹುತೇಕ ಕೃಷ್ಣ ಬೇಗ ಸಿದ್ಧನಾಗಿ ಬಂದುಬಿಡುತ್ತಿದ್ದ ಆದರೆ ಇಂದು ಹೊರಗೆ ಬರಲು ಅವ ಇಷ್ಟು ತಡ ಮಾಡುತ್ತಿರುವುದು ಸಾರಥಿಯ ಆಶ್ಚರ್ಯಕ್ಕೆ ಕಾರಣವಾಗಿತ್ತು.
ಕೃಷ್ಣ ಯಾವಾಗಲೂ ಊಹೆಗೆ ನಿಲುಕಲಾರದ ವ್ಯಕ್ತಿ, ಇವತ್ತಿನ ಕಾರ್ಯಕ್ರಮ ಏನಾದರೂ ಮುಂದೂಡಿ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದಾನಾ ಎಂದು ಕುತೂಹಲಭರಿತನಾಗಿ ಸಾರಥಿ, ಕೃಷ್ಣನನ್ನು ಹುಡುಕಿಕೊಂಡು ಅವನ ಕೋಣೆಯೊಳಗೆ ಬಂದ. ಅಲ್ಲಿ ಕೃಷ್ಣ ಕನ್ನಡಿಯ ಮುಂದು ನಿಂತುಕೊಂಡು ಅಲಂಕಾರ ಮಾಡಿಕೊಳ್ಳುತ್ತಿರುವುದನ್ನ ಕಂಡು ಆಶ್ಚರ್ಯದಿಂದ ಪ್ರಶ್ನೆ ಮಾಡಿದ,
“ ಏನು ವಿಶೇಷ ಕೃಷ್ಣ ಇಷ್ಟು ಅಲಂಕಾರ ಮಾಡಿಕೊಳ್ಳುತ್ತಿದ್ದೀ? ಸತ್ಯಭಾಮೆಯ ಮನೆಗೆ ಹೋಗುವಾಗಲೂ ನೀನು ಇಷ್ಟು ಅಲಂಕಾರ ಮಾಡಿಕೊಂಡಿದ್ದನ್ನು ನಾನು ಗಮನಿಸಿಲ್ಲ. ಎಲ್ಲಿಗೆ ಹೋಗುತ್ತಿದ್ದೇವೆ ನಾವು?”
“ದುರ್ಯೋಧನನ್ನು ಭೇಟಿಯಾಗಲು” ಕೃಷ್ಣ ಉತ್ತರಿಸಿದ.
“ದುರ್ಯೋಧನನನ್ನು ಭೇಟಿಯಾಗಲು ಇಷ್ಟು ಯಾಕೆ ಅಲಂಕಾರ ಕೃಷ್ಣ?” ಸಾರಥಿ ಮತ್ತೆ ಪ್ರಶ್ನೆ ಮಾಡಿದ.
“ದುರ್ಯೋಧನ ಒರಟು ಮನುಷ್ಯ, ಅವ ನನ್ನ ಅಂತರಂಗವನ್ನ ಬಲ್ಲವನಲ್ಲ, ಅವನನ್ನು ಮೆಚ್ಚಿಸಲು ನಾನು ವಿಶೇಷವಾಗಿ ಅಲಂಕಾರ ಮಾಡಿಕೊಳ್ಳಲೇ ಬೇಕು” ಕೃಷ್ಣ ಉತ್ತರಿಸಿದ.
“ಅದೇನೋ ಸರಿ ಆದರೆ ನೀನು ಯಾಕೆ ಅವನನ್ನು ನೋಡಲು ಹೋಗಬೇಕು ? ಅವನೊಬ್ಬ ಸಾಮಾನ್ಯ ಮನುಷ್ಯ, ಅವನನ್ನೇ ಇಲ್ಲಿಗೆ ಬರುವಂತೆ ಹೇಳಬಹುದಿತ್ತಲ್ಲ? ಇದನ್ನು ನಾನು ಒಪ್ಪುವುದಿಲ್ಲ” ಸಾರಥಿ ತನ್ನ ಅತೃಪ್ತಿಯನ್ನ ಹೊರಹಾಕಿದ.
ಕೃಷ್ಞ, ಸಾರಥಿಯತ್ತ ಹೊರಳಿ ಮುಗಳ್ನಗುತ್ತ ಹೇಳಿದ……
“ ಬೆಳಕು, ಕತ್ತಲೆ ಇರುವಲ್ಲಿ ಹೋಗಬೇಕು. ಕತ್ತಲೆ, ಬೆಳಕು ಇರುವಲ್ಲಿಗೆ ಬರಲಾರದು”.
ಕೃಷ್ಣನ ಮಾತು ಕೇಳಿ ಸಾರಥಿ ಸುಮ್ಮನಾಗಿಬಿಟ್ಟ.