ಗುರುವೂ ಗುರುದೇವನೂ

1922ರ ನವೆಂಬರ್ 15ರಂದು ಶಿವಗಿರಿಯಲ್ಲಿ ಕವಿ ರವೀಂದ್ರನಾಠ ಟ್ಯಾಗೋರರು ನಾರಾಯಣ ಗುರುಗಳನ್ನು ಭೇಟಿಯಾದರು. ಈ ಐತಿಹಾಸಿಕ ಭೇಟಿಗೆ 101 ವರ್ಷಗಳಾದ ಹಿನ್ನೆಲೆಯಲ್ಲಿ ಈ ಲೇಖನ… । ಎನ್.ಎ.ಎಂ.ಇಸ್ಮಾಯಿಲ್

ಸರಿಯಾಗಿ 101 ವರ್ಷಗಳ ವರ್ಕಲದ ಶಿವಗಿರಿ ಎರಡು ಪರ್ವತ ಸದೃಶ ವ್ಯಕ್ತಿತ್ವಗಳ ಭೇಟಿಗೆ  ಸಾಕ್ಷಿಯಾಯಿತು. ಗಾಂಧೀಜಿಯಿಂದ ಗುರುದೇವನೆಂದು ಬಿರುದಾಂಕಿತರಾದ ಕವಿ ರವೀಂದ್ರನಾಥ ಟ್ಯಾಗೋರ್ ಮತ್ತು ಗುರುಪದವಿಯನ್ನು ಪ್ರಜ್ಞಾಪೂರ್ವಕವಾಗಿ ಸ್ವೀಕರಿಸಿ ಕಾರ್ಯತತ್ಪರರಾಗಿದ್ದ ನಾರಾಯಣ ಗುರುವೆಂಬ ಸಂತ ಕವಿ ಸಂಧಿಸಿದ ದಿನವಿದು. ವಿಶ್ವಭಾರತಿಗಾಗಿ ಸಂಪನ್ಮೂಲ ಸಂಗ್ರಹಿಸಲು ಸಂಚರಿಸುತ್ತಿದ್ದ ರವೀಂದ್ರರು ತಿರುವಾಂಕೂರು ಸಂಸ್ಥಾನದ ದೊರೆಯ ಆಹ್ವಾನದ ಮೇರೆಗೆ ಕೇರಳಕ್ಕೆ ಬಂದಿದ್ದರು. 1922ರ ನವೆಂಬರ್ 15ರಂದು ಅವರು ಶಿವಗಿರಿಯಲ್ಲಿ ನಾರಾಯಣ ಗುರುಗಳನ್ನು ಭೇಟಿಯಾದರು. ಈ ಭೇಟಿಯನ್ನು ಅಂದಿನ ಪತ್ರಿಕಾ  ವರದಿಯೊಂದು ವಿವರಿಸುವುದು ಹೀಗೆ:

 “ಸುಮಾರು ಮಧ್ಯಾಹ್ನ ಒಂದೂವರೆ ಗಂಟೆಯ ವೇಳೆ ಮಹಾಕವಿಯೂ ಮಿಸ್ಟರ್ ಆ್ಯಂಡ್ರೂಸ್ ಮತ್ತು ವಿಶೇಷಾಧಿಕಾರಿಯಾಗಿದ್ದ ಸುಬ್ರಹ್ಮಣ್ಯ ಅಯ್ಯರ್ ಕಾರಿನಲ್ಲಿ ಬಂದು ಪ್ರವಾಸಿ ಮಂದಿರ ತಲುಪಿದರು. ಶಿವಗಿರಿಯಲ್ಲಿ ಛತ್ರ, ಧ್ವಜ, ಪಲ್ಲಕ್ಕಿ, ಮೇನೆ ಮುಂತಾದ ಅನೇಕ ಸಿದ್ಧತೆಗಳೊಂದಿಗೆ ಡಾಕ್ಟರ್ ಪಲ್ಪು, ಎಸ್‌ಎನ್‌ಡಿಪಿ ಯೋಗಂನ ಪ್ರಧಾನ ಕಾರ್ಯದರ್ಶಿ ಕುಮಾರ್ ಮೊದಲಾದವರು ಮಹಾಕವಿಯನ್ನು ಸ್ವಾಗತಿಸಿ ಪುಷ್ಪಮಾಲೆಯನ್ನು ತೊಡಿಸಿದರು.

ಇದಾದ ನಂತರ ಡಾ. ಪಲ್ಪು ಅವರು ಖಾಸಗಿಯಾಗಿ ಈಳವರ ವರ್ತಮಾನದ ಸ್ಥಿತಿಯ ಕುರಿತ ಪ್ರಬಂಧವೊಂದನ್ನು ಓದಿ ಮಹಾಕವಿಗೆ ವಿವರಿಸಿದರು. ಮತ್ತೆ ಮಹಾಕವಿಯನ್ನು ಪಲ್ಲಕ್ಕಿಯ ಗೌರವೊಂದಿಗೆ ಮೆರವಣಿಗೆಯಲ್ಲಿ ಶಿವಗಿರಿ ಮಠದತ್ತ ಕರೆದೊಯ್ಯಲಾಯಿತು. ವಾಲಂಟಿಯರ್‌ಗಳ ವಂದೇ ಮಾತರಂ, ಟ್ಯಾಗೋರ್ ಕಿ ಜೈ ಘೋಷಣೆಗಳು, ಆಶ್ರಮದ ಸನ್ಯಾಸಿಗಳು ಮತ್ತು ಕೆಲವು ಪರಯ ಜಾತಿಯ ಬಾಲಕರ ಸ್ವಾಗತ ಗೀತೆಯ ಧ್ವನಿ ಎಲ್ಲೆಡೆ ಹರಡಿತು. ಅರ್ಧ ಗಂಟೆಯಲ್ಲಿ ಮೆರವಣಿಗೆ  ಗುರುಸ್ವಾಮಿಗಳಿರುವ ಶಿವಗಿರಿ ಮಠವನ್ನು ತಲುಪಿತು. ಅಲ್ಲಿ ಗುರುಸ್ವಾಮಿಗಳು ಮತ್ತು ಮಹಾಕವಿಗಳ ಮಧ್ಯೆ ಅರ್ಧ ಗಂಟೆಗಳ ಕಾಲ ಮಾತುಕತೆ ನಡೆಯಿತು.”

ಇಬ್ಬರು ಇತಿಹಾಸ ಪುರುಷರ ಭೇಟಿಯ ಶತಮಾನೋತ್ಸವವನ್ನು ಕಳೆದ ವರ್ಷ ಆಚರಿಸಲಾಯಿತು. ಈ ಸಂದರ್ಭದಲ್ಲಿ ‘ಮಲಯಾಳ ಮನೋರಮ’ದಲ್ಲಿ ಪ್ರಕಟವಾದ ಟಿ.ಬಿ. ಲಾಲ್ ಅವರ ಲೇಖನ ಮಹಾಕವಿ ಮತ್ತು ಮಹಾಗುರುವಿನ ನಡುವಣ ಭೇಟಿಯ ಕುರಿತು ಅನೇಕ ವಿವರಗಳನ್ನು ಒದಗಿಸುತ್ತದೆ.

ರವೀಂದ್ರರ ಜೊತೆಗೆ ಮಗ ಯತೀಂದ್ರನಾಥ್, ಸೊಸೆ ಪ್ರೊತಿಮಾ ಮತ್ತು ಸಹಚರ ದೀನಬಂಧು ಸಿ ಎಫ್ ಆ್ಯಂಡ್ರೂಸ್ ಇದ್ದರು. ಶಾರದಾ ಮಠದ ಎದುರಿರುವ ಅಶೋಕ ವೃಕ್ಷದ ಕೆಳಗೆ ಮಹಾಕವಿ ತಮ್ಮ ಬೂಟುಗಳನ್ನು ಕಳಚಿಟ್ಟರು. ಕುಮಾರನ್ ಆಶಾನ್ ಮತ್ತು ಡಾ ಪಲ್ಪು ಅವರನ್ನು ಆಶ್ರಮಕ್ಕೆ ಸ್ವಾಗತಿಸಿದರು. ಅವರು ಪರ್ಣಶಾಲೆಯ ಬಾಗಿಲನ್ನು ತಲುಪುವ ಹೊತ್ತಿಗೆ ಒಳಗೆ ಧ್ಯಾನಸ್ಥರಾಗಿದ್ದ ಗುರುಗಳು ಬಾಗಿಲು ತೆರೆದು ಹೊರಬಂದರು.

ರವೀಂದ್ರರು ಕೈಮುಗಿದು ‘Oh great Saint’ ಎಂದು ಉದ್ಗರಿಸಿದರಂತೆ. ಇಬ್ಬರೂ ಪರಸ್ಪರ ಮುಗುಳ್ನಕ್ಕರು. ಆಮೇಲೆ ಗುರುಗಳು ಸಂಸ್ಕೃತ ಅಥವಾ ಆಂಗ್ಲ ಭಾಷೆಯಲ್ಲಿ ಮಾತನಾಡಬಹುದಲ್ಲವೇ ಎಂದು ಸಲಹೆ ಮಾಡಿದರಂತೆ.

ರವೀಂದ್ರರ ಸಂಸ್ಕೃತ ಬಹುಮಟ್ಟಿಗೆ ಬಂಗಾಳಿಭೂಯಿಷ್ಟವಾದದ್ದು. ನಾರಾಯಣ ಗುರುಗಳ ಅನುಯಾಯಿ ಮತ್ತು ಕವಿ ಕುಮಾರನ್ ಆಶಾನ್ ಬಂಗಾಳಿ ಬಲ್ಲವರಾಗಿದ್ದರು. ಡಾ.ಪಲ್ಪು ಆಂಗ್ಲ ಭಾಷೆಯಲ್ಲಿ ಪ್ರಭುತ್ವವಿದ್ದವರಾಗಿದ್ದರು. ಎಸ್ಎನ್‌ಡಿಪಿ ಯೋಗಂ ಪ್ರಧಾನ ಕಾರ್ಯದರ್ಶಿ ಎನ್. ಕುಮಾರನ್ ಅವರಿಗೂ ಇಂಗ್ಲಿಷ್ ತಿಳಿದಿತ್ತು. ಅಂದಿನ ಮಾತುಕತೆಯ ಬಂಗಾಳಿ ಮತ್ತು ಇಂಗ್ಲಿಷ್‌ಗಳೆರಡರಲ್ಲೂ ನಡೆಯಿತೆನ್ನಬಹುದು. ಆ ಮಾತುಕತೆ ದಾಖಲಾಗಿರುವುದು ಹೀಗೆ.

ತಮ್ಮ ದರ್ಶನವೇ ನನ್ನಲ್ಲೊಂದು ಬದಲಾವಣೆ ತಂದಿದೆ’ ಎಂಬ ರವೀಂದ್ರರ ಮಾತಿಗೆ ನಾರಾಯಣ ಗುರುಗಳ ಮಂದಹಾಸವೇ ಉತ್ತರವಾಗಿತ್ತು.

ಮಹಾಕವಿಯ ಮಾತು ಮುಂದುವರೆಯಿತು. ‘ಮತಗಳ ಹೆಸರಿನಲ್ಲಿ ಮನುಷ್ಯರನ್ನು ವಿಭಜಿಸಿರುವುದು ಅನ್ಯಾಯ. ಎಲ್ಲಾ ಮತಗಳ ಉದ್ದೇಶವೂ ದೈವ ಸಾಕ್ಷಾತ್ಕಾರವೇ ಆಗಿದೆ. ಉದ್ದೇಶಪೂರ್ವಕವಾಗಿ ಕೆಳ ತಳ್ಳಲ್ಪಟ್ಟ ಸಮುದಾಯಗಳಿಗಾಗಿ ನೀವು ಮಾಡುತ್ತಿರುವ ಕೆಲಸಗಳ ಬಗ್ಗೆ ನನಗೆ ತಿಳಿಯಿತು. ಇದು ನನಗೆ ಬಹಳ ಸಂತೋಷ ತಂದಿತಷ್ಟೇ ಅಲ್ಲದೇ ನಿಮ್ಮ ಬಗೆಗಿನ ಗೌರವವನ್ನು ಹೆಚ್ಚಿಸಿತು. ನಿಮ್ಮ ಪ್ರೀತಿಯ ವೈಶಾಲ್ಯ ಶಿಷ್ಯರು ಮತ್ತು ಭಕ್ತರಾಚೆಗೆ ವ್ಯಾಪಿಸಿ ಸಕಲರನ್ನು ಒಳಗೊಂಡಿರುವುದನ್ನು ನಾನು ಇಲ್ಲಿ ಕಂಡು ಅರಿತೆ. ತಮ್ಮ ಸಾಧನೆ ದೊಡ್ಡದು. ಕೇರಳವಿಂದು ಹುಚ್ಚಾಸ್ಪತ್ರೆಯಲ್ಲ. ಒಂದು ಆರಾಧನಾಲಯ. ಇದು ದೇಶಕ್ಕೇ ಮಾದರಿ’

ಈ ಮಾತಿಗೆ ನಾರಾಯಣ ಗುರುಗಳ  ಉತ್ತರ ವಿನಯ ತುಂಬಿದ ಒಂದು ಕಿರು ವಾಕ್ಯವಾಗಿತ್ತು. ‘ತಾವು ಹೇಳುವಷ್ಟೇನೂ ನನ್ನಿಂದ ಸಾಧ್ಯವಾಗಿಲ್ಲವಲ್ಲ’

ರವೀಂದ್ರರು ಕೇರಳಕ್ಕೆ ಭೇಟಿ ನೀಡುವುದಕ್ಕೆ ಮೂವತ್ತು ವರ್ಷಗಳ ಹಿಂದೆ ಅಂದರೆ 1892ರಲ್ಲಿ ಸ್ವಾಮಿ ವಿವೇಕಾನಂದರು ಕೇರಳ ಸಂದರ್ಶಿಸಿದ್ದರು ಅಲ್ಲಿನ ಜಾತೀಯತೆಯನ್ನು ಕಂಡು ಅವರು ಹೇಳಿದ ಮಾತುಗಳು ‘ಇದೊಂದು ಹುಚ್ಚಾಸ್ಪತ್ರೆ’ –  ಎಂದಾಗಿತ್ತು. ಇದಾದ ಮೂರು ದಶಕಗಳಲ್ಲಿ ಆದ ಬದಲಾವಣೆಯನ್ನು ಅದರ ಹಿಂದಿರುವ ನಾರಾಯಣ ಗುರುಗಳ ದರ್ಶನವನ್ನು ರವೀಂದ್ರರು ಗುರುತಿಸಿದ್ದರು.

ಶಿವಗಿರಿ ಮಠದ ಸಂದರ್ಶಕರ ಪುಸ್ತಕದಲ್ಲಿ ರವೀಂದ್ರರು ಬರೆದದ್ದು ಹೀಗೆ: “ನಾನು ಜಗತ್ತಿನ ಹಲವೆಡೆ ಸುತ್ತಾಡಿ ಇಲ್ಲಿಗೆ ಬಂದಿರುವೆ. ಆ ತಿರುಗಾಟದಲ್ಲಿ ಹಲವು ಸಿದ್ಧರನ್ನೂ ಮಹರ್ಷಿಗಳನ್ನೂ ಭೇಟಿಯಾದೆ. ಆದರೆ ನಾರಾಯಣ ಗುರುಗಳಿಗಿಂತ ಶ್ರೇಷ್ಠರೋ ಅಥವಾ ಕನಿಷ್ಠ ಅವರದೇ ಮಟ್ಟದಲ್ಲಿ ಇರುವ ಒಬ್ಬ ಮಹಾತ್ಮನನ್ನೂ ನಾನೆಲ್ಲೂ ಕಾಣಲಿಲ್ಲ. ಅನಂತದೆಡೆಗೆ ವ್ಯಾಪಿಸಿದಂತಿರುವ ಅವರ ಯೋಗ ನಯನಗಳು, ದೈವ ಚೈತನ್ಯವೇ ತುಂಬಿದಂತಿರುವ ಅವರ ವದನ ತೇಜಸ್ಸನ್ನು ನನಗೆ ಎಂದೆಂದೂ ಮರೆಯಲು ಸಾಧ್ಯವಿಲ್ಲ”.

ಈ ಬರಹದ ಜೊತೆಗೇ ಇರುವ ದೀನಬಂಧು ಸಿ.ಎಫ್. ಆ್ಯಂಡ್ರೂಸ್ ನುಡಿಗಳು ಹೀಗಿವೆ: “ನಾನು ದೇವರನ್ನು ಮನುಷ್ಯ ರೂಪದಲ್ಲಿ ಕಂಡೆ. ಆ ಚೈತನ್ಯಮೂರ್ತಿಯೇ ಭಾರತದ ದಕ್ಷಿಣದ ತುದಿಯಲ್ಲಿರುವ ಶ್ರೀನಾರಾಯಣಗುರುಸ್ವಾಮಿಗಳು”

ಆಶ್ರಮದಿಂದ ಹೊರಡುವಾಗ ರವೀಂದ್ರರು ಗುರುಗಳ ಕೈಗಳನ್ನು ಚುಂಬಿಸಿ ವಿದಾಯ ಹೇಳಿದರಂತೆ.

ಅಲ್ಲಿಂದ ಕೊಲ್ಲಂಗೆ ತೆರಳಿದ ಕವಿ ಅಲ್ಲಿ ರಾತ್ರಿಯೇ ತಮ್ಮ ದಿನವನ್ನು ದಾಖಲಿಸಿದರು. ಅವರು ಉಳಿದುಕೊಂಡಿದ್ದ ಸ್ಥಳದ ಸಮೀಪವೇ ಇದ್ದ ತೊರೆಯ ಮೇಲಿನಿಂದ ಪ್ರತಿಫಲಿಸುತ್ತಿದ್ದ ಬೆಳದಿಂಗಳನ್ನು ನೋಡುತ್ತಾ ಅವರು ಬರೆಯುವ ಸಾಲಿದು ‘ಕರ್ಮಯೋಗಿಯಾದ ಆ ಜ್ಞಾನಿಯ ದರ್ಶನದ ಅಲೆಗಳು ಹೃದಯವನ್ನು ಮತ್ತೆ ಮತ್ತೆ ಸ್ಪರ್ಶಿಸುತ್ತಿವೆ…’

Leave a Reply